ಮಾರ್ಗಶಿರ ಮಾಸವೇ ನಾನೆಂದು ಶ್ರೀಕೃಷ್ಣನೇ ಭಗವದ್ಗೀತೆ ಯಲ್ಲಿ ತಿಳಿಸಿದ್ದಾನೆ. ಭಗವಂತನನ್ನು ಅರ್ಚಿಸಲು ಬಹುಶಃ ಇದಕ್ಕಿಂತ ಪುಣ್ಯಕಾಲ ಇನ್ನೊಂದಿಲ್ಲ. ಶ್ರೀಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡಿದ್ದೂ ಸಹ ಇದೇ ಮಾರ್ಗಶಿರ ಮಾಸದಲ್ಲಿ.
ಹಿಂದೂ ಪಂಚಾಂಗದ ಪ್ರಕಾರ 9 ನೇ ಮಾಸವಾಗಿರುವ ಮಾರ್ಗಶಿರ ಮಾಸವನ್ನು ಅತ್ಯಂತ ಪುಣ್ಯ, ಪವಿತ್ರವಾದ ಮಾಸ ಎಂದು ಭಾವಿಸುತ್ತಾರೆ. ಮಾರ್ಗಶಿರ ಮಾಸದ ಭಾಗವೂ ಆಗಿರುವ ‘ಧನು ತಿಂಗಳ’ಲ್ಲಿ, ಭಗವಂತನನ್ನು ಅರ್ಚಿಸಿ ಕೃತಾರ್ಥರಾದ ಹಲವಾರು ಉದಾಹರಣೆಗಳು ಪುರಾಣಗಳಲ್ಲಿ ಸಿಗುತ್ತವೆ.
ಆದಿ ನಾರಾಯಣ ಸೂರ್ಯನು ವೃಶ್ಚಿಕ ರಾಶಿಯಿಂದ ಧನುರಾಶಿಗೆ ಪ್ರವೇಶಿಸುವ ಸಮಯದಿಂದ ಧನುರ್ಮಾಸಂ ಆರಂಭವಾಗುತ್ತದೆ. ವಿಷ್ಣು ಪುರಾಣದ ಪ್ರಕಾರ ವಿಷ್ಣುವಿನ ಮುಂದೆ ಹಸುವಿನ ತುಪ್ಪದ ದೀಪವನ್ನು ಹಚ್ಚಿ, ವಿಷ್ಣುವಿನ ಸಹಸ್ರ ನಾಮ ಮತ್ತು ಭಗವದ್ಗೀತೆಯನ್ನು ಪಠಿಸುವವರಿಗೆ ವಿಷ್ಣುವಿನ ಕಟಾಕ್ಷ ದೊರೆಯುತ್ತದೆಂದು ವಿಷ್ಣು ಪುರಾಣ ಹೇಳುತ್ತದೆ .
ಪ್ರತಿ ತಿಂಗಳು ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಕಾರ್ತಿಕ ಮಾಸದಿಂದ ಇಂದು ಮಾರ್ಗಶಿರ ಮಾಸಕ್ಕೆ ಕಾಲಿಡುತ್ತಿದ್ದೇವೆ. ಹೇಮಂತ ಋತುವಿನ ಮೊದಲ ತಿಂಗಳು ಮಾರ್ಗಶಿರ. ಈ ಹಿನ್ನಲೆಯಲ್ಲಿ ಹಿಂದೂ ಸನಾತನ ಧರ್ಮದಲ್ಲಿ ಮಾರ್ಗಶಿರ ಮಾಸದ ವಿಶೇಷ ಮಹತ್ವವನ್ನು ನಾವಿಂದು ತಿಳಿಯೋಣ.
ಮಾರ್ಗಶಿರ ಶುದ್ದ ಪಂಚಮಿಯಂದು ನಾಗಪೂಜೆ ಮಾಡುವುದರಿಂದ ವಿಶೇಷ ಫಲ ಸಿಗುತ್ತದೆ. ಶುಭ ಕಾರ್ಯಗಳನ್ನು ಪ್ರಾರಂಭಿಸಲು ಇದು ಮಂಗಳಕರ ದಿನ ಎಂದು ಹೇಳಲಾಗುತ್ತದೆ.
