ಎಲ್ಲ ಮಧ್ಯಮ ವರ್ಗದ ಜನರ ಜೀವನ ತಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸುವುದರತ್ತ ಸುತ್ತುತ್ತಿರುತ್ತದೆ. ಒಳ್ಳೆಯ ವಿದ್ಯೆಯಿಂದ ಮಾತ್ರ ಮಕ್ಕಳು ಅವರ ಕಾಲ ಮೇಲೆ ಅವರು ನಿಲ್ಲಲು ಸಾಧ್ಯ ಎಂದು ಬಲವಾಗಿ ನಂಬಿರುವ ವರ್ಗವಿದು. ಪುಣೆಯಲ್ಲಿ ವಾಸವಿದ್ದ ಸಾಮಾನ್ಯ ಮಧ್ಯಮ ವರ್ಗದ ಶ್ರೀಮತಿ ಕವಿತ ಮತ್ತು ಶ್ರೀಗುರುನಾಥ ಗೋಲ್ಕರ್ ರವರು ಕೂಡ ಈ ನಂಬಿಕೆಯಿಂದ ಹೊರತಾಗಿರಲಿಲ್ಲ. ಅದರಂತೆ ತಮ್ಮ ಮಗಳನ್ನು ಶಾಲೆಗೆ ಸೇರಿಸುವ ಸಮಯದಲ್ಲಿ ಅವರು ಆಯ್ಕೆ ಮಾಡಿಕೊಂಡಿದ್ದು ಸಾಧು ವಾಸ್ವಮಿಯವರ ಸಂತ ಮೀರ ಶಾಲೆ. ಈ ಶಾಲೆಯ ಧ್ಯೇಯೋದ್ದೇಶಗಳು ವಿದ್ಯೆಯನ್ನು ಕಲಿಸುವುದು ಮಾತ್ರ ಆಗಿರದೇ ವಿದ್ಯಾರ್ಥಿಗಳಲ್ಲಿ ಭ್ರಾತೃತ್ವ, ಸಹಭಾಳ್ವೆ, ವ್ಯಕ್ತಿತ್ವ ಬೆಳವಣಿಗೆ, ಸಮಾಜದಲ್ಲಿರುವ ಬಡವರ ಬಣ್ಣ, ಜಾತಿ, ನಂಬಿಕೆಗಳನ್ನು ಪರಿಗಣಿಸದೆ ಸೇವೆ ಮಾಡುವ ಮನೋಭಾವನೆ ಬೆಳೆಸುವುದು ಆಗಿದೆ. ಸಂತ ಮೀರ ಶಾಲೆಯನ್ನು ಹೆಣ್ಣು ಮಕ್ಕಳಿಗಾಗಿ ಸಾಧು ವಾಸ್ವನಿಯವರು ಮೊದಲು ಹೈದರಾಬಾದ್ ಸಿಂದ್ ಪ್ರಾಂತ್ಯದಲ್ಲಿ 1933ರಲ್ಲಿ ಪ್ರಾರಂಭ ಮಾಡಿದರು. ಸ್ವಾತಂತ್ರ್ಯದ ನಂತರ ಈ ಶಾಲೆಯ ಕೇಂದ್ರಸ್ಥಾನ ಪುಣೆಗೆ ಸ್ಥಳಾಂತರಗೊಂಡಿತು.
ಈ ತರಹದ ಶಾಲೆಗೆ ಮಧ್ಯಮ ವರ್ಗದ ಸಾಕಷ್ಟು ಬುದ್ಧಿವಂತೆ ಆಗಿದ್ದ ಆ ಹುಡುಗಿ ಸೇರಿದಾಗ ಗುರುಗಳಾದ ಸಾಧು ವಾಸ್ವನಿಯವರ ಭೋಧನೆಗಳಿಂದ ಪ್ರಭಾವಿತಳಾಗುತ್ತಾಳೆ. ಸುತ್ತ ಮತ್ತಲಿನಲ್ಲಿರುವ ಎಲ್ಲ ರೀತಿಯ ಜನರ ಬಗ್ಗೆ ಪ್ರೀತಿ ಬೆಳೆಯುತ್ತದೆ. ಸಣ್ಣ ವಯಸ್ಸಿನಲ್ಲಿಯೇ ಆಶಕ್ತ ಜನರಿಗೆ ಏನಾದರೂ ಸಹಾಯ ಮಾಡುವ ಆಸೆ ಮೊಳಕೆಯೊಡುತ್ತದೆ. ಆ ಹುಡುಗಿ ತನ್ನ ಆಸೆಯನ್ನು ತಂದೆಯ ಬಳಿ ಹೇಳುತ್ತಾಳೆ. ಆಗ “ತನ್ನ ಕಾಲ ಮೇಲೆ ತಾನು ಮೊದಲು ನಿಲ್ಲಬೇಕು, ಆಗ ಹೆಚ್ಚಿನ ಜನರಿಗೆ ಸಹಾಯ ಮಾಡಬಹುದು. ಅದು ವಿದ್ಯೆಯಿಂದ ಮಾತ್ರ ಸಾಧ್ಯ” ಎಂದ ತಂದೆಯ ಮಧ್ಯಮ ವರ್ಗದ ಮಾತು ಸರಿಯೆನಿಸಿ ವಿದ್ಯಾಭ್ಯಾಸ ಮುಂದುವರೆಸುತ್ತಾಳೆ.
“ಎಂಭತ್ತರ ದಶಕದ ಪ್ರಾರಂಭದಲ್ಲಿ ಗಣಕಯಂತ್ರ ವಿಜ್ಞಾನ ಭಾರತದಲ್ಲಿ ಪ್ರಥಮ ಹೆಜ್ಜೆಗಳನ್ನು ಇಡಲು ಪ್ರಾರಂಭ ಮಾಡಿತ್ತು. ಆ ಸಮಯದಲ್ಲಿ ಪುಣೆಯಲ್ಲಿ ಬಿಎಸ್ಸಿ ಮತ್ತು ಎಂಮ್ಮೆಸ್ಸಿ ಪದವಿಯನ್ನು ಗಣಕಯಂತ್ರದ ವಿಭಾಗದಲ್ಲಿ ಪಡೆಯುತ್ತಾರೆ. ಕಾಲೇಜಿನಲ್ಲಿ ಸಂಖ್ಯೆಗಳನ್ನು ಒಟ್ಟುಗೂಡಿಸುವ ಇಂಟಿಗ್ರೇಶನ್ ಮಾಡುವ ಸಮಯದಲ್ಲಿ ಎಲ್ಲ ಜನರ ಒಟ್ಟುಗೂಡಿಸುವ ಕೆಲಸದ ಬಗ್ಗೆಯೂ ಮನಸ್ಸು ಯೋಚಿಸುತ್ತದೆ. 1988ರಲ್ಲಿ ಸಾಫ್ಟ್ ವೇರ್ ಇಂಜನಿಯರ್ ಆಗಿ ಉದ್ಯೋಗ ಪ್ರಾರಂಭ ಮಾಡಿ, ನಂತರ ಪ್ರತಿಷ್ಠಿತ ಸೀಮನ್ಸ್ ಕಂಪನಿಯಿಂದ ಜರ್ಮನಿಗೆ ಕೆಲಸಕ್ಕೆ ನಿಯೋಜನೆಗೊಳ್ಳುತ್ತಾರೆ. ಸ್ವಚ್ಛವಾದ ರಸ್ತೆಗಳು, ಬಹುಮಹಡಿ ಕಟ್ಟಡಗಳು, ಯಂತ್ರೋಪಕರಣಗಳ ಉತ್ಪಾದನೆಯಲ್ಲಿ ಮುಂದುವರೆದ ದೇಶವಾದ ಜರ್ಮನಿಯಲ್ಲಿ ಅವರ ಮನ ಲೀನವಾಗದೆ, ನಮ್ಮ ದೇಶದಲ್ಲಿ ಯಾವಾಗ ಈ ರೀತಿ ಆಗುತ್ತದೆ ಎಂದು ಯೋಚಿಸುತ್ತಾರೆ. ಚಿಕ್ಕಂದಿನಿಂದ ತಾವು ನೋಡಿದ್ದ ಬಡತನ ಅಲ್ಲಿ ಯಾವ ರಸ್ತೆಯಲ್ಲೂ ಕಾಣಲಿಲ್ಲ. ಜರ್ಮನಿಯ ಸರ್ಕಾರ ವಿದ್ಯಾಭ್ಯಾಸ ಮತ್ತು ಆರೋಗ್ಯಕ್ಕೆ ಕೊಟ್ಟ ಗಮನ ಹೇಗೆ ಅಲ್ಲಿಯ ಜನರ ಜೀವನದ ಮೇಲೆ ಪ್ರಭಾವ ಬೀರಿದೆ ಎಂದು ತಿಳಿದುಕೊಳ್ಳುತ್ತಾರೆ. ಅಲ್ಲಿ ಆಗಿರುವುದು ನಮ್ಮ ದೇಶದಲ್ಲಿ ಯಾಕೆ ಆಗುತ್ತಿಲ್ಲವೆಂದು ಯೋಚಿಸಲು ಪ್ರಾರಂಭ ಮಾಡಿದರು. ಅದೇ ಸಮಯದಲ್ಲಿ ಪರಿಚಯವಾದ ಬೆಂಗಳೂರಿನ ಸತ್ಯ (ಸತ್ಯನಾರಾಯಣ ಕುಮಾರ್)ರವರ ಜೊತೆ ಮದುವೆಯಾಗುತ್ತದೆ. ಅವರ ಜೊತೆ ಬೆಂಗಳೂರಿಗೆ ಹಿಂತಿರುಗುತ್ತಾರೆ. ಈ ದಂಪತಿಗಳ ಕುಡಿ ಬಂದಾಗ ಓಡುವ ಕೆಲಸದಿಂದ ಒಂದು ವಿರಾಮ ತೆಗೆದುಕೊಂಡರು. ಪ್ರಸೂತಿಯ ರಜೆ ಮುಗಿಯುವ ಹೊತ್ತಿಗೆ ತಮ್ಮ ಸುತ್ತಲಿನ ಸಮಾಜದ ಏಳಿಗೆಗೆ ತಾವು ಏನಾದರೂ ಮಾಡಬೇಕೆಂಬ ಆಸೆ ಹೆಮ್ಮೆರವಾಗಿ ಬೆಳೆದಿತ್ತು. ಅದರ ಫಲವಾಗಿ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯ ಕೈ ತುಂಬ ಹಣ ತರುವ ಸೀನಿಯರ್ ಹುದ್ದೆ ಬಿಟ್ಟು 1996ರಲ್ಲಿ ಸಂಪೂರ್ಣವಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡರು. ಅವರೇ ಶ್ರೀಮತಿ ಮೈತ್ರೇಯಿ ಎಸ್.ಕುಮಾರ್.
ಪುಣೆಯ ಹುಡುಗಿ ಬೆಂಗಳೂರಿನಲ್ಲಿ ಆಶಕ್ತ ಮಕ್ಕಳ ಜೊತೆ ನಿಂತು ಅವರ ಕನಸುಗಳನ್ನು ನನಸು ಮಾಡಲು “ಡ್ರೀಮ್ ಸ್ಕೂಲ್ ಫೌಂಡೇಶನ್” ಅಥವ ಸಂಕ್ಷಿಪ್ತವಾಗಿ “ಡಿ.ಎಸ್.ಎಫ್.” ಸಂಸ್ಥೆಯನ್ನು ಸ್ಥಾಪಿಸುತ್ತಾರೆ. ಕಳೆದ ಸುಮಾರು ಹದಿನೈದು ವರ್ಷಗಳಿಂದ ಈ ಸಂಸ್ಥೆಯು ಅನೇಕ ಆಶಕ್ತ ವಿದ್ಯಾರ್ಥಿಗಳ ಹೊಸ ಆಶಾಕಿರಣವಾಗಿ ಹೊರ ಹೊಮ್ಮಿದೆ. ಈ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕೂಡ ಕೆಲಸ ಮಾಡುತ್ತಿರುವಾಗ ಮೈತ್ರೇಯಿ ಎಸ್.ಕುಮಾರ್ ರವರನ್ನು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಅವರ ಶಿಕ್ಷಣ ಕೇಂದ್ರ ಮತ್ತು ಕಛೇರಿಯಲ್ಲಿ ಭೇಟಿ ಮಾಡಿ, “ಇದೆಲ್ಲಾ ಹೇಗೆ ಪ್ರಾರಂಭವಾಯಿತು?” ಎಂದು ಕೇಳಿದಾಗ ನಿಧಾನವಾಗಿ ಚಿಕ್ಕವರಿದ್ದಾಗ ಅವರ ಮೇಲೆ ಶಾಲೆ ಬೀರಿದ ಪ್ರಭಾವ ಹೇಗೆ ದೊಡ್ಡವರಾದ ಮೇಲೆ ಈ ತರಹದ ಕೆಲಸದಲ್ಲಿ ತೊಡಗಿಕೊಳ್ಳಲು ಸಹಾಯ ಮಾಡಿತು ಎಂದು ಎಳೆ ಎಳೆಯಾಗಿ ಬಿಡಿಸಿಟ್ಟರು.
” ತಂದೆಯ ಆಸೆಯಂತೆ ವಿದ್ಯಾಭ್ಯಾಸ ಮುಗಿಸಿ, ಸ್ವಲ್ಪ ಕಾಲ ಕೆಲಸ ಮಾಡಿ ಸೇವೆಯಲ್ಲಿ ತೊಡಗಿಕ್ಕೊಳಲು ನಿರ್ಧರಿಸಿದಾಗ ” ಮಕ್ಕಳ ಹಕ್ಕುಗಳು ಮತ್ತು ನೀವು” (CRY) ಸಂಸ್ಥೆ ನನ್ನ ಗಮನ ಸೆಳೆಯಿತು. 1996ರಲ್ಲಿ ಸ್ವಯಂಸೇವಕಿಯಾಗಿ
CRYನಲ್ಲಿ ಸೇರಿ ನನ್ನ ಕೆಲಸ ಪ್ರಾರಂಭ ಮಾಡಿದೆ. ಈ ಸಂಸ್ಥೆಯು ಭಾರತದ ಮಕ್ಕಳಿಗೆ ಸಂತೋಷದ ಬಾಲ್ಯವನ್ನು ಕೊಡಲು ಪ್ರಯತ್ನ ಮಾಡುವ ಸಂಸ್ಥೆಯಾಗಿದೆ. ಆ ಸಂಸ್ಥೆಯಲ್ಲಿ ಪ್ರಥಮಬಾರಿಗೆ ಸ್ವಯಂಸೇವಕರ ಒಂದು ಸಮೂಹವನ್ನು ಕಟ್ಟಿದೆ. ಈ ಸ್ವಯಂ ಸೇವಕರ ಗುಂಪು ದೇಶದಾದ್ಯಂತ ವ್ಯಾಪಿಸಿತು. ಈ ರಾಷ್ಟ್ರ ವ್ಯಾಪಿ ಸ್ವಯಂಸೇವಕರ ಗುಂಪಿಗೆ ನಾಯಕಿಯಾಗಿ ಕೂಡ ಕೆಲಸ ಮಾಡಿದೆ. ಆ ಸಂಸ್ಥೆಯಲ್ಲಿ ಸುಮಾರು ಎಂಟು ವರ್ಷಕ್ಕೂ ಹೆಚ್ಚು ಸಮಯ ಕೆಲಸ ಮಾಡಿದೆ” ಎಂದು ಮೈತ್ರೇಯಿಯವರು ತಮ್ಮ ಜೀವನದ ಪುಟಗಳನ್ನು ತೆರೆಯುತ್ತಾ ಹೋದರು.
“ಆ ಸಮಯದಲ್ಲಿ ಭಾರತದಲ್ಲಿ ಬಾಲ ಕಾರ್ಮಿಕ ಪದ್ದತಿ ರದ್ಧತಿಯಾಗಿ ಮಕ್ಕಳನ್ನು ಶಾಲೆಗೆ ಸೇರಿಸುವ ಪ್ರಕ್ರಿಯೆ ಪ್ರಾರಂಭ ಆಗಿತ್ತು. “ವಿದ್ಯೆಯಿಂದ ತನ್ನ ಕಾಲ ಮೇಲೆ ತಾನು ನಿಲ್ಲಬಹುದು” ಎಂದು ಚಿಕ್ಕಂದಿನಲ್ಲಿ ತಂದೆ ಹೇಳಿದ ಮಾತು ಯಾವಾಗಲೂ ಮನಸ್ಸಿನಲ್ಲಿ ಮೂಡಿ ಬರುತ್ತಿತ್ತು. ಹಾಗಾಗಿ ವಿದ್ಯಾಭ್ಯಾಸದ ಕ್ಷೇತ್ರದಲ್ಲಿ ಕೆಲಸ ಮಾಡಲು ನಿರ್ಧರಿಸಿದೆ. ಹಾಗಾದರೆ “ಶಾಲೆಗೆ ಸೇರಿಸಿದರೆ ನಮ್ಮ ಕೆಲಸ ಮುಗಿಯಿತೇ?” ಎಂಬ ಪ್ರಶ್ನೆ ನನ್ನನ್ನು ಕಾಡಿತು. ಈ ಮಕ್ಕಳು ಸೇರುವ ಬಹಳಷ್ಟು ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳು ಇರುವುದಿಲ್ಲ. ಒಳ್ಳೆಯ ಕಟ್ಟಡ, ಇತ್ಯಾದಿ ಸೌಲಭ್ಯಗಳಿದ್ದ ಮಾತ್ರಕ್ಕೆ ಒಳ್ಳೆಯ ವಿದ್ಯಾಭ್ಯಾಸ ಕೊಡಲು ಸಾಧ್ಯವೇ? ಶಾಲೆಗಳಲ್ಲಿ ವಿದ್ಯಾಭ್ಯಾಸದ ಜೊತೆಗೆ ಮುಂದಿನ ಸತ್ಪ್ರಜೆಗಳನ್ನು ತಯಾರು ಮಾಡುವ ಕೆಲಸ ಕೂಡ ಆಗಬೇಕಲ್ಲವೇ? ಈ ರೀತಿಯಲ್ಲಿ ಮನಸ್ಸಿನಲ್ಲಿ ಎದ್ದ ಪ್ರಶ್ನೆಗಳು ಶಿಕ್ಷಣ ವಂಚಿತರನ್ನು ಶಾಲೆಗೆ ಸೇರಿಸುವುದರ ಜೊತೆಗೆ ಹೆಚ್ಚಿನದು ಏನಾದರೂ ಮಾಡಬೇಕೆಂದೆನಿಸಿತು. ಆಗ ನಾನು CRYಯಿಂದ ಹೊರಗೆ ಬಂದು ಸಹಮನಸ್ಥಿತಿ ಹೊಂದಿರುವ ಸ್ನೇಹಿತರ ಜೊತೆಗೂಡಿ 2005ರಲ್ಲಿ “ಡ್ರೀಮ್ ಸ್ಕೂಲ್ ಫೌಂಡೇಶನ್ನ್ ” ಬೆಂಗಳೂರಿನಲ್ಲಿ ಪ್ರಾರಂಭ ಮಾಡಿದೆವು” ಎಂಬ ವಿಷಯ ಮೈತ್ರೇಯಿಯವರು ನೆನಪು ಮಾಡಿಕೊಂಡರು.
