November 25, 2024

Newsnap Kannada

The World at your finger tips!

bombe

ನವರಾತ್ರಿ ಪರ್ವದಲ್ಲಿ ಬೊಂಬೆಗಳ ಅಲಂಕಾರ

Spread the love
uma nagraj
ಉಮಾ ನಾಗರಾಜ್

ನಾಡಹಬ್ಬವೆಂದೇ ವಿಶ್ವವಿಖ್ಯಾತ ಮೈಸೂರ ದಸರಾ ಹಬ್ಬವು ತುಂಬಿದಮನೆ ಮನಸ್ಸಿಗೆ ಮುದ ನೀಡುವುದರ ಜೊತೆಗೆ ಇನ್ನಷ್ಟು ಮತ್ತಷ್ಟು ಮೆರಗನ್ನು ತುಂಬುವ ಹೊನ್ನಿನ ಕಲಶವೇ ಸರಿ. ನವರಾತ್ರಿ ಪರ್ವದಲ್ಲಿ ಈ ಬೊಂಬೆಗಳ ಅಲಂಕಾರವನ್ನು ಕಣ್ತುಂಬಿಸಿಕೊಳ್ಳುವುದೇ ಬಹುದೊಡ್ಡ ಸಂಭ್ರಮ..!

ಈ ದಸರಾಹಬ್ಬ ಅಥವಾ ಬೊಂಬೆಹಬ್ಬದ ಪದ್ಧತಿ ಸರಿಸುಮಾರು ೧೮ ನೆಯ ಶತಮಾನದಿಂದ ಬಂದಿರುವಂಥಾದ್ದು ಎಂಬ ಉಲ್ಲೇಖವಿದೆ.
“ಮೈಸೂರು ದಸರಾ” ಎಂದೇ ಜಗತ್ ಪ್ರಸಿದ್ಧಿ ಪಡೆದಿರುವ ಈ ವಿಶೇಷ ಆಚರಣೆ ಮೈಸೂರು ಅರಸರಿಂದ ಅರಮನೆಯಲ್ಲಿ ಮೊಟ್ಟಮೊದಲಿಗೆ ವಿಜೃಂಭಣೆಯಿಂದ ಪ್ರಾರಂಭವಾದಾಗ ಪ್ರಜೆಗಳೆಲ್ಲರೂ ರಾಜಮನೆತನದ ಈ ಸಂಭ್ರಮವನ್ನು ಕಂಡು ತಾವೂ ಸಡಗರದಿಂದ ತಮ್ಮ ತಮ್ಮ ಮನೆಯಲ್ಲಿ ಪಟ್ಟದ ಬೊಂಬೆಗಳನ್ನಿಟ್ಟು ಪೂಜಿಸುವ ಪದ್ಧತಿ ಬೆಳೆದುಕೊಂಡು ಬಂದಿದೆ ಎನ್ನಲಾಗಿದೆ.

ಬೊಂಬೆ ಕೂರಿಸುವುದು ಮೇಲ್ನೋಟಕ್ಕೆ ಕೇವಲ ಒಂದು ಸಂಭ್ರಮವಾಗಿ ಕಂಡು ಬಂದರೂ ಈ ಆಚರಣೆಯ ಹಿಂದೆ ಒಂದು ಧಾರ್ಮಿಕ ಚೌಕಟ್ಟೂ ಇದೆ. ರಾಮಾಯಣ, ಮಹಾಭಾರತ, ವಿಷ್ಣುಪುರಾಣ, ಶ್ರೀಕೃಷ್ಣನ ಲೀಲೆಗಳು, ದುರ್ಗಾವತಾರಗಳು ಹೀಗೆ ನಾನಾ ಬಗೆಯ ಕಥೆಗಳನ್ನು ಬಿಂಬಿಸುವ ರೀತಿಯಲ್ಲಿ ಈ ಬೊಂಬೆಗಳನ್ನು ಜೋಡಿಸಲಾಗಿರುತ್ತದೆ…!

ಇದರಲ್ಲಿ ಮುಖ್ಯವಾಗಿ ಅಷ್ಟಲಕ್ಷ್ಮಿಯರು, ದಶಾವತಾರದ ಬೊಂಬೆಗಳು, ಸೀತಾಕಲ್ಯಾಣದ ಜೋಡಿಗಳು, ವೈಕುಂಠ ಪ್ರದರ್ಶನದ ಬೊಂಬೆಗಳು, ಶಿವ-ಪಾರ್ವತಿಯರ ಕೈಲಾಸ ಪರ್ವತದ ಸುಂದರ ನೋಟ ಹೀಗೆ ಒಂದೊಂದು ಅಂತಸ್ತಿನಲ್ಲಿ ಒಂದೊಂದನ್ನು ವಿಶೇಷವಾಗಿ ಜೋಡಿಸಿಟ್ಟು ಅಲಂಕರಿಸುವುದು ವಾಡಿಕೆ. ತಮ್ಮ ಇಚ್ಛಾನುಸಾರವಾಗಿ ೫,೭,೯,೧೧ ಸಾಲುಗಳಲ್ಲಿ ಅಂದವಾಗಿ ಜೋಡಿಸಿರುತ್ತಾರೆ.ಹಾಗೆಯೇ ಗುರು ಪರಂಪರೆಯ ಎಲ್ಲಾ ಗುರುಗಳನ್ನು ಒಂದು ವಿಭಾಗದಲ್ಲಿ ಜೊತೆಗೆ ಚಾಮುಂಡೇಶ್ವರಿಯ ವಿಶೇಷ ಹಬ್ಬವಾಗಿರುವುದರಿಂದ ಆ ದೇವಿಯ ವಿಗ್ರಹವನ್ನು ಮಧ್ಯದಲ್ಲಿರಿಸಿ ಅಕ್ಕಪಕ್ಕದಲ್ಲಿ ಸರಸ್ವತಿ, ಗೌರಿ, ಲಕ್ಷ್ಮಿಯರ ವಿಗ್ರಹಗಳನ್ನಿಟ್ಟು ಪೂಜಿಸುತ್ತಾರೆ. ಈ ಬೊಂಬೆ ಹಬ್ಬದ ಪ್ರಮುಖ ಆಕರ್ಷಣೆಯೆಂದರೆ ಪಟ್ಟದರಾಜ ಮತ್ತು ಪಟ್ಟದರಾಣಿ ಕೇಂದ್ರ ಬಿಂದುವಾಗಿ ರಾರಾಜಿಸುತ್ತಾರೆ…!

bombe1

ಬೊಂಬೆ ಕೂರಿಸುವವರು ಪ್ರತೀವರ್ಷ ಹಳೆಯ ಬೊಂಬೆಯ ಜೊತೆಗೆ ಒಂದು ಜೋಡಿ ಹೊಸ ಬೊಂಬೆಯನ್ನು ಸೇರಿಸಿ ಬೊಂಬೆ ಕೂರಿಸಬೇಕು ಎನ್ನುವುದರ ಜೊತೆಗೆ ಹೊಸ ಹೊಸ ಮಾದರಿಯಲ್ಲಿ ವಿಭಿನ್ನ ವಿನ್ಯಾಸದ ಬಟ್ಟೆಗಳನ್ನು ತಯಾರಿಸುವುದು ಕೂಡ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಈ ಆಚರಣೆಯ ಮುಖಾಂತರ ಕರಕುಶಲ ವಸ್ತುಗಳ ಪ್ರಾಮುಖ್ಯತೆಯನ್ನು ಎಲ್ಲರೂ ಗಮನಿಸುವುದಷ್ಟೇ ಅಲ್ಲ ಅವುಗಳ ಬಾಳಿಕೆ ಮತ್ತು ಬೇಡಿಕೆಯನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸ್ವದೇಶಿ ಉತ್ಪನ್ನಗಳ ಉಪಯೋಗವನ್ನು ಮಾಡಿಕೊಳ್ಳುವುದರ ಮೂಲಕ ವಿಶ್ವಕ್ಕೇ ಮಾದರಿಯಾಗುವಂತಹ ಸದುದ್ದೇಶವೂ ಅಡಕವಾಗಿದೆ…!

channapatana dolls

ಸಮಸ್ತ ಸೃಷ್ಟಿಯ ರಚನೆ ಒಂದೇ ವಸ್ತುವಿನಿಂದ ಆಗಿದೆ ಎನ್ನುವುದರ ಮಹತ್ವವನ್ನು ಸಾರುವುದೇ ದಸರಾ ಸಮಯದಲ್ಲಿ ಬೊಂಬೆ ಇಡುವುದರ ಮೂಲ ಸಂಕೇತ. ಹೀಗೆ ಸೃಷ್ಟಿ,ಸ್ಥಿತಿ, ಲಯ ಸಕಲವೂ ದೇವರ ಅನುಗ್ರಹವಾಗಿದ್ದು ಯಾವುದನ್ನೂ ಕೀಳಾಗಿ ಕನಿಷ್ಟವಾಗಿ ಕಾಣಬಾರದು. ಈ ಪ್ರಕೃತಿಯಲ್ಲಿರುವ ಪ್ರತಿಯೊಂದೂ ಬಹುಮುಖ್ಯ ಎಂದು ಸಾರುವ ಮೂಲಕ ಮನೆ ಮನೆಗಳಲ್ಲಿ ಇಟ್ಟ ಬೊಂಬೆಗಳನ್ನು ನೋಡಲು ಎಲ್ಲರನ್ನು ಆಹ್ವಾನಿಸುವುದು ಸರ್ವೇ ಸಾಮಾನ್ಯ. ಇದರೊಂದಿಗೆ ಬಂಧು ಮಿತ್ರರ ಪರಸ್ಪರ ಭೇಟಿ ಸುಸಂದರ್ಭ ಸೃಷ್ಟಿಯಾಗುತ್ತದೆ. ಈ ಬೊಂಬೆಗಳು ನಮ್ಮ ಜೀವನಕ್ಕೆ ಹಲವಾರು ಪಾಠಗಳನ್ನು ಕಲಿಸುತ್ತವೆ. ಜಗನ್ನಿಯಾಮಕನಾದ ಆ ದೇವರ ದೃಷ್ಟಿಯಲ್ಲಿ ನಾವೂ ಬೊಂಬೆಗಳೇ, ಅವನು ಆಟ ಆಡಿಸಿದಂತೆ ನಾವು ಆಡಲೇಬೇಕು ಮತ್ತು ಭಗವಂತನ ಇಚ್ಛೆಯಂತೆಯೇ ಎಲ್ಲವೂ ನಡೆಯುತ್ತದೆ ಎನ್ನುವ ಮಹತ್ವದ ಸಂದೇಶವನ್ನು ಹೊಂದಿದೆ..!

ಈ ಆಚರಣೆಯೊಂದಿಗೆ ಮಹಾಗ್ರಂಥಗಳ ಮಾಹಿತಿ ಬೊಂಬೆಗಳ ಜೋಡಣೆಯ ಮೂಲಕ ಅಚ್ಚಳಿಯದಂತೆ ಮುಂದಿನ ಪೀಳಿಗೆ ಗೆ ಪರಿಚಯಿಸುವ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ…!

Copyright © All rights reserved Newsnap | Newsever by AF themes.
error: Content is protected !!