November 26, 2024

Newsnap Kannada

The World at your finger tips!

deepa1

ನಿರ್ಮಲೆಯ ದಿನಚರಿಯ ಪುಟಗಳಿಂದ …………..

Spread the love

ಇದು ಕಥೆಯಲ್ಲದ ಕಥೆ,
ಬದುಕಿನ ಪಯಣದ ನೆನಪುಗಳ ಯಾತ್ರೆ……

ಹೊರಗಡೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲಿ ರಾತ್ರಿ ಸುಮಾರು 2 ಗಂಟೆಯ ಸಮಯದಲ್ಲಿ ಆಗ ತಾನೆ ವಯೋವೃಧ್ದ ತಾಯಿಯೊಬ್ಬರಿಗೆ ನಮ್ಮ ಡ್ಯೂಟಿ ಡಾಕ್ಟರ್ ಸಲಹೆಯಂತೆ ಗ್ಲುಕೋಸ್ ಬಾಟಲನ್ನು ಹಾಕಿ ಹಾಗೇ ಮೊದಲನೇ ಮಹಡಿಯ ನನ್ನ ವಿಶ್ರಾಂತ ರೂಮಿಗೆ ಬಂದು ಕುರ್ಚಿಯ ಮೇಲೆ ಕುಳಿತು
” ನಿಷ್ಕಲ್ಮಶ ಸೇವೆ – ಆತ್ಮ ಸಾಕ್ಷಾತ್ಕಾರದ ಸಾಧನ “
ಎಂಬ ಪ್ರೆಂಚ್ ಸಾಹಿತ್ಯದ ಕನ್ನಡ ಅನುವಾದ ಪುಸ್ತಕವನ್ನು ‌ಓದುತ್ತಿದ್ದೆ.

627 ಪುಟಗಳ ಈ ಪುಸ್ತಕದಲ್ಲಿ ಮೊದಲನೇ ಮಹಾಯುದ್ಧದ ನಂತರ ಅಂಗವಿಕಲರಾದ ಫ್ರಾನ್ಸ್ ಸೈನಿಕರ ಸೇವೆಗಾಗಿ ತನ್ನ ಇಡೀ ಬದುಕನ್ನು ಮುಡಿಪಾಗಿಟ್ಟು ಅವರನ್ನು ಆರೈಕೆ ಮಾಡುತ್ತಲೇ ಜೀವತೆತ್ತ ದಾದಿಯ ಜೀವನಗಾಥೆಯನ್ನು ಮನೋಜ್ಞವಾಗಿ ಚಿತ್ರಿಸಲಾಗಿದೆ. ಈಗಾಗಲೇ 457 ಪುಟಗಳನ್ನು ಓದಿಯಾಗಿದೆ. ಕಳೆದ ಅಧ್ಯಾಯದಲ್ಲಿ ಓದಿದ ಒಂದು ಘಟನೆಯನ್ನು ಅರಗಿಸಿಕೊಳ್ಳಲು ಇನ್ನೂ ಸಾಧ್ಯವಾಗುತ್ತಿಲ್ಲ.

ಆತ ಕೃಷಿ ವಿಷಯದಲ್ಲಿ ಸ್ನಾತಕೋತ್ತರ ಸಂಶೋಧನಾ ವಿದ್ಯಾರ್ಥಿ. ಆಗ ಸುಮಾರು 23 ವರ್ಷವಿರಬೇಕು. ಕೀಟಗಳ ಮೂಲಕ ನಡೆಯುವ ಪರಾಗಸ್ಪರ್ಶ ಕ್ರಿಯೆಯಿಂದ ಕೃಷಿ ಉತ್ಪನ್ನಗಳ ಮೇಲಾಗುವ ಪರಿಣಾಗಳ ಬಗ್ಗೆ ಕಾಡಿನ ನಡುವಿನ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದನು.