ಮಕ್ಕಳ ಶಿಕ್ಷಣ ಎನ್ನುವುದು ಬಹಳ ವಿಶಾಲವಾದ ಕ್ಷೇತ್ರ. ತಾವು ಎಲ್ಲಿಂದ ಪ್ರಾರಂಭ ಮಾಡುವುದು ಎನ್ನುವ ಪ್ರಶ್ನೆ ಅವರಿಗೆ ಆಗ ಏಳುತ್ತದೆ. ” ಮಾಧ್ಯಮಿಕ ಶಾಲೆ ಮುಗಿಯುವ ಹೊತ್ತಿಗೆ ಮಕ್ಕಳಿಗೆ ಸುಮಾರು ಹದಿಮೂರು – ಹದಿನಾಲ್ಕು ವರ್ಷಗಳು ಆಗಿರುತ್ತದೆ. ಆ ಸಮಯದಲ್ಲಿ ಮಕ್ಕಳು ಶಾಲೆಯಿಂದ ಹೊರಗೆ ಬಂದು ಮನೆಗೆ ಸಹಾಯವಾಗಲು ಕೆಲಸ ಪ್ರಾರಂಭ ಮಾಡುತ್ತಾರೆ. ಹಾಗಾಗಿ ಈ ಮಕ್ಕಳು ಮುಂದಿನ ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ಪ್ರಥಮವಾಗಿ ಎಂಟನೇಯ ತರಗತಿಯಿಂದ ಹೈಸ್ಕೂಲ್ ಸೇರುವ ಮಕ್ಕಳನ್ನು ಪ್ರೋತ್ಸಾಹಿಸುವ ತಮ್ಮ ಕೆಲಸವನ್ನು
“ಡ್ರೀಮ್ ಸ್ಕೂಲ್ ಫೌಂಡೇಶನ್ನಿನ” ಮೂಲಕ ಪ್ರಾರಂಭ ಮಾಡಿದೆವು” ಎಂದು ಹೈಸ್ಕೂಲಿನಿಂದ ತಮ್ಮ ಕೆಲಸ ಪ್ರಾರಂಭ ಮಾಡಿದ ಕಾರಣಗಳನ್ನು ತಿಳಿಸಿದರು.
ಡಿ.ಎಸ್.ಎಫ್. ಫೌಂಡೇಶನ್ನಿನ ಸ್ವಯಂಸೇವಕರು ಮೊದಲಿಗೆ ಏಳನೇಯ ತರಗತಿ ಮುಗಿಸಿದ ಮಕ್ಕಳಿಗೆ ಬೇಸಿಗೆ ಶಿಬರವೊಂದನ್ನು ಏರ್ಪಡಿಸಿ, ಅದರಲ್ಲಿ ವಿದ್ಯಾಭ್ಯಾಸದಲ್ಲಿ ಆಸಕ್ತಿ ಇರುವ ಆದರೆ ಮುಂದುವರಿಸಲು ಆಶಕ್ತರಾಗಿರುವ ವಿದ್ಯಾರ್ಥಿಗಳನ್ನು ಗುರುತಿಸುತ್ತಾರೆ. ಅವರ ಮನೆಗಳಿಗೆ ಭೇಟಿ ನೀಡಿ ಅವರ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಖಚಿತ ಪಡಿಸಿಕೊಂಡು, ಆ ವಿದ್ಯಾರ್ಥಿಗಳಿಗೆ ವಿದ್ಯೆ ಮುಂದುವರಿಸಲು ಸಹಾಯ ಡಿ.ಎಸ್.ಎಫ್. ನಿಂದ ಮಾಡುತ್ತಾರೆ. ಆ ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗಳ ಜೊತೆಗೆ ಅವರುಗಳ ಮನೆ ಹತ್ತಿರ ಇರುವ ಕಡಿಮೆ ಬಜೆಟ್ನ ಖಾಸಗಿ ಶಾಲೆಗೆ ಸೇರಿಸಲು ಕೂಡ ಸಹಾಯ ಮಾಡುತ್ತಾರೆ.
ಶಾಲೆಗೆ ಸೇರಿಸುವುದು, ಬೇಕಾದ ಶುಲ್ಕ ಕಟ್ಟುವುದು, ಪುಸ್ತಕ ಕೊಡುವುದು, ಇತ್ಯಾದಿಗಳು ಪ್ರಾರಂಭದ ಹೆಜ್ಜೆಗಳು ಮಾತ್ರ. ಶಾಲೆಯಲ್ಲಿ ಕೊಡುವ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಸರ್ವತೋಮುಖ ಶಿಕ್ಷಣ ಕೊಡುವ ಅವಶ್ಯಕತೆ ಮನಗೊಂಡು “ಹೆಡ್ ಸ್ಟಾರ್ಟ” ಎಂಬ ಕಾರ್ಯಕ್ರಮ ಪ್ರಾರಂಭ ಮಾಡುತ್ತಾರೆ. ಶಾಲೆ ಮುಗಿದ ಮೇಲೆ ವಿದ್ಯಾರ್ಥಿಗಳಿಗೆ ಲೆಕ್ಕ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಲ್ಲಿ ಮೂಲಭೂತವಾದ ವಿಷಯಗಳಲ್ಲಿ ಅನುಮಾನಗಳನ್ನು ಪರಿಹರಿಸುವುದರ ಜೊತೆಗೆ ಪದಬಂಧ ಬಿಡಿಸುವುದು, ಮಕ್ಕಳ ಪುಸ್ತಕಗಳ ಪರಿಚಯ ಮಾಡಿಸುವುದು, ವಿಜ್ಞಾನದ ಪ್ರದರ್ಶನಗಳಲ್ಲಿ ಭಾಗವಹಿಸುವುದು, ಇತ್ಯಾದಿಯಾಗಿ ಮಕ್ಕಳ ಸರ್ವತೋಮುಖ ಬಳವಣಿಗೆಗೆ ಡಿ.ಎಸ್.ಎಫ್. ಸಂಸ್ಥೆ ಸಹಾಯ ಮಾಡುತ್ತಿದೆ.
