ಭಾರತದ ಅತ್ಯಂತ ಅಮೂಲ್ಯವಾದ ಆಹಾರಗಳಲ್ಲಿ ಒಂದಾದ ತುಪ್ಪ ರೋಗಗಳನ್ನು ಗುಣಪಡಿಸುವ ಕಾರಣಗಳಿಂದಾಗಿ ಮತ್ತು ಆರೋಗ್ಯ ಸೌಂದರ್ಯದ ಪ್ರಯೋಜನಗಳಿಗೆ ಬಹಳ ಹಿಂದಿನಿಂದಲೂ ಬಳಸಲಾಗುತ್ತಿತ್ತು.
ತುಪ್ಪ ಇತರ ಎಣ್ಣೆಗಳಂತೆ ಅಲ್ಲ, ಇದರಲ್ಲಿ ಅನಾವಶ್ಯಕ `ಕೊಲೆಸ್ಟ್ರಾಲ್’ ಇರುವುದಿಲ್ಲ. ಇಂತಹ ತುಪ್ಪದಲ್ಲಿರುವ ಕೊಬ್ಬು ಶರೀರಕ್ಕೆ ಅತೀ ಶ್ರೇಷ್ಠ ಮಟ್ಟದ್ದು ಹಾಗೂ ರೋಗ ನಿರೋಧಕ ಶಕ್ತಿ ವೃದ್ಧಿಸುವಂತದ್ದೂ ಆಗಿದೆ. ಹೀಗಾಗಿ ದೇಶೀ ಗೋವಿನ ತುಪ್ಪವನ್ನು “ಅಮೃತ” ಎಂದು ಬಣ್ಣಿಸುತ್ತಾರೆ.ಚಳಿಗಾಲದಲ್ಲಿ ನಮ್ಮ ದೇಹಕ್ಕೆ ಎಣ್ಣೆ ಮತ್ತು ಜಿಡ್ಡಿನ ಪದಾರ್ಥಗಳ ಅವಶ್ಯಕತೆ ಇರುತ್ತದೆ. ಚಳಿಗಾಲದಲ್ಲಿ ಉಂಟಾಗುವ ಒಣ ತ್ವಚೆ, ಒಡೆದ ಹಿಮ್ಮಡಿ, ಕಡಿಮೆ ರೋಗನಿರೋಧಕ ಶಕ್ತಿ ಮುಂತಾದವುಗಳಿಗೆ ತುಪ್ಪ ಸೇವನೆ ಉತ್ತಮ ಪರಿಹಾರ.
ತುಪ್ಪ ಎಂಬ ಮಹಾ ಔಷಧಿ
1) ಇತ್ತೀಚಿನ ವರ್ಷಗಳಲ್ಲಿ ನಡೆದ ಸಂಶೋಧನೆಗಳಿಂದ ತುಪ್ಪದ ಬಗ್ಗೆ ಒಂದಷ್ಟು ಅಂಶಗಳು ಬೆಳಕಿಗೆ ಬಂದಿವೆ. ಬೇಸಿಗೆಯಲ್ಲಿ ದೇಶಿ ಗೋವಿನ ತುಪ್ಪದ ಸೇವನೆ ತುಂಬಾ ಒಳ್ಳೆಯದು ಎನ್ನಲಾಗಿದೆ. ಮಕ್ಕಳು ಯುವಕರು ಮತ್ತು ಆರೋಗ್ಯವಂತರಿಗೆ ತುಪ್ಪದ ಸೇವನೆಯಿಂದ ಹೆಚ್ಚು ಲಾಭವಿರುವುದು ಸಾಬೀತಾಗಿದೆ. ಕಣ್ಣು, ಮೂಗು, ಕಿವಿ ರೋಗ, ಕಫ, ಮೂರ್ಚೆ ರೋಗ, ಜ್ವರ, ಕ್ರಿಮಿ ಮತ್ತು ವಾತ, ಪಿತ್ತ ಕಫ ವಿಷದ ಉಪದ್ರವಗಳಿಗೆ ಗೋವಿನ ತುಪ್ಪವು ಮಹಾ ಔಷಧಿಯಾಗಿ ಕೆಲಸ ಮಾಡುವುದು ಕಂಡು ಬಂದಿದೆ.ತುಪ್ಪದಲ್ಲಿರುವ ಓಮೇಗಾ 3 ಫ್ಯಾಟಿ ಆಸಿಡ್‌ಗಳಾದ ಡಿ.ಹೆಚ್.