ಇಂದು ಆಷಾಢ ಮಾಸ ಮೊದಲ ಶುಕ್ರವಾರ. ಆಷಾಢ ಮಾಸದ ನಾಲ್ಕು ಶುಕ್ರವಾರಗಳಲ್ಲೂ ಮೈಸೂರಿನ ಚಾಮುಂಡಿ ತಾಯಿಯ ದರ್ಶನ ಮಾಡಿದರೆ ಒಳ್ಳೆಯದಾಗುತ್ತೆ ಎಂಬ ಭಾವನೆ ಹಿನ್ನಲೆಯಲ್ಲಿ ಆಷಾಢದ ಎಲ್ಲಾ ಶುಕ್ರವಾರದಂದು ಹೆಚ್ಚಿನ ಸಂಖ್ಯೆಯ ಭಕ್ತರು ಚಾಮುಂಡಿ ಬೆಟ್ಟಕ್ಕೆ ಆಗಮಿಸುತ್ತಿದ್ದಾರೆ.
ಈ ಬಾರಿ ತಿರುಪತಿ ಮಾದರಿಯಲ್ಲಿ ಭಕ್ತರಿಗೆ ಚಾಮುಂಡೇಶ್ವರಿ ದೇವಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಾಯಿ ಚಾಮುಂಡಿ ದರ್ಶನಕ್ಕೆ ಬರುವ ಭಕ್ತರಿಗೆ ಹೊಸ ನಿಯಮ ರೂಪಿಸಲಾಗಿದೆ.
ಎರಡು ಡೋಸ್ ಕೊರೋನಾ ಲಸಿಕೆ ಕಡ್ಡಾಯ ಹಾಕಿಸಿರಬೇಕು. ಇಲ್ಲದಿದ್ದರೆ 72 ಗಂಟೆ ಮುಂಚಿತವಾದ ಕೋವಿಡ್ ನೆಗೆಟಿವ್ ರೀಪೋರ್ಟ್ ಇರಬೇಕು. ಆಗ ಮಾತ್ರ ಚಾಮುಂಡಿ ಬೆಟ್ಟ ಪ್ರವೇಶಕ್ಕೆ ಅವಕಾಶ ಇರಲಿದೆ. ಈಗಾಗಲೇ ಮುಂಜಾನೆ 5.30ರಿಂದಲೇ ತಾಯಿಯ ದರ್ಶನ ಆರಂಭವಾಗಿದೆ ರಾತ್ರಿ 9.30ರವರೆಗೆ ದರ್ಶನಕ್ಕೆ ಅವಕಾಶವಿದೆ.
ಭಕ್ತರಿಗೆ ಮೂರು ಸಾಲಿನಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರತ್ಯೇಕ ಬ್ಯಾರಿಕೇಡ್ ಅಳವಡಿಸಲಾಗಿದೆ, ಮಳೆ-ಬಿಸಿಲು ರಕ್ಷಣೆಗೆ ಟೆಂಟ್ ನಿರ್ಮಿಸಲಾಗಿದೆ. ದೇವಸ್ಥಾನದ ಮುಂಭಾಗ ಬೆಳಗ್ಗೆ 6.30 ರಿಂದ ರಾತ್ರಿ 8.30 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಬೆಟ್ಟದಲ್ಲಿನ ಮಹಿಷಾಸುರ ಪ್ರತಿಮೆ ಆವರಣದಲ್ಲಿ ದಾನಿಗಳು ಭಕ್ತರಿಗೆ ಬಾಳೆಲೆ ಊಟಕ್ಕೆ ವ್ಯವಸ್ಥೆ ಮಾಡಿದ್ದಾರೆ. ಪ್ರಸಾದ ರೂಪದಲ್ಲಿ ಹಾರ್ಲಿಕ್ಸ್, ಮೈಸೂರು ಪಾಕ್ ವಿತರಣೆ ಮಾಡಲು ಶ್ರೀಚಾಮುಂಡೇಶ್ವರಿ ಸೇವಾ ಸಮಿತಿ ಮುಂದಾಗಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು