November 15, 2024

Newsnap Kannada

The World at your finger tips!

deepa1

ವಿಭಿನ್ನ ವ್ಯಕ್ತಿಗಳು,ವಿಭಿನ್ನ ದೃಷ್ಟಿ ಕೋನ

Spread the love

” ನಾನು,
ರಾಮಪ್ಪ ಸೋಮಪ್ಪ ಭೀಮಪ್ಪ ಕೃಷ್ಣಪ್ಪ ಡೇವಿಡ್ ಸಾಬಣ್ಣ ಜೈನಸಿಂಗ್ ಎಂಬ ಹೆಸರಿನ ನಾನು ಶಾಸಕನಾಗಿ ಈ ನೆಲದ ಹೆಸರಿನ ಮೇಲೆ ಪ್ರಮಾಣ ಮಾಡುತ್ತಿದ್ದೇನೆ.

ನಾನು ಸಾರ್ವಜನಿಕ ಜೀವನಕ್ಕೆ ಪ್ರವೇಶಿಸುತ್ತಿರುವುದರಿಂದ ಮತ್ತು ಈ ಚುನಾವಣೆಯಲ್ಲಿ ಸ್ಪರ್ಧಿಸಿ ಈಗ ಕರ್ನಾಟಕ ವಿಧಾನಸಭೆಯ ಶಾಸಕನಾಗಿ ಆಯ್ಕೆಯಾಗಿರುವುದರಿಂದ ನನ್ನ ಹೆತ್ತ ತಾಯಿ, ಹುಟ್ಟಿಸಿದ ತಂದೆ, ನಾನು ಮತ್ತು ನನ್ನ ಪತ್ನಿ ಜೊತೆಯಾಗಿ ಸೃಷ್ಟಿಸಿದ ನನ್ನ ಮಕ್ಕಳ ಮೇಲೆ ಆಣೆ ಮಾಡಿ ಪ್ರತಿಜ್ಞೆ ಮಾಡುತ್ತಿದ್ದೇನೆ,…

ನಾನು ಶಾಸನನಾಗಿರುವುದೇ ಬಹುದೊಡ್ಡ ಗೌರವ. ಈ ಸಮಾಜದ ಋಣ ತೀರಿಸಲು ನನಗೆ ಸಿಕ್ಕಿರುವ ಈ ಅವಕಾಶವನ್ನು ಕಾಯಾ ವಾಚಾ ಮನಸಾ ರಾಗ ದ್ವೇಷಗಳಿಲ್ಲದೆ, ಪಕ್ಷಪಾತ ಮಾಡದೆ, ಜನರ ಒಳಿತಿಗಾಗಿ ಉಪಯೋಗಿಸುತ್ತೇನೆ. ಯಾವುದೇ ಸೇಡನ್ನು ನನ್ನ ಜನಗಳ ಮೇಲೆ ತೋರಿಸುವುದಿಲ್ಲ. ಹಾಗೆ ಮಾಡಿದರೆ ನನ್ನನ್ನು ತಾಯ್ಗಂಡ ಎಂದು ಸಾರ್ವಜನಿಕವಾಗಿ ನಿಲ್ಲಿಸಿ ಛೀಮಾರಿ ಹಾಕುವ ಅಧಿಕಾರವನ್ನು ಈ ಮೂಲಕ ನಮ್ಮ ನ್ಯಾಯಾಂಗ ವ್ಯವಸ್ಥೆಗೆ ನೀಡುತ್ತಿದ್ದೇನೆ.

ಈ ನೆಲದಲ್ಲಿ ವಾಸಿಸುತ್ತಿರುವ ನನ್ನೆಲ್ಲ ಮತದಾರರೇ ನಿಮ್ಮ ಮೇಲೆ ಪ್ರಮಾಣ ಮಾಡಿ ಆತ್ಮಸಾಕ್ಷಿಯಾಗಿ ಹೇಳುತ್ತೇನೆ. ನನ್ನನ್ನು ನೀವು ಆಯ್ಕೆ ಮಾಡಿರುವುದು ನಿಮ್ಮ ಪ್ರತಿನಿಧಿ ಎಂದು ಕೇವಲ ಶಾಸಕನಾಗಿ ಮಾತ್ರ. ಒಂದು ವೇಳೆ ಮಾನ್ಯ ಮುಖ್ಯಮಂತ್ರಿಗಳು ನನ್ನ ಪ್ರತಿಭೆ ಸಾಮರ್ಥ್ಯ ನೋಡಿ, ಅವರಿಗೆ ನನ್ನ ಅವಶ್ಯಕತೆ ಇದ್ದರೆ ಅವರಾಗೆ ಮಾಧ್ಯಮಗಳ ಮುಖಾಂತರ ಸಾರ್ವಜನಿಕವಾಗಿ ಕರೆಕೊಟ್ಟರೆ ಮಾತ್ರ ನಾನು ಮಂತ್ರಿಯಾಗುವೆ. ಅದು ನನಗೆ ಒಂದು ಸಂತೋಷದ ಜವಾಬ್ದಾರಿ ಮಾತ್ರವಾಗಿರುತ್ತದೆ. ಒಂದು ವೇಳೆ ಮಂತ್ರಿ ಆಗದಿದ್ದರೆ ಆಗ ನನ್ನ ಸಂತೋಷ ಖಂಡಿತವಾಗಿಯೂ ಇಮ್ಮಡಿಯಾಗುತ್ತದೆ. ಏಕೆಂದರೆ ‌ನನ್ನೆಲ್ಲಾ‌ ಸಮಯ ಮತ್ತು ಶ್ರಮವನ್ನು ಶಾಸಕನಾಗಿ ನನ್ನ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ.