ಎ.., ಕೊಬ್ಬಿನಲ್ಲಿ ಕರಗುವ ವಿಟಮಿನ್‌ಗಳಾದ ವಿಟಮಿನ್ ಎ, ಡಿ, ಕೆ, ಇ, ಸಿ, ಕೆ2ಗಳು, ಕ್ಯಾಲ್ಸಿಯಂ ಆ್ಯಂಟಿಯಾಕ್ಸಿಡಂಟ್ಸ್ ಹಾಗೂ ಬುಟಿರಿಕ್ ಆಸಿಡ್‌ಗಳು ಹೆಚ್ಚಿವೆ. ಬುಟಿರಿಕ್ ಆಸಿಡ್ ಕ್ಯಾನ್ಸರ್ ನಿವಾರಕವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
2) ತುಪ್ಪವು ಆಹಾರದಲ್ಲಿರುವ ವಿಟಮಿನ್ ಮತ್ತು ಮಿನರಲ್‌ಗಳನ್ನು ಹೆಚ್ಚು ಹೀರಿಕೊಳ್ಳಲು ದೇಹಕ್ಕೆ ಸಹಕಾರಿಯಾಗಿದ್ದು, ದೇಹದ ವಿವಿಧ ಅಂಗಾಂಶಗಳ ಪದರಗಳಿಗೆ ಶಕ್ತಿಯನ್ನು ತುಂಬುತ್ತದೆ.
3) ಕ್ಯಾನ್ಸರ್ ಗಡ್ಡೆಗಳ ಬೆಳವಣಿಗೆಯನ್ನು ಕುಂಠಿತಗೊಳಿಸುವಲ್ಲಿ ಪರಿಣಾಮಕಾರಿ ಯಾಗಿದ್ದು, ದೇಹದ ನರಮಂಡಲಕ್ಕೆ ಶಕ್ತಿ ಒದಗಿಸುವುದರಿಂದ ಅನೇಕ ನರಸಂಬಂಧಿ ರೋಗಗಳನ್ನು ಶಮನ ಮಾಡುವಲ್ಲಿ ತುಪ್ಪದ ಸೇವನೆ ಅತ್ಯವಶ್ಯಕ ಎಂಬುದಾಗಿ ಹೇಳುತ್ತಾರೆ.
4) ಹತ್ತು ವರ್ಷ ಹಳೆಯ ತುಪ್ಪವನ್ನು ಗಾಯಗಳಿಗೆ ಹಚ್ಚುವುದರಿಂದ ಗಾಯ ಬೇಗನೇ ವಾಸಿಯಾಗುತ್ತದೆ. ಹಾಗೆಯೇ ಸುಟ್ಟ ಗಾಯಕ್ಕೂ ತುಪ್ಪವನ್ನು ಹಚ್ಚುವುದರಿಂದ ಬೇಗನೇ ಗುಣವಾಗುತ್ತದೆ. ಚೇಳು ಕಡಿದಾಗ ತುಪ್ಪ ಮತ್ತು ಹಾಲನ್ನು ಒಟ್ಟಿಗೆ ಸೇರಿಸಿ ಸೇವಿಸುವುದರಿಂದ ವಿಷದ ಪ್ರಭಾವ ಕಡಿಮೆಯಾಗುತ್ತದೆ ಎಂದು ಹೇಳುವರು.
5) ಇದು ಬೆಳೆಯುವ ಮಕ್ಕಳಿಗೆ ವಿಶೇಷ ಶಕ್ತಿಯನ್ನು ನೀಡುವುದರೊಂದಿಗೆ ಬೆಳವಣಿಗೆಗೆ ಸಹಾಯಕವಾಗುವ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ. ತುಪ್ಪದ ಸೇವನೆಯಿಂದ ಬುದ್ಧಿಶಕ್ತಿ ಹೆಚ್ಚುವುದರೊಂದಿಗೆ ಶರೀರದ ಕಾಂತಿಯು ಹೆಚ್ಚಿ ಬಲ ವರ್ಧಿಸುತ್ತದೆ. ವಾತ, ಪಿತ್ತ ಮತ್ತು ಕಫದ ಸುಸ್ತುನ್ನು ಕಡಿಮೆ ಮಾಡುತ್ತದೆ.
6) ತುಪ್ಪದ ಸೇವನೆಯಿಂದ ಮನುಷ್ಯನಿಗೆ ಬೇಕಾದ ನಿದ್ರೆಯು ಉತ್ತಮವಾಗಿ ಬರುತ್ತದೆ. ಹವಾಮಾನಕ್ಕೆ ಒಗ್ಗದ ರೋಗಗಳು ಬರುವುದಿಲ್ಲ. ಒಟ್ಟಿನಲ್ಲಿ ತುಪ್ಪ ತಿಂದರೆ ದಪ್ಪ ಆಗುತ್ತಾರೆ ಎಂಬ ತಪ್ಪು ಕಲ್ಪನೆಯನ್ನು ತೊಡೆದು ಹಾಕಿ ದಿನಕ್ಕೆ ಕನಿಷ್ಠ ದೇಶಿ ಗೋವಿನ ಒಂದು ಚಮಚ ತುಪ್ಪವನ್ನಾದರೂ ಸೇವಿಸುವ ಮೂಲಕ ದೇಹ ಮತ್ತು ಮನಸ್ಸನ್ನು ಸ್ವಸ್ಥವಾಗಿಟ್ಟುಕೊಳ್ಳಬಹುದು.
7) ತುಪ್ಪವು ಕೀಲುಗಳು ಮತ್ತು ಅಂಗಾಂಶಗಳ ನಡುವೆ Lubricant ಆಗಿ ಕಾರ್ಯನಿರ್ವಹಿಸುತ್ತದೆ. ಈ ಮೂಲಕ ಮೂಳೆಯ ಬಲವನ್ನು ಹೆಚ್ಚಿಸುತ್ತದೆ.
ತ್ವಚೆಯ ಆರೈಕೆಗೆ ತುಪ್ಪ
ಚಳಿಗಾಲದ ಸಮಯದಲ್ಲಿ ಒಣ ತ್ವಚೆ ಹೊಂದಿರುವವರಿಗೆ ಇದು ಅತ್ಯುತ್ತಮ ನೈಸರ್ಗಿಕ ಮಾಯಿಶ್ಚರೈಸರ್.
1) ತುಪ್ಪದ ನಿಯಮಿತ ಬಳಕೆಯಿಂದ ಚರ್ಮವನ್ನು ಪೋಷಿಸುವ ಮೂಲಕ ಆರೋಗ್ಯಕರ, ನೈಸರ್ಗಿಕ ಹೊಳಪನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ
2) ತುಪ್ಪ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ಕಿರಿಕಿರಿ ಉಂಟು ಮಾಡುವ ಅಥವಾ ಉರಿಯೂತದ ಚರ್ಮವನ್ನು ಶಮನಗೊಳಿಸುತ್ತದೆ.
3) ತುಟಿಗಳಿಗೆ ತುಪ್ಪ ಹಚ್ಚುವುದರಿಂದ ತೇವಾಂಶ ಮತ್ತು ಮೃದುತ್ವವನ್ನು ಕಾಪಾಡಲು ಸಹಾಯ ಮಾಡುತ್ತದೆ. ಇದು ಚಳಿಗಾಲದಲ್ಲಿ ತುಟಿಗಳಿಗೆ ನೈಸರ್ಗಿಕ ಪರಿಹಾರವಾಗಿದೆ.
4) ತುಪ್ಪವನ್ನು ನಿಯಮಿತವಾಗಿ ತ್ವಚೆಗೆ ಹಚ್ಚಿಕೊಳ್ಳುವುದರಿಂದ ಚರ್ಮದ ಮೇಲ್ಮೈ ಮತ್ತು ಪೋಷಿಸುವ ಮೂಲಕ ಚರ್ಮವನ್ನು ಮೃದು ಮತ್ತು ನಯವಾಗಿಸಲು ಸಹಾಯ ಮಾಡುತ್ತದೆ.
ತ್ವಚೆಯ ಮೇಲೆ ತುಪ್ಪವನ್ನು ಹೇಗೆ ಬಳಸಿಕೊಳ್ಳಬಹುದು ಎಂಬ ವಿಧಾನಗಳನ್ನು ನಾವಿಂದು ತಿಳಿಯೋಣ.
1)ಮಾಯಿಶ್ಚರೈಸರ್: ಸಾಮಾನ್ಯ ಮಾಯಿಶ್ಚರೈಸರ್ ಗಳನ್ನು ನೀವು ಹೇಗೆ ಬಳಸುತ್ತೀರೋ ಅದೇ ರೀತಿ ಸ್ವಲ್ಪ ಪ್ರಮಾಣದಲ್ಲಿ ತುಪ್ಪ ತೆಗೆದುಕೊಂಡು ಅದನ್ನು ಮುಖ ಮತ್ತು ದೇಹಕ್ಕೆ ನಿಧಾನವಾಗಿ ನಿಯಮಿತವಾಗಿ ಮಸಾಜ್ ಮಾಡುತ್ತಾ ಬಂದರೆ ತ್ವಚೆ ಮೃದುವಾಗುತ್ತದೆ.