ವಿದ್ಯಾಭ್ಯಾಸದ ಮಟ್ಟ ಮತ್ತು ಕೆಲಸಕ್ಕೆ ಸೇರಲು ಬೇಕಾಗಿರುವ ಕಾರ್ಯಕ್ಷಮತೆಯ ಮಧ್ಯೆ ಇರುವ ಅಗಾದ ವ್ಯತ್ಯಾಸ ಗುರುತಿಸಿ ಅದನ್ನು ಸರಿತೂಗಿಸಲು ಗಣಕಯಂತ್ರದಲ್ಲಿ ತರಬೇತಿ, ಎಕ್ಸೆಲ್ ಮತ್ತು ಟ್ಯಾಲಿ ಸಾಫ್ಟ್ ವೇರ್ ನಲ್ಲಿ ತರಬೇತಿ, ವ್ಯಕ್ತಿಗತ ಕೌಶಲ್ಯದ ಅಭಿವೃದ್ಧಿಯ ಕಾರ್ಯಕ್ರಮ ಪ್ರಾರಂಭ ಮಾಡುತ್ತಾರೆ. ಹತ್ತನೇಯ ತರಗತಿ ಮುಗಿದ ಮೇಲೆ ಅವರವರ ಇಷ್ಟ, ಅನುಕೂಲ ಎಲ್ಲಾ ನೋಡಿಕೊಂಡು ಹೆಚ್ಚಿನ ವಿದ್ಯಾಭ್ಯಾಸಕ್ಕೆ, ವೃತ್ತಿಪರ ಕೋರ್ಸ್, ಇತ್ಯಾದಿಗಳಿಗೆ ಸೇರಿಸುತ್ತಾರೆ. ಆ ವಿದ್ಯಾರ್ಥಿ ತನ್ನ ಕಾಲ ಮೇಲೆ ತಾನು ನಿಲ್ಲಲು ಶಕ್ತನಾಗುವ ತನಕ ಆ ವಿದ್ಯಾರ್ಥಿಗಳ ಜೊತೆ “ಡಿ.ಎಸ್.ಎಫ್” ನಿಲ್ಲುತ್ತದೆ. ತನ್ನದೇ ಉದ್ಯಮ ನಡೆಸುವ ಇಚ್ಛಿಸುವ ವಿದ್ಯಾರ್ಥಿಗಳಿಗೆ ಉದ್ಯಮಶೀಲತೆಗೆ ಸಹಾಯ ಮಾಡುವ ಕಾರ್ಯಕ್ರಮ (LEAP- Livelihood Enterprenuership Assistance Program)ದ ಮೂಲಕ ಅವರ ಜೊತೆ ನಿಲ್ಲುತ್ತಿದೆ.
“ಐದಿನಾ ಅಂಜ್ಮು” ಒಂಭತ್ತು ವರ್ಷಗಳ ಹಿಂದೆ “ಡಿ.ಎಸ್.ಎಫ್.” ಗೆ ಬಂದಾಗ ಆಕೆ ಎಲ್ಲರಿಗೂ ಕೇಳುವಂತೆ ಮಾತನಾಡಲೂ ಕೂಡ ಹೆದರುತ್ತಿದ್ದಳು. ಆಕೆ ಡಿ.ಎಸ್.ಎಫ್. ರವರ “ಹೆಡ್ ಸ್ಟಾರ್ಟ” ಕಾರ್ಯಕ್ರಮದ ಅಡಿಯಲ್ಲಿ ಎಂಟನೇಯ ತರಗತಿಯಲ್ಲಿ ಸೇರಿಕೊಂಡಳು. ಚಿಕ್ಕವರಾಗಿದ್ದಾಗಿಂದಲೂ ಆಕೆಗೆ ಚಿತ್ರಕಲೆಯ ಬಗ್ಗೆ ಆಸಕ್ತಿ ಇತ್ತು. ತಂದೆ ಒಂದು ಮಾಂಸದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಅದರಿಂದ ಬರುವ ಹಣ ಮನೆ ನಡೆಸಲು ಸಾಕಾಗುತ್ತಿರಲಿಲ್ಲ. ಹಾಗಾಗಿ ಇವರ ತಾಯಿ ಬೇರೆ ಮಕ್ಕಳ ಬಟ್ಟೆ ಹೊಲಿದು ಹಣ ಸಂಪಾದನೆ ಮಾಡಲು ಪ್ರಯತ್ನ ಪಡುತ್ತಿದ್ದರು. ಆಗ ತಾಯಿಗೆ ಈಕೆ ಸಹಾಯ ಮಾಡಲು ಪ್ರಾರಂಭ ಮಾಡಿದರು. ಆಕೆಯ ಸಹೋದರ ಒಂಬತ್ತನೇ ತರಗತಿಯಿಂದ ಮುಂದಕ್ಕೆ ಓದಲು ಸಾದ್ಯವಾಗದೇ ಕೆಲಸಕ್ಕೆ ಸೇರ ಬೇಕಾಯಿತು. ಆಕೆಯ ಅಕ್ಕನಿಗೆ ಡಿ.ಎಸ್.ಎಫ್. ವತಿಯಿಂದ ಶಿಶ್ಯವೇತನ ಕೊಡಲಾಗಿತ್ತು. ಆಕೆ ಪದವಿ ಶಿಕ್ಷಣ ಮುಗಿಸಿ ಸಹ ಲೆಕ್ಕಾಧಿಕಾರಿಯಾಗಿ ಕೆಲಸಕ್ಕೆ ಸೇರಿಕೊಂಡರು. ಆದರೆ “ಐದಿನಾ ಅಂಜ್ಮು” ರವರು ಪದವಿಪೂರ್ವ ಶಿಕ್ಷಣ ಮುಗಿದ ನಂತರ ಬಟ್ಟೆ ಹೊಲಿಯುವುದನ್ನು ಉಚಿತವಾಗಿ ಹೇಳಿಕೊಡುವ ಶಾಲೆಯಲ್ಲಿ ಒಂದು ವರ್ಷದ ವೃತ್ತಿ ತರಬೇತಿ ಪಡೆದರು. ನಂತರ ಬಿ.ಎ. ಪದವಿ ಪಡೆದ ನಂತರ ಕೆಲಸಕ್ಕೆ ಸೇರುವ ಬದಲು ತನ್ನ ಹೊಸ, ಹೊಸ ವಿನ್ಯಾಸದ ಬಟ್ಟೆಗಳನ್ನು ಹೊಲಿದು ಮಾರುತ್ತಿದ್ದಾರೆ.
ಒಂದು ಮಲಗುವ ಕೋಣೆಯ ಮನೆಯಲ್ಲಿ 25 ವಿದ್ಯಾರ್ಥಿಗಳಿಂದ ಪ್ರಾರಂಭ ಆದ ಡಿ.ಎಸ್.ಎಫ್. ಪ್ರಯತ್ನ ಈಗ ವರ್ಷವೊಂದಕ್ಕೆ ಸುಮಾರು ಒಂದು ಸಹಸ್ರ ವಿದ್ಯಾರ್ಥಿಗಳಿಗೆ ತನ್ನ ಸಹಾಯ ಹಸ್ತವನ್ನು ಬೆಂಗಳೂರಿನ ಯಶವಂತಪುರ, ಆರ್.ಟಿ.ನಗರ ಪ್ರದೇಶಗಳಲ್ಲಿ ಮೂರು ಶಿಕ್ಷಣ ಮತ್ತು ಅಭಿವೃದ್ಧಿ ಕೇಂದ್ರಗಳ ಮೂಲಕ ಚಾಚುತ್ತಿದೆ. ಈ ವರೆಗೆ “ಡಿ.ಎಸ್.ಎಫ್.” ನ ಸ್ಕೂಲ್ ವಿವಿಧ ಕಾರ್ಯಕ್ರಮಗಳ ಮೂಲಕ ಸುಮಾರು 20000 ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ. ಈವರೆಗೆ 5000 ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಎಲ್ಲ ಮಟ್ಟದಲ್ಲಿ ಶಿಷ್ಯವೇತನ ನೀಡಿ ಅವರ ಕಾಲ ಮೇಲೆ ಅವರು ನಿಲ್ಲುವ ತನಕ ಈ ಸಂಸ್ಥೆ ಜೊತೆಯಾಗಿ ನಿಂತಿದೆ. ಈ ಸಂಸ್ಥೆಯಿಂದ ಸಹಾಯ ಪಡೆದ ವಿದ್ಯಾರ್ಥಿಗಳು ಡಾಕ್ಟರ್, ಇಂಜನೀಯರ್, ಕಾಸ್ಟ್ ಆಕೌಟೆಂಟ್ ಇತ್ಯಾದಿಗಳಾಗಿದ್ದಾರೆ. ಆದರೆ ಈ ಸಂಸ್ಥೆ ಡಾಕ್ಟರ್, ಇಂಜನೀಯರ್ಸ ತಯಾರಿಸುವ ಇನ್ನೊಂದು ಕಾರ್ಖಾನೆಯಾಗದೇ, ವಿದ್ಯಾರ್ಥಿಗಳನ್ನು ಸಮಾಜಮುಖಿಯಾಗಿ ಕೆಲಸ ಮಾಡುವ ಮುಂದಿನ ಪ್ರಜೆಗಳನ್ನಾಗಿ ರೂಪುಗೊಳಿಸುತ್ತಿದೆ.
ಧನಲಕ್ಷ್ಮೀ ಈ ದಿನ ಜೈಪುರದಲ್ಲಿರುವ ಪ್ರತಿಷ್ಠಿತ ಅಖಿಲ ಭಾರತೀಯ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಕೋವಿಡ್ ಪೀಡಿತ ರೋಗಿಗಳ ಸೇವೆ ಮಾಡುತ್ತಾ ವೈದ್ಯಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ.
ಅವರ ಕುಟುಂಬದಲ್ಲಿ ಧನಲಕ್ಷ್ಮೀ ಮೊದಲ ವೃತ್ತಿಪರ ಪದವಿ ಪಡೆದವರು. ಇವರ ಕುಟುಂಬ ಅವರ ತಂದೆತಾಯಿ ಸಂಪಾದಿಸುತ್ತಿದ್ದ ಕನಿಷ್ಠ ದುಡ್ಡಿನಲ್ಲಿ ಜೀವನ ಸಾಗಿಸಬೇಕಿತ್ತು. ಧನಲಕ್ಷ್ಮಿ ಪದವಿಪೂರ್ವ ಕಾಲೇಜಿನ ಸಮಯದಲ್ಲಿ ಡಿ.ಎಸ್.ಎಫ್. ನಡೆಸುವ ಕಾರ್ಯಕ್ರಮದ ಅಡಿಯಲ್ಲಿ ಸೇರಿಕೊಂಡಳು. ದ್ವಿತೀಯ ಪಿ.ಯು.ಸಿ. ಮತ್ತು “ನೀತ್” ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ತೆಗದುಕೊಂಡು “ಬಿ.ಜಿ.ಎಸ್.ಗ್ಲೋಬಲ್ ವೈದ್ಯಕೀಯ ವಿಜ್ಞಾನ ಕಾಲೇಜ್” ನಲ್ಲಿ ಪ್ರವೇಶ ಪಡೆದರು. ಧನಲಕ್ಷ್ಮೀಯವರ ವೈದ್ಯಕೀಯ ವಿದ್ಯಾಭ್ಯಾಸಕ್ಕೆ “ಡಿ.ಎಸ್.ಎಫ್”ರವರು “ಮೀನಾಕ್ಷಿ ಫೌಂಡೇಶನ್ನ್” ರವರ ಸಹಯೋಗದ ಜೊತೆಗೆ ವಿದ್ಯಾರ್ಥಿವೇತನ ಕೊಟ್ಟಿದ್ದರು. ಈಗ ಧನಲಕ್ಷ್ಮಿ ತನ್ನ ವಿದ್ಯಾಭ್ಯಾಸ ಮುಗಿಸಿದ ಮೇಲೆ ಸಮಾಜದಲ್ಲಿರುವ ಆಶಕ್ತರ ಸೇವೆ ಮಾಡುವ ಗುರಿಹೊಂದಿದ್ದಾರೆ.
