ರೈತರ ಪ್ರತಿಭಟನೆಯಲ್ಲಿ ಹಿಂಸಾಚಾರ: ಶಾಸಕ ಸಾ.ರಾ.ಮಹೇಶ್ ಬೇಸರ

Team Newsnap
1 Min Read

ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ರೈತರ ಪ್ರತಿಭಟನೆಯ ವೇಳೆ ಹಿಂಸಾಚಾರ ನಡೆಯಬಾರದಿತ್ತು, ಪ್ರಧಾನಿ, ರಾಷ್ಟ್ರಪತಿ ಇರುವ ಜಾಗದಲ್ಲಿ ಪೊಲೀಸರು ಮತ್ತು ರೈತರು ಇಬ್ಬರಿಗೂ ನೋವಾಗಿದೆ ಎಂದು ಶಾಸಕ ಸಾ.ರಾ.ಮಹೇಶ್ ಬೇಸರ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೇಕ ದಿನಗಳಿಂದ ಹೋರಾಟ ಮಾಡುತ್ತಿರುವ ಕೆಲವು ರೈತರು ನಿನ್ನೆ ತಮ್ಮ ವ್ಯಾಪ್ತಿಯನ್ನು ಮೀರಿದ್ದಾರೆ. ಇದು ಪೊಲೀಸರ ವೈಫಲ್ಯ ಅಥವಾ ರೈತರ ದುಡುಕು ನಿರ್ಧಾರ ಅಂತಲೂ ಹೇಳಬಹುದು ಎಂದರು.

ಹೋರಾಟದ ಸಂದರ್ಭದಲ್ಲೂ ಪ್ರತಿಭಟನಾಕಾರರು ಸರ್ಕಾರದ ಆಸ್ತಿ ನಮ್ಮದು ಎಂಬುದನ್ನು ರೈತರು ಗಮನದಲ್ಲಿರಿಸಬೇಕಿತ್ತು. ಈ ಘಟನೆಯು ನಿಜಕ್ಕೂ ಖಂಡನೀಯ. ತನಿಖೆಯಿಂದ ಸತ್ಯ ಹೊರಬರಬೇಕು ಎಂದು ಒತ್ತಾಯಿಸಿದರು.

ಮೈತ್ರಿ ವಿಚಾರದಲ್ಲಿ ತಟಸ್ಥ‌ ನಿಲವು

ಪಾಲಿಕೆ ಮೈತ್ರಿ ವಿಚಾರದಲ್ಲಿ ತಟಸ್ಥವಾಗಿದ್ದೇವೆ. ಮೈತ್ರಿ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಮೀಸಲಾತಿ ಪ್ರಕಟವಾಗುವವರೆಗೂ ನಾವು ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದರು.

ಕಾಂಗ್ರೆಸ್‌ನ ನಗರ ಪಾಲಿಕೆ ಸದಸ್ಯರು, ಮಾಜಿ ಮಹಾಪೌರರು ನಡೆದುಕೊಂಡ ರೀತಿ ನಮ್ಮ ಗಮನಕ್ಕೆ ಬಂದಿದೆ. ಆದರೆ, ಇತರೆ ಕಾಂಗ್ರೆಸ್ ನಾಯಕರ ಜೊತೆ ನಮ್ಮ ಸಂಬಂಧ ಚನ್ನಾಗಿದೆ‌.

ಕೆಲವರ ನಡವಳಿಕೆಯಿಂದ ಪಕ್ಷವನ್ನು ದೂರೋಕೆ ಸಾಧ್ಯವಿಲ್ಲ. ಆದರೆ ಮೀಸಲಾತಿ ಪ್ರಕಟವಾದ ನಂತರ ನಮ್ಮ ಸದಸ್ಯರ ತೀರ್ಮಾನದಂತೆ ನಡೆದುಕೊಳ್ಳುತ್ತೇವೆ. ಎರಡು ಪಕ್ಷಗಳು ರಾಜಕೀಯವಾಗಿ ನಮ್ಮ ವಿರೋಧಿಗಳೇ, ಆದ್ದರಿಂದ ತಟಸ್ಥವಾಗಿ ಇರುತ್ತೇವೆ ಎಂದು ಅಭಿಪ್ರಾಯ ತಿಳಿಸಿದರು.

Share This Article
Leave a comment