ಈ ಲೋಕ ಎನ್ನುವುದು ವೈವಿಧ್ಯಮಯಗಳ ಗೂಡು. ವಿಶಿಷ್ಟ ಬಗೆಯ ಪಶುಪಕ್ಷಿ, ಗಿಡಮರ,ನದಿತೊರೆಗಳು,ಕಾಡು ಮೇಡುಗಳು ಪ್ರಕೃತಿ ನಮಗಿತ್ತ ವೈವಿಧ್ಯತೆಗಳಾದರೆ, ಮಾನವ ತನ್ನ ಬುದ್ದಿಶಕ್ತಿ, ಕ್ರಿಯಾಶಕ್ತಿಯಿಂದ ತನ್ನ ಸುತ್ತಲ ಎಲ್ಲ ವಿಚಾರಗಳಲ್ಲೂ ವೈವಿಧ್ಯತೆಯನ್ನು ಕಂಡುಕೊಳ್ಳಲು ಅನವರತ ಸೃಜನಶೀಲನಾಗಿ ಪ್ರಯತ್ನಿಸುತ್ತಲೇ ಇರುತ್ತಾನೆ.ಅವನ ಅಸಾಧಾರಣ ಕ್ರಿಯಾಶಕ್ತಿ ಎಂತೆಂಥ ಅದ್ಭುತಗಳನ್ನು ಸೃಷ್ಟಿಸಿವೆ ಎಂಬುದು,ದೇಶ ಸುತ್ತಿದಾಗ, ಕೋಶ ಓದಿದಾಗ ಗೊತ್ತಾಗುತ್ತದೆ.ಅವೆರಡೂ ಮಾಡದಿದ್ದರೂ ಸಾಮಾಜಿಕ ಜಾಲತಾಣಗಳೂ ಕೂಡಾ ಹಲವಾರು ವಿಚಾರಗಳನ್ನ ನಾವು ತಿಳಿದುಕೊಳ್ಳಲು ಸಹಕಾರಿಯಾಗಿರುತ್ತದೆ.ಅವನ ಸೃಜನಶೀಲತೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ನಂಬಲಾರದಂಥ ಹೊಸಹೊಸ ತಿರುವುಗಳನ್ನು ಪಡೆಯುತ್ತಾ, ಹೀಗೂ ಮಾಡಬಹುದಾ? ಎಂದು ಹುಬ್ಬೇರಿಸುವಷ್ಟು ಆಕರ್ಷಣೆಯ ಹೊದಿಕೆ ಹೊಚ್ಚಿಕೊಂಡು ಊಹಿಸಲೂ ಸಾಧ್ಯವಾಗದಷ್ಟು ಕಲಾತ್ಮಿಕತೆಯಿಂದ ಕೂಡಿರುತ್ತದೆ.
ಅದರಲ್ಲೂ ವಿಶೇಷವಾಗಿ ನಮ್ಮ ಭಾರತದೇಶದಲ್ಲಿರುವಷ್ಟು ವೈವಿಧ್ಯಮಯ ಪ್ರಕೃತಿ, ಸಂಸ್ಕೃತಿ, ಧರ್ಮಗಳು, ಆಚಾರ ವಿಚಾರ, ಉಡುಗೆ ತೊಡುಗೆ, ಆಹಾರ ಪದ್ದತಿಗಳು ಬಹುಶಃ ಪ್ರಪಂಚದ ಬೇರೆ ಯಾವ ಭಾಗದಲ್ಲೂ ಕಾಣಲಾರೆವೇನೋ! ಈ ವೈವಿಧ್ಯತೆ ಮನರಂಜನೆಯ ವಿಷಯದಿಂದೇನೂ ಹೊರತಾದುದಲ್ಲ. ಒಂದೊಂದು ಪ್ರಾಂತ್ಯದಲ್ಲೂ, ವಿವಿಧ ಪ್ರಾಕಾರಗಳ ಸಂಗೀತ, ನೃತ್ಯ, ರಂಗಾಭಿನಯ, ಚಲನಚಿತ್ರಗಳು ಎಲ್ಲವೂ ತನ್ನದೇ ಆದ ವೈವಿಧ್ಯಮಯ ವಿಶೇಷಗಳನ್ನು ಹೊಂದಿ, ಸಮಾಜವನ್ನು ರಂಜಿಸುತ್ತಾ,ಜನಮಾನಸದಲ್ಲಿ ಮರೆಯಲಾರದ ಸ್ಥಾನವನ್ನ ಪಡೆದುಕೊಳ್ಳುತ್ತವೆ.
ಮನರಂಜನೆಯ ಮಾಧ್ಯಮದಲ್ಲಂತೂ ಈಗಿನ ಯುವಪೀಳಿಗೆ ಹಲವಾರು ಪ್ರಯೋಗಗಳನ್ನ ಮಾಡಿ,ಜನರನ್ನು ಯಾವ ರೀತಿಯಲ್ಲಿ ರಂಜಿಸಬಹುದೂ ಎಂದು ಅನವರತ ಆಲೋಚಿಸಿ ಹೊಸಹೊಸ ಆವಿಷ್ಕಾರಗಳನ್ನು ಮಾಡುತ್ತಾ,ನೋಡುಗರಿಗೆ ಹೊಸಹೊಸ ಅನುಭವಗಳ ರಸಾನುಭೂತಿ ನೀಡುತ್ತಿರುವುದಲ್ಲದೆ, ಪುರಾಣ, ಇತಿಹಾಸ ಮುಂತಾದ ವಿಚಾರಗಳನ್ನ ಇಂದಿನ ವೈಜ್ಞಾನಿಕ ಯುಗದ ಕಾಲಮಾನದ ತಂತ್ರಜ್ಞಾನದ ಜೊತೆಗೆ ಮೇಳೈಸುವುದು, ಇದೆಲ್ಲ ನೋಡುತ್ತಿದ್ದರೆ, ಮಾನವನ ಮೆದುಳು ಎಂತೆಂಥಹ ಚಮತ್ಕಾರಿ ಕೆಲಸಗಳನ್ನು ಮಾಡುವ ತಾಕತ್ತು ಹೊಂದಿದೆ ಎಂದು ಆಶ್ಚರ್ಯವಾಗುತ್ತದೆ.
ಭಾರತದಲ್ಲಿ ತಯಾರಿಸಲಾದ ಸಿನಿಮಾಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಜನಪ್ರಿಯವಾಗಿ ಪ್ರಪಂಚದಾದ್ಯಂತದ ಜನರು ತಮ್ಮ ಭಾಷೆಗಳಿಗೆ ಭಾಷಾಂತರಿಸಿಕೊಂಡು ನೋಡುವುದನ್ನು ಕಂಡರೆ ನಮ್ಮ ಚಿತ್ರರಂಗದಲ್ಲಿರುವ ಪ್ರತಿಭೆಗಳ ಅನಾವರಣ ಪ್ರಪಂಚದ ಮೂಲೆಮೂಲೆಗಳಲ್ಲೂ ಆಗುತ್ತಿರುವ ವಿಚಾರವನ್ನು ನಾವು ಭಾರತೀಯರು ಗರ್ವದಿಂದಲೇ ಸ್ವೀಕರಿಸಬೇಕು.
ಹಿಂದೆ ಸುಮಾರು ಮೂವತ್ತೈದು ನಲವತ್ತು ವರ್ಷಗಳ ಹಿಂದೆ ಇದ್ದದ್ದೆಲ್ಲಾ ಒಂದೇ,ದೂರದರ್ಶನ ರಾಷ್ಟ್ರೀಯ ಪ್ರಸಾರ! ಆಮೇಲೆ ಸಂಜೆ ಮೂರುನಾಲ್ಕು ತಾಸುಗಳ ಕನ್ನಡ ಚಂದನ ಕಾರ್ಯಕ್ರಮ ಪ್ರಸಾರ. ಅಷ್ಟೇ. ರಾಷ್ಟ್ರೀಯ ಪ್ರಸಾರದಲ್ಲಿ ಪ್ರತಿ ಶುಕ್ರವಾರ, ತಡರಾತ್ರಿ ಚಲನಚಿತ್ರಗಳನ್ನ (ಲೇಟ್ ನೈಟ್ ಮೂವೀಸ್)ರಾತ್ರೆ ೧೧:೩೦ರಿಂದ ಪ್ರಸಾರ ಮಾಡುತ್ತಿದ್ದರು. ಅದರಲ್ಲಿ ಹೆಚ್ಚು ಸಿನಿಮಾಗಳು ಶಬಾನಾ ಆಜ಼್ಮಿ, ಸ್ಮಿತಾ ಪಾಟೀಲ್, ಓಂ ಪೂರಿ, ನಾಸಿರುದ್ದಿನ್ ಶಾ ಮುಂತಾದ ದೈತ್ಯ ಪ್ರತಿಭೆಗಳು ಅಭಿನಯಿಸಿರುವ ರಾಜ್ಯ ಪ್ರಶಸ್ತಿ ,ರಾಷ್ಟ್ರ ಪ್ರಶಸ್ತಿ ಪಡೆದ ಪ್ರಯೋಗಾತ್ಮಕ ಚಿತ್ರಗಳೇ ಬಹುಪಾಲು ಇರುತ್ತಿದ್ದವು. ನನಗೆ ಯಾವುದೇ ಫ್ಯಾಂಟೆಸಿಯೂ ಇರದ, ಸಾಮಾನ್ಯ ಜನರ ಬದುಕಿಗೆ ಹತ್ತಿರವಾಗಿರುವ ಅಂಥ ಚಿತ್ರಗಳೆಂದರೆ ಬಲು ಇಷ್ಟ. ಹಾಗಾಗಿ ಸರಿರಾತ್ರಿ ಎರಡೂ ಎರಡೂವರೆಯವರೆಗೂ ಎದ್ದಿದ್ದು ನೋಡುತ್ತಿದ್ದೆ. ದಿನವೂ ಬೆಳಗ್ಗೆ ಎಂಟುಗಂಟೆಗೆ ಕಾಲೇಜು. ಎರಡು ಮೈಲು ದೂರವಿದ್ದ ಕಾಲೇಜಿಗೆ ಏಳೂ ಮುಕ್ಕಾಲಿಗೆ ದಡಬಡಾಯಿಸಿ ಎದ್ದು, ಸ್ನಾನವೂ ಮಾಡದೆ ಓಡುತ್ತಿದ್ದೆ.”ಪದ್ಮಜ(ಶಾಲೆಯಲ್ಲಿ ದಾಖಲಾದ ನನ್ನ ಹೆಸರು)ಉಫ್ ಅದೇನೂಂತ ಆ ಮೂವೀಸ್ ನ ಲೈಕ್ ಮಾಡ್ತೀಯೇ? ಒಂದು ಹಾಡು,ಫೈಟು, ಇಲ್ದಿದ್ರೋಗ್ಲಿ, ಜೋರಾಗಿ ಮಾತೂ ಇರೋಲ್ಲ. ಕಾಸ್ಟೂಮ್ಸ್, ಮೇಕಪ್ಪು, ಹೊರಾಂಗೀಣ ಚಿತ್ರೀಕರಣ ಅಂತ ಆ ಪುಣ್ಯಾತ್ಮ ಪ್ರೊಡ್ಯೂಸರ್ ಮೂರ್ ಕಾಸೂ ಖರ್ಚ್ ಮಾಡಿರೋಲ್ಲ. ಸರಿಯಾಗಿ ಬೆಳಕಿನ ಸಂಯೋಜನೆಯೂ ಇರೋಲ್ಲ.ಚಿತ್ರದ ಪೂರ್ತಿ ಒಂದೇ ಲೊಕೇಶನ್, ಒಂದೇ ಕಾಸ್ಟ್ಯೂಮ್ ನಲ್ಲಿ ಮುಗಿಸಿಬಿಡ್ತಾರೆ. ಚಿತ್ರಪೂರ್ತಿ ಗವ್ ಅನ್ನೊವಂಥ ಏಕಾಂತತೆ ಫೀಲ್ ಆಗುತ್ತೆ! ಚಿತ್ರ ಮುಗಿಯುವಷ್ಟರಲ್ಲಿ ನಮಗೇ ಏನೋ ವೈರಾಗ್ಯ ಬಂದಂತಾಗೋಗತ್ತೆ”, ಎಂದು ಕೆಲವು ಗೆಳತಿಯರು ಮುಖ ಕೆಡಿಸಿಕೊಂಡು ಹೇಳುತ್ತಿದ್ದರೆ,”ಕತ್ತೆಗೇನ್ರೇ ಗೊತ್ತು ಕಸ್ತೂರಿ ಗಂಧ? ಈ ಪ್ರಶಸ್ತಿಗಳೆಲ್ಲಾ ಅವ್ರೇನು ತಲೆ ಕೆಟ್ಟು ಕೊಡ್ತಾರಾ?”, ಎಂದು ರೇಗಿಸುತ್ತಿದ್ದೆ.”ಅಯ್ಯಾ,ನೀನೋ ನಿನ್ ಟೇಸ್ಟೋ! ನೋಡ್ಕೋ ನೋಡ್ಕೋ.ನೀನ್ ಪಡ್ಕೊಂಡ್ ಬಂದಿರೋದು! ನಾವ್ ಯಾಕೆ ಬೇಡಾನ್ನೋದೂ?”, ಅಂತ ಅವರೂ ನನ್ನ ಚುಡಾಯಿಸೋರು.
ಇನ್ನು ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯ ಜನರಿಗೆ ಸಿನಿಮಾ ಇಷ್ಟವಾಗಬೇಕಾದರೆ, ನಾಲ್ಕು ಟಪಾಂಗುಚ್ಚಿ ಕುಣಿತದ ಹಾಡುಗಳು, ಸುಮಾರು ಫೈಟುಗಳು,ಎರಡು ಬಕೆಟ್ ಕಣ್ಣೀರು, ಒಂದೆರೆಡು ರೇಪುಗಳ ಮಧ್ಯೆ ಎಷ್ಟಾದರಷ್ಟು ಸೆಂಟಿಮೆಂಟ್ಸ್ ತುರುಕಿದ್ದರೆ, ಬಿ ಸಿ ಡಿ ಕೇಂದ್ರಗಳ ಬಾಕ್ಸ್ ಆಫೀಸ್ ಹಿಟ್ ಗ್ಯಾರಂಟಿ!
“ಕಲ್ಕಿ”,ನರ್ಸೀಪುರುಕ್ಕೆ ಬಂದಿದೆಯಂತೆ. ಹೋಗ್ಬನ್ನಿ ಅಮ್ಮಾ. ನಾನೂ ಹೋಗಿದ್ದೆ ತುಂಬಾ ಚೆನ್ನಾಗಿದೆ”, ಎಂದು ಅಮೆರಿಕದಲ್ಲಿರುವ ಮಗ, ಚಿತ್ರದ ಬಗ್ಗೆ ಮೆಚ್ಚುಕೆಯ ಮಾತಾಡಿದಾಗ,ಸರಿ ಹೋಗೋಣ ಬನ್ನಿ ಎಂದು ಪತಿಯ ಕೂಡಿ ಹೊರಟಿದ್ದಾಯಿತು.ಆ ದಿನ ಚಿತ್ರಮಂದಿರದಲ್ಲಿ ಅಬ್ಬಬ್ಬಾ ಎಂದರೂ ಮೂವತ್ತು ಮಂದಿ ಇರಲಿಲ್ಲ. ಚಿತ್ರ ಶುರುವಾಯಿತು. ಚಿತ್ರವನ್ನು ಹಾಲಿವುಡ್ ಚಿತ್ರಗಳ ಮಟ್ಟದಲ್ಲಿ ಅದ್ದೂರಿ ಸೆಟ್ಟುಗಳನ್ನ ಹಾಕಿ, ಬಹಳ ವಿಶಿಷ್ಟವಾಗಿ ಚಿತ್ರೀಕರಿಸಲಾಗಿದೆ ಎಂದು ನಾವಿಬ್ಬರೂ ಮಾತನಾಡಿಕೊಳ್ಳುತ್ತಿದ್ದೆವು.
ಒಂದ್ಹತ್ತನೆರಡು ನಿಮಿಷಗಳಾಗಿರಬಹುದು. ನಮ್ಮ ಹಿಂದೆ ಕೂತಿದ್ದ ಎರಡ್ಮೂರು ಪಡ್ಡೆ ಹುಡುಗರು(ಬಹುಶಃ, ನಮ್ಮೂರಿನ ಅಕ್ಕಪಕ್ಕದ ಹಳ್ಳಿಯವರೆಂದು ಕಾಣುತ್ತದೆ)ತಮ್ಮ ತಮ್ಮಲ್ಲೇ ಮಾತಾಡೋಕೆ ಶುರು ಹಚ್ಕೊಂಡ್ರು. “ಲೋ ಮಗಾ,ಇದೇನ್ಲಾ ಕನ್ನಡ ಪಿಚ್ಚರು ಅಂದೆ. ಇದ್ರಾಗೆ ಕನ್ನಡ ಮಾತಾಡ್ತಾವ್ರೆ ಬಿಟ್ರೆ, ನಮ್ ಆಕ್‌ಟ್ರುಗುಳು ಒಬ್ರೂ ಕನೇಕೇ ಕಾನೇ”, ಅಂದಿದಕ್ಕೆ, ಮತ್ತೊಬ್ಬ,”ಲೇ,ವಸಿವೊತ್ತು ಅಮಿಕಂಡ್ ಕೂರ್ಲಾ. ಮುಂದುಕ್ ಬತ್ತರೇನೋ, ಬಡೆತ್ತದ್ದೆ ಆರ್ ತಿಂಗ್ಳುಗ್ ಉಟ್ದೋನಂಗಾಡ್‌ಬ್ಯಾಡ”, ಅಂದ.ಹಿಂದೆ ಸ್ವಲ್ಪ ಹೊತ್ತು ನಿಶಬ್ದವಾಯ್ತು. ಚಿತ್ರ ಮತ್ತೂ ಹತ್ತದಿನೈದು ನಿಮಿಷ ಮುಂದುವರೀತು.”ಥೂ ಡಬ್ಬಾ ನನ್ ಮಗಂದು.ಲೋ ಇದೇನ್ ಪಿಚ್ಚರ್ ಕುಲಾ ಏನ್ಲಾ? ತಲೆಬುಡ ಒಂದು ಅರ್ತಾಗೋಲ್ದು. ಯಾವಾಲಾ ನಿಂಗ್ ಯೋಳ್ದೋನು ಈ ಪಿಚ್ಚರು ಚಂದಾಗದೆ ಅಂತಾ?ಥೂ ನಿನ್ ಮುಕಾ ಮುಚ್ಚಾ, ನಂಗ್ ಇನ್ ನೋಡಕ್ಕಾಗ್ದು. ನೀವೂ ಎದ್ ಬತ್ತೀರ್ಲಾ? ನಾನೆದ್ದೋಗ್ಲಾ”, ಅಂತ ಅವರೊಳಗೊಬ್ಬ ಜೋರಾಗೇ ಎಗರಾಡಿದ. ಅದಕ್ಕಿನ್ನೊಬ್ಬ,“ಏ, ಆ ಗಿಡ್ಡ ಅವ್ನಲ್ಲಾ , ಆ ಬಡ್ಡೀಮಗ್ನೇ ಪಿಚ್ಚರು ಸೂಪರೂಂತ್ ಏಳಿದ್ದು. ನಡಿ ಅತ್ತಾಗ್ ನಾವು ಬತ್ತೀವಿ.ಇದ್ಯಾವಾನ್ ಕೈಲಿ ನೋಡಕ್ಕಾಯ್ತದೆ. ಪಿಚ್ಚರ್ ಸಕತ್ತಾಗೈತೆ ಅಂತ ಏಳುದ್ನಲ್ಲಾ ಅವ್ನಿಗೆ ಎಕ್ಕಡ್ದಲ್ಲಿ ಒಡೀಬೇಕು”, ಅಂತ ಮೂವರೂ ದುರ್ದಾನ ತೆಗೆದುಕೊಂಡಂತೆ ಎದ್ದೇ ಹೋಗ್ಬಿಟ್ರು.ಸಿನಿಮಾ ಚೆನ್ನಾಗಿದೆ ಅಂತ ಹೇಳಿದ ಆ ಗಿಡ್ಡನಿಗೆ ಈ ಹೊತ್ತಿಗಾಗ್ಲೇ ಸರ್ಯಾಗಿ ಗೂಸಾ ಬಿದ್ದಿರಲೂಬಹುದೂ ಅಂತ ನನ್ ಗುಮಾನಿ! ನಿಜ ಕಣ್ರೀ,ಕೆಲವು ಸಮಯ ನಮ್ಮ ಅಭಿಪ್ರಾಯಗಳು ಹೇಳಿದಾಗ, ಕೇಳಿದವರಿಗೆ ಅದು ವ್ಯತಿರಿಕ್ತವಾಗಿ ಭಾಸವಾದಾಗ ಆಗುವ ಅನಾಹುತ ಅಷ್ಟಿಷ್ಟಲ್ಲ. ಅದಕ್ಕೇ ಇರಬೇಕು, ನಮ್ಮ ತಾಯಿಯ ಅತ್ತಿಗೆ ವರಸೆಯ ಸಂಬಂಧಿಯೊಬ್ಬರಿದ್ದರು. ಅವರು ಆ ಕಾಲಕ್ಕೇ ಬಹಳ ಚಿತ್ರಗಳನ್ನ ನೋಡೋರು.ನಮ್ಮಮ್ಮ,”ಅತ್ತಿಗೆ ಪಿಚ್ಚರ್ ಗೆ ಹೋಗಿದ್ರಲ್ಲಾ, ಹೇಗಿತ್ತು?”, ಅಂತ ಕೇಳಿದ್ರೆ, ಅವರು ಹೇಳ್ತಿದ್ದದ್ದು ಒಂದೇ ಉತ್ತರ,”ಅರ್ಥ ಮಾಡ್ಕೊಂಡ್ರೆ ತುಂಬಾನೇ ಚೆನ್ನಾಗಿದೆ”, ಅಂತ.ಆಗಿನ್ನೂ ನಾನು ತೀರಾ ಚಿಕ್ಕವಳು. ಅವರ ಮಾತು ಅರ್ಥವಾಗದೆ, ಪ್ರತೀ ಸಾರಿ ಹಾಗೆಂದಾಗಲೂ ಪೆದ್ದುಪೆದ್ದಾಗಿ ಅವರನ್ನೇ ನೋಡುತ್ತಿದ್ದೆ!
ಚಿತ್ರ ಬಿಡುಗಡೆಯಾದ ದಿನದಿಂದ ಕಲ್ಕಿಯ ಬಗ್ಗೆ ಬಹಳಷ್ಟು ಜನರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದರೂ, ಅಭಿರುಚಿ ಎನ್ನುವುದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುವ ವೈಯಕ್ತಿಕ ಒಲವು.”one man’s food is another man’s poison“, ನಿಜ ಅಲ್ಲವೇ? ವಂದನೆಗಳು.
ರೂಪ ಮಂಜುನಾಥ
ಹೊಳೆನರಸೀಪುರ.
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