ಮಾರ್ಗಶಿರ ಶುದ್ದ ಷಷ್ಠಿಯನ್ನು ಸ್ಕಂದ ಷಷ್ಠಿ ಎಂದು ಕರೆಯುತ್ತಾರೆ. ಸುಬ್ರಹ್ಮಣ್ಯೇಶ್ವರ ಷಷ್ಠಿ. ಈ ಷಷ್ಠಿಯ ದಿನದಂದು ಸುಬ್ರಹ್ಮಣ್ಯ ಸ್ವಾಮಿಯನ್ನು ಪೂಜಿಸಿದರೆ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ಮಾರ್ಗಶಿರ ಶುದ್ಧ ಸಪ್ತಮಿಯನ್ನು ರಥ ಸಪ್ತಮಿ, ಭಾನುಸಪ್ತಮಿ, ಜಯಸಪ್ತಮಿ, ಮಿತ್ರಸಪ್ತಮಿ ಎಂದು ಕರೆಯಲಾಗುತ್ತದೆ. ಈ ದಿನ ಸೂರ್ಯನನ್ನು ಪೂಜಿಸಿ ಪಾಯಸವನ್ನು ನೈವೇದ್ಯ ಮಾಡಿದರೆ ಒಳ್ಳೆಯ ಫಲ ಪ್ರಾಪ್ತವಾಗುತ್ತದೆ.
ಮಾರ್ಗಶಿರ ಅಷ್ಟಮಿಯನ್ನು ಕಾಲಭೈರವಾಷ್ಟಮಿ ಎಂದು ಕರೆಯಲಾಗುತ್ತದೆ. ಭಗವಾನ್ ಶಿವನ ಇನ್ನೊಂದು ರೂಪ ಭೈರವ. ಭೈರವ ಎಂದರೆ ರಕ್ಷಕ ಮತ್ತು ನಿರ್ಭೀತ ಎಂದರ್ಥ. ಭೈರವನ ಬಳಿ ಕಾಳ ಕೂಡ ಇರುತ್ತಾನೆ, ಕಾಲ ಭೈರವನಾದನು. ಭೈರವನನ್ನು ಆಶ್ರಯಿಸಿದರೆ ಮರಣ ಭಯ ದೂರವಾಗುತ್ತದೆ. ಈ ದಿನ ಗಂಗಾಸ್ನಾನ, ಪಿತೃ ತರ್ಪಣ, ಶ್ರಾದ್ಧ ಕರ್ಮಗಳನ್ನು ನೆರವೇರಿಸಿದರೆ ವರ್ಷಪೂರ್ತಿ ಲೌಕಿಕ, ಪರ ಲೌಕಿಕ ಯಾತನೆಗಳಿಂದ ಮುಕ್ತಿ ದೊರೆಯುತ್ತದೆ ಎಂಬ ನಂಬಿಕೆ ಇದೆ. ಅಲ್ಲದೆ ಭೈರವನ ವಾಹನವಾದ ನಾಯಿಗೆ ಹಾಲು, ಮೊಸರು ಮೊದಲಾದ ಆಹಾರ ನೀಡುತ್ತಾರೆ.
ಈ ಮಾಸದಲ್ಲಿ ಬರುವ ಶುಕ್ಲ ಏಕಾದಶಿಯಂದು ಗೀತಾ ಜಯಂತಿಯನ್ನು ಆಚರಿಸಲಾಗುತ್ತದೆ. ಅಂದರೆ ಶ್ರೀಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡಿದ ದಿನವದು. ಅದಕ್ಕೆ ಮೋಕ್ಷದಾ ಏಕಾದಶಿ ಎಂಬ ಹೆಸರಿದೆ. ಮೋಕ್ಷದಾ ಅಂದರೆ ಮೋಕ್ಷವನ್ನು ನೀಡುವ, ಭವಬಂಧನಗಳಿಂದ ಮನಸನ್ನು ಕಳಚುವುದು ಎಂದು ಅರ್ಥ. ಹಾಗಾಗಿಯೇ ಅದಕ್ಕೆ ಗೀತಾ ಜಯಂತಿಯ ದಿನವನ್ನು ಮೋಕ್ಷದಾ ಏಕಾದಶಿ ಎಂದೂ ಹೇಳುತ್ತಾರೆ. ಇಂದು ವಿಷ್ಣು ದೇವರಿಗೆ ಅತ್ಯಂತ ಮಂಗಳಕರ ದಿನ ಎಂದು ಹೇಳಲಾಗುತ್ತದೆ. ವಿಷ್ಣುಸಹಸ್ರನಾಮ ಪಾರಾಯಣದಿಂದ ಎಲ್ಲಾ ಪಾಪಗಳು ದೂರವಾಗುತ್ತವೆ. ಈ ದಿನ ಉತ್ತರ ದ್ವಾರ ದರ್ಶನದಿಂದ ಮೋಕ್ಷ ಸಿಗುತ್ತದೆ ಎಂದು ಹೇಳಲಾಗುತ್ತದೆ. ಈ ಮಾಸದಲ್ಲಿ ಬರುವ ದ್ವಾದಶಿಯನ್ನು ಅಖಂಡ ದ್ವಾದಶಿ ಎನ್ನುತ್ತಾರೆ.
ಮಾರ್ಗಶಿರ ಶುದ್ಧ ತ್ರಯೋದಶಿಯಂದು ಹನುಮದ್ವ್ರತವನ್ನು ಹನುಮನ ಭಕ್ತರು ಮಾಡುತ್ತಾರೆ.
ಮಾರ್ಗಶಿರ ಶುದ್ದ ಪೌರ್ಣಮಿಯಂದು ದತ್ತಾತ್ರೇಯ ಜಯಂತಿ. ದತ್ತಾತ್ರೇಯ ತ್ರಿಮೂರ್ತಿಗಳ ದ್ಯೋತಕ. ಅನಘವ್ರತವನ್ನು ಮಾಡಿ ಭಗವಂತನನ್ನು ಪೂಜಿಸಿದರೆ ಪಾಪಗಳೆಲ್ಲವೂ ದೂರವಾಗುತ್ತದೆ ಎಂಬ ನಂಬಿಕೆಯುಂಟು.
ಮಾರ್ಗಶಿರ ಬಹುಳ ಅಷ್ಟಮಿಯಂದು ಚಕ್ರವರ್ತಿ ಕಾರ್ತವೀರ್ಯಾರ್ಜುನನಿಗೆ ಭಗವಾನ್ ದತ್ತಾತ್ರೇಯನು ಸ್ವತಃ ಬೋಧಿಸಿದ ವ್ರತ “ಅನಘಾಷ್ಟಮಿ “ದತ್ತಾತ್ರೇಯ ಸ್ವಾಮಿಯ ಯೋಗದ ಶಕ್ತಿಯಿಂದ ಅವತಾರವೆತ್ತಿದವಳೆ ಅನಘಾ ದೇವಿ. ದತ್ತಾತ್ರೇಯ ಸ್ವಾಮಿಯ ಹೆಣ್ಣು ರೂಪದಲ್ಲಿರುವ ಅನಘಾ ದೇವಿ ಬಹಳ ಸುಂದರಿಯಾಗಿ ಹೊಳೆಯುವ ಮುಖಕಾಂತಿಯನ್ನ ಹೊಂದಿದ್ದು ದತ್ತಾತ್ರೇಯ ಸ್ವಾಮಿಯ ಹಲವಾರು ಅವತಾರಗಳಲ್ಲಿ ಒಬ್ಬಳು. ಈ ಲೀಲೆಯ ಹಿಂದಿನ ಕಾರಣವೇ ಭಕ್ತರಿಗೆ ದೇವರ ಸ್ವರೂಪದ ಬಗ್ಗೆ ಅರ್ಥ ಮಾಡಿಸಲು ದೇವರಲ್ಲಿ ಗಂಡು, ಹೆಣ್ಣೆಂಬ ಬೇಧವಿಲ್ಲ ಎಂದು ಭಕ್ತರಿಗೆ ಅರ್ಥ ಮಾಡಿಸುವುದು . ಇದನ್ನರಿತು ಅನಘಾ ದೇವಿಯ ಪೂಜೆ ಮಾಡುವುದರಿಂದ ಸರ್ವ ವ್ಯಾಧಿಗಳೂ ನಿವಾರಣೆಯಾಗಿ ಶಾಂತಿ, ನೆಮ್ಮದಿ, ಅಷ್ಟಸಿದ್ಧಿಗಳೂ ದೊರಕುತ್ತವೆ.
ಮಾರ್ಗಶಿರ ಹುಣ್ಣಿಮೆಯಿಂದ ಅನೇಕ ರೀತಿಯ ರೋಗಗಳು ಮತ್ತು ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಈ ದಿನ ಯಮಧರ್ಮರಾಜ ನನ್ನು ಪೂಜಿಸಲಾಗುತ್ತದೆ. ಈ ಹುಣ್ಣಿಮೆಯನ್ನು ಕೊರಳ ಪುನ್ನಮಿ ಮತ್ತು ನರಕ ಪೌರ್ಣಮಿ ಎಂದೂ ಕರೆಯುತ್ತಾರೆ.
ಮಾರ್ಗಶಿರಮಾಸದಲ್ಲಿ ಗುರುವಾರಗಳು ಬಹಳ ವಿಶೇಷವಾದವು. ಮಾರ್ಗಶಿರ ಮಾಸ ‘ಭಗವಾನ್ ವಿಷ್ಣು’ವಿಗೆ ಹಾಗೂ “ಮಹಾಲಕ್ಷ್ಮಿ”ಗೆ ಅತ್ಯಂತ ಪ್ರಿಯವಾಗಿದೆ. ಅದರಲ್ಲೂ ಮಾರ್ಗಶಿರ ಮಾಸ “ಗುರುವಾರ”ದಂದು ಮಹಾಲಕ್ಷ್ಮಿಯ ಆರಾಧನೆ ಶ್ರೇಷ್ಠವೆಂದು ಹೇಳುತ್ತಾರೆ. ಆ ದಿನದಂದು ಮಾರ್ಗಶಿರ ಲಕ್ಷ್ಮಿ ವ್ರತವನ್ನು ಆಚರಿಸುವುದರಿಂದ ಆರೋಗ್ಯ, ಐಶ್ವರ್ಯ ಮತ್ತು ಸಂಪತ್ತು ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯಿದೆ.
ಈ ಮಾಸ ಆಸ್ತಿಕರಿಗೆ ಅಧ್ಯಾತ್ಮದ ಹೊಳಹನ್ನು ತೋರಿದರೆ, ಲೌಕಿಕರಿಗೆ ಜೀವನ ಪಾಠವನ್ನು ಕಲಿಸಿಕೊಡುತ್ತದೆ. ಯಾವ ದೃಷ್ಟಿಯಿಂದ ಪಾಲಿಸಿದರೂ ಆತ್ಮೋದ್ಧಾರ, ದೇಹಾರೋಗ್ಯ, ಮಾನಸಿಕ ಸಂತುಲನೆಗಳಿಗೆ ದೇವರೇ ತೋರಿದ ದಾರಿ ಈ ಮಾಸದ ಆಚರಣೆಗಳು.
ಇದು “ದೇವ ಮಾಸ” ಈ ಮಾಸ ದೇವತಾರಾಧನೆಗೆ ಮೀಸಲು. ದೇವತಾ ಕಾರ್ಯಗಳಿಂದ ಜನರು ವಿಮುಖರಾಗ ಬಾರದೆಂದು ಮದುವೆ, ಮುಂಜಿ, ಗೃಹಪ್ರವೇಶ ಗಳಂತಹ ಸಡಗರ, ಸಂಭ್ರಮೋಲ್ಲಾಸಗಳು ನಿಷಿದ್ಧ. ಬಹುಶಃ ಇದಕ್ಕಾಗಿಯೇ ಧನುರ್ಮಾಸ ಶೂನ್ಯ ಮಾಸ. ಸೂರ್ಯನು ಧನು ರಾಶಿಯಲ್ಲಿ ಅಸ್ತವಾಗುವುದರಿಂದ, ಶುಭಕೆಲಸಗಳಿಗೆ ಸೂಕ್ತವಲ್ಲ ಎಂಬ ಅಭಿಪ್ರಾಯವೂ ಇದೆ. ಅಪರಿಮಿತ ಪುಣ್ಯ ಸಂಪಾದನೆಗೆ,ಮೋಕ್ಷದ ದಾರಿಗೆ ಅವಕಾಶವಿರುವ ಈ ಪರ್ವಕಾಲವೇ ”ದೇವ ಮಾಸ”.
ಶ್ರೀ ಮಹಾವಿಷ್ಣುವಿಗೆ ಇಷ್ಟವಾಗುವ ಈ ಮಾಸದಲ್ಲಿ ವಿಷ್ಣು ಸಹಸ್ರನಾಮ ಪಾರಾಯಣವು ಅನಂತಕೋಟಿಯ ಪುಣ್ಯ ಫಲವನ್ನು ತರುತ್ತದೆ. ಪುರಾಣಗಳ ಪ್ರಕಾರ ಗುರುವಾರದಂದು ಮಾಡುವ ಪೂಜೆ ಅತ್ಯಂತ ವಿಶೇಷವಾದುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಮಾಸವನ್ನು ಸೌರಮಾನದ ಪ್ರಕಾರ ಧನುರ್ಮಾಸ ಮತ್ತು ಚಂದ್ರಮಾನದ ಪ್ರಕಾರ ಮಾರ್ಗಶಿರ ಮಾಸ ಎಂದು ಕರೆಯಲಾಗುತ್ತದೆ. ಇದನ್ನು ಆಧ್ಯಾತ್ಮಿಕ ಮಾಸವೆಂದೂ ಕರೆಯುತ್ತಾರೆ.
ಮತ್ತೇಕೆ ತಡ ಅಪರಿಮಿತ ಪುಣ್ಯ ಸಂಪಾದನೆಯತ್ತ ನಮ್ಮ ಚಿತ್ತವಿರಲಿ…ಅಲ್ವಾ
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು