November 18, 2024

Newsnap Kannada

The World at your finger tips!

gandiji 1

ಅಖಂಡ ಭಾರತಕ್ಕಾಗಿ ಮತ್ತೆ ಹುಟ್ಟಿ ಬಾ ಗಾಂಧೀಜಿ…

Spread the love

ಲೇಖನ: ಪಾ.ಶ್ರೀ.ಅನಂತರಾಮ
ಪತ್ರಕರ್ತ, ಅಂಕಣಕಾರ

ಓ ಮಹಾತ್ಮನೇ. ನೀವಿಲ್ಲದ ಭಾರತ ಈಗ ಊಹಿಸಿಕೊಳ್ಳಲಾಗದಷ್ಟು ಚಿತ್ರ,ವಿಚಿತ್ರಗಳಿಂದ ಅವೃತಗೊಂಡಿದೆ, ನೀನು ಸಾರಿದ ಅಹಿಂಸಾ ಮಂತ್ರ ಬೂಟಾಟಿಕೆ ಎಂಬಂತಾಗಿದೆ, ಉಪಕಾರ ಸ್ಮರಣೆ ಇಲ್ಲದಂತಾಗಿದೆ, ಅಸತ್ಯ, ಅನ್ಯಾಯ ತುಂಬಿ ತುಳುಕುತ್ತಿದೆ, ನಿಜವಾದ ಸ್ವಾತಂತ್ರ್ಯ ಕ್ಕಾಗಿ, ಅಖಂಡ ಭಾರತಕ್ಕಾಗಿ ಮತ್ತೆ ಹುಟ್ಟಿ ಬನ್ನಿ ಗಾಂಧೀಜಿ.

ಸುಸಂಸ್ಕೃತ ತಂದೆ ಮೋಹನದಾಸ್ ಕರಮ್‌ಚಂದ್ ಗಾಂಧಿ, ತಾಯಿ ಪುತಲೀಬಾಯಿ, ತಾತ ಉತ್ತಮಚಂದ್ ಗಾಂಧಿ ಅವರ ನೀತಿ ಪಾಠ, ದೇಶ ಭಕ್ತಿಯನ್ನು ಮೈಗೂಡಿಸಿಕೊಂಡು ನುಡಿದಂತೆ ನಡೆದ ನೀವು ಕಟ್ಟಿದ ಭಾರತದಲ್ಲಿ ಈಗ ದೇಶ ಭಕ್ತಿ ಎಂಬುದು ಅರ್ಥಹೀನವಾಗಿದೆ, ನಕಲಿ ಗಾಂಧೀಗಳ ಹಾವಳಿಯಿಂದ ಭಾರತ ಅಸ್ಥಿ ಪಂಜರವಾಗಿ ಮಾರ್ಪಡುತ್ತಿದೆ, ಎಲ್ಲರನ್ನು ಒಳಗೊಂಡ ಸೌಹಾರ್ದ ಮತ್ತು ಸಾಮರಸ್ಯದ ಭಾರತ ನಿರ್ಮಾಣಕ್ಕಾಗಿ ಮತ್ತೆ ಹುಟ್ಟಿ ಬನ್ನಿ ಬಾಪುಜಿ.

ಗಾಂಧೀಜಿ ನೀವು ಬಾಲಕರಾಗಿದ್ದಾಗ, ಯುವಕರಾಗಿದ್ದಾಗ ವಿವೇಕ,ವಿವೇಚನೆ ಇಲ್ಲದೆ ಮಾಡಿದ ತಪ್ಪುಗಳು ತಮ್ಮ ಅರಿವಿಗೆ ಬಂದ ಮೇಲೆ “ಸತ್ಯ ಹರಿಶ್ಚಂದ್ರ” ಮತ್ತು “ಶ್ರವಣ ಪಿತೃಭಕ್ತಿ” ಎಂಬ ನಾಟಕಗಳಿಂದ ಸ್ಫೂರ್ತಿ ಪಡೆದು ಅಂದಿನಿಂದ ಗತಿಸುವರೆಗೂ ಸತ್ಯ ಮಾರ್ಗದಲ್ಲಿ ನಡೆದಿರುವುದು ಚರಿತ್ರೆಯಾಗಿದೆ.


ಆಂಗ್ಲರ ಕಪಿಮುಷ್ಠಿಯಿಂದ ಭಾರತಕ್ಕೆ ಮುಕ್ತಿ ದೊರಕಿಸಲು ಅರೆ ಬಟ್ಟೆ ತೊಟ್ಟು, ಪಾದರಕ್ಷೆಯನ್ನು ಬದಿಗಿಟ್ಟು, ಉಪವಾಸ ಸತ್ಯಾಗ್ರಹ ಮಾಡಿ ಭಾರತೀಯರಿಗೆ ಶಾಂತಿ-ನೆಮ್ಮದಿ ಸಿಗಲು ಹೋರಾಟ ಮಾಡಿ, ಪರಕೀಯರ ಕೆಂಗಣ್ಣಿಗೆ ಗುರಿಯಾಗಿ ಸೆರೆವಾಸ ಅನುಭವಿಸಿ ಕಡೆಗೆ ನಮ್ಮವರಿಂದಲೇ ಗುಂಡಿಗೆ ಬಲಿಯಾಗಿದ್ದು ದುರ್ದೈವ , ನಿಮ್ಮನ್ನು ಕೊಂದವರಿಗೆ ಶಾಪ ಹಾಕದೆ ಹರೇ ರಾಮ್ ಎಂದು ದೇವರನ್ನು ಸ್ಮರಿಸಿ ಕಣ್ಣು ಮುಚ್ಚಿ ಅಹಿಂಸಾ ತತ್ವವನ್ನು ಪಾಲಿಸಿದ್ದೀರಿ. ಆದರೆ. ನೀವಿಲ್ಲದ ಭಾರತದಲ್ಲಿಂದು ಕೌರ್ಯ ಹೆಚ್ಚಾಗಿದೆ, ಸತ್ಯ ಸಮಾಧಿಯಾಗುತ್ತಿದೆ, ನ್ಯಾಯಕ್ಕೆ ಬೆಲೆ ಇಲ್ಲದಂತಾಗಿದೆ, ಹೆಣ್ಣು ಮಕ್ಕಳ ಮಾನ, ಪ್ರಾಣ ತೆಗೆಯಲಾಗುತ್ತಿದೆ, ಬಡ ಜನರ ಮೇಲೆ ನಿರಂತರ ಪ್ರಹಾರ ನಡೆಸಲಾಗುತ್ತಿದೆ, , ಹಸಿವಿನಿಂದ ಅಸುನೀಗುತ್ತಿರುವ ಕಂದಮ್ಮಗಳ ಸಂಖ್ಯೆ ಹೆಚ್ಚಾಗುತ್ತಿದೆ, ಬ್ರಿಟಿಷರಿಗಿಂತ ಹೆಚ್ಚಿನ ವಿಕೃತ ಮನಸ್ಸಿನವರ ಅಟ್ಟಹಾಸದಿಂದ ಭಾರತದ ಘನತೆಗೆ ಧಕ್ಕೆಯಾಗುತ್ತಿದ್ದು ದುರಸ್ತಿಗಾಗಿ ನವ ಭಾರತ ನಿರ್ಮಾನಕ್ಕಾಗಿ ಮತ್ತೆ ಜನ್ಮತಾಳಿ ಬನ್ನಿ ಮಹಾತ್ಮ.


