ತಕರಾರು, ವಿವಾದಗಳ ತೀರ್ಮಾನ ನ್ಯಾಯಾಲಯದಲ್ಲಿ ಬಾಕಿ ಇದ್ದರೂ ಸಹ ಗ್ರಾಮ ಪಂಚಾಯಿತಿ ಚುನಾವಣೆ ನಡೆಸುವ ನಿರ್ಧಾರ ಕೈಗೊಳ್ಳಲು ರಾಜ್ಯ ಚುನಾವಣಾ ಆಯೋಗಕ್ಕೆ ಮುಕ್ತ ಅವಕಾಶವಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಚುನಾವಣೆ ಸಂಬಂಧ ವಿಧಾನ ಪರಿಷತ್‌ನ ಕಾಂಗ್ರೆಸ್ ಸದಸ್ಯ ಕೆ.ಸಿ. ಕೊಂಡಯ್ಯ ಮತ್ತಿತರರು ಸಲ್ಲಿಸಿದ್ದ ಪಿಐಎಲ್‌ನ ವಾದ-ಪ್ರತಿವಾದ ಆಲಿಸುವುದನ್ನು ಪೂರ್ಣಗೊಳಿಸಿರುವ ಹೈಕೋರ್ಟ್, ತೀರ್ಪು ಕಾಯ್ದಿರಿಸಿದೆ.
ಸಿಜೆ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆ ನಡೆಸಿ, ಅ.29ರೊಳಗೆ ಅರ್ಜಿದಾರರು ಮತ್ತು ಪ್ರತಿವಾದಿಗಳಿಗೆ ಲಿಖಿತ ಆಕ್ಷೇಪ ಸಲ್ಲಿಸಲು ಸೂಚನೆ ನೀಡಿದೆ.
ಹಂತ ಹಂತವಾಗಿ ಚುನಾವಣೆ ಮಾಡಿ:
ರಾಜ್ಯದಲ್ಲಿ ಉಪಚುನಾವಣೆ ಮತ್ತು ಬಿಹಾರದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿವೆ. ಇಂತಹ ಸನ್ನಿವೇಶದಲ್ಲಿ ಸರಕಾರವೇ ಹಂತ-ಹಂತವಾಗಿ ಚುನಾವಣೆ ನಡೆಸಲು ಮುಂದೆ ಬರಬೇಕಿತ್ತು. ಆದರೆ, ಸರಕಾರವೇ ಚುನಾವಣೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಿ ಎಂದು ಕೇಳುತ್ತಿರುವುದು ಸರಿಯಲ್ಲ ಎಂದು ನ್ಯಾಯಪೀಠ ಖಾರವಾಗಿ ಪ್ರಶ್ನಿಸಿತು. ‘ಕೋವಿಡ್ ಪರಿಸ್ಥಿತಿ ಸುಧಾರಿಸತೊಡಗಿದೆ. ಹಾಗಾಗಿ, ಕಡಿಮೆ ಪ್ರಕರಣಗಳಿರುವ ಜಿಲ್ಲೆ ಅಥವಾ ತಾಲೂಕುಗಳನ್ನು ಆಯ್ದುಕೊಂಡು ಹಂತ- ಹಂತವಾಗಿ ಚುನಾವಣೆ ನಡೆಸಬಹುದು. ರಾಜ್ಯ ಸರಕಾರ ಅತ್ಯಂತ ಯಶಸ್ವಿಯಾಗಿ ಹಲವು ಪರೀಕ್ಷೆಗಳನ್ನು ನಡೆಸಿದೆ. ಅಂತಹುದರಲ್ಲಿ ಚುನಾವಣೆ ನಡೆಸಲು ಏಕೆ ಸಾಧ್ಯವಿಲ್ಲ. ಸರಕಾರಕ್ಕೆ ಈ ಚುನಾವಣೆ ನಡೆಸಲು ಇಷ್ಟವಿಲ್ಲವೇ’ ಎಂದು ಪ್ರಶ್ನಿಸಿತು.
