ಎಪಿಎಂಸಿ ಕಾಯ್ದೆ ರೈತರಿಗೆ ಉಪಕಾರಿಯಾಗಿದೆ. ಕರ್ನಾಟಕದಲ್ಲಿ 162 ಎಪಿಎಂಸಿಗಳಿವೆ. ಇವುಗಳೂ ಸೇರಿದಂತೆ ರೈತರು ರಾಜ್ಯದ ಯಾವುದೇ ಭಾಗದಲ್ಲಿ ಬೇಕಾದರೂ ಸಹ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದು. ಆದರೆ, ವಿರೋಧಪಕ್ಷದವರಿಂದ ಜನರ ದಾರಿ ತಪ್ಪಿಸುವ ಕೆಲಸವಾಗುತ್ತಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಬುಧವಾರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸೋಮಶೇಖರ್
ಈ ಕಾಯ್ದೆಯಿಂದ ಎಪಿಎಂಸಿಗೆ ಯಾವುದೇ ಧಕ್ಕೆ ಇಲ್ಲ. ಮೊದಲು 1 ರೂ. ಸೆಸ್ ನಿಗದಿ ಮಾಡಿದ್ದೆವು. ಕೊನೆಗೂ ದರವೂ ಹೆಚ್ಚಾಯಿತು ಎಂಬ ಮನವಿಗಳು ಬಂದ ಹಿನ್ನೆಲೆಯಲ್ಲಿ ನಾವು ಸಂಪುಟದಲ್ಲಿ ಚರ್ಚೆ ನಡೆಸಿ 35 ಪೈಸೆಗೆ ನಿಗದಿ ಮಾಡಿದೆವು. ಇಷ್ಟಾದರೂ ಎಪಿಎಂಸಿಗೆ ವರ್ಷಕ್ಕೆ 120 ಕೋಟಿ ರೂ. ಆದಾಯ ಬರುತ್ತದೆ. ಇದರಿಂದ ವ್ಯವಸ್ಥೆ ಮೇಲೆ ಯಾವುದೇ ಪರಿಣಾಮ ಬೀರದು. ಅಲ್ಲದೆ, ಎಪಿಎಂಸಿಯ ಅಧಿಕಾರ ಮೊಟುಕುಗೊಳ್ಳುವುದಿಲ್ಲ, ಇದನ್ನು ಮುಚ್ಚುವ ಪ್ರಶ್ನೆಯೇ ಇಲ್ಲ ಎಂದರು.
ಕೇಂದ್ರ ಸರ್ಕಾರ ಜಾರಿಗೆ ತಂದ ಕಾಯ್ದೆಯನ್ನು ಸಚಿವನಾಗಿ ನಾನು ಸ್ವಾಗತಿಸುತ್ತೇನೆ. ಇದು ರೈತರಿಗೆ ಅನುಕೂಲವಾಗುವ ಕಾನೂನೇ ವಿನಃ ಯಾವುದೇ ತೊಂದರೆಯಾಗದು ಎಂದು ಸ್ಪಷ್ಟಪಡಿಸಿದರು.
ಈ ಕಾಯ್ದೆ ಬರುವುದಕ್ಕೆ ಮುಂಚೆ 50ಕ್ಕೂ ಹೆಚ್ಚು ಮಲ್ಟಿ ನ್ಯಾಷನಲ್ ಕಂಪನಿಗಳಿಗೆ ಮಾರಾಟ ಮಾಡುವ ಅವಕಾಶವನ್ನು ಈ ಹಿಂದಿನ ಸರ್ಕಾರವೇ ಅನುಮತಿ ಕೊಟ್ಟಿತ್ತು. ಆದರೆ, ಅದರಿಂದಲೂ ರೈತರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಈಗಿನ ನೂತನ ಕಾಯ್ದೆಯಿಂದ ಪೈಪೋಟಿ ಏರ್ಪಟ್ಟು ರೈತರಿಗೇ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಚಿವರು ಹೇಳಿದರು.
ಸ್ಥಳೀಯ ಎಪಿಎಂಸಿಗೆ ಅಧಿಕಾರ ಇಲ್ಲದಿದ್ದರೂ ರಾಜ್ಯ ಎಪಿಎಂಸಿ ಬೋರ್ಡ್ ಗೆ ಸಂಪೂರ್ಣ ಅಧಿಕಾರ ಇದೆ. ಹೀಗಾಗಿ ಮಲ್ಟಿ ನ್ಯಾಷನಲ್ ಕಂಪನಿಗಳು ಅಕ್ರಮ ಎಸಗುತ್ತಿದ್ದರೆ, ಹಣವನ್ನು ರೈತರಿಗೆ ಸರಿಯಾಗಿ ನೀಡದಿದ್ದಾಗ ರೈತರು ದೂರು ಕೊಟ್ಟರೆ ಅಂಥವರ ಪರವಾನಗಿಯನ್ನೇ ರದ್ದುಪಡಿಸುತ್ತೇವೆ ಎಂದು ತಿಳಿಸಿದರು.
ರೈತರ ಪ್ರತಿಭಟನೆ ಬಗ್ಗೆ ಸರ್ಕಾರ ಸಹ ಗಮನಹರಿಸುತ್ತಿದೆ. ಸಮಸ್ಯೆಗಳ ಪಟ್ಟಿ ಮಾಡಿಕೊಂಡು ಕೊಡುವಂತೆ ಮುಖ್ಯಮಂತ್ರಿಗಳು ಸಹ ತಿಳಿಸಿದ್ದಾರೆ. ಹೀಗಾಗಿ ನಾನೂ ಸಹ ಮುಖ್ಯಮಂತ್ರಿಗಳ ಜೊತೆ ಚರ್ಚಿಸುತ್ತೇನೆ. ಬಳಿಕ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸಚಿವರು ತಿಳಿಸಿದರು.
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