ಅಸ್ಪೃಶ್ಯತೆ ಎಂಬುದು ಶಾಪ ಎಂದು ಜಾತಿವಾದಿಗಳನ್ನು ಎಚ್ಚರಿಸಿದ್ದೀರಾ, ಸರ್ವ ಧರ್ಮಗಳ ಸಾರ ಒಂದೇ ಎಂದು ಪ್ರತಿಪಾದಿಸಿದ್ರಿ, ಭಾರತೀಯ ಸಂಸ್ಕೃತಿಯನ್ನು ಪ್ರತಿಯೊಬ್ಬರು ಗೌರವಿಸಬೇಕೆಂದು ಆಶಿಸಿದ್ರಿ, ದೇಶವನ್ನು ದಾಸ್ಯದಿಂದ ಮುಕ್ತಿಗೊಳಿಸಲು ಕಿಚ್ಚು ಹೆಚ್ಚಿಸಿದ್ರಿ. ಆದರೆ, ಭಾರತದಲ್ಲಿ ಇಂದು ವಿಛಿದ್ರಕಾರಕ ಶಕ್ತಿಗಳಿಂದಾಗಿ ವಿಭಜನೆಯ ಕೂಗು ಜೋರಾಗಿದೆ, ಉಗ್ರವಾದಿಗಳ ಕಾಟ ಹೆಚ್ಚಾಗಿದೆ, ಭಾರತೀಯರನ್ನು ಓಡಿಸಿ ಇಲ್ಲವೇ ಸಾಯಿಸಿ ಸಾಮ್ರಾಜ್ಯ ಸ್ಥಾಪಿಸಲು ಉಗ್ರರು ಹಾಗೂ ಅಕ್ರಮವಾಗಿ ನುಸುಳುತ್ತಿರುವ ಮತಾಂಧರಿಗೆ ಕುಮ್ಮಕ್ಕು ನೀಡುವ ದುಷ್ಟರನ್ನು ಸದೆ ಬಡಿದು ಇಲ್ಲಿನ ಜನತೆ ಶಾಂತಿ, ಸೌಹಾರ್ದತೆಯಿಂದ ಬದುಕಲು ಮತ್ತೊಂದು ಸಂಗ್ರಾಮಕ್ಕೆ ಭಾರತೀಯರನ್ನು ಸಜ್ಜುಗೊಳಿಸುವ ಶಕ್ತಿಯಾಗಿ ಧರೆಗೆ ಇಳಿದು ಬನ್ನಿ ಬಾಪುಜಿ.


ತಪ್ಪು ಗ್ರಹಿಕೆ, ದುಡುಕುತನ, ಅಸಮಾಧನದಿಂದ ಗೋಡ್ಸೆ ಎಂಬುವ ನಿನ್ನನ್ನು ಹತ್ಯೆಗೈದು ಗಲ್ಲು ಶಿಕ್ಷೆಗೆ ಒಳಗಾಗಿದ್ದಾನೆ, ಆದರೆ ಮನುಕುಲದ ನಾಶಕ್ಕೆ ಯತ್ನಿಸುತ್ತಿರುವ,ಹಾಡುಹಗಲೇ ರಕ್ಕಸತನ ಮೂಲಕ ಜನರ ಶಾಂತಿ,ನೆಮ್ಮದಿಗೆ ಭಂಗವನ್ನುಂಟು ಮಾಡುತ್ತಿರುವ, ಭ್ರಷ್ಟಾಚಾರದಲ್ಲಿ ಮುಳುಗಿರುವ, ಅಕ್ರಮವಾಗಿ ಸಂಪಾದಿಸಿದ ಹಣವನ್ನು ವಿದೇಶಿ ಬ್ಯಾಂಕಿನಲ್ಲಿ ಇಟ್ಟು ರಾಜಕೀಯ ಅಧಿಕಾರಕ್ಕಾಗಿ ಬಳಕೆ ಮಾಡುತ್ತಿರುವ ಹಾಗೂ ತಪ್ಪು ಮಾಡಿ ಜೈಲಿನಲ್ಲಿ ರಾಜಾರೋಷವಾಗಿ ಜೀವನ ಸಾಗಿಸುತ್ತಿರುವ ಪಾಪಿಗಳಿಗೆ ಕಠಿಣ ಶಿಕ್ಷೆಯಾಗಲು ಸಮರ್ಥ ನಾಯಕ ಮತ್ತು ಕಾನೂನು ಬೇಕಾಗಿರುವುದರಿಂದ ಮತ್ತೆ ಹುಟ್ಟಿ ಬಂದು ದೇಶಕ್ಕೆ ಶಕ್ತಿ ತುಂಬುವ ಅಥವಾ ಈಗಿರುವ ನಾಯಕರಲ್ಲೇ ಒಬ್ಬರು ನಿಮ್ಮಂತೆ ರಾಷ್ಟ್ರಪಿತನಾಗಿ ಹೊರ ಹೊಮ್ಮಲು ಧೈರ್ಯದಿಂದ ಆಡಳಿತ ನಡೆಸುವಂತಾಗಲು ಮತ್ತು ಎಲ್ಲಾ ವರ್ಗದ ಜನರ ಬೆಂಬಲಕ್ಕಾಗಿ ಮಾರ್ಗದರ್ಶಕನಾಗಿ ಬನ್ನಿ “ಮೋನು”ಗಾಂಧೀಜಿ ನಿಮಗೆ ಅನೇಕರು ಒಳ್ಳೆಯ ಸ್ನೇಹಿತರು, ಮಾರ್ಗದರ್ಶಕರು ಇದ್ದರು, ದೇಶದ ಹಿತಕ್ಕೆ ಸಂಬAಧಿಸಿದAತೆ ತಾವು ಏಕಾಂಗಿ ತೀರ್ಮಾನ ಕೈಗೊಳ್ಳುತ್ತಿರಲಿಲ್ಲ, ತಪ್ಪು ಮಾಹಿತಿ ನೀಡುವ ಜನರನ್ನು ಎಲ್ಲಿ ಹೇಗೆ ಇಡಬೇಕೆಂಬ ವಿವೇಚನೆ ಇತ್ತು. ಆದರೆ ಈಗಿನ ಭಾರತದಲ್ಲಿ ಬುದ್ದಿವಂತರು, ಜಾಣರು, ಮೇಧಾವಿಗಳು, ಜ್ಞಾನವಂತರು ಇದ್ದರೂ ದೇಶವನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲು ಸಾಧ್ಯವಾಗುತ್ತಿಲ್ಲ, ಭಾರತದಲ್ಲಿ ಇದ್ದುಕೊಂಡೇ ದೇಶ ವಿರೋಧಿ ಚಟುವಟಿಕೆ ನೀಡುತ್ತಿರುವುದು ವಾಡಿಕೆಯಾಗಿದೆ, ಇನ್ನು ಕೆಲವರು ಅಮೇರಿಕಾ, ಚೈನಾ ಇನ್ನಿತರ ರಾಷ್ಟ್ರಗಳಿಗೆ ಫಿಕಿನಿಕ್ ಹೋಗಿ ಅಲ್ಲಿನ ಜನರಿಗೆ ಭಾರತದ ಬಗ್ಗೆ ಅಭಿಮಾನ, ವಿಶ್ವಾಸ, ನಂಬಿಕೆಯನ್ನು ಮೂಡಿಸುವ ಬದಲು ಸ್ವಾರ್ಥಕ್ಕಾಗಿ ದೇಶದ ಮಾನವನ್ನು ಕಳೆಯುತ್ತಿದ್ದಾರೆ, ಒಂದೇ ದೇಶ, ಒಂದೇ ಕಾನೂನು ಅಖಂಡ ಭಾರತ ನಿರ್ಮಾಣಕ್ಕೆ ಯೋಗ್ಯವಾದ ಅಲೋಚನೆ ಆಗಿದ್ದರೂ ಕ್ರಿಡಿಟ್ ಪಾಲಿಟಿಕ್ಸ್ ನಿಂದಾಗಿ ಒಳ್ಳೆಯದನ್ನು ವಿರೋಧಿಸುವ ಪ್ರವೃತಿ ಹೆಚ್ಚಾಗಿರುವುದರಿಂದ ತಮ್ಮ ಕನಸಿನ ಭಾರತ ನಿರ್ಮಿಸಲು ದಿವ್ಯ ಶಕ್ತಿಯಾಗಿ ಅವತರಿಸಿ ಬನ್ನಿ ಗಾಂಧೀಜಿ.


