ವಿಶ್ವ ಭೂಪಟದ ನಾಟಕವೆಂಬ ಪರದೆ ಸರಿಸಿದಾಗ ಭಾರತವೆಂಬ ರಂಗ ವೇದಿಕೆಯಲ್ಲಿ ನೇಗಿಲು ಹಿಡಿದು ತಲೆಗೆ ಹಸಿರು ರುಮಾಲು ಸುತ್ತಿದ ದಷ್ಟ ಪುಷ್ಟ ದೇಹದ ಮುಗ್ಧ ನಗುವಿನ ಸುಂದರ ರೈತನೊಬ್ಬ ಕಾಣಿಸುತ್ತಿದ್ದ…………
ಭಾರತದ ಜನಸಂಖ್ಯೆಯ ಶೇಕಡ 80% ಕ್ಕೂ ಹೆಚ್ಚು ಜನ ಅವಲಂಬಿತವಾಗಿದ್ದ ಕೃಷಿ ದೇಶದ ಜೀವನಾಡಿಯಾಗಿತ್ತು. ಅಷ್ಟೇ ಏಕೆ ರೈತರನ್ನು ದೇವರ ಅಪರಾವತಾರವೆಂದೇ ಪರಿಗಣಿಸಲಾಗಿತ್ತು.
ರೈತ ನಮ್ಮ ಬೆನ್ನೆಲುಬು – ಅನ್ನದಾತ – ಉಳುವ ಯೋಗಿ ಎಂದು ಹಾಡಿ ಹೊಗಳಲಾಗುತ್ತಿತ್ತು.
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲೆಲ್ಲೂ ಹಸಿರೋ ಹಸಿರು. ಗೋದಿ ಭತ್ತ ರಾಗಿ ಜೋಳ ನವಣೆ ಸಜ್ಜೆ ಮಾವು ತೆಂಗು ಅಡಿಕೆ ಕಾಫಿ ಚಹಾ ಹಣ್ಣುಗಳು ತರಕಾರಿಗಳು ಬೇಳೆಕಾಳುಗಳ ಸಮೃದ್ದತೆ ಇತ್ತು.
ಹಸಿರು ಕ್ರಾಂತಿಯಿಂದಾಗಿ ಆಹಾರದಲ್ಲಿ ಸ್ವಾವಲಂಬನೆ ಸಾಧಿಸಲಾಯಿತು. ಕ್ಷೀರಕ್ರಾಂತಿಯಿಂದಾಗಿ ಎಲ್ಲಾ ಕಡೆಯೂ ಹಾಲು ತುಪ್ಪಗಳು ಹರಿಯಲಾರಂಬಿಸಿತು.
ಇದರಿಂದಾಗಿ ರೈತ ಆರ್ಥಿಕವಾಗಿ ಬಲಾಢ್ಯನಾಗದಿದ್ದರು ನೆಮ್ಮದಿಗಂತೂ ಕೊರತೆ ಇರಲಿಲ್ಲ. ಈಗಿನಂತೆ ಆಗಲೂ ವೈಜ್ಞಾನಿಕ ಕೃಷಿ ಪದ್ದತಿ – ಬೆಲೆ ಇಲ್ಲದಿದ್ದರೂ ಫಸಲಿನ ಸಮೃದ್ದಿ, ಜನರ ಸರಳ ಜೀವನ ಶೈಲಿ, ಕಡಿಮೆ ನಿರೀಕ್ಷೆಗಳಿಂದ ರೈತರ ಬದುಕು ದುರ್ಬರವೇನೂ ಆಗಿರಲಿಲ್ಲ. ಬಡತನದಲ್ಲೂ ಸ್ವಾಭಿಮಾನದ ಬದುಕು ಸಾಧ್ಯವಾಗಿತ್ತು.
ಆದರೆ ವಿಶ್ವ ವ್ಯಾಪಾರ ಒಪ್ಪಂದದ ಫಲವಾಗಿ ಜಾಗತೀಕರಣಕ್ಕೆ ಸಹಿಹಾಕಿದ ನಂತರ ಭಾರತೀಯ ರೈತನ ಬದುಕಲ್ಲಿ ಮಹತ್ವದ ಬದಲಾವಣೆಗಳಾಗತೊಡಗಿದವು.
ವಾಸ್ತವವಾಗಿ ಜಾಗತೀಕರಣದ ಪ್ರಕ್ರಿಯೆಯಿಂದ ನಮ್ಮ ಆರ್ಥಿಕ ಅಭಿವೃದ್ಧಿ ಸರಾಗವಾಯಿತು ಆದರೆ ರೈತರ ಪಾಲಿಗೆ ಮರಣ ಶಾಸನವಾಯಿತು.
ನಿಜಕ್ಕೂ ಜಾಗತೀಕರಣ ಒಂದು ಅತ್ಯುತ್ತಮ ವಿಶ್ವ ವೇದಿಕೆ. ಮನುಜ ಮತ ವಿಶ್ವ ಪಥಕ್ಕೆ ನಾಂದಿ ಹಾಡಿದ ಕ್ರಿಯೆ. ಆರ್ಥಿಕವಾಗಿ ವಿಶ್ವವನ್ನೇ ಒಂದುಗೂಡಿಸಿ ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಉಂಟುಮಾಡಿ ಉತ್ತಮ ಗುಣಮಟ್ಟ ಕಾಪಾಡುವ ಕ್ರಮ ಅದು.
ಆದರೆ ಆ ಸ್ಪರ್ಧೆಗೆ ಸಿದ್ದವಿರದಿದ್ದ ಭಾರತದ ರೈತರ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಮಾನಸಿಕ ಹುಳುಕುಗಳು ಒಂದೊಂದಾಗಿ ಹೊರಬರತೊಡಗಿದವು. ಹೇಗೆಂದರೆ ಹಾಗೆ ಹಳೆಯ ಸಾಂಪ್ರದಾಯಿಕ ಶೈಲಿಯಲ್ಲಿ ಯಾವ ವೈಜ್ಞಾನಿಕ ಪೂರ್ವಸಿದ್ದತೆಯೂ ಇಲ್ಲದೆ ಮಳೆಯ ಮೇಲೆಯೇ ಬಹುತೇಕ ಅವಲಂಬಿತವಾಗಿ ಅದೃಷ್ಟ ಪರೀಕ್ಷೆಯಲ್ಲಿ ಬಚಾವಾಗುತ್ತಿದ್ದ ರೈತ ಭವಿಷ್ಯದ ಮುನ್ಸೂಚನೆ ಗ್ರಹಿಸಲು ವಿಫಲನಾದ.
ಭಾರತದ ರೈತರ ಈ ಮುಗ್ದತೆ + ಮೌಡ್ಯತೆ + ಅಜ್ಙಾನ ಅರ್ಥಮಾಡಿ ಕೊಂಡ ವಿಶ್ವ ವ್ಯಾಪಾರದ ದಲ್ಲಾಳಿಗಳು ಅದನ್ನು ಅತ್ಯಂತ ವ್ಯವಸ್ಥಿತವಾಗಿ ದುರುಪಯೋಗ
ಪಡಿಸಿಕೊಳ್ಳತೊಡಗಿದರು
ಬೀಜದಿಂದ ಹಿಡಿದು ಮಾರುಕಟ್ಟೆಯವರೆಗೆ ಹಿಡಿತ ಸಾಧಿಸಿ ಶೋಷಿಸತೊಡಗಿದರು. ರೈತರಿಗೆ ಕೃಷಿ ಮತ್ತು ಇತರ ಅವಲಂಬಿತ ಕೆಲಸಗಳು ಜೀವಾನಾವಶ್ಯಕ ಉದ್ಯೋಗವಾಗಿದ್ದರೆ ಈ ಬ್ರೋಕರುಗಳಿಗೆ ಹಣ ಮಾಡುವ ದಂಧೆಯಾಯಿತು.
ಇದಲ್ಲದೆ ಜಾಗತೀಕರಣದ ಪರಿಣಾಮ ಕೃಷಿ ಮತ್ತು ಕೃಷಿ ಅವಲಂಬಿತ ಕೆಲಸಗಳು ಕಡಿಮೆಯಾಗುತ್ತಾ ಸೇವಾವಲಯ ವಿಸ್ತಾರವಾಗತೊಡಗಿತು. ಹಣಕಾಸು ಬ್ಯಾಂಕಿಂಗ್ ಮೂಲ ಸೌಕರ್ಯ IT – BT ಮುಂತಾದ ವಲಯಗಳು ಅಭಿವೃದ್ಧಿಯಾದಂತೆ ರೈತರ ಮಕ್ಕಳು ಇತ್ತಕಡೆ ವಾಲತೊಡಗಿದರು. ಶೈಕ್ಷಣಿಕ ಪ್ರಗತಿಯೂ ಇದಕ್ಕೆ ಒಂದಷ್ಟು ಕಾರಣವಾಯಿತು.
ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮುಂಜಾಗರೂಕತೆ ವಹಿಸಬೇಕಾಗಿದ್ದ, ರೈತರನ್ನು ವಿಶ್ವಮಟ್ಟದ ಸ್ಪರ್ಧೆಗೆ ಸಜ್ಜುಗೊಳಿಸಬೇಕಿದ್ದ ನಮ್ಮ ರಾಜಕೀಯ ಮತ್ತು ಆಡಳಿತಾತ್ಮಕ ವ್ಯವಸ್ಥೆ ಭ್ರಷ್ಟಗೊಂಡಿತು.
ಭೂಮಿಯ ಫಲವತ್ತತೆಯಿಂದ ಹಿಡಿದು ಮಾರುಕಟ್ಟೆಯವರೆಗೆ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳಬೇಕಾಗಿದ್ದ ಸರ್ಕಾರ ನಿರ್ಲಕ್ಷಿಸಿತು. ಎಲ್ಲಾ ಕೃಷಿ ಚಟುವಟಿಕೆಗಳು ಕುಸಿಯತೊಡಗಿದವು.
ಮೊದಲೇ ಅನೇಕ ಮೌಢ್ಯ ಮತ್ತು ಅನವಶ್ಯಕ ದುಂದುವೆಚ್ಚಗಳ ದಾಸರಾಗಿದ್ದ ನಮ್ಮ ರೈತರು ಆಧುನಿಕತೆ ಮೈಗೂಡಿಸಿಕೊಳ್ಳದೆ ಸಾಮೂಹಿಕವಾಗಿ ವಿನಾಶದತ್ತ ಸರಿಯತೊಡಗಿದರು.
ಅಲ್ಲಿಂದ ಶುರುವಾಯಿತು ನೋಡಿ…..
ಈ ಕ್ಷಣದವರೆಗೂ ನಿಲ್ಲದ ರೈತರ ಆತ್ಮಹತ್ಯಾ ಸರಣಿ. ಸರ್ಕಾರದ ಯಾವ Package ಗಳೂ ಯಾವ ಭರವಸೆ ಗಳೂ ಇದನ್ನು ತಡೆಯಲಾಗುತ್ತಿಲ್ಲ. ಆಗುವುದೂ ಇಲ್ಲ.
ಏಕೆಂದರೆ ರೈತರ ಸಮಷ್ಟಿ ಪ್ರಜ್ಞೆಯ ಮೂಲಭೂತ ಅಂಶಗಳ ಬಗ್ಗೆ ಗಮನವೇ ಹರಿಸುತ್ತಿಲ್ಲ. ಕೇವಲ ತೇಪೆ ಹಾಕುವ ಕೆಲಸದಲ್ಲಿ ಮಾತ್ರ ಆಸಕ್ತಿ, ಅದೂ ಈ ಭ್ರಷ್ಟಗೊಂಡ ಅಧಿಕಾರಿಶಾಹಿಗಳ ಸಹಕಾರದೊಂದಿಗೆ.
ಉದಾಹರಣೆಗೆ ನೀವೇ ಊಹಿಸಿ. ಸುಮಾರು 5 ರಿಂದ 10 ವರ್ಷಗಳ ಕಾಲ ತಮ್ಮೆಲ್ಲಾ ಹಣ ಆಯಸ್ಸು ಶ್ರಮ ಹಾಕಿ ಬೆಳೆಸುವ ಒಂದು ಎಳನೀರಿಗೆ ರೈತನಿಗೆ ಸಿಗುವುದು 10/15 ರೂಪಾಯಿಗಳು. ನಿಂಬೆಹಣ್ಣು 10 ರೂಪಾಯಿಗೆ 2/3. ಸಾವಿರಾರು ಕಾಳುಗಳು ಸೇರಿ ಆಗುವ ಒಂದು ಕೆ.ಜಿ. ಅಕ್ಕಿ ಜೋಳ ರಾಗಿ ಗೋದಿ ಬೇಳೆಕಾಳುಗಳ ಬೆಲೆ 30/ 100/150. ಚಿಕ್ಕ ಚಿಕ್ಕ ಸೊಪ್ಪಿನ ಗಿಡಗಳ ಒಂದು ದೊಡ್ಡ ಕಟ್ಟಿಗೆ 10/20 ರುಗಳು.ಈ ಬೆಲೆಗೆ ಯಾವ ಆಧಾರವೋ ಗೊತ್ತಿಲ್ಲ. ರೈತ ಒಬ್ಬ ಮೂರ್ಖ ಶಿಖಾಮಣಿ ಎಂದು ವ್ಯವಸ್ಥೆ ಭಾವಿಸಿರಬಹುದೆ ?
ತುಟಿಗೆ ಹಚ್ಚುವ ರಾಸಾಯನಿಕ ಲೇಪಿತ ಆರೋಗ್ಯಕ್ಕೆ ಹಾನಿಕಾರಕ ಒಂದು ಲಿಪ್ ಸ್ಟಿಕ್ ಬೆಲೆ ಸಾವಿರಾರು ರೂಪಾಯಿಗೆ ಮಾರಾಟವಾಗುತ್ತದೆ.
ವಿಷ ಬೆರೆತ Cool drinks ಗಳು ಅತ್ಯಂತ ನಿರ್ಜನ ಪ್ರದೇಶ ಅಥವಾ Hill station ಗಳಲ್ಲೂ ಸಿಗುವ ಮಾರುಕಟ್ಟೆ ವ್ಯವಸ್ಥೆ ಇದೆ.
ತಮಾಷೆಗಾಗಿ ಹೇಳುವಂತೆ ಕಾಲಿಗೆ ಹಾಕುವ ಚಪ್ಪಲಿ AC ರೂಮಿನಲ್ಲಿ ಮಾರಾಟಮಾಡಲ್ಪಟ್ಟರೆ ಜೀವನಾವಶ್ಯಕ ತಿನ್ನುವ ಆಹಾರ ಬೀದಿಯ ಒಣ ಬಿಸಿಲಿನಲ್ಲಿ ಮಾರಲಾಗುತ್ತದೆ.
ಸಮಸ್ಯೆಗಳೇನೋ ಗಂಭೀರವಾಗಿವೆ. ಆದರೆ ಪರಿಹಾ?:
ಇದಕ್ಕೆ ಕೇವಲ ಯಾವುದೋ ಒಂದು ಅಥವಾ ಎರಡು ಅಂಶಗಳ ಮೇಲೆ ಗಮನ ಕೇಂದ್ರೀಕರಿಸಿ ರೈತರ ಈ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ. ಇದು ಅಮೂಲಾಗ್ರವಾಗಿ ಅವರ ಮಾನಸಿಕ ಸ್ಥಿತಿಯಿಂದ – ಮಾರುಕಟ್ಟೆಯಿಂದ ಸಿಗುವ ಲಾಭದ ಹಣದ ಸದುಪಯೋಗದವರೆಗೂ ಸಂಪೂರ್ಣ ಜಾಗೃತಿ ಮತ್ತು ಅರಿವು ಮೂಡಿಸಬೇಕು. ವ್ಯವಸ್ಥೆಯ ಎಲ್ಲಾ ಮಗ್ಗುಲುಗಳಲ್ಲೂ ಸುಧಾರಣೆ ತರಬೇಕು.
ಕೇವಲ ಜೈಕಿಸಾನ್ ಘೋಷಣೆಯಾಗಬಾರದು .
ಅದು ಪ್ರತಿಯೊಬ್ಬ ಭಾರತೀಯರ ನಡವಳಿಕೆಯಾಗಬೇಕು. ಆಗ ಮಾತ್ರ ತಿನ್ನುವ ಪ್ರತಿ ಅಗುಳಿನ ಋಣ ತೀರಿಸಿದಂತೆ ಆಗುತ್ತದೆ……
ಆ ದಿನಗಳ ನಿರೀಕ್ಷೆಯಲ್ಲಿ ನಿಮ್ಮೊಂದಿಗೆ…
ವಿವೇಕಾನಂದ. ಹೆಚ್.ಕೆ
More Stories
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ
ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