Editorial

ಕೃಷಿಕನೊಬ್ಬನ ಕನವರಿಕೆ………,

ನನ್ನ ಹುಟ್ಟಿಸಿದ ನೋವಿಗೇ ನನ್ನಮ್ಮ ತೀರಿಕೊಂಡಿದ್ದಳು. ಅಮ್ಮನನ್ನು ಕೊಂದ ಪಾಪಿ ಎನ್ನುವ ಅಪವಾದ ಹೊತ್ತೇ ಜನಿಸಿದೆನು. ಅಮ್ಮ, ಅಮ್ಮನ ಎದೆ ಹಾಲು, ಅಮ್ಮನ ಕ್ಯೆತುತ್ತು, ಅಮ್ಮನ ಪ್ರೀತಿ ಇಂದಿಗೂ ಅನುಭವವೇ ಆಗಿಲ್ಲ. ಆದರೆ ಅಪ್ಪನಲ್ಲದೆ ಇನ್ನೊಂದು ಸಂಬಂಧವೇ ನನಗೆ ತಿಳಿದಿಲ್ಲ.

ನನ್ನ ಬೆಳಗು, ನನ್ನ ಸ್ನಾನ, ನನ್ನ ತಿಂಡಿ,
ನನ್ನ ಊಟ, ನನ್ನ ಅಳು, ನನ್ನ ನಗು,
ನನ್ನ ಕೋಪ, ನನ್ನ ಸ್ಹೇಹಿತ, ನನ್ನ ಶತ್ರು, ನನ್ನ ನಿದ್ದೆ ಎಲ್ಲವೂ ಅಪ್ಪನೆ.

ನನ್ನ ಬಾಲ್ಯದಲ್ಲಿ ನಾಯಿ, ಬೆಕ್ಕು, ಇಲಿ, ಹಸು, ಕುರಿ, ಕೋಳಿ, ಬಿಟ್ಟರೆ ನಾನು ನೋಡಿದ, ಪ್ರೀತಿಸಿದ ಒಂದೇ ಪ್ರಾಣಿ ಅಪ್ಪ.

ಚಿಕ್ಕ ವಯಸ್ಸಿನಲ್ಲಿಯೇ ಅಮ್ಮ ಸತ್ತರೂ ಅಪ್ಪ ನನಗಾಗಿ ಇನ್ನೊಂದು ಮದುವೆಯಾಗಲಿಲ್ಲ. ನನ್ನಪ್ಪ ಶ್ರೀಮಂತನಲ್ಲ. ಹಳ್ಳಿಯ ಬಡ ರೈತ. ಶಾಲೆಯನ್ನು ನೋಡಿದ್ದು ಮಾತ್ರ ಗೊತ್ತು, ಓದಿದ್ದು ಇಲ್ಲವೇ ಇಲ್ಲ. ಆದರೆ ಅಗಾಧ ಪ್ರೀತಿಯ ಸಮುದ್ರ, ಮಾನವೀಯತೆಯ ಪರ್ವತ. ನನ್ನನ್ನು ಚೆನ್ನಾಗಿ ಓದಿಸಿ ಕೃಷಿ ವಿಜ್ಞಾನಿ ಮಾಡಬೇಕೆಂಬ ಮಹದಾಸೆ.

ನನ್ನ ಶಾಲೆಯ ಪ್ರಾರಂಭದ ದಿನಗಳಲ್ಲಿ ನನ್ನೊಂದಿಗೆ ಅಪ್ಪನೂ ಶಾಲೆಗೆ ಬರುತ್ತಿದ್ದ. ನನ್ನನ್ನು ಒಂದು ಕ್ಷಣವೂ ಬಿಟ್ಟಿರಲಾರದ ಅಪ್ಪನನ್ನು ಊರ ಜನ ಮಗನ ಖಾಯಿಲೆಯ ಹುಚ್ಚನೆಂದೇ ತಮಾಷೆ ಮಾಡುತ್ತಿದ್ದರು. ಶಾಲೆಯ ಗೇಟಿನ ಬಳಿ ಗಂಟೆ ಗಟ್ಟಲೆ ಕಾದು ಕುಳಿತಿರುತ್ತಿದ್ದ ಅಪ್ಪ ಮಧ್ಯಾಹ್ನದ ಊಟ ತಿನ್ನಿಸುತ್ತಿದ್ದುದು ನೋಡುಗರಿಗೆ ಮನರಂಜನೆಯಾಗಿತ್ತು.ಇದು ಕ್ರಮೇಣ ಕಡಿಮೆಯಾಯಿತು.