ರಾಜ್ಯ ಸರಕಾರ ಚುನಾವಣೆಗಳನ್ನು ವಿರೋಧಿಸುತ್ತಿಲ್ಲ. ಚುನಾವಣೆಗಳನ್ನು ನಡೆಸಬೇಕು ಎಂಬುದು ಸರಕಾರದ ಉದ್ದೇಶವೂ ಆಗಿದೆ. ಆದರೆ, ಕೊರೋನಾ ಸ್ಥಿತಿಗತಿ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಸ್ವಲ್ಪ ಸಮಯ ಕೇಳುತ್ತಿದ್ದೇವೆ. ಗ್ರಾಪಂ ಚುನಾವಣೆ ಪಕ್ಷ ರಹಿತವಾಗಿದೆ. ಸರಕಾರಕ್ಕೆ ರಾಜಕೀಯ ಹಿತಾಸಕ್ತಿ ಇಲ್ಲ. ಹಬ್ಬದ ಸಾಲು ಹಾಗೂ ಚಳಿಗಾಲದ ಜತೆ ಕೊರೋನಾದಿಂದಾಗಿ ಜನಸಾಮಾನ್ಯರ ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ಸ್ವಲ್ಪ ಸಮಯಾವಕಾಶ ಕೋರಲಾಗುತ್ತಿದೆ. ಆಯೋಗ ಸರಕಾರವನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಹೇಳಿದ್ದಾರೆ.
ಚುನಾವಣೆ ಆಯೋಗದ ಪರ ನ್ಯಾಯವಾದಿ ಕೆ.ಎನ್. ಫಣೀಂದ್ರ, ಆಯೋಗ ಚುನಾವಣೆಗಳನ್ನು ನಡೆಸಲು ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಸರಕಾರದ ಜತೆ ಹಲವು ಸುತ್ತಿನ ಮಾತುಕತೆ ನಡೆಸಿದೆ. ವಿಶೇಷ ಎಸ್‌ಒಪಿ ಸಿದ್ಧಪಡಿಸಿದೆ. ಯಾವ ಜಿಲ್ಲೆಗಳು ಮತ್ತು ತಾಲೂಕುಗಳಲ್ಲಿ ಕಡಿಮೆ ಸೋಂಕಿರುತ್ತದೋ ಅಂತಹ ಕಡೆ ಹಂತ-ಹಂತವಾಗಿ ಚುನಾವಣೆಗಳನ್ನು ನಡೆಸಲಾಗುವುದು. ಇದರಿಂದ ಯಾರಿಗೂ ತೊಂದರೆಯಾಗುವುದಿಲ್ಲ. ಸರಕಾರವನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಹೇಳಿಕೆ ಸರಿಯಲ್ಲ ಎಂದು ಹೇಳಿದರು.
ಸರ್ಕಾರದ ಸಹಕಾರ ಇಲ್ಲ:
ಗ್ರಾಮ ಪಂಚಾಯಿತಿ ಸೇರಿದಂತೆ ಯಾವುದೇ ಚುನಾವಣೆಗೂ ಸರಕಾರ ಸಹಕಾರ ನೀಡುತ್ತಿಲ್ಲ. ಆಯೋಗಕ್ಕೆ ಮುಕ್ತವಾಗಿ ಚುನಾವಣೆ ನಡೆಸಲು ಸರಕಾರ ಅವಕಾಶ ನೀಡುತ್ತಿಲ್ಲ. ಹಾಗಾಗಿ, ಸಂವಿಧಾನದ 73ನೇ ತಿದ್ದುಪಡಿಯೇ ನಿರರ್ಥಕವಾಗಲಿದೆ. ಹಾಲಿ ಅವಧಿ ಮುಗಿದಿರುವ ಗ್ರಾಮ ಪಂಚಾಯಿತಿಗಳಿಗೆ ಆರು ತಿಂಗಳ ಅವಧಿಗೆ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ. ಡಿಸೆಂಬರ್‌ಗೆ ಅವಧಿ ಮುಕ್ತಾಯವಾಗಲಿದೆ. ಆನಂತರ ಆ ಅವಧಿಯನ್ನು ವಿಸ್ತರಣೆ ಮಾಡಲು ಅವಕಾಶವಿಲ್ಲ. ಹೀಗಾಗಿ ಸೂಕ್ತ ನಿರ್ದೇಶನಗಳನ್ನು ನೀಡಬೇಕು ಎಂದು ಅರ್ಜಿದಾರರ ಪರ ವಕೀಲ ಪ್ರೊ. ರವಿವರ್ಮ ಕುಮಾರ್ ಹೇಳಿದ್ದಾರೆ.
More Stories
ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು