ಈ ವರ್ಷ ಶಾಲೆಗಳ ಆರಂಭವೇ ಬೇಡ : ಎಲ್ಲರನ್ನೂ ಪಾಸ್ ಮಾಡಿ – ಸಿದ್ದರಾಮಯ್ಯ

Team Newsnap
1 Min Read
Pic Credits : deccanherald.com

ಈ ವರ್ಷ ಶಾಲೆಗಳನ್ನು ಆರಂಭಿಸುವುದು ಬೇಡ. ಇದು ಸರ್ಕಾರಕ್ಕೆ ನನ್ನ ವೈಯುಕ್ತಿಕ ಸಲಹೆ. ಈ ವರ್ಷ ಆನ್‌ಲೈನ್ ಕ್ಲಾಸ್ ಮಾಡಿ ಎಲ್ಲರನ್ನೂ ಪಾಸ್ ಮಾಡಲಿ. ಸಂಪೂರ್ಣ ಕೊರೋನಾ ಮುಕ್ತವಾದ ನಂತರ ಶಾಲೆಗಳನ್ನು ಆರಂಭಿಸಲಿ. ತರಾತುರಿಯಲ್ಲಿ ಶಾಲೆ ಆರಂಭಿಸುವುದು ಬೇಡ ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಸಲಹೆ ನೀಡಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ
ಎರಡು ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಇದೆ. ಶಿರಾದಲ್ಲಿ ಜಯಚಂದ್ರ ಗೆಲ್ತಾರೆ. ಆರ್ ಆರ್ ನಗರದಲ್ಲಿ ಕುಸುಮಾ ಗೆಲ್ಲುವ ಸಾಧ್ಯತೆ ಇದೆ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಇದು ಕಾಂಗ್ರೆಸ್ ಪರವಾದ ಮತಗಳಾಗಿವೆ. ಶಿರಾದಲ್ಲಿ ಕಳೆದ ಬಾರಿ ಅಪಪ್ರಚಾರ ಆಗಿತ್ತು. ಆರ್ ಆರ್ ನಗರದಲ್ಲಿ ಕಳೆದ ಬಾರಿ ಕಾಂಗ್ರೆಸ್ ಗೆದ್ದಿತ್ತು. ಇದರ ಜೊತೆಗೆ ನಾವೆಲ್ಲ ಪ್ರಚಾರ ಮಾಡಿದಾಗಲು ಜನರು ಕಾಂಗ್ರೆಸ್ ಪರ ಒಲವು ತೋರಿದ್ದರು. ಈ ಎಲ್ಲ ಕಾರಣದಿಂದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದರು.

ಸಿಎಂ ಬದಲಾವಣೆ ಖಚಿತ

ಉಪಚುನಾವಣೆ ನಂತರ ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಲಿದೆ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದರು. ಬಿಜೆಪಿಯಲ್ಲಿ ಸಿಎಂ ಬದಲಾವಣೆ ಮಾಡ್ತಾರೆ. ಯಡಿಯೂರಪ್ಪ ಸಿಎಂ ಆಗಿ ಮುಂದುವರೆಯುವುದಿಲ್ಲ. ಖಡಾಖಂಡಿತವಾಗಿಯೂ ಯಡಿಯೂರಪ್ಪ ಬದಲಾಗ್ತಾರೆ. ನನಗೆ ದೆಹಲಿಯಿಂದ ಬಂದಿರುವ ಮಾಹಿತಿ ಆಧಾರದ ಮೇಲೆ ಹೇಳುತ್ತಿದ್ದೇನೆ. ನಾನು ಅವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿರುವುದು ಸಹ ಒಂದು ಕಾರಣ ಇರಬಹುದು. ಹಲವು ದಿನದಿಂದ ಸಿಎಂ ಬದಲಾವಣೆ ಮಾಡುವ ಚಿಂತನೆಯಲ್ಲಿ ಬಿಜೆಪಿ ಇದೆ ಎಂದು ಹೇಳಿದರು.

ಕೊರೋನಾ ಪಾಠ ಮಾಡಿದ ಸಿದ್ದು

ಸಿದ್ದರಾಮಯ್ಯ ಅವರು ಮೈಸೂರಿಗೆ ಆಗಮಿಸಿದ ತಕ್ಷಣ ಕಾರ್ಯಕರ್ತರು ಅವರನ್ನು ಸುತ್ತುವರೆದರು. ಈ ವೇಳೆ ಸಿದ್ದರಾಮಯ್ಯ ಅವರು ಎಲ್ಲರಿಗೂ ಸಾಮಾಜಿಕ ಅಂತರದ ಪಾಠ ಮಾಡಿದರು. ಎಲ್ಲರೂ ದೂರ ಹೋಗಿ. ನನ್ನಿಂದ 6 ಅಡಿ ದೂರ ಇರಿ. ನನ್ನ ಅಕ್ಕ ಪಕ್ಕ ನಿಂತರೂ ನಾನು ಬರೋಲ್ಲ‌. ನೀವು ಅಲ್ಲಿ ನಿಂತರೆ ನಾನು ಮಾಧ್ಯಮಗಳಿಗೂ ಮಾತನಾಡಲ್ಲ ಎಂದು ಹೇಳಿ ಪಕ್ಕದಲ್ಲಿ ನಿಂತಿದ್ದ ಕಾರ್ಯಕರ್ತನನ್ನು ದೂರ ತಳ್ಳಿದರು.

Share This Article
Leave a comment