ಕನ್ನಡ ಸಾಹಿತ್ಯದ ಬರಹವೊಂದು ತುಳಿತಕ್ಕೊಳಗಾದ ಜನರ ಧ್ವನಿಯಾಗಿ ರಣರಣಿಸಿ ಒಂದು ಚಳವಳಿಯಾಗಿ ರೂಪಗೊಂಡು
” ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳಾಗಿ ” ಮಾರ್ಪಟ್ಟು ಒಂದು ರಕ್ತ ರಹಿತ ಕ್ರಾಂತಿಗೆ ಕಾರಣವಾಯಿತು.
ಆ ರೀತಿಯ ಸಾಹಿತ್ಯದ ರಚನೆಕಾರ ” ಕವಿ ಸಿದ್ದಲಿಂಗಯ್ಯ ” ನವರ ದೇಹ ನಿಸ್ತೇಜಗೊಂಡು ತಟಸ್ಥವಾಯಿತು ಎಂಬ ಸುದ್ದಿ ಬಂದಿದೆ.
ಸಾಮಾಜಿಕ ಬದಲಾವಣೆಗೆ ತಿರುವು ನೀಡುವ ಅಕ್ಷರಗಳು ಮೂಡಲು ತೀವ್ರ ಸ್ವರೂಪದ ಮತ್ತು ಆ ಕಾಲಘಟ್ಟದ ವ್ಯವಸ್ಥೆ ವೈಯಕ್ತಿಕ ಮನಸ್ಸಿನ ಮೇಲೆ ಪ್ರಭಾವ ಬೀರಿ ಭಾವನೆಗಳು ತರಂಗಗಳಾಗಿ ಅಲೆ ಎಬ್ಬಿಸಲು ಐತಿಹಾಸಿಕ ಹಿನ್ನೆಲೆ ಇರುತ್ತದೆ. ಜೊತೆಗೆ ಅಪಾರ ಪಾಂಡಿತ್ಯವೂ ಜೊತೆಗೂಡಬೇಕು. ಸಮಗ್ರ ಗ್ರಹಿಕೆಯೂ ಮುಖ್ಯವಾಗುತ್ತದೆ.
ವಿಶ್ವ ಸಾಹಿತ್ಯದ ಇತಿಹಾಸದಲ್ಲಿ ಈ ರೀತಿಯ ಕೆಲವು ಕೃತಿಗಳು ಕ್ರಾಂತಿಗೆ ಕಾರಣವಾದುದು ದಾಖಲಾಗಿದೆ. ಕರ್ನಾಟಕದಲ್ಲಿ ವಚನ ಸಾಹಿತ್ಯ ಸಾಮಾಜಿಕ ಬದಲಾವಣೆಗೆ ಸಾಕಷ್ಟು ಕಾರಣವಾಯಿತು. ಹಾಗೆಯೇ ಸಿದ್ದಲಿಂಗಯ್ಯನವರ ಸಾಹಿತ್ಯ ಒಂದು ಸಮುದಾಯದ ಬಂಡಾಯಕ್ಕೆ ಕಿಡಿ ಹೊತ್ತಿಸಿತು.
ಪ್ರಾರಂಭದಲ್ಲಿ ಅತ್ಯಂತ ನೋವಿನ
ಶೋಷಿತರನ್ನು ಬಡಿದೆಬ್ಬಿಸುವ ಸಾಹಿತ್ಯ ರಚಿಸಿದ ಅವರು ನಂತರ ನಿಧಾನವಾಗಿ ಕಚಗುಳಿ ಇಡುತ್ತಾ ಊರು ಕೇರಿಗಳನ್ನು ಆತ್ಮಕಥನದ ಮೂಲಕ ಬಿಡಿಸುತ್ತಾ ತದನಂತರ ಹಾಸ್ಯ ಭಾಷಣಕಾರರಾಗಿ ಬದಲಾದಂತೆ ಕಾಣಬರುತ್ತವೆ.
ಬಹುಶಃ ಅದಕ್ಕೆ ಅವರ ಬದಲಾದ ಜೀವನಶೈಲಿ, ಅವರನ್ನು ಆಂತರಿಕವಾಗಿ ಕಾಡಲು ಶುರುವಾಗಿ ಅದರ ಒತ್ತಡ ತಡೆಯಲಾರದೆ ತಮ್ಮನ್ನೇ ಹಾಸ್ಯದ ವಸ್ತುವಾಗಿ ಚಿತ್ರಿಸಿಕೊಳ್ಳುತ್ತಾ ಅದರ ನೆನಪುಗಳನ್ನು ಮರೆಯಲು ಪ್ರಯತ್ನಿಸಿರಬೇಕು ಎನಿಸುತ್ತದೆ.
ಜೊತೆಗೆ ಇನ್ನೂ ಸ್ವಲ್ಪ ಆಶ್ಚರ್ಯವೆಂದರೆ ಇದೇ ಕವಿ ” ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡ ಬೇಡ ಗೆಳತಿ, ಚೆಲುವಾದ ನಿನ್ನ ಮಲ್ಲಿಗೆಯ ಮೈಯ್ಯ ಸುಟ್ಟಾವು ಬೆಳ್ಳಿ ಕಿರಣ ” ಎನ್ನುವ ಅತ್ಯದ್ಭುತ ಪ್ರೇಮಿಯಾಗಿಯೂ ಭಾವನೆಗಳನ್ನು ಅಕ್ಷರಗಳಲ್ಲಿ ಮೂಡಿಸುತ್ತಾರೆ.
ಬದುಕಿನ ಅನುಭವಗಳನ್ನು ಜನಮನಕ್ಕೆ ಅಕ್ಷರಗಳ ಮೂಲಕ ತಲುಪಿಸಲು ಅಪಾರ ಪ್ರತಿಭೆ ಬೇಕಾಗುತ್ತದೆ. ಹೃದಯ ವೈಶಾಲ್ಯತೆಯ ಜೊತೆಗೆ ಧೈರ್ಯವು ಸೇರಬೇಕಾಗುತ್ತದೆ. ಎಲ್ಲದರ ನಡುವೆ ಆತ್ಮಸಾಕ್ಷಿ ಬಡಿದೆದ್ದು ಕಾಡಬೇಕಾಗುತ್ತದೆ. ಅದು ಹುಚ್ಚು ಮನಸ್ಸಿನ ಹಲವಾರು ಮುಖಗಳನ್ನು ನಮಗೆ ಪರಿಚಯಿಸುತ್ತದೆ. ಆಗ ಮೂಡುವ ಅನುಭವದ ಸಾಹಿತ್ಯ ಗಟ್ಟಿಯಾಗಿ ತೂಕವಾಗಿ ಆಳವಾಗಿ ದಾಖಲಾಗುತ್ತದೆ. ಆ ರೀತಿಯ ಅಪರೂಪದ ಸಾಹಿತಿ ಸಿದ್ದಲಿಂಗಯ್ಯನವರು.
ಅಧಿಕಾರ ದಾಹದ ಆರೋಪದ ಸುಳಿಗೆ ಸಿಲುಕುತ್ತಾರೆ. ಅದು ಅವರನ್ನು ಸಾಕಷ್ಟು ಕಾಡಿರಬೇಕು. ಅದರಿಂದ ಹೊರಬರಲಾಗದೆ ಚಡಪಡಿಸಿರಬೇಕು. ಅತಿ ವಿನಯದ ಮುಖವಾಡ ತೊಡುತ್ತಾರೆ. ಪ್ರೀತಿಯ ಬಲೆ ಬೀಸುತ್ತಾರೆ. ಒಟ್ಟಿನಲ್ಲಿ ಬದಲಾಗುತ್ತಾ ಸಾಗಿ ಸಹಜವಾಗುತ್ತಾರೆ ಎಂದು ವೈಯಕ್ತಿಕವಾಗಿ ನನಗನಿಸುತ್ತದೆ.
ದೂರದಲ್ಲಿ ನಿಂತು ಒಬ್ಬ ವ್ಯಕ್ತಿಯ ಆಂತರ್ಯದ ವ್ಯಕ್ತಿತ್ವವನ್ನು ವಿಮರ್ಶಿಸುವುದು ಕಷ್ಟ ಮತ್ತು ಅಪರಿಪೂರ್ಣ. ಆದರೆ ಅವರ ಸಾಹಿತ್ಯ ಮತ್ತು ಸಾರ್ವಜನಿಕ ಜೀವನವನ್ನು ನಮ್ಮ ಅರಿವಿನ ಮಿತಿಯೊಳಗೆ ಹಿಡಿದಿಡಬಹುದು.
ಮನಸ್ಸುಗಳು ಒಡೆದು ಸಂಕುಚಿತಗೊಂಡು ಸಿದ್ದಾಂತಗಳ ಅಡಿಯಲ್ಲಿ ಬಂಧಿಯಾಗಿರುವ ಸಂದರ್ಭದಲ್ಲಿ ಎಲ್ಲಾ ರೀತಿಯ ವಿಮರ್ಶೆಗಳು ಪಂಥಗಳ ಆಚೆ ಬೆಳೆಯುತ್ತಿಲ್ಲ. ದೃಷ್ಟಿಕೋನಗಳು ಅನೇಕ ಸಂಕೋಲೆಗಳಲ್ಲಿ ಸಿಲುಕಿದೆ.
ಜಾತಿ ವ್ಯವಸ್ಥೆ ಮುಕ್ತವಾಗಿ ಚಿಂತಿಸಲು ಬಿಡುತ್ತಿಲ್ಲ. ಅದರಿಂದ ಸಾಹಿತ್ಯ ಮತ್ತು ಸಾಹಿತಿಗಳು ಸಹ ಹೊರತಲ್ಲ.
ಸಾಹಿತ್ಯವೆಂಬ ಭಾವನೆಗಳ ಹೊರಸೂಸುವಿಕೆ ಕೂಡ ಜಾತಿಯ ಜಾಂಡೀಸ್ ರೋಗಕ್ಕೆ ತುತ್ತಾಗಿದೆ. ಅದರ ಫಲವಾಗಿಯೇ ದಲಿತ ಕವಿ ಬಂಡಾಯ ಕವಿ ಎಂಬ ಮಿತಿಗೆ ಸಿದ್ದಲಿಂಗಯ್ಯ ಅವರು ಒಳಪಟ್ಟರೆ ಅಥವಾ ಒಳಪಡಿಸಿದೆವೆ !!??…….
ಸಮೂಹ ಸಂಪರ್ಕ ಮಾಧ್ಯಮಗಳ ಕ್ರಾಂತಿಯ ಈ ಸಮಯದಲ್ಲಿ ಒಂದು ಸಾಹಿತ್ಯ ಸಾಮಾಜಿಕ ಕ್ರಾಂತಿಯ ಕಿಚ್ಚು ಹಚ್ಚಿಸುವಷ್ಟು ಪ್ರಬಲವಾಗಿ ಬೆಳೆಯಿತು. ಅದನ್ನು ಸಿದ್ದಲಿಂಗಯ್ಯ ಅವರು ರಚಿಸಿದರು ಮತ್ತು ಅವರು ಇನ್ನು ನೆನಪು ಮಾತ್ರ ಎಂಬುದು ದುಃಖದ ವಿಷಯ. ” ಹುಟ್ಟು ಆಕಸ್ಮಿಕ ಸಾವು ಅನಿವಾರ್ಯ ” ಎಂಬ ಮಾತಿನ ಮೂಲಕ ಸಮಾಧಾನದ ನಿಟ್ಟುಸಿರು ಬಿಟ್ಟು ಸಾಹಿತ್ಯ ವಿದ್ಯಾರ್ಥಿಗಳು ಸಿದ್ದಲಿಂಗಯ್ಯ ಅವರ ಸಾವಿನ ಸಮಯದಲ್ಲಿ ತಮ್ಮ ಸಾಹಿತ್ಯ ಮತ್ತು ಅದರ ಆಳವನ್ನು ಸಾಧ್ಯವಾದಷ್ಟು ವಿಮರ್ಶೆ ಮಾಡಿಕೊಳ್ಳಿ. ಜಾತಿ ಪಂಥಗಳ ಸಂಕೋಲೆಗಳಿಂದ ಹೊರ ಬನ್ನಿ. ಸಾಹಿತ್ಯದ ಅಗಾಧತೆಯನ್ನು ಅರ್ಥಮಾಡಿಕೊಳ್ಳಿ. ನಮ್ಮ ನಡೆ ಮತ್ತು ನುಡಿ ಹೆಚ್ಚು ಹತ್ತಿವಾಗಿರಲಿ ಎಂಬ ಎಚ್ಚರಿಕೆಯೂ ಇರಲಿ……
ಡಾಕ್ಟರ್ ಸಿದ್ದಲಿಂಗಯ್ಯನವರು ಒಂದು ತಲೆಮಾರಿನ ಜನರನ್ನು ಪ್ರಭಾವಗೊಳಿಸಿದರೆ ಕೊರೋನಾ ವೈರಸ್ ಒಂದು ತಲೆಮಾರಿನ ಜನರನ್ನು ತಲ್ಲಣಗೊಳಿಸಿ ಸಾಕಷ್ಟು ಜನರನ್ನು ಹೊತ್ತೊಯ್ಯುತ್ತಿದೆ ಎಂದು ಭಾಸವಾಗುತ್ತಿದೆ. ಆದರೂ ನಾವು ಧೃತಿಗೆಡದೆ ದೇಹ ಮತ್ತು ಮನಸ್ಸನ್ನು ಸಾಧ್ಯವಾದಷ್ಟು ಬಲಿಷ್ಠವಾಗಿಸಿ ಇತಿಹಾಸದ ಪುಟಗಳಿಂದ ಪಾಠ ಕಲಿಯುತ್ತಾ ಮತ್ತಷ್ಟು ದೃಢವಾಗುತ್ತಾ ಮುನ್ನಡೆಯೋಣ…….
- ವಿವೇಕಾನಂದ. ಹೆಚ್.ಕೆ.
- ಡಿ.9 ರಿಂದ ಬೆಳಗಾವಿಯಲ್ಲಿ ಅಧಿವೇಶನ : ಯು ಟಿ ಖಾದರ್
- ವಯನಾಡಿನ ನೂತನ ಸಂಸದೆಯಾಗಿ ಪ್ರಿಯಾಂಕಾ ಗಾಂಧಿ ಪ್ರಮಾಣ ವಚನ
- ನಟ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ವಿಚ್ಛೇದನಕ್ಕೆ ಕೋರ್ಟ್ ಅನುಮೋದನೆ
- ಬಾರ್ ಲೈಸೆನ್ಸ್ಗೆ 20 ಲಕ್ಷ ಲಂಚದ ಬೇಡಿಕೆ – ಅಬಕಾರಿ ಡಿಸಿ ವಿರುದ್ಧ ಲೋಕಾಯುಕ್ತಕ್ಕೆ ದೂರು
- ಕರ್ನಾಟಕದಲ್ಲಿ ಡಿಸೆಂಬರ್ 4ರ ತನಕ ಭಾರೀ ಮಳೆ ಮುನ್ಸೂಚನೆ
More Stories
ನವೆಂಬರ್ 28: ರಾಜ್ಯದ ಅಭಿವೃದ್ಧಿಗೆ ಮಹತ್ವದ ಸಚಿವ ಸಂಪುಟ ಸಭೆ
ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: `ವಕ್ಫ್ ತಿದ್ದುಪಡಿ’ ಸೇರಿ 16 ಮಸೂದೆ ಮಂಡಿಸಲು ಸರ್ಕಾರ ಸಜ್ಜು!
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