ಹೌದು, ಆತನು ಅಲ್ಲಿನ ಸಹ ಶಿಕ್ಷಕಿಯ ಪ್ರೀತಿಯ ಮಡಿಲಲ್ಲಿ ಬಂಧಿಯೂ ಆಗಿದ್ದನು. ಆತನ ಮಾತಿನಲ್ಲಿಯೇ ಅದೊಂದು ದೃಶ್ಯ ಕಾವ್ಯದಂತೆ ಮೂಡಿಬಂದಿದೆ. ಅವರಿಬ್ಬರು ಆ ವಿಶ್ವವಿದ್ಯಾಲಯದ ಪ್ರಕೃತಿಯ ಮಡಿಲಲ್ಲಿ ಪ್ರತಿ ಕ್ಷಣವನ್ನು ಅನುಭವಿಸಿದ ವರ್ಣನೆ ಪ್ರಣಯಿಗಳ ಎದೆಯಲ್ಲಿ ರೋಮಾಂಚನ ಉಂಟು ಮಾಡುತ್ತದೆ. ಅದನ್ನು ಓದುವುದೇ ಒಂದು ಸಂತಸ.

ಅದೇ ಸಮಯದಲ್ಲಿ ವಿಶ್ವದ ಮೊದಲನೇ ಮಹಾಯುದ್ಧ ಆರಂಭವಾಗಿ ಎರಡು ವರ್ಷವಾಗಿತ್ತು. ನೆಪೋಲಿಯನ್ ಬೊನಪಾರ್ಟೆ ನೇತೃತ್ವದಲ್ಲಿ ಫ್ರಾನ್ಸ್ ಸೈನ್ಯ ಹೋರಾಡುತ್ತಿತ್ತು. ಯುದ್ಧವೆಂದ ಮೇಲೆ ಸಾವುಗಳು ಸಹಜವಲ್ಲವೇ. ಸೇನೆಗೆ ಸೈನಿಕರ ಕೊರತೆ ಉಂಟಾಗುತ್ತದೆ. ಆಗ ನೆಪೋಲಿಯನ್ ದೇಶದ ದಷ್ಟ ಪುಷ್ಟ ಯುವಕರನ್ನು ದೇಶದ ಸೇವೆಗಾಗಿ ಸೈನ್ಯಕ್ಕೆ ಆಹ್ವಾನಿಸುತ್ತಾನೆ ಮತ್ತು ಕೆಲವು ಕಡೆ ಬಲವಂತವಾಗಿಯೂ ಸೇರಿಸಲಾಗುತ್ತದೆ. ಈ ಯುವಕ ಸ್ವ ಇಚ್ಛೆಯಿಂದ ಸೈನ್ಯ ಸೇರುತ್ತಾನೆ.

ಒಂದು ವರ್ಷದ ಕಠಿಣ ತರಬೇತಿಯ ನಂತರ ನೇರವಾಗಿ ಯುದ್ಧಕ್ಕೆ ತೆರಳುತ್ತಾನೆ. ಈತನ ದುರಾದೃಷ್ಟವೋ ಏನೋ ಫ್ರೆಂಚ್‌ ಸೈನ್ಯ ಬಹುತೇಕ ಸೋಲುವ ಹಂತ ತಲುಪಿರುತ್ತದೆ. ಈತ ಸೇವೆ ಸಲ್ಲಿಸುತ್ತಿದ್ದ ತುಕಡಿ ದಟ್ಟ ಕಾಡಿನ ಮರಗಳ ಮೇಲೆ ಅವಿತುಕೊಂಡು ಶತ್ರುಗಳ ಚಲನವಲನಗಳ ಮಾಹಿತಿ ನೀಡಬೇಕಾಗಿರುತ್ತದೆ.

ಆ ಒಂದು ದಿನ ಸುಮಾರು 27 ಗಂಟೆಗಳ ಸತತ ಕಾಯುವಿಕೆಯಿಂದಾಗಿ ದಣಿದ ದೇಹ ತನಗರಿವಿಲ್ಲದೇ ನಿದ್ರೆಗೆ ಜಾರುತ್ತದೆ. ಸೂಕ್ತ ರಕ್ಷಣಾ ಕ್ರಮಗಳನ್ನು ಕೈಗೊಂಡಿದ್ದರೂ ಯಾವುದೋ ಮಾಯದಲ್ಲಿ ಸೊಂಟಕ್ಕೆ ಕಟ್ಟಿದ ಬೆಲ್ಟ್ ಸಡಿಲವಾಗಿ ಮರದ ಮೇಲಿನಿಂದ 80 ಅಡಿಗಳ ಆಳದ ಕೊರಕಲಿಗೆ ಬಂದೂಕಿನ ಸಮೇತ ಬೀಳುತ್ತಾನೆ‌. ನಂತರ ಆತ ಮರುಹುಟ್ಟು ಪಡೆಯುವುದು ಮೂರು ವರ್ಷಗಳ ನಂತರ. ಯುದ್ಧ ಮುಗಿದೇ ಹೋಗಿರುತ್ತದೆ. ಆತನಿಗೆ ತನ್ನ ದೇಹದ ಸಂಪೂರ್ಣ ನಿಯಂತ್ರಣ ತಪ್ಪಿರುತ್ತದೆ. ಎಲ್ಲವೂ ಆಸ್ಪತ್ರೆಯ ಹಾಸಿಗೆಯಲ್ಲಿ. ಅದೃಷ್ಟವಶಾತ್ ನೆನಪುಗಳು ಮಾತ್ರ ಹಚ್ಚ ಹಸಿರಾಗಿರುತ್ತದೆ. ಬಿದ್ದ ಕ್ಷಣದಿಂದ ಮತ್ತೆ ಪ್ರಜ್ಞೆ ಬಂದ ದಿನಗಳನ್ನು ಹೊರತುಪಡಿಸಿ ಎಲ್ಲವೂ ಆತನ ಅರಿವಿನಂಚಿನಲ್ಲಿ ಸಾಗುತ್ತಿರುತ್ತದೆ.

ಕೈಕಾಲುಗಳು ಸಂಪೂರ್ಣ ಸ್ವಾಧೀನ ಕಳೆದುಕೊಂಡಿರುತ್ತವೆ. ಆದರೆ ಮಾತುಗಳು ಅಸ್ಪಷ್ಟವಾಗಿ ಆಡಲು ಸಾಧ್ಯವಿರುತ್ತದೆ. ಅದರಿಂದಲೇ ಆ ದಾದಿ ಆತನ ಬಾಲ್ಯ ಯೌವ್ವನ ಪ್ರೀತಿ ಪ್ರೇಮ ಪ್ರಣಯ ಪ್ರಸಂಗವನ್ನು ಅತ್ಯಂತ ಸುಕೋಮಲ ಮನಸ್ಸಿನಿಂದ ಮಾನವೀಯ ಹಿನ್ನೆಲೆಯಲ್ಲಿ ಆತನ ಮಾತಿನಿಂದಲೇ ‌ವರ್ಣಿಸುತ್ತಾಳೆ. ಇದರ ಹಿಂದೆ ಆತನ ನೋವನ್ನು ಮರೆಸಿ ಆತನನ್ನು ಚೇತೋಹಾರಿಯಾಗಿ ಮಾಡುವ ಉದ್ದೇಶವೂ ಇರುತ್ತದೆ.

ಈ ರೀತಿಯ ಅನೇಕ ಘಟನೆಗಳ ಸರಮಾಲೆಯನ್ನು ಅದರಲ್ಲಿ ವರ್ಣಿಸಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಆಕೆಯ ನಿಸ್ವಾರ್ಥ ನಿಷ್ಕಲ್ಮಶ ಸೇವೆ ನನ್ನನ್ನು ಬಹಳವಾಗಿ ಕಾಡುತ್ತಿದೆ.

ಓದುತ್ತಾ ಒಂದು ಕ್ಷಣ ಕಣ್ಣು ಮುಚ್ಚಿದೆ. ಇದ್ದಕ್ಕಿದ್ದಂತೆ ಒಂದು ಆಂಬ್ಯುಲೆನ್ಸ್ ತನ್ನ ಎಂದಿನ ಶಬ್ದದೊಂದಿಗೆ ನಮ್ಮ ಆಸ್ಪತ್ರೆಗೆ ಧಾವಿಸಿತು. ಪುಸ್ತಕ ಪಕ್ಕಕ್ಕಿಟ್ಟು ಓಡಿದೆ.

ಇಬ್ಬರು ಯುವಕರ ರಕ್ತಸಿಕ್ತ ದೇಹಗಳು, ಎಲ್ಲೆಂದರಲ್ಲಿ ಮಚ್ಚು ರಾಡುಗಳಿಂದ ತೀವ್ರವಾಗಿ ಹಲ್ಲೆ ಮಾಡಲಾಗಿತ್ತು. ಒಬ್ಬನಿಗೆ ಪ್ರಜ್ಞೆಯೇ ಇರಲಿಲ್ಲ. ಇನ್ನೊಬ್ಬ ಅರೆ ಪ್ರಜ್ಞಾವಸ್ಥೆಯಲ್ಲಿ ಕ್ಷೀಣ ಧ್ವನಿಯಲ್ಲಿ ನರಳುತ್ತಿದ್ದ. ನನ್ನ ಇಬ್ಬರು ಸಹಪಾಠಿಗಳೊಂದಿಗೆ ಅವರನ್ನು ಐಸಿಯು ರೂಮಿಗೆ ಸಾಗಿಸಿ ಅವರ ಬಟ್ಟೆ ಕಳಚಿ ರಕ್ತ ಒರೆಸುತ್ತಾ ಪ್ರಥಮ ಚಿಕಿತ್ಸೆ ಮಾಡಲು ಪ್ರಾರಂಭಿಸಿದೆವು. ಅಷ್ಟರಲ್ಲಿ ಡ್ಯೂಟಿ ಡಾಕ್ಟರ್ ಬಂದು ತಮ್ಮ ಚಿಕಿತ್ಸೆ ಪ್ರಾರಂಭಿಸಿದರು. ಸತತ ನಾಲ್ಕು ಗಂಟೆಗಳಷ್ಟು ಕಾಲ ಎಡೆಬಿಡದೆ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಮಧ್ಯೆ ಇದು ಆಯುಧದಿಂದ ಆದ ಹಲ್ಲೆ ಪ್ರಕರಣವಾದುದರಿಂದ ನಾನೇ ಹತ್ತಿರದ ಪೋಲೀಸ್ ಠಾಣೆಗೆ ಮಾಹಿತಿಯನ್ನು ನೀಡಿದೆ.

ಬೆಳಗಿನ 6 ಗಂಟೆಯ ಸಮಯ. ಮಳೆಯ ಹನಿಗಳು ಇನ್ನೂ ಜಿನುಗುತ್ತಿದ್ದವು. ಒಂದು ಹಂತದ ಚಿಕಿತ್ಸೆಯ ನಂತರ ನಾನು ನನ್ನ ಕರ್ತವ್ಯ ಮುಗಿಸಿ ವಿಶ್ರಾಂತ ಕೊಠಡಿಯ ಸ್ನಾನ ಗೃಹ ಪ್ರವೇಶಿಸಿದೆ. ನನ್ನ ಬಟ್ಟೆಗಳು ಸಹ ರಕ್ತದಿಂದ ತೊಯ್ದಿದ್ದವು.

ನನ್ನ 10 ವರ್ಷಗಳ ಸೇವೆಯಲ್ಲಿ ಇಂತಹ ಹಲವಾರು ಘಟನೆಗಳನ್ನು ನೋಡಿದ್ದೇನೆ. ಆ……./
ಮರೆತಿದ್ದೆ. ನಿಮಗೆ ನನ್ನ ಪರಿಚಯವಾಗಲಿಲ್ಲ.

ನಾನು ನಿರ್ಮಲ. ಈ ಖಾಸಗಿ ನರ್ಸಿಂಗ್ ಹೋಂನ ದಾದಿ ಸಿಸ್ಟರ್ ಶುಶ್ರೂಷಕಿ ಏನಾದರೂ ಕರೆಯಿರಿ. ಕೇರಳ ಮೂಲದವಳಾದರು ಹುಟ್ಟಿ ಬೆಳೆದದ್ದು ಉಡುಪಿಯಲ್ಲಿ. ನನ್ನ ತಾಯಿ ಇಲ್ಲಿನ ಒಂದು ಕಲ್ಯಾಣ ಮಂಟಪದ ಅಡುಗೆ ಸಹಾಯಕಿ. ತಂದೆಯ ಬಗ್ಗೆ ಈಗಲೂ ನಿಗೂಢತೆ ಉಳಿದಿದೆ. ಅಮ್ಮ ಅದನ್ನು ಕೇಳಿದರೆ ಅಳುತ್ತಾರೆ ಇಲ್ಲವೇ ಕೋಪಗೊಳ್ಳುತ್ತಾರೆ. ಆದ್ದರಿಂದ ನಾನು ಅದರ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿಲ್ಲ. ಒಟ್ಟಿನಲ್ಲಿ ಯಾರೋ ಒಬ್ಬ ಗಂಡಸಿನ ಮಗಳು ಎಂಬುದು ಖಾತ್ರಿ. ಅಷ್ಟು ಸಾಕು.

ಉಡುಪಿ ಸರ್ಕಾರಿ ಶಾಲೆಯಲ್ಲಿಯೇ ಓದಿ ಪಿಯುಸಿ ನಂತರ ದಾದಿ ತರಬೇತಿ ಮುಗಿಸಿ ಈಗ ಈ ಖಾಸಗಿ ನರ್ಸಿಂಗ್ ಹೋಂ ನಲ್ಲಿ ಕೆಲಸ ಮಾಡುತ್ತಿದ್ದೇನೆ. ಅಮ್ಮ ಈಗಲೂ ಅಡಿಗೆ ಸಹಾಯಕಿಯೇ. ನಾನು ಬೇಡವೆಂದರೂ ಅವರು ಒಪ್ಪುತ್ತಿಲ್ಲ. ಅದನ್ನು ತುಂಬಾ ಶ್ರದ್ಧೆಯಿಂದ ಮತ್ತು ಸಂತೋಷದಿಂದ ಮಾಡುತ್ತಿದ್ದಾರೆ. ಅವರ ಆಸಕ್ತಿಗೆ ನಾನೇಕೆ ಅಡ್ಡಿಪಡಿಸಲಿ.

ಪ್ರಾರಂಭದಲ್ಲಿ ನನಗೆ ಈ ವೃತ್ತಿ ಒಂದು ಜೀವನೋಪಾಯದ ಸಹಜ ಕೆಲಸವಾಗಿತ್ತು. ಆದರೆ ದಿನಗಳೆದಂತೆ ನಾನು ಈ ವೃತ್ತಿಯಲ್ಲಿ ಕಳೆದುಹೋದೆ. ಯಾವ ಮಟ್ಟಿಗೆ ಎಂದರೆ ದಾದಿಯ ಸೇವೆ ನನಗೆ ಒಂದು ಧ್ಯಾನಸ್ಥ ಸ್ಥಿತಿ. ವಾರಕ್ಕೆ ಒಮ್ಮೆ ಮಾತ್ರ ಮನೆಗೆ ಹೋಗುತ್ತೇನೆ. ಅದು ಅರ್ಧ ದಿನ ಮಾತ್ರ ಅಮ್ಮನನ್ನು ನೋಡಲು. ಮಿಕ್ಕಂತೆ ಇಲ್ಲಿಯೇ ನನ್ನ ವಾಸ.

ಈ 10 ವರ್ಷಗಳ ನನ್ನ ವೃತ್ತಿ ಜೀವನದಲ್ಲಿ ಈ ಕಟ್ಟಡದ ಒಳಗಡೆಯ ಹಾಸಿಗೆಯ ಮೇಲೆ ನಾನು ಬದುಕಿನ ಒಳ ಅರ್ಥವನ್ನು,
ಸಮಾಜದ ಆಂತರ್ಯವನ್ನು ಅರಿಯಲು ಪ್ರಯತ್ನಿಸುತ್ತಿದ್ದೇನೆ. ತ್ಯಾಗ ಪ್ರೀತಿ ದ್ವೇಷ ಅಸೂಯೆ ಆಕ್ರೋಶ ಮೋಸ ವಂಚನೆ ಬೆನ್ನಿಗೆ ಚೂರಿ ಅಮಾನವೀಯತೆ ಮನುಷ್ಯ ಸಂಬಂಧಗಳ ಗಾಢತೆ ಕಪಟತೆ ಮುಖವಾಡ ಅಪಾರ ದುಃಖ ಆತಂಕ ನೋವು ಸಂತೋಷ ಸಂಭ್ರಮ ಕುಹಕ ಸಾವಿನ ರುದ್ರ ನರ್ತನ ಒಂದೇ ಎರಡೇ……

ಹೋ…… ವರ್ಣಿಸಲು ನಾನು ಕವಿಯಲ್ಲ.

