ಬೆಂಗಳೂರು ವಿಶ್ವವಿದ್ಯಾಲಯದಲ್ಲಿನ 32 ಎಕರೆಯಷ್ಟು ಪ್ರದೇಶವನ್ನು ಯೋಗ ವಿವಿ ಮತ್ತು ಇನ್ನೂ ಎರಡು ಸಂಸ್ಥೆಗಳಿಗೆ ನೀಡಲು ಒಪ್ಪಿರುವ ವಿವಿ ಆಡಳಿತ ಮಂಡಳಿ ಹಾಗೂ ಸರ್ಕಾರದ ನಿರ್ಧಾರವನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿರೋಧಿಸಿದ್ದಾರೆ.
‘ಯೋಗ ವಿ.ವಿ.ಗೆ 15 ಎಕರೆ, ಗುಲ್ಬರ್ಗಾ ವಿ.ವಿ.ಗೆ 15 ಎಕರೆ, ಸಿ.ಬಿ.ಎಸ್.ಸಿ. ದಕ್ಷಿಣ ಭಾರತದ ಕಚೇರಿಗೆ 2 ಎಕರೆಗಳ ಪ್ರದೇಶವನ್ನು ನೀಡಲು ಸರ್ಕಾರ-ವಿವಿ ನೀಡಲು ಮುಂದಾಗಿವೆ. ಬೆಂಗಳೂರು ವಿವಿ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಕಳೆದ 20 ವರ್ಷಗಳಲ್ಲಿ ನಿರ್ಮಾಣ ಮಾಡಿರುವ ಜೀವವೈವಿಧ್ಯ ವನದ ಪ್ರದೇಶ ಇದಾಗಿದೆ. ಈಗ ಬೇರೆ ಸಂಸ್ಥೆಗಳನ್ನು ಕಟ್ಟಲು ಕೊಟ್ಟರೆ ಅಲ್ಲಿರುವ ಅಪೂರ್ವ ಸಸ್ಯ ಸಂಪತ್ತು, ಜೀವ ವೈವಿಧ್ಯತೆ ನಾಶವಾಗುತ್ತದೆ. ಹಾಗಾಗಿಯೇ ಪರಿಸರ ತಜ್ಞ ಯಲ್ಲಪ್ಪ ರೆಡ್ಡಿಯವರು ಸರ್ಕಾರ ನೀಡಿದ ಗೌರವ ಡಾಕ್ಟರೇಟ್‌ನ್ನು ಮರಳಿಸಿ ತಮ್ಮ ಸಿಟ್ಟನ್ನು ಪ್ರದರ್ಶಿಸಿದ್ದಾರೆ’ ಎಂದು ಹೆಚ್‌ಡಿಕೆ ಸರಣಿ ಟ್ವೀಟ್ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಜೀವ ವೈವಿಧ್ಯಕ್ಕೆ ಕುತ್ತು ತರುವಂತಹ ಇಂತಹ ನಿರ್ಧಾರವನ್ನು ಸರ್ಕಾರ ಯಾರೊಂದಿಗೂ ಸಮಾಲೋಚಿಸದೇ ಏಕಾಏಕಿ ತೆಗೆದುಕೊಂಡಿದೆ. ಹಿಂದೆ ವಿವಿಯ ಉಪಕುಲಪತಿಗಳಾಗಿದ್ದ ಡಾ.ಕೆ. ಸಿದ್ದಪ್ಪನವರು ಈ ಪ್ರದೇಶ ಒಂದು ಬಯಲು ಪ್ರದೇಶವಾಗಲಿ ಎಂದು ಚಾಲನೆ ನೀಡಿದ್ದರು. ಹಾಗಾಗಿ ಇಂದು ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಭೂಗರ್ಭಶಾಸ್ತ್ರ, ಪರಿಸರ ವಿಜ್ಞಾನ, ಸಾಮಾಜಿಕ ವಿಜ್ಞಾನಗಳ ವಿದ್ಯಾರ್ಥಿಗಳಿಗೆ ಇದೊಂದು ಬಯಲು ಪ್ರಯೋಗಾಲಯವಾಗಿ ನೂರಾರು ಸಂಶೋಧನೆಗಳು ನಡೆಯುತ್ತಿವೆ. ಆದರೆ ಸರ್ಕಾರ ಇದನ್ನು ಕಾಂಕ್ರೀಟ್ ಕಾಡು ಮಾಡಲು ಹೊರಟಿದೆ. ಜೀವ ವೈವಿಧ್ಯತೆಯ ತಾಣವನ್ನು ಉಳಿಸಿ, ಬೆಳಸಬೇಕಾಗಿದೆ’ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
More Stories
ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು