January 4, 2025

Newsnap Kannada

The World at your finger tips!

gajapade4

ಮೈಸೂರು ಅರಮನೆ ಪ್ರವೇಶಿಸಿದ ಗಜಪಡೆ: ಸಚಿವರಿಂದ ಸ್ವಾಗತ

Spread the love

ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಗಜಪಡೆಯು ಗುರುವಾರ ತುಲಾಲಗ್ನದಲ್ಲಿ ಮೈಸೂರು ಅರಮನೆ ಆವರಣವನ್ನು ಪ್ರವೇಶಿಸಿದಾಗ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಆನೆಗಳನ್ನು ಸಾಂಪ್ರದಾಯಕವಾಗಿ ಸ್ವಾಗತಿಸಿದರು.

gajapade2


ಜಯಮಾರ್ತಾಂಡ ದ್ವಾರದಲ್ಲಿ ಬೆಳಗ್ಗೆ 8.36 ರಿಂದ 9.11 ರ ಶುಭಲಗ್ನದಲ್ಲಿ ಮಂಗಳವಾದ್ಯ, ಪೂರ್ಣಕುಂಭದೊಂದಿಗೆ ಗಜಪಡೆಯನ್ನು ಅರಮನೆಯ ಆವರಣದೊಳಕ್ಕೆ ಬರಮಾಡಿಕೊಳ್ಳಲಾಯಿತು.

gajapade1

ಇದಕ್ಕೂ ಮುನ್ನ ಬೆಳಗ್ಗೆ6.45 ಕ್ಕೆ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯಭವನದ ಆವರಣದಲ್ಲಿ ತಂಗಿದ್ದ ಆನೆಗಳಿಗೆ ಸಾಂಪ್ರದಾಯಕ ಪೂಜೆ ಸಲ್ಲಿಸಲಾಯಿತು. ನಂತರ ಅಂಬಾರಿ ಹೊರುವ ಅಭಿಮನ್ಯು ನೇತೃತ್ವದಲ್ಲಿಎಂಟು ಆನೆಗಳು ಮೆರವಣಿಗೆಯ ಮೂಲಕ ಅರಮನೆಯತ್ತ ಸಾಗಿದವು.


ಗಜಪಡೆ ಸ್ವಾಗತ ಕಾರ್ಯಕ್ರಮದಲ್ಲಿ ಮೇಯರ್ ಸುನಂದಾ ಪಾಲನೇತ್ರ, ಶಾಸಕರಾದ ಎಸ್. ಎ. ರಾಮದಾಸ್, ಎಲ್. ನಾಗೇಂದ್ರ, ಮೂಡಾ ಅಧ್ಯಕ್ಷ ಎಚ್.ವಿ.ರಾಜೀವ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಪೊಲೀಸ್ ಕಮಿಷನರ್ ಡಾ. ಚಂದ್ರಗುಪ್ತ, ಎಸ್.ಪಿ. ಚೇತನ್, ಡಿಸಿಎಫ್ ಕರಿಕಾಳನ್, ಅರಮನೆ ಮಂಡಳಿ ಉಪ ನಿರ್ದೇಶಕ ಸುಬ್ರಹ್ಮಣ್ಯ ಮತ್ತಿತರ ಪ್ರಮುಖರು ಇದ್ದರು.

gajapade


ಸ್ವಾಗತ ಕಾರ್ಯಕ್ರಮದ ನಂತರ ವರದಿಗಾರರೊಂದಿಗೆ ಮಾತನಾಡಿದ ಸಚಿವ ಸೋಮಶೇಖರ್, ವಿಧಾನ ಮಂಡಲದ ಅಧಿವೇಶನ ಮುಗಿದ ನಂತರ ಪ್ರಮುಖರೊಂದಿಗೆ ಚರ್ಚಿಸಿ, ದಸರಾ ಉದ್ಘಾಟನೆ ಯಾರಿಂದ ಎಂಬುದನ್ನು ತೀರ್ಮಾನಿಸಲಾಗುವುದು.

ಉದ್ಘಾಟಕರ ಬಗ್ಗೆ ಯಾರು ಬೇಕಾದರೂ ಸಲಹೆ ನೀಡಬಹುದು. ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಅಂತಿಮವಾಗಿ ಅವರು ಆಯ್ಕೆಮಾಡಿ ಹೆಸರು ಪ್ರಕಟಿಸುವರು ಎಂದರು. ಅಕ್ಟೋಬರ್ 7 ರಂದು ದಸರಾ ಉದ್ಘಾಟನೆ ನಡೆಯಲಿದೆ. ಅ. 15 ರ ತನಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.


ಫುಟ್‌ಪಾತ್ ಏರಿದ್ದ “ಅಶ್ವತ್ಥಾಮ’: ದಸರಾದಲ್ಲಿ ಭಾಗವಹಿಸಲು ಮೊದಲ ಬಾರಿಗೆ ಬಂದಿರುವ ಆನೆ ಅಶ್ವತ್ಥಾಮ ಅರಣ್ಯಭವನದಿಂದ ಮೆರಣಿಗೆಯಲ್ಲಿ ಬರುವ ವೇಳೆ ನಗರದ ಸದ್ದುಗದಲ್ಲಕ್ಕೆ ಬೆದರಿ ಫುಟ್‌ಪಾತ್ ಏರಿದ ಘಟನೆಯೂ ನಡೆಯಿತು. ಇದರಿಂದ ಎಚ್ಚೆತ್ತುಕೊಂಡ ಮಾವುತ, ಕಾವಾಡಿ ಆನೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಫುಟ್‌ಪಾತ್‌ನಿಂದ ಕೆಳಗಿಳಿಸಿ ರಸ್ತೆಯಲ್ಲಿ ಸಾಗುವಂತೆ ನೋಡಿಕೊಂಡರು.

Copyright © All rights reserved Newsnap | Newsever by AF themes.
error: Content is protected !!