2)ಲಿಪ್ ಬಾಮ್: ಒಣ ಅಥವಾ ಒಡೆದ ತುಟಿಗಳಿಂದ ಪಾರಾಗಲು ಮಲಗುವ ಮುನ್ನ ತುಟಿಗಳಿಗೆ ತುಪ್ಪ ಹಚ್ಚಿ, ರಾತ್ರಿಯಿಡೀ ಹಾಗೆಯೇ ಬಿಟ್ಟು ಬೆಳಿಗ್ಗೆ ಸ್ವಚ್ಛಗೊಳಿಸುವುದರಿಂದ ತುಟಿಗಳು ಮೃದುವಾಗುತ್ತದೆ.
3)ಫೇಸ್ ಮಾಸ್ಕ್: ಕಡ್ಲೆ ಹಿಟ್ಟು, ಅರಿಶಿನ ಹಾಗೂ 2 ಚಮಚ ತುಪ್ಪ ಮಿಶ್ರಣ ಮಾಡಿ ಫೇಸ್ ಮಾಸ್ಕ್ ತಯಾರಿಸಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 15-20 ನಿಮಿಷಗಳ ಕಾಲ ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ತ್ವಚೆಯ ಕಾಂತಿಗೆ ಇದು ಸಹಾಯ ಮಾಡುತ್ತದೆ.
4)ಬಾಡಿ ಸ್ಕ್ರಬ್: ತುಪ್ಪವನ್ನು ಸಕ್ಕರೆ ಅಥವಾ ಉಪ್ಪಿನೊಂದಿಗೆ ಮಿಶ್ರಣ ಮಾಡಿ ನೈಸರ್ಗಿಕ ಸ್ಕ್ರಬ್ ತಯಾರಿಸಿ. ಇದನ್ನು ತ್ವಚೆಗೆ ಹಚ್ಚಿಕೊಳ್ಳಿ. ಇದು ಸತ್ತ ಚರ್ಮದ ಕೋಶಗಳನ್ನು ನಿಧಾನವಾಗಿ ತೆಗೆದುಹಾಕುತ್ತದೆ. ತ್ವಚೆ ಮೃದು ಮತ್ತು ಕಾಂತಿಯುತವಾಗಿಸುತ್ತದೆ.
5)ಮೇಕಪ್ ರಿಮೂವರ್: ತುಪ್ಪವನ್ನು ಮೇಕಪ್ ರಿಮೂವರ್ ನಂತೆಯೂ ಬಳಸಬಹುದು. ವಾಟರ್ ಪ್ರೋಫ್ ಮೇಕಪ್ ಅಥವಾ ಇತರ ನೈಸರ್ಗಿಕ ಮೇಕಪ್ ಗಳನ್ನು ತೆಗೆಯಲು ಕಾಟನ್ ಪ್ಯಾಡ್‌ಗೆ ಸ್ವಲ್ಪ ತುಪ್ಪ ಹಚ್ಚಿಕೊಳ್ಳಿ. ಅದರ ಸಹಾಯದಿಂದ ಮೇಕಪ್ ತೆಗೆಯಿರಿ. ನಂತರ ಫೇಸ್‌ವಾಶ್ ಬಳಸಿ ಮುಖ ಸ್ವಚ್ಛಗೊಳಿಸಿ.
ತುಪ್ಪ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ತ್ವಚೆಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ತುಪ್ಪವನ್ನು ಆಹಾರದೊಂದಿಗೆ ಸೇವಿಸುವುದರ ಜೊತೆಗೆ ತುಪ್ಪವನ್ನು ಚಳಿಗಾಲದ ತ್ವಚೆಯ ದಿನಚರಿಯಲ್ಲಿ ಸೇರಿಸಿಕೊಳ್ಳುವ ಮೂಲಕ, ಎಲ್ಲಾ ಋತುವಿನಲ್ಲೂ ಮೃದುವಾದ, ಹೊಳೆಯುವ ತ್ವಚೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.
ಸೌಮ್ಯ ಸನತ್ ✍️
More Stories
SBIನಲ್ಲಿ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ..!
ಸಂಸತ್ ಕಟ್ಟಡದ ಬಳಿ ಬೆಂಕಿ ಹಚ್ಚಿಕೊಂಡ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು