January 5, 2025

Newsnap Kannada

The World at your finger tips!

ml

ಮೈಸೂರಿನಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ

Spread the love

ಕೋವಿಡ್‌–19 ಪಿಡುಗಿನ ವಿರುದ್ಧ ದೇಶವ್ಯಾಪಿ ಮೊದಲ ಹಂತದ ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಿದರು.

ml1

ಕೋವಿಡ್‌ ಲಸಿಕೆ ಅಭಿಯಾನಕ್ಕೆ ಚಾಲನೆ ದೊರಕಿದ ಬಳಿಕ ಮೈಸೂರು ಜಿಲ್ಲೆಯಲ್ಲಿ ಮೊದಲ ದಿನ 9 ಕೇಂದ್ರಗಳಲ್ಲಿ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಯಿತು.

ಮೈಸೂರಿನ ಪಿಕೆಟಿಬಿ ಆಸ್ಪತ್ರೆ ಆವರಣದಲ್ಲಿರುವ ಟ್ರಾಮಾ ಕೇರ್ ಸೆಂಟರ್‌ನಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಉಪಸ್ಥಿತಿಯಲ್ಲಿ ಮೊದಲಿಗೆ ಸಾಂಕೇತಿಕವಾಗಿ ಮೂವರಿಗೆ ಲಸಿಕೆ ನೀಡಲಾಯಿತು.

ಈ ವೇಳೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಮಾತನಾಡಿ, ಕೋವಿಡ್-19 ಪಿಡುಗಿಗೆ ಲಸಿಕೆ ದೊರಕಿದ್ದು, ಭಾರತದ ಕಂಪನಿ ಸಿದ್ಧಪಡಿಸಿರುವುದು ಸಂತೋಷದ ವಿಚಾರ. ಪ್ರಧಾನಿ ಮಂತ್ರಿಗಳು ಇಂದು ಚಾಲನೆ ನೀಡಿದ್ದು, ದೇಶದ ಎಲ್ಲ ಭಾಗಗಳಲ್ಲಿಯೂ ಲಸಿಕೆ ನೀಡಿಕೆ ಕಾರ್ಯಕ್ರಮ ಶನಿವಾರ ಪ್ರಾರಂಭವಾಗಿದೆ ಎಂದರು.

ml2

ಮೈಸೂರಿಗೆ 36,000 ಲಸಿಕೆ ಬೇಡಿಕೆ ಇದ್ದು, ಸದ್ಯದಲ್ಲಿ 20,500 ಡೋಸ್ ಲಸಿಕೆ ಬಂದಿದೆ. ಮೊದಲ ಹಂತದಲ್ಲಿ ಕೋವಿಡ್ ಲಸಿಕೆಯನ್ನು ನೋಂದಾಯಿತ ಆರೋಗ್ಯ ಕಾರ್ಯಕರ್ತರಿಗೆ, ಡಿ ಗ್ರೂಪ್ ನೌಕಕರಿಗೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಎರಡನೇ ಹಂತದಲ್ಲಿ ಲಸಿಕೆ ನೀಡಲು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅದರಲ್ಲಿ ಪೌರಕಾರ್ಮಿಕರು, ಕಂದಾಯ ಅಧಿಕಾರಿಗಳು ಹಾಗೂ ಪೊಲೀಸ್ ಸಿಂಬಂಧಿಗಳಿಗೆ ನೀಡಲಾಗವುದು‌. ಇದಾದ ನಂತರ ಹಂತಹಂತವಾಗಿ ಸಾರ್ವಜನಿಕರಿಗೆ ನೀಡಲಾಗುತ್ತದೆ ಎಂದರು.

ಗ್ರೂಪ್ ಡಿ ನೌಕರರಾದ ಸಂದೇಶ್, ಪಿಕೆಟಿಬಿ ಆಸ್ಪತ್ರೆ ಅಧೀಕ್ಷಕ ಡಾ.ವಿರೂಪಾಕ್ಷ, ವಿವೇಕಾನಂದ ಮೆಮೊರಿಯಲ್ ಆಸ್ಪತ್ರೆಯ ಸಂಸ್ಥಾಪಕ ಡಾ.ಆರ್.ಬಾಲಸುಬ್ರಹ್ಮಣ್ಯಂ ಅವರು ಮೊದಲಿಗೆ ಸಾಂಕೇತಿಕವಾಗಿ ಲಸಿಕೆ ಪಡೆದುಕೊಂಡರು.

ಲಸಿಕೆ ಪಡೆದುಕೊಂಡ ವಿವೇಕಾನಂದ ಮೆಮೊರಿಯಲ್ ಆಸ್ಪತ್ರೆಯ ಸಂಸ್ಥಾಪಕ ಡಾ.ಆರ್.ಬಾಲಸುಬ್ರಹ್ಮಣ್ಯಂ ಅವರು ಮಾತನಾಡಿ, ನಾನು ಒಬ್ಬ ವೈದ್ಯನಾಗಿ ಜನರಿಗೆ ಅರಿವು ಮೂಡಿಸಲು ಇಂದು ಲಸಿಕೆ ಪಡೆದುಕೊಂಡಿದ್ದೇನೆ. ನನಗೆ ಯಾವುದೇ ಅಡ್ಡ ಪರಿಣಾಮ ಬೀರಿಲ್ಲ. ಲಸಿಕೆ ಪಡೆದುಕೊಳ್ಳುವ ವಿಚಾರದಲ್ಲಿ ಅನೇಕರಿಗೆ ಗೊಂದಲವಿದ್ದು, ಯಾರೂ ಭಯ ಪಡಬಾರದು ಎಂದು ತಿಳಿಸಿದರು.

ಆತಂಕ ಪಡುವ ಅಗತ್ಯವಿಲ್ಲ: ಶಾಸಕ ಎಲ್.ನಾಗೇಂದ್ರ

ಲಸಿಕಾ ನೀಡುವ ಸ್ಥಳಕ್ಕೆ ಆಗಮಿಸಿದ ಶಾಸಕ ಎಲ್.ನಾಗೇಂದ್ರ ಅವರು, ಲಸಿಕಾ ಪ್ರಕ್ರಿಯೆಯನ್ನು ವೀಕ್ಷಿಸಿದರು. ಲಸಿಕೆ ಪಡೆದವರೊಂದಿಗೆ ಮಾತನಾಡಿ, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಧೈರ್ಯ ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಪರಮೇಶ್, ಎಂಎಂಸಿ & ಆರ್‌‌ಐ ಡೀನ್ ಡಾ.ಸಿ.ಪಿ.ನಂಜರಾಜ್, ವಿಭಾಗೀಯ ಸಹ ನಿರ್ದೇಶಕ ಡಾ.ಉದಯ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣಾಧಿಕಾರಿ ಡಾ.ಟಿ.ಅಮರನಾಥ್, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ರಾಜೇಶ್ವರಿ, ಆರ್‌ಸಿಎಚ್‌ಒ ಡಾ.ಎಲ್.ರವಿ ಇನ್ನಿತರರು ಉಪಸ್ಥಿತರಿದ್ದರು.

Copyright © All rights reserved Newsnap | Newsever by AF themes.
error: Content is protected !!