ಭಾಷೆಯು ಪ್ರಪಂಚದ ಭೂತ ಹಾಗೂ ಜೀವಗಳ ನಡುವಿನ ಸಂವಹನದ ಸಾರಥ್ಯವನ್ನು ವಹಿಸಿರುತ್ತದೆ. ಭಗವಂತನು ಪ್ರಕೃತಿಯನ್ನು ಸೃಸ್ಟಿಸಿದ ನಂತರ ಭಾಷೆಯನ್ನೂ ಒದಗಿಸಿದ್ದಾನೆ. ಮೇಲ್ನೋಟಕ್ಕೆ ಭಾಷೆಯು ಮನುಷ್ಯನ ಸೃಷ್ಟಿ ಎನಿಸಿದರೂ ನಿಜವಾದ ಅರ್ಥದಲ್ಲಿ ಅದು ದೈವೀ ಸೃಷ್ಟಿ. ಶಬ್ದಗಳನ್ನೇ ಅರಿಯದ ಪ್ರಾಣಿ ಪಕ್ಷಿಗಳು ತಮ್ಮದೇ ಆದ ಭಾಷೆಯಲ್ಲಿ ಮಾತನಾಡುತ್ತವೆ. ಮೂಲದಲ್ಲಿ ಶಬ್ದರೂಪಿಯಾಗಿರುವ ದೇವರು ಶಬ್ದಗಳ ವೈವಿಧ್ಯತೆಗನುಗುಣವಾಗಿ ಅಕ್ಷರಗಳ ವಿನ್ಯಾಸಕ್ಕೆ ಮನುಷ್ಯನನ್ನು ಪ್ರೇರೇಪಿಸುವುದರೊಂದಿಗೆ ವಿಧವಿಧವಾದ ಭಾಷೆಗಳ ಹುಟ್ಟಿಗೆ ಕಾರಣೀಭೂತನು ಎಂಬುದನ್ನು ನಾವು ಅರಿತುಕೊಳ್ಳಬೇಕು. ಪ್ರಪಂಚದ ವೈವಿಧ್ಯಮಯ ವಿಷಯಗಳಿಗೆ ನಾಮರೂಪವನ್ನು ಕೊಡಲು ಈ ವ್ಯವಸ್ಥೆ ಎಂಬುದು ನಮ್ಮ ಒಳಗಣ್ಣಿಗೆ ಗೋಚರಿಸುತ್ತದೆ. ಭಾಷೆ ಕೇವಲ ಮಾತನಾಡಲು ಮತ್ತೆ ಬರೆಯಲು ಬಳಸುವ ಮಾಧ್ಯಮವಷ್ಟೇ ಎಂದೆಣಿಸಬಾರದು. ಅದೊಂದು ದೈವದತ್ತ ಕೊಡುಗೆ.
ಅದರಂತೆಯೆ, ಕನ್ನಡ ನಮ್ಮೆಲ್ಲರ ಮಾತೃಭಾಷೆ. ಸಾವಿರಾರು ವರ್ಷಗಳ ಇತಿಹಾಸವಿರುವ ಸುಲಲಿತವೂ, ಸುಮಧುರವೂ ಹಾಗೂ ಆಳವನ್ನೂ ಹೊಂದಿರುವ ಪರಿಪೂರ್ಣ ಭಾಷೆ ನಮ್ಮ ಕನ್ನಡಭಾಷೆ. ಕವಿಯು ಹೇಳಿದಂತೆ “ಅಮೃತವಾಹಿನಿಯೊಂದು ಹರಿಯುತಿದೆ ಮಾನವನ ಎದೆಯಿಂದಲೆದೆಗೆ ಸತತ” ಅನ್ನುವ ರೀತಿಯಲ್ಲಿ ಈ ಭಾಷೆಯೇ ಆ ವಾಹಿನಿಯಾಗಿದೆ. ಕನ್ನಡ ಭಾಷೆಯು ಹಳಗನ್ನಡ, ನಡುಗನ್ನಡ ಹಾಗೂ ಹೊಸಗನ್ನಡ ಎಂದೆಲ್ಲ ಬೆಳೆಯುತ್ತ ಬಂದಿದೆ. ಈ ಭಾಷೆಯ ಉಳಿವು ಹಾಗೂ ಬೆಳವಣಿಗೆಗಾಗಿ ಹಲವಾರು ಮಹನಿಯರು ಶ್ರಮಿಸಿದ್ದಾರೆ ಹಾಗು ಇವತ್ತಿಗೂ ಶ್ರಮಿಸುತ್ತಿದ್ದಾರೆ. ಅವರೆಲ್ಲರೂ ಕೂಡ ಪ್ರಾತಃಸ್ಮರಣೀಯರು. ರನ್ನ, ಪಂಪ, ರಾಘವಾಂಕರಿಂದ ಹಿಡಿದು ಇಂದಿನ ಎಲ್ಲ ಕವಿಗಳ ಸಾಹಿತಿಗಳ ಸಾಹಿತ್ಯ ಕನ್ನಡದ ಕಂಪನ್ನು ಸದಾ ಸೂಸುವಂತೆ ಮಾಡಿದೆ. ಇಂತಹ ಭವ್ಯವಾದ ಭಾಷೆಯನ್ನು ಪಡೆದ ನಾವುಗಳೇ ಧನ್ಯರು.
ಕನ್ನಡದ ವಿಶೇಷತೆಯನ್ನು ಹೇಳುವುದಾದರೆ, ಕರ್ನಾಟಕದ ಉದ್ದಗಲಕ್ಕೂ ಇದು ಪಸರಿಸಿದೆ. ಪ್ರತಿ ೨೫ ಕಿ.ಮೀ ಗೆ ಒಂದೊಂದು ಬಗೆಯ ಕನ್ನಡ ಕೇಳಲು ಸಿಗುತ್ತದೆ. ಅಷ್ಟೊಂದು ವೈವಿಧ್ಯ. ಸಾಹಿತ್ತಿಕ ಭಾಷೆಯ ಸ್ವರೂಪ ಒಂದೆಡೆಯಾದರೆ, ಆಡುಭಾಷೆಯ ಪರಿಪರಿಯ ಭಿನ್ನತೆ ಇನ್ನೊಂದೆಡೆ. ಒಂದೇ ಶಬ್ದಕ್ಕೆ ಬರುವ ವಿಭಿನ್ನ ಅರ್ಥಗಳು. ಭಾಷೆಯನ್ನೂ ಮೀರಿದ ಭಾವನಾತ್ಮಕ ಪದಗಳು. ರೋಮಾಂಚನಗೊಳಿಸುವ ಪದಪುಂಜಗಳು. ಅಕ್ಕರೆಯ ಬೈಗುಳಗಳು. ಮನಬೆಳಗುವ ವಚನಗಳು. ವಿಶೇಷವೆಂದರೆ ನಮ್ಮ ಭಾಷೆ ಪ್ರದೇಶ ಬದಲಾದಂತೆ ತನ್ನ ಮೇಲ್ಮೈಯನ್ನು ಬದಲಿಸುತ್ತದೆ. ಕರ್ನಾಟಕದ ದಕ್ಷಿಣದ ತುದಿಯಲ್ಲಿ ಭಾಷೆ ತುಂಬ ನುಣುಪು, ಸುಮಧುರ ಹಾಗೂ ಸೌಜನ್ಯಯುತ. ಅದೇ ಉತ್ತರದ ಕಡೆ ನಡೆದರೆ ಅದು ಒರಟಾಗುತ್ತ ಹೋಗುತ್ತದೆ. ಉತ್ತರ ಕರ್ನಾಟಕದ ಭಾಷೆ ಹೊರಮೈಯಲ್ಲಿ ಒರಟು ಆದರೂ ಮನಮುಟ್ಟುವ, ಹೃದಯಸ್ಪರ್ಶಿ ಎನಿಸುತ್ತದೆ. ಏತನ್ಮಧ್ಯೆ ದಕ್ಷಿಣದಿಂದ ಉತ್ತರಕ್ಕೆ ಹರಿಯುತ್ತಾ ಬದಲಾಗುತ್ತ ಹೋದರೂ ತನ್ನ ಮೂಲ ಸೊಗಡನ್ನು ಕಳೆದುಕೊಳ್ಳುವುದಿಲ್ಲ. ಅಂತಹ ಭಾಷೆ ನಮ್ಮ ಸವಿಗನ್ನಡ ಭಾಷೆ.
ಬರೆಯಲು ಚೆಂದ, ಮಾತನಾಡಲು ಇನ್ನೂ ಚೆಂದ. ಹಾಡಿದರಂತೂ ಮನೋಹರ. ಇಷ್ಟೆಲ್ಲವಿದ್ದರೂ ಅದೇಕೋ ಏನೋ ಯುವ ಪೀಳಿಗೆ ಇಂದು ಕನ್ನಡವನ್ನು ಅಷ್ಟಾಗಿ ಬಳಸಲು ಇಷ್ಟಪಡುತ್ತಿಲ್ಲ. ಆಂಗ್ಲಭಾಷೆಯ ವ್ಯಾಮೋಹ ಇವರನ್ನು ನುಂಗಿ ಹಾಕಿದೆ. ಇದಕ್ಕೆ ಇನ್ನೊಂದು ಕಾರಣ ಭಾವನೆಗಳ ಕೊರತೆ. ಆಂಗ್ಲಭಾಷೆಯಲ್ಲಿ ಎಲ್ಲಾ ಭಾವನೆಗಳಿಗೆ ಪ್ರತ್ಯೇಕ ಶಬ್ದಗಳಿಲ್ಲ. ಕನ್ನಡದಲ್ಲಿ ಒಂದೇ ಭಾವನೆಯ ಬೇರೆ ಬೇರೆ ತೀವ್ರತೆ ವ್ಯಕ್ತಪದಿಸಲಿಕ್ಕೂ ಪ್ರತ್ಯೇಕ ಶಬ್ದಗಳಿವೆ. ಆದರೆ ಕೆಲ ಜನರಲ್ಲಿ ಭಾವನೆಗಳ ವಿರಳತೆಯಿಂದಾಗಿ ಕನ್ನಡವನ್ನು ಬಳಸುವ ಪ್ರಸಂಗವೇ ಬರದಂತಾಗಿದೆ. ಇದೊಂದು ದುರ್ದೈವದ ಸಂಗತಿ. ಇನ್ನೂ ಕೆಲವರು ಪ್ರತಿಷ್ಠೆಯ ಕಾರಣಗಳಿಂದಲೂ ಕನ್ನಡವನ್ನು ಹೀಗಳಿಯುತ್ತಾರೆ. ಇಂದಿನ ಮಟ್ಟಿಗೆ ಇದು ಸರಿಯೆನ್ನಿಸಿದರೂ ಮುಂದಿನ ಪೀಳಿಗೆಯ ಸ್ಮರಿಸಿ ಕನ್ನಡವನ್ನು ಜೀವಂತವಾಗಿರಿಸಿಕೊಳ್ಳಬೇಕು. ಮುಂದೆಂದೋ ಒಂದು ದಿನ ನಮ್ಮ ಸಂತಾನಗಳೇ ಕನ್ನಡ ಅರಿಯದ ಕಾರಣ ಭಾವನೆ ವ್ಯಕ್ತಪಡಿಸಲಾಗದೇ ಮನೋರೋಗಿಗಳಾಗಿ ತಿರುಗಾಡಿದರೂ ಆಶ್ಚರ್ಯ ಪಡಬೇಕಾಗಿಲ್ಲ. ಒಂದು ಭಾಷೆಗೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಶಕ್ತಿ ಇರುತ್ತದೆ. ಅದಕ್ಕೇ ಇದು ದೈವೀ ಸಂಭೂತವೆಂದು ಹೇಳಿದ್ದು.
ಭಾಷೆಯ ಅವನತಿಗೆ ಬಳಕೆಯ ಕೊರತೆಯೇ ಕಾರಣ. ಅದೆಷ್ಟೋ ಜನರಿಗೆ ಭಾಷೆಯ ಪ್ರಯೋಗ ವಿಧಾನವೇ ತಿಳಿದಿರುವುದಿಲ್ಲ. ಕೇವಲ ಪಟಪಟನೆ ಅರಳು ಹುರಿದಂತೆ ಮಾತನಾಡಿಬಿಡುತ್ತಾರೆ. ಅಲ್ಪಪ್ರಾಣಗಳು, ಮಹಾಪ್ರಾಣಗಳು ಹಾಗೂ ಒತ್ತಕ್ಷರಗಳು ಇವೆಲ್ಲವನ್ನು ಅರಿತು ಪ್ರಯೋಗಿಸಿದರೆ ಭಾಷಾಸೌಂದರ್ಯ ಹೆಚ್ಚುತ್ತದೆ. ಅತ್ಯಂತ ಮುಖ್ಯವೆಂದರೆ ಪ್ರಯೋಗದಲ್ಲಿ ಭಾವನೆಯೇ ಪ್ರಮುಖವಾಗಿರಬೇಕು. ಅಂತಹ ಉದಾಹರಣೆಗಳು ವರನಟ ಡಾ|| ರಾಜ್ ಕುಮಾರ್ ಅವರ ಸಂಭಾಷಣೆಯಲ್ಲಿ ಕಾಣಲು ಸಿಗುತ್ತವೆ. ಸರಿಯಾಗಿ ಬಳಸಿದರೆ ಅದರ ಕಂಪು ತಿಳಿಯುತ್ತದೆ. ಅದರ ಕಂಪಿನಿಂದ ಬಳಕೆಗೆ ಮನಬಯಸುತ್ತದೆ. ಮನಬಯಸಿದ್ದನ್ನೇ ತಾನೆ ನಾವೆಲ್ಲಲೂ ಮಾಡುವುದು?
ಕನ್ನಡವನ್ನ ಪ್ರೀತಿಸೊಣ, ಬೆಳೆಸೋಣ, ಪಸರಿಸೊಣ. ಕನ್ನಡದಲ್ಲೇ ಮಾತನಾಡೋಣ , ಕನ್ನಡದಲ್ಲೇ ವ್ಯವಹರಿಸೋಣ. ಬನ್ನಿ ನಾವೆಲ್ಲರೂ ಕನ್ನಡಾಂಬೆಯ ಸೇವೆ ಮಾಡೋಣ. ಇದು ನಮ್ಮ ಭಾಷೆ, ಹೆಮ್ಮೆಯ ಭಾಷೆ, ದೈವದತ್ತ ಕೊಡುಗೆ.
- KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
- Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
- ರಾಜ್ಯದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ: ಬಿಜೆಪಿಗೆ ಆಘಾತ
More Stories
ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
ಮೈಸೂರು ಜಿಲ್ಲೆಯ ಸಂಕ್ಷಿಪ್ತ ಮಾಹಿತಿಯ ಕವನ
ರಾಮನಗರ ಜಿಲ್ಲೆಯ ಸಂಕ್ಷಿಪ್ತ ಪರಿಚಯದ ಕವನ (ಜಿಲ್ಲೆ ೨೯)