ಮಿನಿಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ: ನಾಲ್ವರು ಸ್ಥಳದಲ್ಲೇ ಸಾವು

Team Newsnap
1 Min Read

ಮಿನಿಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ 4 ಜನ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು  ತಾಲೂಕು ನಿಟ್ಟಾಲಿ ಕ್ರಾಸ್ ಬಳಿ ನಡೆದಿದೆ. 

15 ಜನರು ತೀವ್ರ ಗಾಯಗೊಂಡು, ಇಬ್ಬರು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಬೈಕ್ ಸವಾರ ಕುಕನೂರು ತಾಲೂಕು ಬೆಣಕಲ್ ಗ್ರಾಮದ ಸಂತೋಷ ವುಂಕಿ(25) ಮತ್ತು ಮಿನಿ ಬಸ್ ನಲ್ಲಿದ್ದ ರಂಗಪ್ಪ ನಾಗಣ್ಣವರ(80), ಭೀಮವ್ವ ಗೋಡಿ(70), ಶಿವಾನಂದಪ್ಪ(50) ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಬಸ್‌ನಲ್ಲಿದ್ದ ಪ್ರತಿಯೊಬ್ಬರಿಗೆ ಗಾಯಗಳಾಗಿವೆ. ಕೈಕಾಲು ಮುರಿದಿವೆ. ತಲೆಗೆ ಹೊಟ್ಟೆಗೆ ಗಂಭೀರ ಗಾಯಗಳಾಗಿವೆ. ಇದರಲ್ಲಿ ಹಿರಿಯ ವಯಸ್ಸಿನವರೆ ಹೆಚ್ಚಾಗಿದ್ದರು. ಅವರೆಲ್ಲರನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನೋವು ತಾಳಲಾರದೆ ನರಳಾಡುತ್ತಿದ್ದಾರೆ. ಬೆಡ್‌ಗಳ ಕೊರತೆ ಇರುವುದರಿಂದ ತುರ್ತು ಚಿಕಿತ್ಸೆ ಘಟಕದಲ್ಲಿ ನೆಲದಲ್ಲಿ ಹಾಕಲಾಗಿದೆ.

ಅಪಘಾತ ಸ್ಥಳದಿಂದ ಕ್ರಷರ್, ಟಿಪ್ಪರ್, ಟಾಟಾ ಎಸಿ, ಆ್ಯಂಬುಲೆನ್ಸ್ ವಾಹನಗಳಲ್ಲಿ ಆಸ್ಪತ್ರೆಗೆ ಕರೆತರಲಾಗಿದೆ. ಡಾಕ್ಟರ್ ಕೊರತೆ ಇರುವುದರಿಂದ ಕಿಮ್ಸ್ ವಿದ್ಯಾರ್ಥಿಗಳು ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಜಿಲ್ಲಾ ಆಸ್ಪತ್ರೆಗೆ ಶಾಸಕ ಹಾಲಪ್ಪ ಆಚಾರ್ ಭೇಟಿ ನೀಡಿ ಗಾಯಳುಗಳ ಸ್ಥಿತಿಯನ್ನು ಪರಿಶೀಲಿಸಿದರು.

ಗಾಯಾಳುಗಳು ಬಾಗಲಕೋಟ ಜಿಲ್ಲೆ ಬದಾಮಿ ತಾಲೂಕಿನ ಅಗಸನಕೊಪ್ಪ ಗ್ರಾಮದಿಂದ ಕೊಪ್ಪಳ ತಾಲೂಕು ಹಿರೇಸಿಂಧೋಗಿ ಗ್ರಾಮಕ್ಕೆ ನಿಶ್ಚಿತಾರ್ಥದ ಕಾರ್ಯಕ್ರಮಕ್ಕೆ ಬರುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ನಿಟ್ಟಾಲಿ ಕಡೆಯಿಂದ ಬಂದ ಬೈಕ್ ಗೆ ಮಿನಿ ಬಸ್ ಡಿಕ್ಕಿ ಹೊಡೆದಿದ್ದು, ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದು ತಗ್ಗಿಗೆ ಬಿದ್ದಿದೆ.

ಸ್ಥಳಕ್ಕೆ ಎಸ್ಪಿ ಟಿ ಶ್ರೀಧರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಅಪಘಾತಕ್ಕೆ ಕಾರಣ ಹಾಗೂ ಮಾಹಿತಿಯನ್ನು ಕಲೆ ಹಾಕಿ ತನಿಖೆ ನಡೆಸಿದ್ದಾರೆ. ಅಪಘಾತವಾದ ಸ್ಥಳ ಎನ್ ಎಚ್ ಕಾಮಗಾರಿ ನಡೆಯುತ್ತಿದೆ. ಯಾವುದೇ ಫಲಕಗಳು ಕೂಡ ಇಲ್ಲ. ಹಂಪ್ಸ್ ನಿರ್ಮಾಣ ಮಾಡಿಲ್ಲ, ಕ್ರಾಸ್ ಇರುವುದರಿಂದ ಬೈಕ್ ಸವಾರ ಕಂಡಿಲ್ಲ ಹಾಗಾಗಿ ಬಸ್ ಚಾಲಕ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಜರುಗಿದ್ದು, ಗಾಯವಾಗಿದ್ದರೂ ಚಾಲಕ ಪರಾರಿಯಾಗಿರುವುದಾಗಿ ಎಸ್ಪಿ ತಿಳಿಸಿದ್ದಾರೆ.

Share This Article
Leave a comment