ಹೊಟ್ಟೆಯಲ್ಲೇ ಸತ್ತ ಮಗುವಿನಿಂದ, ಮದುವೆಯ ಅರಿಶಿನ ಆರುವ ಮುನ್ನವೇ ಸಾವಿಗೆ ಶರಣಾದ ಕನ್ಯೆಯಿಂದ, ನಗುನಗುತ್ತಾ ಸ್ಥಿರವಾದ ಶತಾಯುಷಿಗಳವರೆಗೂ,
ವಿವಿದ್ವಿವಿಧ ಸಾವುಗಳು, ಅಂತೆಯೇ ಸಾವಿನ ಅಂಚಿನಿಂದ ಪಾರಾದ ಜೀವಗಳು, ಹಣಕ್ಕಾಗಿ ಪರದಾಟ ಹೊಡೆದಾಟ ಶ್ರೀಮಂತರ ಅನಾಥ ಪ್ರಜ್ಞೆ, ಅನಾಥರ ಜೀವನೋತ್ಸಾಹ, ಯುವಕರ ವೈರಾಗ್ಯ, ಮುದುಕರ ಸಾವಿರ ಭಯ ಎಲ್ಲವೂ ನನ್ನ ಕಣ್ಣ ಅಳತೆಯಲ್ಲಿ ಮೂಡಿ ಮನಸ್ಸಿನಾಳದಲ್ಲಿ ಭಾವ ತರಂಗಗಳಾಗಿ ನೆಲೆಗೊಂಡಿದೆ.

ಈ ತರಂಗಗಳು ಸುಳಿಸುಳಿಯಾಗಿ ಸುತ್ತುತ್ತಾ ನನ್ನನ್ನು ಈ ವೃತ್ತಿಯ ಆಳಕ್ಕೆ ತೆಗೆದುಕೊಂಡು ಹೋಗುತ್ತಿವೆ. ನಾನು ಇದನ್ನು ಸ್ವೀಕರಿಸಿ ಅನುಭವಿಸುತ್ತಿದ್ದೇನೆ.

ಸ್ನಾನ ಮುಗಿಸಿ ಬಟ್ಟೆ ತೊಡುತ್ತಿರುವಾಗಲೇ ಭಯಂಕರ – ಭಯಾನಕ ಧ್ವನಿಗಳು ಕೇಳಿಸತೊಡಗಿದವು. ದೊಡ್ಡ ಗಲಭೆ ಗೊಂದಲಗಳು. ಕೆಲವು ಜನರು ಆಸ್ಪತ್ರೆಯಿಂದ ಪ್ರಾಣ ಭೀತಿಗೆ ಒಳಗಾಗಿ ಓಡುತ್ತಿದ್ದುದು ಕಿಟಕಿಯಲ್ಲಿ ಕಾಣಿಸಿತು. ನಾನು ಮೇಲಿನ ನಿಲುವಂಗಿಯಲ್ಲಿಯೇ ಮೇಲಿನ ಮಹಡಿಗೆ ಓಡಿದೆ……

ಸ್ವಲ್ಪ ಸಮಯದ ನಂತರ ನಡೆದ ವಿಷಯ ತಿಳಿಯಿತು.
ಆ ಘಟನೆಯನ್ನು ನಿಮಗೆ ಹೇಗೆ ಹೇಳುವುದು.!!!!
ಅಷ್ಟೊಂದು ಕ್ರೂರ ವಿಷಯವದು. ಸಮಾಜದ ಮಾನವೀಯತೆಗೆ ಕಳಂಕ…..

ನಾವು ಇಡೀ ನಾಲ್ಕು ಗಂಟೆ ಶ್ರಮ ಪಟ್ಟು ಆ ಎರಡು ಯುವ ಜೀವಗಳನ್ನು ಉಳಿಸಲು ಪ್ರಯತ್ನಿಸುತ್ತಿದ್ದೆವು. ಆದರೂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಇತ್ತು. ಅಪಾಯದ ಹಂತ ದಾಟಿರಲಿಲ್ಲ.

ಅವರಿಬ್ಬರು ಸಣ್ಣ ರೌಡಿಗಳಂತೆ‌. ಅವರ ಮೇಲೆ ಹತ್ತಿರದ ಬಾರಿನಲ್ಲಿ ಕೊಲ್ಲಲು ಪ್ರಯತ್ನಿಸಲಾಗಿತ್ತು. ಅವರು ಸತ್ತರೆಂದು ಭಾವಿಸಿ ವಿರೋಧಿ ರೌಡಿ ಪಡೆ ಹೊರಟು ಹೋಗಿತ್ತು. ಅವರನ್ನು ಯಾರೋ ಆಂಬ್ಯುಲೆನ್ಸ್ ನಲ್ಲಿ ನಮ್ಮ ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಅವರು ಇನ್ನೂ ಜೀವಂತ ಇದ್ದಾರೆ ಎಂದು ಹೇಗೋ ತಿಳಿದ ಆ ವಿರೋಧಿ ಪಡೆ ಮತ್ತೆ ನಮ್ಮ ನರ್ಸಿಂಗ್ ಹೋಂಗೆ ನುಗ್ಗಿ ಅರೆ ಪ್ರಜ್ಞಾವಸ್ಥೆಯಲ್ಲಿ ಐಸಿಯು ನಲ್ಲಿದ್ದ ಆ ಇಬ್ಬರನ್ನು ಕತ್ತರಿಸಿ ಹಾಕಿದ್ದರು. ನಾನು ನೋಡಿದಾಗ ಮಲಗಿದಲ್ಲಿಯೇ ಆ ಯುವಕರು ನಿಸ್ತೇಜಿತರಾಗಿದ್ದರು……..

ಮಿಲನ ಮಹೋತ್ಸವದ ನಂತರ ಒಂದು ಜೀವ ಸೃಷ್ಟಿಯಾಗಿ ಒಂಬತ್ತು ತಿಂಗಳ ಅಪಾರ ಆರೈಕೆಯ ನಂತರ ಅತ್ಯಂತ ನೋವಿನ ಕ್ಷಣಗಳನ್ನು ಕಳೆದು ತಾಯ ಗರ್ಭದಿಂದ ಹೊರಗೆ ಬರುತ್ತದೆ. ಅದೇ ಜೀವವನ್ನು ಅದೇ ರೀತಿ ಹೊರಬಂದ ಇನ್ನೊಂದು ಜೀವ ಒಂಬತ್ತೇ ಸೆಕೆಂಡುಗಳಲ್ಲಿ ಕೊಂದು ಬಿಡುತ್ತದೆ.

ಈ ಹಿಂಸಾತ್ಮಕ ವಾತಾವರಣ ನನ್ನಲ್ಲಿ ಬಲವಾಗಿ ನೆಲೆನಿಂತು ಜೀವಸೆಲೆಯ ಹುಡುಕಾಟಕ್ಕೆ ಪ್ರೇರೇಪಿಸಿದೆ. ಯಾವುದೇ ಕೌಟುಂಬಿಕ ಬಂಧನಕ್ಕೆ ಜವಾಬ್ದಾರಿಗೆ ಒಳಗಾಗದೆ ಜೀವನ ಕೊನೆಯ ಉಸಿರಿನವರೆಗೂ ಜೀವ ಉಳಿಸುವ ಕಾಯಕದ ನಿಷ್ಕಲ್ಮಶ ಸೇವೆಗೆ ನನ್ನನ್ನು ತೊಡಗಿಸಿಕೊಳ್ಳುವ ಸಂಕಲ್ಪ ಮಾಡಿದ್ದೇನೆ.

ಮನುಷ್ಯನ ಕೊಲ್ಲುವ ಕಾರಣಗಳ ಆಟ ಏನೇ ಇರಲಿ ನಾನು ಮಾತ್ರ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಜೀವ ಉಳಿಸುವ ಕಾಯಕದಲ್ಲಿ ಕೈಲಾಸ ಕಾಣುತ್ತೇನೆ……

ಸಾಧ್ಯವಾದರೆ ನೀವು ಸಹ ಮನಸ್ಸುಗಳ ಅಂತರಂಗದಲ್ಲಿ ನನ್ನೊಂದಿಗೆ ಜೊತೆಯಾಗಿ…..

  • ವಿವೇಕಾನಂದ. ಹೆಚ್.ಕೆ.
Copyright © All rights reserved Newsnap | Newsever by AF themes.
error: Content is protected !!