January 29, 2026

Newsnap Kannada

The World at your finger tips!

K M Cariappa

ದೇಶದ ಮೊದಲ ಸೇನಾಮುಖ್ಯಸ್ಥ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ | Field Marshal KM Cariappa Birth Anniversary

Spread the love

ಜನವರಿ 28-ಭಾರತೀಯ ಸೈನ್ಯದ ಅತಿ ವರಿಷ್ಠನಾಯಕ, ದೇಶದ ಮೊದಲ ಸೇನಾಮುಖ್ಯಸ್ಥ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು.

ಅವರ ಶಿಸ್ತು, ದೇಶಭಕ್ತಿ, ಕರ್ತವ್ಯನಿಷ್ಠೆ ಮತ್ತು ಸಾಧನೆಗಳು ಅನುಕರಣೀಯವಾದದ್ದು.
ಭಾರತ ಸೈನ್ಯದ ಪ್ರಪ್ರಥಮ ಫೀಲ್ಡ್ ಮಾರ್ಷ್‌ಲ್‌, ಮಹಾದಂಡನಾಯಕ ಕೊದಂಡೆರ ಮಾದಪ್ಪ ಕಾರ್ಯಪ್ಪ ಅವರು ಭಾರತೀಯರ ಜನಮನದಲ್ಲಿ ಕಳಶಪ್ರಾಯರು. ಇವರು ಕರ್ನಾಟಕದ ಕೊಡಗಿನವರು ಎಂಬುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ.

ಭಾರತೀಯ ಸೇನೆಯಲ್ಲಿ ಅತ್ಯುನ್ನತ ಪದವಿ ಗಳಿಸಿದ್ದ ಇವರು ಶಿಸ್ತು, ಆದರ್ಶಕ್ಕೆ ಹೆಸರಾಗಿದ್ದರು. ಈ ಕಾರಣದಿಂದಲೇ ಅವರು ಕೊಡಗಿನ ಮಂದಿಗಷ್ಟೇ ಅಲ್ಲ; ಎಲ್ಲಾ ಯುವಕರ ಪಾಲಿಗೆ ಸ್ಫೂರ್ತಿಯ ಚಿಲುಮೆ. ಇವರ ಸೇನೆಯ ಬದುಕಿನ ರೋಚಕ ಕ್ಷಣಗಳು ಕೇಳಿದರೆ ಮೈ ರೋಮಾಂಚನಗೊಂಡು ನಮ್ಮಲ್ಲೊಂದು ಕಿಡಿ ಹಚ್ಚುವಂತೆ ಮಾಡುತ್ತದೆ.

ಕಾರ್ಯಪ್ಪನವರು 1899ರ ಜನವರಿ 28ರಂದು ಕೊಡಗಿನ ಶನಿವಾರ ಸಂತೆಯಲ್ಲಿ ಜನಿಸಿದರು. ಇವರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಡಿಕೇರಿಯ ಕೇಂದ್ರಿಯ ಪ್ರೌಢಶಾಲೆಯಲ್ಲಾಯಿತು. ಆ ಬಳಿಕ ಮದ್ರಾಸಿನ ಪ್ರಸಿಡೆನ್ಸಿ ಕಾಲೇಜಿನಲ್ಲಿ ಕಾಲೇಜು ಶಿಕ್ಷಣವನ್ನು ಪೂರೈಸಿದರು. ಕಾಲೇಜಿನಲ್ಲಿ ಪುಸ್ತಕಗಳು ಮತ್ತು ಖ್ಯಾತ ಶಿಕ್ಷಣ ತಜ್ಞರ ನೇತೃತ್ವದಲ್ಲಿ ನಡೆಯುತ್ತಿದ್ದ ನಾಟಕಗಳು ಕಾರ್ಯಪ್ಪನವರನ್ನು ಬಹಳಷ್ಟು ಆಕರ್ಷಿಸಿದ್ದವು. ಸಕ್ರಿಯ ಕ್ರೀಡಾಪಟು ಕೂಡ ಆಗಿದ್ದ ಇವರು ಹಾಕಿ ಮತ್ತು ಟೆನಿಸ್‌ನಂತಹ ಆಟಗಳಲ್ಲಿಯೂ ನಿಪುಣರಾಗಿದ್ದರು.
1918ರ ಮೊದಲನೆಯ ಮಹಾಯುದ್ಧ ಮುಗಿದಾಗ ಭಾರತೀಯರನ್ನೂ ಸೈನ್ಯಾಧಿಕಾರಿಗಳ ಸ್ಥಾನಕ್ಕೆ ಪರಿಗಣಿಸಲು ಕೂಗು ಕೇಳಿಬಂತು. ಆಗ ನಡೆದ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಆಯ್ಕೆಗೊಂಡವರಲ್ಲಿ ಕಾರ್ಯಪ್ಪನವರೂ ಓರ್ವರು. ಮೊದಲು ಇಂದೂರಿನ ಡೆಲ್ಲಿ ಕೆಡೆಟ್‌ ಕಾಲೇಜಿನಲ್ಲಿ ರಾಜನ ಸೈನ್ಯಕ್ಕೆ ನಿಯುಕ್ತರಾದ ಭಾರತೀಯ ಅಧಿಕಾರಿಗಳ ಮೊದಲ ವರ್ಗಕ್ಕೆ ಸೇರಿಕೊಂಡ ಕಾರ್ಯಪ್ಪನವರು ಮುಂದೆ ಮುಂಬಯಿಯಲ್ಲಿದ್ದ ಕರ್ನಾಟಿಕ್‌ ಪದಾತಿದಳಕ್ಕೆ ನಿಯುಕ್ತಿಗೊಂಡರು.

ಕ್ವೆಟ್ಟಾ ಮಹಾವಿದ್ಯಾಲಯಕ್ಕೆ ಸೇರಿದ ಮೊದಲ ಭಾರತೀಯ

ಮೊದಲ ಬಾರಿಗೆ ಇರಾಕ್‌ (ಅಂದಿನ ಮೆಸಪೊಟೋಮಿಯಾ) ನಲ್ಲಿದ್ದ ವೇಲ್ಸ್ ರಾಜಕುಮಾರನ ಡೊಗ್ರಾ ದಳದೊಂದಿಗೆ ಸೈನ್ಯದ ಸಕ್ರಿಯ ಸೇವೆ ಆರಂಭಿಸಿ, ಅನಂತರ ಇವರನ್ನು ವಿಕ್ಟೋರಿಯಾ ರಾಣಿಯ ಆಪ್ತ ದಳವಾದ 2ನೇ ರಾಜಪೂತ್‌ ಲಘು ಪದಾತಿದಳಕ್ಕೆ ವರ್ಗಾಯಿಸಲಾಯಿತು. ಸೇನೆಯಿಂದ ನಿವೃತ್ತಿಹೊಂದುವವರಿಗೂ ಇವರು ಇದೇ ಸೇನೆಯಲ್ಲಿ ಸೇವೆಗೈದರು. 1933ರಲ್ಲಿ ಕ್ವೆಟ್ಟಾದಲ್ಲಿದ್ದ ಸಿಬಂದಿ ಮಹಾವಿದ್ಯಾಲಯಕ್ಕೆ ತರಬೇತಿ ಪಡೆಯಲು ಸೇರಿದ ಮೊದಲ ಭಾರತೀಯ ಅಧಿಕಾರಿ ಕಾರ್ಯಪ್ಪನವರಾಗಿದ್ದರು. ಮುಂದೆ 1946ರಲ್ಲಿ ಇವರಿಗೆ ಫ್ರಾಂಟಿಯರ್‌ ಬ್ರಿಗೇಡ್‌ ದಳದ ಬ್ರಿಗೇಡಿಯರ್‌ ಆಗಿ ಭಡ್ತಿ ನೀಡಲಾಯಿತು.

1962, 1965, 1971ರಲ್ಲಿ ಯುದ್ಧಗಳಾದಾಗ ಕಾರ್ಯಪ್ಪನವರು ಗಡಿಯಲ್ಲಿ ಸಂಚರಿಸಿ ಭಾರತೀಯ ಸೈನ್ಯಕ್ಕೆ ಸ್ಫೂರ್ತಿ ತುಂಬುವ ಕೆಲಸ ಮಾಡಿದ್ದರು. 1983ರ ವರ್ಷದಲ್ಲಿ ಕಾರ್ಯಪ್ಪನವರ ಉತ್ಕೃಷ್ಟ ಸೇವೆಯ ಸ್ಮರಣಾರ್ಥವಾಗಿ ಭಾರತ ಸರ್ಕಾರ ಅವರಿಗೆ ಫೀಲ್ಡ್ ಮಾರ್ಷಲ್‌ ಗೌರವವನ್ನು ಸಮರ್ಪಿಸಿತು. ತಮ್ಮ ನಿವೃತ್ತಿಯ ಬಹಳಷ್ಟು ವರ್ಷಗಳನ್ನು ಕಾರ್ಯಪ್ಪನವರು ಮಡಿಕೇರಿಯ ಸುಂದರ ಪರಿಸರದಲ್ಲಿ ಕಳೆದರು.