ಬೇರೆಲ್ಲರೂ ತಮ್ಮ ಮಕ್ಕಳು ಇಂಜಿನಿಯರ್‌, ಡಾಕ್ಟರ್, ಆಕ್ಟರ್ ಆಗಲಿ ಎಂದು ಇಷ್ಟ ಪಟ್ಟರೆ ನನ್ನಪ್ಪ ಶಾಲೆಯ ಎಲ್ಲಾ ಶಿಕ್ಷಕರಿಗೆ ನನ್ನ ಮಗನನ್ನು ಕೃಷಿ ವಿಜ್ಞಾನಿ ಮಾಡುವುದಾಗಿ ಹೇಳಿ ನಗೆಪಾಟಲಿಗೀಡಾಗುತ್ತಿದ್ದ. ನನ್ನನ್ನು ಮರಿ ವಿಜ್ಞಾನಿ ಎಂದು ಎಲ್ಲರೂ ತಮಾಷೆ ಮಾಡುತ್ತಿದ್ದರು. ನನಗೆ ಏನೂ ಗೊತ್ತಾಗುತ್ತಿರಲಿಲ್ಲ. ಆದರೆ ನಮ್ಮಪ್ಪನ ಆಸೆಯಂತೆ ಆಗಬೇಕು ಎಂದು ಛಲ ಮೂಡುತ್ತಿತ್ತು.

ಯಾರಾದರೂ ನಮ್ಮಪ್ಪನನ್ನು ಏಕವಚನದಲ್ಲಿ ಮಾತನಾಡಿಸಿದರೆ ಅವರನ್ನು ಕೊಲ್ಲುವಷ್ಟು ಕೋಪ ಬರುತ್ತಿತ್ತು. ನಾನು ತುಂಬಾ ತುಂಟ. ಬಾಲ್ಯದಲ್ಲಿ ನಮ್ಮಪ್ಪನನ್ನು ನಾನು ಹೊಡೆಯುತ್ತಿದ್ದೆ. ಅವರೆಂದೂ ನನ್ನ ಮೇಲೆ ಕ್ಯೆ ಮಾಡಲಿಲ್ಲ.

ಒಳ್ಳೆಯ ಅಂಕಗಳೊಂದಿಗೆ SSLC ಪಾಸಾದೆ. ಅಪ್ಪ ಶಾಲೆಯ ಮುಖ್ಯೋಪಾಧ್ಯಾಯರ ಸಹಾಯದಿಂದ ವಿಜ್ಞಾನ ವಿಷಯ ಕೊಡಿಸಿದ. PUC ನಂತರ BSC (AGRICULTURE) ,
MSC (AGRICULTURE) ,
ಮುಂದೆ “ಕೃಷಿ ಮತ್ತು ರೈತ”
ಎಂಬ ವಿಷಯದಲ್ಲಿ PHD ಮಾಡಿ ಕೃಷಿ ವಿಜ್ಞಾನಿಯೇನೋ ಆದೆ.

ನಾನೇನೂ ಇಂದು ರಾಜ್ಯದ ಪ್ರಮುಖ ಕೃಷಿ ವಿಜ್ಞಾನಿ. ಆದರೆ ಅಪ್ಪ,…………

ಕೇಳಿ, ಆ ರೈತ ಬದುಕಿನ ತಿರುವುಗಳನ್ನು……..

ನನ್ನನ್ನು ಕಾಲೇಜಿಗೆ ಸೇರಿಸಲು ಅಪ್ಪ ಇದ್ದ ಎರಡು ಎಕರೆ ಜಮೀನನ್ನು ಮಾರಿದ. ನನ್ನ ಮೇಲಿನ ಪ್ರೀತಿಗೆ ಒಳ್ಳೆಯ ಹಾಸ್ಟೆಲ್ಗೆ ಸೇರಿಸಿ ತಿಂಗಳು, ತಿಂಗಳು ಅದರ ವೆಚ್ಚಕ್ಕೆ ಬೇರೆಯವರ ಜಮೀನಿನಲ್ಲಿ ಕೂಲಿ ಮಾಡಿದ. ನನ್ನ ಬಟ್ಟೆ, ಪುಸ್ತಕ, ಖರ್ಚಿಗೆ ಹೆಚ್ಚಿನ ಬಡ್ಡಿಗೆ ಸಾಲ ಮಾಡಿದ.

ಯಾವ ಕಷ್ಟಗಳೂ ನನಗೆ ಗೊತ್ತಾಗದಂತೆ, ಅದರ ಸುಳಿವೂ ದೊರೆಯದಂತೆ ಬೃಹತ್ ನಾಟಕ ಮಾಡಿದ. ನನ್ನನ್ನು ಅಕ್ಷರ ಬಲ್ಲ ಪೆದ್ದನಂತೆ ಮಾಡಿದ. ನನ್ನನ್ನು ಹೆಚ್ಚಾಗಿ ಊರ ಕಡೆ ಬರದಂತೆ ತಡೆದ. ಪತ್ರಗಳು, ಪೋನ್ ನಲ್ಲೇ ಕಾಲ ತಳ್ಳಿದ.

ಒಮ್ಮೆ ಎಂದಿನಂತೆ ಪರಿಚಿತರ ಬಳಿ ಬರೆಸಿದ ಪತ್ರ ತಲುಪಿತು …….

” ಕಂದ, ನೀನೀಗ ರೈತರು ಮತ್ತು ಅವರ ಸಮಸ್ಯೆಗಳ ಬಗ್ಗೆ ಸಂಶೋದನೆ ಮಾಡಲು ಆಯ್ಕೆಯಾಗಿರುವೆಯಂತೆ. ಅದರ ಎಲ್ಲಾ ಖರ್ಚು ವೆಚ್ಚಗಳನ್ನು ಸರ್ಕಾರವೇ ನೋಡಿಕೊಳ್ಳುವುದಂತೆ. ಇದನ್ನು ಕೇಳಿ ನನ್ನ ಬದುಕು ಸಾರ್ಥಕವಾಯಿತು. ನನ್ನ ಸಂತೋಷಕ್ಕೆ ಪಾರವೇ ಇಲ್ಲ. ನನ್ನ ಆಸೆ ಈಡೇರಿತು.

ಕಂದ, ರೈತರೇ ಈ ದೇಶದ ಬೆನ್ನೆಲುಬು. ಅಂತಹ ರೈತ ಇವತ್ತು ತುತ್ತು ಕೂಳಿಗೂ ಇಲ್ಲದೆ ಸಾಯುತ್ತಿದ್ದಾನೆ. ಸ್ವಾಭಿಮಾನ, ಸಂಸ್ಕೃತಿಯ ಸಂಕೇತವಾದ ಆತ ನಾಶವಾಗುತ್ತಿದ್ದಾನೆ. ನೀನು ನಿನ್ನ ಇಡೀ ಬದುಕನ್ನು ಅವರಿಗಾಗಿ ಮೀಸಲಿಡು. ರೈತರ ಜೀವನಮಟ್ಟ ಸುಧಾರಿಸಲು ನಿನ್ನ ಇಡೀ ಓದು ಸಂಶೋಧನೆ, ಆಯಸ್ಸು ಉಪಯೋಗಿಸು. ಅದು ನೀನು ನನಗೆ ಕೊಡುವ ಬಹುದೊಡ್ಡ ಕಾಣಿಕೆ.

ನಿನ್ನ ಹಣ ಅಂತಸ್ತು ನನಗೆ ಬೇಡ.
ಕಂದ ನಿನ್ನಿಂದ ಮುಚ್ಚಿಟ್ಟಿದ್ದ ಒಂದು ವಿಷಯ ಹೇಳಿ ನನ್ನ ಪತ್ರ ಮುಗಿಸುತ್ತೇನೆ.

ನನ್ನನ್ನು ಕ್ಷಮಿಸು. ನಿನ್ನನ್ನು ಓದಿಸಲು ನಾನು ಮಾಡಿದ ಸಾಲ ಇಂದು ನನಗೆ ಉರುಳಾಗಿದೆ. ಏನೇ ಮಾಡಿದರೂ ಅದನ್ನು ತೀರಿಸಲಾಗುತ್ತಿಲ್ಲ. ಬಡ್ಡಿ ಬೆಳೆಯುತ್ತಿದೆ. ನೀನು ಸಂಶೋದನೆ ಮುಗಿಸಿ ಹಣ ಸಂಪಾದಿಸಲು ಸಮಯ ಹಿಡಿಯುತ್ತದೆ. ಈ ಜನರ ಕಾಟ ತಡೆಯಲಾಗುತ್ತಿಲ್ಲ. ನೋವು, ಅವಮಾನ ಸಹಿಸಲಾಗುತ್ತಿಲ್ಲ. ಆದರೂ ಸುಮ್ಮನಿದ್ದೆ.

ಆದರೆ ಈ ಜನ ನಾನು ಮಾಡಿದ ಸಾಲಕ್ಕಾಗಿ ಈಗ ನಿನ್ನ ಕಾಲೇಜಿನ ಬಳಿ ಬಂದು ಗಲಾಟೆ ಮಾಡುವ ಯೋಚನೆಯಲ್ಲಿದ್ದಾರೆ. ಏನು ಮಾಡಲು ತೋಚುತ್ತಿಲ್ಲ. ನೀನು ದ್ಯೆರ್ಯವಾಗಿರು. ಗುರಿ ಮುಟ್ಟುವ ಛಲ ಇರಲಿ. ಈ ವಿಷಯ ನಿನಗೆ ತೊಂದರೆ ಆಗದಂತೆ ನಾನು ವ್ಯವಸ್ಥೆ ಮಾಡುತ್ತೇನೆ.
ಇಂತಿ,
ನಿನ್ನ ಉಸಿರಾದ ನಿನ್ನಪ್ಪ.

ಪತ್ರ ಬಂದಾಗ ನಾನು COLLEGE CAMPUS ನಲ್ಲಿದ್ದೆ. ಮನಸ್ಸು ತಡೆಯಲಾಗಲಿಲ್ಲ. ತಕ್ಷಣ ಊರಿಗೆ ಹೋಗಿ ನಮ್ಮಪ್ಪನನ್ನು ಎಷ್ಟೇ ಕಷ್ಟ ಆದರೂ ಇಲ್ಲಿಗೆ ಕರೆದುಕೊಂಡು ಬಂದು ನನ್ನ ಬಳಿಯೇ ಇರಿಸಿಕೊಳ್ಳುವುದು ಎಂದು ನಿರ್ಧರಿಸಿ ಪೋನ್ ಸಹ ಮಾಡದೆ ಬಸ್ಸು ಹತ್ತಿದೆ. ಫೋನ್ ಮಾಡಿದರೆ ಏನಾದರೂ ನೆಪ ಹೇಳಿ ತಪ್ಪಿಸಿಕೊಳ್ಳುವ ಸಾಧ್ಯತೆಯಿತ್ತು.

ಬಸ್ಸು ಹತ್ತಿದ ಹತ್ತೇ ನಿಮಿಷಕ್ಕೆ ಆ ಕಡೆಯಿಂದ ಪೋನ್. ಅಷ್ಟೇ ಗೊತ್ತಿರುವುದು. ನನಗೆ ಪ್ರಜ್ಞೆ ಬಂದಾಗ ಆತ್ಮಹತ್ಯೆ ಮಾಡಿಕೊಂಡ ಅಪ್ಪನ ಶವದ ಮುಂದೆ ನಿಂತಿದ್ದೆ.

ಶವವಾಗಿದ್ದು ಅಪ್ಪನೋ,
ಈ ವ್ಯವಸ್ಥೆಯೋ,
ಅಥವಾ ನಾನೋ,
ಇಂದಿಗೂ ತಿಳಿಯುತ್ತಿಲ್ಲ.
ಇದು ನಡೆದು ಹತ್ತು ವರ್ಷವಾದರೂ ನನ್ನ ಕಣ್ಣೀರು ಇನ್ನೂ ನಿಂತಿಲ್ಲ.