ಈ ತರಹದ ಒಂದು ವ್ಯವಸ್ಥೆ ರೂಪಿಸಿ, ನಡೆಸಿಕೊಂಡು ಬರುತ್ತಿದ್ದಾಗ ಅದರ ಫಲಗಳು ಗೋಚರವಾಗಲು ಪ್ರಾರಂಭವಾಗಿತ್ತು. ಆಗಲೇ ಬಂದಿದ್ದು ಕೊರೋನ ತಂದ ಹೊಸ ಸವಾಲುಗಳು. ಆಶಕ್ತ ಮಕ್ಕಳನ್ನು ಶಿಕ್ಷಣದ ಹಾದಿಗೆ ತರುವ ಏಷ್ಟೋ ವರ್ಷಗಳಿಂದ ತಪಸ್ಸಿನಂತೆ ಮಾಡಿದ ಪ್ರಯತ್ನ ಆಕಸ್ಮಿಕವಾಗಿ ಎಲ್ಲಾ ಕಳೆದುಕೊಳ್ಳುವ ಭಯವುಂಟಾಗಿತ್ತು. ಆಗ ಸ್ವಲ್ಪ ಮಟ್ಟಿಗೆ ಕೈ ಹಿಡಿದಿದ್ದು ಹೊಸ ತಂತ್ರಜ್ಞಾನ. ಆನ್ ಲೈನ್ ಪಾಠಕ್ಕೆ ಬೇಕಾದ ಉಪಕರಣಗಳಾಗಲೀ, ಅಭ್ಯಾಸವಾಗಲೀ ಇರಲಿಲ್ಲ. ಬಹಳಷ್ಟು ಕಾರ್ಮಿಕರು ಕೆಲಸ ಕಳೆದುಕೊಂಡು ತೊಂದರೆಗೆ ಸಿಕ್ಕಿಕೊಂಡಾಗ ಮಕ್ಕಳು ತರಕಾರಿ ಮಾರುವುದರಿಂದ ಹಿಡಿದು ಎಲ್ಲ ರೀತಿಯ ಕೆಲಸ ಮಾಡಿ ಮನೆಗೆ ಸಹಾಯ ಮಾಡಲು ಪ್ರಾರಂಭ ಮಾಡಿದ್ದರು. ಅವರ ಬಳಿ ಚತುರವಾಣಿಯಾಗಲೀ ಅಥವ ತರಗತಿಗೆ ಬೇಕಾದ ದತ್ತಾಂಶದ ಬಳಕೆಗೆ ಫೋನ್ ಕಂಪನಿಗಳಿಗೆ ಕೊಡಬೇಕಾದ ಶುಲ್ಕ ಪಾವತಿ ಮಾಡಲು ಆಗದ ಸ್ಥಿತಿ ಒಂದುಕಡೆಯಾದರೆ ಇನ್ನೊಂದೆಡೆ ಮನೆಯ ಯಜಮಾನನ ಬಳಿ ಇರುವ ಒಂದು ಫೋನ್ ಮನೆಯ ನಾಲ್ಕು, ಐದು ಜನ ಉಪಯೋಗಿಸುವ ಸ್ಥಿತಿಯಿತ್ತು. ಆದರೂ ಈ ಸಂರ್ದರ್ಭದಲ್ಲಿ ಎದೆಗುಂದದೆ ದಾನಿಗಳ ಸಹಾಯದಿಂದ ವಿದ್ಯಾರ್ಥಿಗಳಿಗೆ ಹೊಸ ಚತುರವಾಣಿಯನ್ನು ನೀಡಿ ಅವರಿಗೆ ಶಿಕ್ಷಣ ಕೊಡಲು ಸಂಸ್ಥೆ ಎಲ್ಲ ರೀತಿಯ ಪ್ರಯತ್ನಮಾಡಿತು. ಜೊತೆಗೆ ಪಲ್ಸ್
ಆಕ್ಷೀಮೀಟರ್, ಸ್ಯಾನಿಟೈಜರ್, ಮಾಸ್ಕ್, ಆಹಾರ ಸಾಮಗ್ರಿಗಳ ವಿತರಣೆ ಬೇಕಾದವರಿಗೆ ಮಾಡಲಾಯಿತು. ತಂದೆತಾಯಿಗಳನ್ನು ಕಳೆದುಕೊಂಡ ವಿದ್ಯಾರ್ಥಿಯೊಬ್ಬಳ ವಿದ್ಯಾಭ್ಯಾಸದ ಹೊಣೆಗಾರಿಕೆ ವಹಿಸಿಕೊಳ್ಳಲಾಗಿದೆ. ಆದರೂ ಈ ಕೊರೋನದಿಂದ ಹಳೆಯ ಪಿಡುಗುಗಳಾದ ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ಪದ್ಧತಿಗಳು ಮತ್ತೆ ಗೋಚರಿಸಲು ಪ್ರಾರಂಭ ಮಾಡಿತ್ತು. ಈ ಸಂಕಷ್ಟಗಳ ಬಗ್ಗೆ ಹೇಳುತ್ತಾ ಭಾವುಕರಾದ ಮೈತ್ರೇಯಿಯವರು “ಈ ಕೊರೋನ ವಿದ್ಯಾಭ್ಯಾಸದ ವರ್ತುಲವನ್ನು ಬಹುಶಃ ಒಂದು ಹತ್ತು ವರ್ಷ ಹಿಂದೆ ಹಾಕಿರಬಹುದೆ?” ಎಂದು ಕೇಳಿದರು. ಮಕ್ಕಳ ಸಂಕಷ್ಟಗಳನ್ನು ಕಂಡವರಿಗೆ ಇದು ಅತಿಯೋಶಕ್ತಿಯಲ್ಲ ಎಂದು ಅನಿಸುತ್ತದೆ.
ಅಜ್ಜಿ ಜೊತೆಗೆ ಇರುವ ಮಕ್ಕಳು, ತಂದೆ ಅಥವ ತಾಯಿ ಒಬ್ಬರೇ ಇರುವ ಏಳನೇ ತರಗತಿ ಮುಗಿಸಿದ ಮಕ್ಕಳನ್ನು ಮನೆಯವರ ಮನ ಒಲಸಿ ಶಾಲೆ ಶಿಕ್ಷಣದ ದಾರಿಗೆ ಮತ್ತೆ ತರುವುದು ಸವಾಲಿನ ಕೆಲಸವೇ ಸರಿ. ಇದೆಲ್ಲಾ ಮುಗಿಯುತ್ತಿರುವಾಗ ಈಗ ಹೊಸದಾಗಿ ಎಂಟನೇಯ ತರಗತಿಗೆ ಬಂದಿರುವ ವಿದ್ಯಾರ್ಥಿಗಳನ್ನು ಕಳೆದ ಎರಡು ವರ್ಷದ ಪಾಠದ ಮೂಲಭೂತ ವಿಷಯಗಳನ್ನು ತಿಳಿಸುವ ಸವಾಲು ಕೂಡ ಎದುರಾಗಿದೆ.
ಹೊಸ ಹೊಸ ಸವಾಲುಗಳನ್ನು ಎದುರಿಸಿಲು ಸಂಸ್ಥೆಯಲ್ಲಿ ಸ್ವಯಂಸೇವಕರ ದಂಡು ಸಶಕ್ತವಾಗಿದೆ. ಸುಮಾರು ಹದಿನೈದು ಜನರ ಸ್ವಯಂಸೇವಕರ ತಂಡ ಮತ್ತು ಸುಮಾರು ಅಷ್ಟೇ ಜನ ಸಂಸ್ಥೆಯ ಉದ್ಯೋಗಿಗಳು ವಿದ್ಯಾರ್ಥಿಗಳ ಜೊತೆ ನಿಂತು ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ವೈಯಕ್ತಿಕವಾಗಿ ಮಾರ್ಗದರ್ಶನ ಮಾಡಲಾಗುತ್ತದೆ. ಇವೆಲ್ಲದರ ಫಲವೇ ಮೇಲೆ ಹೇಳಿದ ಹಾಗೆ ಧನಲಕ್ಷ್ಮೀ, ಐದಿನಾ ಅಂಜ್ಮು ತರಹದ ಸಾವಿರಾರು ಸಮಾಜಮುಖಿ ಪ್ರಜೆಗಳ ಅನಾವರಣವಾಗಿದೆ.
ಈ ‘ಡಿ.ಎಸ್.ಎಫ್.’ ಸಹ ಸಂಸ್ಥಾಪಕಿಯಾಗಿ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ಶ್ರೀಮತಿ ಮೈತ್ರೇಯಿ ಎಸ್. ಕುಮಾರ್ ರವರು ತಮ್ಮ ಕಾರ್ಯದಲ್ಲಿ ಸಹ ಭಾಗಿಯಾಗಿರುವ ಸಹ ಮನಸ್ಕರನ್ನು ಕೃತಜ್ಞತೆಯಿಂದ ನೆನೆಯುತ್ತಾರೆ. ತಮಗೆ ದೊರೆತಿರುವ ವಿದ್ಯಾಭ್ಯಾಸ, ತಮ್ಮ ಇಬ್ಬರು ಹೆಣ್ಣು ಮಕ್ಕಳಾದ ಸಾಯಿ ಗೌರಿ, ಸಾಯಿ ಪ್ರಿಯಾರವರಿಗೆ ಕೊಡೆಸಿರುವ ವಿದ್ಯಾಭ್ಯಾಸ ಸಮಾಜದ ಆಶಕ್ತ ಜನರಿಗೂ ಸಿಗಲು ಇವರು ಮಾಡುತ್ತಿರುವ ಪ್ರಯತ್ನಕ್ಕೆ ಅವರ ಪತಿ ಶ್ರೀ ಸತ್ಯ ಮತ್ತು ಅತ್ತೆ ಶ್ರೀಮತಿ ರಮಾಮಣಿ ಮತ್ತು ಮಾವ ಶ್ರೀ ಆರ್.ಟಿ.ಕುಮಾರ್ ಜೊತೆಯಾಗಿ ನಿಂತಿದ್ದಾರೆ.
ಹಲವು ಸಂಘ ಸಂಸ್ಥೆಗಳು, ದತ್ತಿ ನಿಧಿಗಳು, ಕಂಪನಿಗಳು ಇವರ ಜೊತೆ ಕೈ ಜೋಡಿಸಿ ಸಮಾಜದಲ್ಲಿ ನಿಜವಾದ ಬದಲಾವಣೆ ತರಲು ಪ್ರಯತ್ನಿಸುತ್ತಿರುವುದು ಈ ಸಂಸ್ಥೆಯ ಬಗ್ಗೆ ಇರುವ ನಂಬಿಕೆಯ ದ್ಯೋತಕವಾಗಿದೆ. ಮಾಡುತ್ತಿರುವ ಉತ್ತಮ ಕಾರ್ಯಗಳಿಗೆ ಮೆಚ್ಚುಗೆ ಮತ್ತು ಪ್ರಶಸ್ತಿಗಳು ಇವರಿಗೆ ದೊರೆತಿದೆ. ಅವುಗಳು ಈ ಕೆಳಕಂಡಂತಿದೆ.
- ಸರ್ ರತನ್ ಟಾಟ ಟ್ರಸ್ಟ್ ಫೆಲೋಫಿಫ್ -2008
- ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರದಿಂದ ಸನ್ಮಾನ-2014
3. ಅಧ್ಯಕ್ಷರು- ವೆಲ್ಟ್ ವಾರ್ಟ್ಸ್ (Weltwaerts) ಇಂಡಿಯಾ ನೆಟ್‌ವರ್ಕ್ – ಜರ್ಮನಿ ಸರ್ಕಾರದ ಸ್ವಯಂ ಸೇವಕರ ಅಭಿವೃದ್ಧಿ ಸೇವೆಗಳು. - ಜ್ಯೂನಿಪರ್ ನೆಟ್ ವರ್ಕ್ಸ್ ಮತ್ತು ಪ್ರೀತಿ ಟೆಕ್ನಾಲಜಿ ಸಂಸ್ಥೆಯಲ್ಲಿ ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ದೂರು ವಿಚಾರಿಸುವ ಸಮಿತಿಯ ಸದಸ್ಯರು.
- ರಾಮಯ್ಯ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ನೈತಿಕ ಸಮಿತಿಯ ಮಾಜಿ ಸದಸ್ಯರು(2013 ರಿಂದ 2019).
ಎಲ್ಲರೂ ಕೈ ಜೊಡಿಸಿದರೆ ಬದಲಾವಣೆ ತರಲು ಸಾಧ್ಯ. ಬನ್ನಿ, 2022ರ ಹೊಸ ವರ್ಷದಲ್ಲಿ ಈ ರೀತಿಯ ಸಂಸ್ಥೆಗಳ ಜೊತೆ ಕೈ ಜೋಡಿಸುವ ಮೂಲಕ ಬದಲಾವಣೆಗೆ ಪ್ರಯತ್ನಿಸೋಣ.
ಎನ್.ವಿ.ರಘುರಾಂ.
ನಿವೃತ್ತ ಅಧೀಕ್ಷಕ ಅಭಿಯಂತರ(ವಿದ್ಯುತ್),
ಕ.ವಿ.ನಿ.ನಿ.
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
More Stories
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – ಯುವತಿ ಸಜೀವ ದಹನ