ಒಮ್ಮೆ ಅವರಿಗೆ ತಾವು ಹೋಗುತ್ತಿದ್ದ ಮಾರ್ಗದ ಬದಿಯಲ್ಲಿ ಉದ್ದಕ್ಕೂ ಪಠಾಣ ಹೆಂಗಸರು ನೀರಿನ ಬಿಂದಿಗೆಗಳನ್ನಿರಿಸಿಕೊಂಡು ನಿಂತಿರುವದು ಕಾಣಿಸಿತು. ಏನೆಂದು ವಿಚಾರಿಸಿದಾಗ, ಹತ್ತಾರು ಮೈಲುಗಟ್ಟಲೆ ದೂರದಿಂದ ಆ ಸ್ತ್ರೀಯರು ತಮ್ಮ ಮನೆಗಳಿಗೆ ನೀರು ತರುತ್ತಿದ್ದಾರೆಂದು ಗೊತ್ತಾಯಿತು. ಮನಕರಗಿದ ಕಾರ್ಯಪ್ಪನವರು ತಮ್ಮ ಠಾಣ್ಯಕ್ಕೆ ಮರಳಿ, ತಮ್ಮ ಸೈನಿಕರನ್ನೊಪ್ಪಿಸಿ, ಆ ಬುಡಕಟ್ಟು ಜನರ ಊರಿನ ಸಮೀಪದಲ್ಲೇ ಬಾವಿಯೊಂದನ್ನು ಸಂಜೆಯಾಗುವದರೊಳಗೆ ತೋಡಿಸಿಕೊಟ್ಟರು.ಇದನ್ನು ಓದಿ –ಮೈಸೂರು: ಹೃದಯಾಘಾತದಿಂದ SSLC ವಿದ್ಯಾರ್ಥಿನಿ ಮೃತ್ಯು

ಕೆಲವೇ ದಿನಗಳಲ್ಲಿ ಆ ಫಕೀರನಿಗೆ ಈ ಸುದ್ಧಿ ಗೊತ್ತಾಗಿ, ತನ್ನ ಸಶಸ್ತ್ರ ಗುಂಪಿನೊಡನೆ ಕಾರ್ಯಪ್ಪನವರ ಬಳಿ ಬಂದು, ಅವರನ್ನು ಗಟ್ಟಿಯಾಗಿ ತಬ್ಬಿಕೊಂಡು, “ಖಲೀಫಾ!” ಎಂದು ಉದ್ಘೋಷಿಸಿದರು..!
ಜತೆಗೆ ಸ್ವತಃ ಪ್ರಕೃತಿ ಪ್ರೇಮಿಯಾದ ಕಾರ್ಯಪ್ಪನವರು ಜನರಿಗೆ ಪ್ರಕೃತಿಪ್ರೇಮ, ಸ್ವಚ್ಚತೆ ಮತ್ತು ಬದುಕಿನ ಹಲವಾರು ಸೌಂದರ್ಯ ವಿಚಾರಗಳ ಕುರಿತಾದ ಶಿಕ್ಷಣ ನೀಡುವ ಕೆಲಸವನ್ನು ಸಾಂಗವಾಗಿ ನಡೆಸಿದರು. 94 ವರ್ಷಗಳ ಶುದ್ಧ ಜೀವನವನ್ನು ನಡೆಸಿದ ಕಾರ್ಯಪ್ಪನವರು ಮೇ 15, 1993ರಂದು ಬೆಂಗಳೂರಿನಲ್ಲಿ ನಿಧನರಾದರು.

ಶಿವಣ್ಣಮಂಗಲ (ಸಂಗ್ರಹ) .

error: Content is protected !!