January 9, 2025

Newsnap Kannada

The World at your finger tips!

ahavalu

ಅವ್ವೇರಹಳ್ಳಿ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ

Spread the love

.ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದಲ್ಲಿ ಇಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ಮಾಗಡಿ ತಾಲ್ಲೂಕಿನ ಮಡಬಾಳ ಹೋಬಳಿಯ ಅವ್ವೇರಹಳ್ಳಿ ಕುಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಕುಂದು ಕೊರತೆ ಅರ್ಜಿಗಳನ್ನು ಸ್ವೀಕರಿಸಿದರು.

ವಿದ್ಯುತ್ ಮೀಟರ್ ಅಳವಡಿಸಿಕೊಳ್ಳಿ: ಗ್ರಾಮದಲ್ಲಿ 38 ಕುಟುಂಬಗಳಿದ್ದು, ಇಲ್ಲಿಯ ಗ್ರಾಮಸ್ಥರು ಮನೆಗಳಿಗೆ ಭಾಗ್ಯ ಜ್ಯೋತಿ ಯೋಜನೆಯಡಿ ವಿದ್ಯುತ್ ಪಡೆದುಕೊಂಡಿದ್ದಾರೆ. ಇಲ್ಲಿ ವಿದ್ಯುತ್ ಮೀಟರ್ ಇಲ್ಲದಾಗಿರುವುದರಿಂದ ನಿರಂತರ ಜ್ಯೋತಿ ಯೋಜನೆ ಕಲ್ಪಿಸಲು ಅಡಚಣೆಯಾಗುತ್ತಿರುವ ಸಮಸ್ಯೆಯನ್ನು ಗಮನಿಸಿದ ಜಿಲ್ಲಾಧಿಕಾರಿಗಳು ಗ್ರಾಮಸ್ಥರೊಂದಿಗೆ ಚರ್ಚಿಸಿ ಮನೆಗಳಿಗೆ ವಿದ್ಯುತ್ ಮೀಟರ್ ಅಳವಡಿಸಿಕೊಳ್ಳುವಂತೆ ತಿಳಿಸಿದರು.

ಭಾಗ್ಯ ಜ್ಯೋತಿ ಯೋಜನೆಯಡಿ ನಿಗದಿತ ಯುನಿಟ್ ಉಚಿತವಾಗಿ ವಿದ್ಯುತ್ ನೀಡಲಾಗುತ್ತಿತ್ತು, ಮೀಟರ್ ಅಳವಡಿಕೆಯಿಂದ ಹಿಂದಿನ ಬಿಲ್ ನೀಡಲಾಗುವುದು ಎಂಬ ಭಯದ ಮನೋಭಾವವಿದ್ದಾರೆ. ಅದನ್ನು ತೊರೆಯಬೇಕು‌.ಸರ್ಕಾರದ ಯಾವುದೇ ಯೋಜನೆಯಡಿ ನಿಗಧಿತ ಯುನಿಟ್ ಉಚಿತ ವಿದ್ಯುತ್ ನೀಡಬೇಕಾದರೂ ಮೀಟರ್ ಬೇಕಾಗುತ್ತದೆ ಎಂದು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟರು.

ಬೆಸ್ಕಾಂ ಅಧಿಕಾರಿಗಳಿಗೆ ಒಂದು ದಿನ ನಿಗಧಿ ಮಾಡಿ ಗ್ರಾಮದಲ್ಲೇ ಜನರಿಂದ ಮೀಟರ್ ಅಳವಡಿಸಲು ಬೇಕಿರುವ ದಾಖಲೆಗಳನ್ನು ಪಡೆದುಕೊಳ್ಳಿ. ನಿರಂತರ ಜ್ಯೋತಿ ಕಾಮಗಾರಿಗೆ ಗುತ್ತಿಗೆದಾರರಿಂದ ಇರುವ ತೊಂದರೆ ಪರಿಹರಿಸಿ ಪೂರ್ಣಗೊಳಿಸುವಂತೆ ಸೂಚಿಸಿದರು‌.

ರಸ್ತೆ ವ್ಯವಸ್ಥೆ: ಗ್ರಾಮಕ್ಕೆ ಸಂಪರ್ಕ ಇರುವ ರಸ್ತೆ ಡಾಂಬರೀಕರಣವಿಲ್ಲದೆ ವಾಹನದ ಓಡಾಟ ಕಷ್ಟಕರವಾಗಿರುತ್ತದೆ. ತುರ್ತು ಆರೋಗ್ಯ ಸಮಸ್ಯೆ ಇದ್ದ ಸಂದರ್ಭದಲ್ಲಿ ರೋಗಿಯನ್ನು ಆಸ್ಪತ್ರೆಗೆ ಕರೆದು ಹೋಗಲು ಬಹಳ ಕಷ್ಟವಾಗುತ್ತದೆ ಎಂದು ಗ್ರಾಮಸ್ಥರು ಸಮಸ್ಯೆ ತಿಳಿಸಿದಾಗ ಜಿಲ್ಲಾಧಿಕಾರಿಗಳು ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಗೆ ಒಳಪಟ್ಟಿದ್ದು, ಅವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಬಸ್ ವ್ಯವಸ್ಥೆ: ಗ್ರಾಮಕ್ಕೆ ಕೆ.ಎಸ್.ಆರ್‌. ಟಿ.ಸಿ ಬಸ್ ವ್ಯವಸ್ಥೆ ಸರಿಯಾದ ಸಮಯಕ್ಕೆ ಇಲ್ಲ. ಇದರಿಂದ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ತೆರಳಲು ತೊಂದರೆಯಾಗುತ್ತಿದೆ. ಇರುವ ಬಸ್ ಗಳು ಸಹ ಗ್ರಾಮದ ಹೊರಗೆ ಇರುವ ಗೇಟ್ ಬಳಿ ನಿಲ್ಲಿಸುತ್ತಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಈ ಬಗ್ಗೆ ಬಿ.ಎಂ.ಟಿ.ಸಿ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮಾತನಾಡಿ ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದರು .

ಕಾರ್ಯಕ್ರಮದಲ್ಲಿ ಭೂ ದಾಖಲೆಗಳ ಉಪನಿರ್ದೇಶಕ ಸಂತೋಷ್ ಎಂ., ಪೊಲೀಸ್ ಇಲಾಖೆ ನರೇಂದ್ರ ಬಾಬು, ಮಾಗಡಿ ತಹಶೀಲ್ದಾರ್ ಶ್ರೀನಿವಾಸ್ ಪ್ರಸಾದ್ ಬಿ.ಜಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುರೇಶ್ ಕುಮಾರ್ ಬಿ.ಕೆ ಉಪಸ್ಥಿತರಿದ್ದರು.

Copyright © All rights reserved Newsnap | Newsever by AF themes.
error: Content is protected !!