ಪ್ರತಿ ಆತ್ಮಹತ್ಯೆ ಮಾಡಿಕೊಳ್ಳುವ ರೈತರು ನಮ್ಮಪ್ಪನನ್ನು ನೆನಪಿಸುತ್ತಾರೆ. ಅದನ್ನು ತಡೆಯಲು ಇನ್ನೂ ಸಾಧ್ಯವಾಗಿಲ್ಲ. ನೀವೆಲ್ಲಾ ಮನಸ್ಸು ಮಾಡಿದರೆ ಅದು ಸಾಧ್ಯ. ಆ ದಿನಕ್ಕೆ ಕಾಯುತ್ತಿದ್ದೇನೆ……

  • ವಿವೇಕಾನಂದ. ಹೆಚ್.ಕೆ.
Team Newsnap
Leave a Comment
Share
Published by
Team Newsnap

Recent Posts

ಇಬ್ಬರು ಮಕ್ಕಳು ಬಿಸಿಲ ಝಳಕ್ಕೆ ಬಲಿ

ರಾಯಚೂರು : ರಾಯಚೂರಿನ ತಾಪಮಾನ ಹೆಚ್ಚಳದಿಂದ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ನಡೆದಿದೆ. ಜನರು ಬಿಸಿ ಗಾಳಿಯಿಂದಾಗಿ ತತ್ತರಿಸುತ್ತಿದ್ದು ,… Read More

April 28, 2024

ರಾಜ್ಯದಲ್ಲಿ ಇಂದಿನಿಂದ ನರೇಂದ್ರ ಮೋದಿ ಪ್ರಚಾರ

ಬೆಂಗಳೂರು : ರಾಜ್ಯದಲ್ಲಿ 14 ಕ್ಷೇತ್ರಗಳ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯವಾಗಿದ್ದು , ಮೇ 7ರಂದು ಉತ್ತರ… Read More

April 28, 2024

ಮೈಸೂರು : ಇವಿಎಂ, ವಿವಿ ಪ್ಯಾಟ್ ಗಳಿಗೆ ಬಿಗಿ ಭದ್ರತೆ: ಸ್ಟ್ರಾಂಗ್ ರೂಂ ಪರಿಶೀಲಿಸಿದ ಡಿಸಿ ಡಾ ರಾಜೇಂದ್ರ

ಮೈಸೂರು: ಮೈಸೂರು ಕೊಡುಗು ಲೋಕಸಭಾ ಚುನಾವಣೆ ಶಾಂತಿಯುತವಾಗಿ ನಡೆದಿದ್ದು ಮೈಸೂರಿನ ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ನಿರ್ವಹಣಾ ಕಾಲೇಜಿಗೆ ಚುನಾವಣಾ ಸಿಬ್ಬಂದಿ ಇವಿಎಂ,… Read More

April 27, 2024

ಕೇಂದ್ರದಿಂದ ರಾಜ್ಯಕ್ಕೆ 3,454 ಕೋಟಿ ರು ಬರಪರಿಹಾರ ಘೋಷಣೆ

ತಮಿಳನಾಡಿಗೆ 275 ಕೋಟಿ ರೂ.'ನೆರೆ ಪರಿಹಾರ' ಘೋಷಣೆ ನವದೆಹಲಿ : ಕೇಂದ್ರವು ಕರ್ನಾಟಕಕ್ಕೆ 3,454 ಕೋಟಿ ರೂ. ಬರಪರಿಹಾರ, ತಮಿಳಿನಾಡಿಗೆ… Read More

April 27, 2024

14 ಕ್ಷೇತ್ರಗಳ ಪೈಕಿ ಮಂಡ್ಯ ಕ್ಷೇತ್ರದಲ್ಲಿ ಹೆಚ್ಚು ಮತದಾನ: ಮಂಡ್ಯದಲ್ಲಿ ಶೇ 81.67 ರಷ್ಟು. ಮತದಾನ

ಮಂಡ್ಯ : ನಿನ್ನೆ ನಡೆದ 14 ಲೋಕಸಭಾ ಕ್ಷೇತ್ರಗಳ ಪೈಕಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಶೇ.81.67 ಮತದಾನವಾಗಿದೆ ಕಳೆದ ಬಾರಿಗಿಂತ… Read More

April 27, 2024

ಮಂಡ್ಯ , ಬೆಂಗಳೂರು ಕ್ಷೇತ್ರದ 9 ಗಂಟೆ ತನಕದ ಮತದಾನದ ವಿವರ

ಮಂಡ್ಯ : ಮಂಡ್ಯ ಲೋಕಸಭಾ ಕ್ಷೇತ್ರ 9 ಗಂಟೆಗೆ ಶೇ. 7.70% ಮತದಾನ Join WhatsApp Group ವಿಧಾನಸಭಾ ಕ್ಷೇತ್ರವಾರು… Read More

April 26, 2024