January 10, 2025

Newsnap Kannada

The World at your finger tips!

kati

ಪರಿಶಿಷ್ಟರಿಗೆ ಕಟಿಂಗ್ ಮಾಡಿದ್ದಕ್ಕೆ ಬಹಿಷ್ಕಾರದ ಶಿಕ್ಷೆ..! ದಂಡಕ್ಕೆ ಹೆದರಿ ಕಂಗಾಲಾದ ಕ್ಷೌರಿಕರ ಕುಟುಂಬ

Spread the love

ಆ ಊರಿನಲ್ಲಿ ಇವತ್ತಿಗೂ ಕೂಡ ಸಾಮಾಜಿಕ ಬಹಿಷ್ಕಾರದ ಪಿಡುಗು ಜೀವಂತವಾಗಿದೆ. ಒಂದು ಕುಟುಂಬವನ್ನೇ ಊರಿನಿಂದ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಬಹಿಷ್ಕಾರದ ಜೊತೆಗೆ 50 ಸಾವಿರ ದಂಡ ಹಾಕಿದ ಊರಿನ ಮುಖಂಡರ ನಿರ್ಣಯಕ್ಕೆ ಬೇಸತ್ತು ಇದೀಗ ಆ ನೊಂದ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾರೆ.

ಅಷ್ಟಕ್ಕು ಈ ಬಹಿಷ್ಕಾರ ಹಾಕಿದ್ದು, ಕೇವಲ ಪರಿಶಿಷ್ಟ ಜಾತಿ ವರ್ಗದ ಜನರಿಗೆ ಕಟಿಂಗ್ ಶೇವಿಂಗ್ ಮಾಡಿದ್ದಾರೆ ಎಂಬ ಕಾರಣಕ್ಕೆ.

ಮಲ್ಲಿಕಾರ್ಜುನ ಶೆಟ್ಟಿ ಮೂಲತಃ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದ ನಿವಾಸಿ. ಈ ವ್ಯಕ್ತಿಗೆ ತನ್ನದೆ ಗ್ರಾಮದಿಂದ ಬಹಿಷ್ಕಾರ ಹಾಕಿ ಅಮಾನವೀಯತೆಯನ್ನ ಪ್ರದರ್ಶನ ಮಾಡಲಾಗಿದೆ. ಇದರಿಂದ ಮನನೊಂದ ಮಲ್ಲಿಕಾರ್ಜುನ ಅವರು ತಾಲೂಕು  ಅಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಅಲ್ಲದೆ, ಆತ್ಮಹತ್ಯೆ ನಿರ್ಧಾರಕ್ಕೆ ಮುಂದಾಗಿದ್ದಾರೆ.

ವೃತ್ತಿಯಲ್ಲಿ ಕ್ಷೌರಿಕರಾಗಿರುವ ಮಲ್ಲಿಕಾರ್ಜುನ ಅವರು ದಲಿತ ವರ್ಗದವರಿಗೆ ಕಟ್ಟಿಂಗ್ ಹಾಗೂ ಶೇವಿಂಗ್ ಮಾಡಿದ್ರು ಎಂಬ ನೆಪ ಹೇಳಿ ಊರಿನ ಮುಖಂಡರು ಗ್ರಾಮದಿಂದ ಬಹಿಷ್ಕಾರ ಹಾಕಿ 50ಸಾವಿರ ದಂಡ ವಿಧಿಸಿದ್ದಾರೆ. ಇದರಿಂದ ನೊಂದ ಮಲ್ಲಿಕಾರ್ಜುನ ಅಧಿಕಾರಿಗಳ ಬಳಿ ಸಮಸ್ಯೆ ಪರಿಹಾರಕ್ಕಾಗಿ ಅಲೆದಾಡಿ ಸುಸ್ತಾಗಿ ಇದೀಗಾ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ.

ಸಣ್ಣ ಪುಟ್ಟ ಅಧಿಕಾರಿಗಳನ್ನು ಭೇಟಿಯಾಗಿ ಯಾವುದೇ ಪ್ರಯೋಜನ ಇಲ್ಲದಿದ್ದರು ಕೊನೆ ಪ್ರಯತ್ನ ಎಂಬಂತೆ ತಹಶಿಲ್ದಾರ್ ಅವರ ಬಳಿ ಮನವಿ ಮಾಡಿ ತಮ್ಮ ಅಳಲನ್ನ‌ ತೋಡಿಕೊಂಡಿದ್ದಾರೆ.

ಗ್ರಾಮದಲ್ಲಿ ಚೆನ್ನನಾಯಕ ಹಾಗೂ ಅವರ ಸಹಚರರಿಂದ ಈ ಕೃತ್ಯ ನಡೆದಿದ್ದು, ತಮ್ಮ ಮಾತು ಕೇಳಲಿಲ್ಲ ಅಂತ ಮಲ್ಲಿಕಾರ್ಜುನಗೆ ಬಹಿಷ್ಕಾರ ಹಾಕಿದ್ದಾರೆ. ಆದ್ರೆ ಇನ್ನೂ ಸಹ ಬಹಿಷ್ಕಾರ ಹಾಗೂ ದಂಡ ವಿಧಿಸುವ ಪದ್ಧತಿಯಿಂದ ಆಕ್ರೋಶಗೊಂಡ ತಾಲ್ಲೂಕು ದಸಂಸ ವೇದಿಕೆ ಮಲ್ಲಿಕಾರ್ಜುನರ  ಜೊತೆಯಾಗಿ ನಿಂತಿದೆ.

ತಹಶಿಲ್ದಾರ್ ಕಚೇರಿಗು ಆಗಮಿಸಿ ಸಮಸ್ಯೆ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಿದೆ. ತಹಶಿಲ್ದಾರ್ ಮಹೇಶ್ ಪೊಲೀಸ್ ಇಲಾಖೆಗೆ ಪತ್ರ ಬರೆದು ಕೂಡಲೇ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. ಸದ್ಯ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾವಣೆ ಆಗಿದ್ದು, ನ್ಯಾಯ ಸಿಗಬೇಕು ಅಂತ ದಸಂಸ ವೇದಿಕೆ ಮುಖಂಡರು ಆಗ್ರಹಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!