ಮಂತ್ರಿಗಿರಿಗಾಗಿ ಅಥವಾ ಯಾವುದೇ ಖಾತೆಗಾಗಿ ಅಥವಾ ಯಾವುದೇ ಸಂಸ್ಥೆಗಳ ಅಧ್ಯಕ್ಷತೆಗಾಗಿ ಪ್ರತ್ಯಕ್ಷ ಅಥವಾ ಪರೋಕ್ಷ ಪ್ರಯತ್ನ ಮಾಡುವುದಿಲ್ಲ. ಒಂದು ವೇಳೆ ಹಾಗೆ ಮಾಡಿರುವುದು ಸಾಬೀತಾದರೆ ಸ್ವತಃ ನಾನೇ ಎಲ್ಲರ ಕ್ಷಮೆ ಕೇಳಿ ನನ್ನ ಕುಟುಂಬ ಸಮೇತ ಈ ರಾಜ್ಯವನ್ನು ತೊರೆದು ಗಡಿಪಾರು ಶಿಕ್ಷೆಗೆ ಒಳಪಡಿಸಿಕೊಳ್ಳುತ್ತೇನೆ.

ಮೇಲೆ ಹೇಳಿದ ಎಲ್ಲಾ ಪ್ರತಿಜ್ಞೆಗಳು ನನ್ನ ಸ್ವ ಇಚ್ಛೆಯಿಂದ ಮಾಡಿದ್ದೇನೆ. ಯಾವುದೇ ಭಯ ಒತ್ತಡದಿಂದ ಮಾಡಿರುವುದಿಲ್ಲ. ಮೇಲೆ ಸಂಕಲ್ಪ ಮಾಡಿ ಒಳಗೆ ಕಾನೂನಿನ ಒಳಸುಳಿಗಳನ್ನು ಉಪಯೋಗಿಸಿಕೊಂಡು ಇದನ್ನು ನಾಶಪಡಿಸಲು ಪ್ರಯತ್ನಿಸುವುದಿಲ್ಲ.

ಅಧಿಕಾರ ಶಾಶ್ವತವಲ್ಲ. ಜನರಿಗೆ ನಾನು ಮಾಡುವ ಕೆಲಸಗಳು ಶಾಶ್ವತ .

ದೇಶದ ಸಂವಿಧಾನದ ಆಶಯಗಳಿಗೆ ಯಾವುದೇ ಕುಂದು ಬಾರದಂತೆ ನನ್ನ ಕರ್ತವ್ಯವನ್ನು ನಿಭಾಯಿಸುತ್ತೇನೆ.
ಧನ್ಯವಾದಗಳು “

ಮೇಲೆ ಹೇಳಿದ ಎಲ್ಲವೂ ಸತ್ಯ ಮತ್ತು ನನ್ನ ಮಾತಿಗಳಿಗೆ ಬದ್ದನಾಗಿರುತ್ತೇನೆ ಎಂದು ಮತ್ತೊಮ್ಮೆ ಪ್ರಮಾಣ ಮಾಡುವ ನಿಮ್ಮ ಸೇವಕ
” ರಾಮಪ್ಪ ಸೋಮಪ್ಪ ಭೀಮಪ್ಪ ಕೃಷ್ಣಪ್ಪ ಡೇವಿಡ್ ಸಾಬಣ್ಣ ಜೈನಸಿಂಗ್ ” ಎಂಬ ಹೆಸರಿನ ನಾನು…….”


ಮಂತ್ರಿಮಂಡಲ ಎಂಬ ಬಗೆಹರಿಯದ ಬಹುದೊಡ್ಡ ಸಮಸ್ಯೆಯನ್ನು ತನ್ನ ಒಡಲೊಳಗೆ ಹುದುಗಿಸಿಕೊಂಡು‌ ಅಭದ್ರತೆಯಿಂದ ನರಳುವ ಯಾವ ಮುಖ್ಯಮಂತ್ರಿಯೂ ರಾಜ್ಯದ ಅಭಿವೃದ್ಧಿಯ ಬಗ್ಗೆ ಸಂಪೂರ್ಣ ಗಮನಹರಿಸಲು ಸಾಧ್ಯವಿಲ್ಲ. ಇದು ರಾಜಕೀಯ ಸುಳಿಗಳು ‌ ಇದನ್ನು ಎದುರಿಸಲೇ ಬೇಕು ಎಂದು ಒಪ್ಪಿಕೊಂಡರೆ ಆ ಸ್ಥಾನದಲ್ಲಿರುವ ವ್ಯಕ್ತಿ ಇದನ್ನು ಸಮರ್ಥವಾಗಿ ನಿಭಾಯಿಸುವ ಕಲೆ ಮೈಗೂಡಿಸಿಕೊಳ್ಳಬಹುದೇ ಹೊರತು ರಾಜ್ಯದ ಜನರ ಸೇವೆ ಬಗ್ಗೆ ಗಮನ ಹರಿಸಲು ಸಮಯವೇ ಸಾಕಾಗುವುದಿಲ್ಲ.

ಒಟ್ಟಿನಲ್ಲಿ ಜನತೆಗೆ ವರವಾಗಬೇಕಿದ್ದ ಮಂತ್ರಿಮಂಡಲ ರಚನೆ ಶಾಪವಾಗಿ ಪರಿವರ್ತನೆಯಾದ ಕಾಲ ಘಟ್ಟದಲ್ಲಿ ನಾವಿದ್ದೇವೆ. ಇದು ಶೀಘ್ರವಾಗಿ ಬದಲಾಗಬೇಕಿದೆ. ಇಲ್ಲದಿದ್ದರೆ ಪ್ರಜಾಪ್ರಭುತ್ವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ………


ರಾಜಕೀಯ ನಾಯಕರು ಹೇಳುತ್ತಾರೆ,
ಪ್ರಜೆಗಳೇ ಪ್ರಭುಗಳು.

ಚಲನಚಿತ್ರ ತಾರೆಗಳು ಕರೆಯುತ್ತಾರೆ,
ಅಭಿಮಾನಿಗಳೇ ದೇವರುಗಳು.

ಸ್ವಾಮೀಜಿಗಳು ನುಡಿಯುತ್ತಾರೆ,
ಸರ್ವಸ್ವವೂ ಭಕ್ತರೇ.

ವಾಣಿಜ್ಯೋದ್ಯಮಿಗಳು ಭಾವಿಸುತ್ತಾರೆ,
ಗ್ರಾಹಕರೇ ಮಾಲೀಕರು.

ಚಿಂತಕರು ಘೋಷಿಸುತ್ತಾರೆ,
ರೈತರೇ ಅನ್ನದಾತರು.

ಆದರೆ,

ಇದು ನಿಜವೇ, ? ವಾಸ್ತವವೇ, ?

ಜನರ ಭಾವನೆಗಳನ್ನು ಕೆರಳಿಸಿ,
ಜನರ ಮೌಢ್ಯಗಳನ್ನು ದುರುಪಯೋಗಿಸಿ ,
ಬಣ್ಣದ ಮಾತುಗಳಿಂದ, ನವರಂಗಿ ಆಟಗಳಿಂದ,
ಚೆಂದದ ಮುಖವಾಡಗಳಿಂದ, ಅಂದದ ನೋಟಗಳಿಂದ,
ಜನರನ್ನು ಶೋಷಿಸಿ, ವಂಚಿಸಿ,
ಅವರ ಸಮಾಧಿಗಳ ಮೇಲೆ ಮಹಲುಗಳನ್ನು ಕಟ್ಟಿಸಿ,
ಸುಖಿಸುತ್ತಿರುವ ನಾಯಕರೇ,

ನಿಮ್ಮ ಆತ್ಮಗಳು ಅವಲೋಕನ ಮಾಡಿಕೊಳ್ಳುವುದು ಎಂದು,?
ಇದೆಲ್ಲವನ್ನು ಅರ್ಥಮಾಡಿಕೊಳ್ಳದೇ ಭ್ರಮೆಯಲ್ಲಿ ತೇಲುತ್ತಿರುವ,
ನನ್ನವರೇ, ನೀವು ಎಚ್ಚರವಾಗುವುದು ಎಂದು,?

ನಾನು ನಿಮಗಾಗಿ ಕಾಯುತ್ತಿದ್ದೇನೆ……

  • ವಿವೇಕಾನಂದ ಹೆಚ್ ಕೆ
Copyright © All rights reserved Newsnap | Newsever by AF themes.
error: Content is protected !!