ಕಡೆಯದಾಗಿ ಬಾಲ್ಯದಲ್ಲಿ ಗಾಂಧೀ ಅವರು ಕವಿ ಶಾಮಲಾಲ ಭಟ್ಟರ ಕವಿತೆಯನ್ನು ಬಾಲ್ಯದಲ್ಲಿ ಓದಿರುವುದು ಇಂದಿಗೂ ಪ್ರಸ್ತುತವಾಗಿದೆ.


ಈ ಪದ್ಯ ಗುಜರಾತಿ ಭಾಷೆಯಲ್ಲಿ ರಚನೆಯಾಗಿದ್ದು ಪದ್ಯದ ಸಾರಾಂಶ ಇಂತಿದೆ.

” ಒಂದುಲೋಟ ನೀರು ಕೊಟ್ಟವರಿಗೆ ಊಟ ಹಾಕು
ಒಳ್ಳೆಯ ಮಾತನಾಡಿದವರಿಗೆ ಶಿರಬಾಗಿ ನಮಿಸು
ಒಂದು ಕಾಸು ಕೊಟ್ಟವರಿಗೆ ಚಿನ್ನದ ನೊಹರು ಕೊಡು
ನಿನ್ನ ಪ್ರಾಣ ಉಳಿಸಿದವರಿಗೆ ನಿನ್ನ ಜೀವನವನ್ನೇ ಕೊಡು
ಉಪಕಾರಕ್ಕೆ ಹತ್ತುಪಟ್ಟು ಪ್ರತಿ ಉಪಕಾರ ಮಾಡು
ಜ್ಞಾನಿಗಳು ಎಲ್ಲರನ್ನೂ ಒಂದೇ ಸಮನಾಗಿ ಕಾಣುತ್ತಾರೆ
ಅಪಕಾರ ಮಾಡಿದವರಿಗೂ ಸಂತೋಷದಿAದ ಉಪಕಾರ ಮಾಡುತ್ತಾರೆ”


ಈ ಪದ್ಯ ಗಾಂಧೀಜಿ ಅವರ ಜೀವನಕ್ಕೆ ಆದರ್ಶವಾಯಿತು, ಆದರೆ ಪ್ರಸ್ತುತ ಸಮಾಜದಲ್ಲಿ ಉಪಕಾರ ಮಾಡುವವರಿಗೆ ಮೋಸ, ಬೆನ್ನಿಗೆ ಚೂರಿ ಹಾಕುವುದು, ಸೇಡಿಗೆ ಸೇಡು ಎಂಬAಗಾಗಿದ್ದು ಇದು ಮಾನವ ಧರ್ಮಕ್ಕೆ ಅಪಚಾರವೆಸಗಿದಂತಾಗುತ್ತದೆ ಎಂಬುದನ್ನು ಸಾರಿದ್ದಾರೆ.


ಭಾರತ ಇಂದು ಮಹಾತ್ಮ ಗಾಂಧೀ ಅವರ ೧೬೩ನೇ ಜಯಂತಿಯನ್ನು ಆಚರಿಸುತ್ತಿದೆ, ಪ್ರತಿಯೊಬ್ಬರು ಗಾಂಧೀಜಿಯವರನ್ನು ಮನೆಯ ಹಿರಿಯ ಸದಸ್ಯ ಎಂಬAತೆ ಹುಟ್ಟು ಹಬ್ಬವನ್ನು ಆಚರಿಸುವ ಮೂಲಕ ಹಸಿದವರಿಗೆ ಅನ್ನ, ಬಟ್ಟೆಯ ಜೊತೆಗೆ ಶಾಂತಿ,ನೆಮ್ಮದಿ,ಗೌರವದಿAಯಂದ ಬದುಕಲು ಅವಕಾಶ ಕಲ್ಪಿಸಿದರೆ ಗಾಂಥೀಜಿ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಅವರ ಜಯಂತಿ ಆಚರಣೆ ಸಾರ್ಥಕವಾಗುತ್ತದೆ.


ಸ್ವಾಭಿಮಾನಿ ಭಾರತ, ಸ್ವಾವಲಂಭಿ ಭಾರತ, ಹಿಂಸೆ ರಹಿತ ಭಾರತ, ಪ್ರಜಾತಂತ್ರ ಉಳಿಸುವ ಭಾರತ, ಭ್ರಷ್ಟಾಚಾರ ರಹಿತ, ರಾಮರಾಜ್ಯದ ಕನಸು ಸಕಾರಗೊಳಿಸುವ ಭಾರತ, ಆಸ್ಪೃಶ್ಯತೆ, ಅಸಮಾನತೆ, ಬಡತನ ಮುಕ್ತ ಭಾರತ ಹಾಗೂ ದೇಶ ದ್ರೋಹಿಗಳನ್ನು ಮಟ್ಟಹಾಕುವ ಶಕ್ತಿಯುತ ಭಾರತವಾಗಿ ಬೆಳೆಸಲು ಅಧಿಕಾರಸ್ಥರು, ಸಾರ್ವಜನಿಕರು, ವಿಶೇಷವಾಗಿ ಯುವಕರು, ವಿದ್ಯಾರ್ಥಿಗಳು ಸಂಕಲ್ಪ ಮಾಡಿ ಗಾಂಧೀ ಅವರಂತೆ ಸತ್ಯ,ಧರ್ಮ, ಅಹಿಂಸೆ ಮಾರ್ಗದಲ್ಲಿ ಸಾಗಿದಾಗ ಭಾರತ ವಿಶ್ವಗುರು ಸ್ಥಾನಕ್ಕೆ ಅರ್ಹತೆ ಪಡೆದಂತಾಗುತ್ತದೆ.

Copyright © All rights reserved Newsnap | Newsever by AF themes.
error: Content is protected !!