January 16, 2025

Newsnap Kannada

The World at your finger tips!

deepa1

ಸಾವಿನ ವ್ಯಾಪಾರಿಗಳು: ಮಾನವೀಯತೆಯ ಕಳಂಕಗಳು…..

Spread the love

ಬಹಳ ನೋವು, ವಿಷಾದ ಮತ್ತು ಆಕ್ರೋಶದಿಂದ ಹೇಳಬೇಕಾಗಿದೆ.ಸಾವಿನ ವ್ಯಾಪಾರಿಗಳು , ಮಾನವೀಯತೆಯ ಕಳಂಕಗಳು ನಮ್ಮ ಸುತ್ತ ಮುತ್ತ ನಲ್ಲೇ ಇದ್ದಾರೆಂದು !

ಈ ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮೂರು ವರ್ಗಗಳು ಸೃಷ್ಟಿಯಾಗಿವೆ…..

ಕೊಲ್ಲುವವರು ಮತ್ತು ಸಾಯುವವರು,….

ಹೇಗೋ ಬದುಕುತ್ತಾ ನೋವಿನಲ್ಲಿರುವವರು…..

ಎಲ್ಲಾ ಸಂಪತ್ತುಗಳನ್ನು ಅನುಭವಿಸುತ್ತಾ ಮಜಾ ಉಡಾಯಿಸುವವರು………

ಮೊದಲನೆಯ ಗುಂಪಿನಲ್ಲಿರುವವರು,…….

ತಾವು ಮತ್ತು ತಮ್ಮವರ ಬದುಕಿಗಾಗಿ ಅಥವಾ ದೇಶ ಸೇವೆಯ ಅತಿ ಭಾವುಕತೆಯಿಂದ ದುಡಿಯುವ ಸೈನಿಕರು, ಅರೆ ಸೈನಿಕರು, ಗಡಿ ಭದ್ರತಾ ಪಡೆಯವರು, ಪೋಲೀಸರು ಮುಂತಾದ ಯೂನಿಫಾರಂನ ಶಿಸ್ತಿನ ಸಿಪಾಯಿಗಳು…..

ಅದೇ ರೀತಿ ವ್ಯವಸ್ಥೆಯ ವಿರುದ್ಧ ತಿರುಗಿಬಿದ್ದು ಇಡೀ ಸಮಾಜವನ್ನೇ ಬದಲಾಯಿಸುತ್ತೇವೆ ಎಂಬ ಹುಚ್ಚು ಹಪಹಪಿಗೆ ಬಿದ್ದು ಅವಾಸ್ತವಿಕ ಅಮಾನವೀಯ ಹಿಂಸೆಯಲ್ಲಿ ಮುಳುಗೇಳುತ್ತಿರುವ ನಕ್ಸಲರು ಮತ್ತು ಕೆಲವು ಪ್ರತ್ಯೇಕತಾ ವಾದಿಗಳು….

ಇನ್ನು ಧರ್ಮ ದೇವರು ಹಸು ರಾಮ ಎಂದು ಏನೇನೂ ಹುಚ್ಚು ಕಲ್ಪನೆಯ ಅಮಲಿಗೆ ಬಿದ್ದು ದೇಶಭಕ್ತಿಯ ಹೆಸರಿನಲ್ಲಿ ಕೊಲ್ಲುವವರು ಮತ್ತು ಕೊಲೆಯಾಗುವವರು……

ಎಡ ಬಲ ಪಂಥಗಳ ಪ್ರತಿಪಾದಕರು ಇದೇ ಗುಂಪಿಗೆ ಸೇರುತ್ತಾರೆ.

ಎರಡನೆಯ ಗುಂಪಿನಲ್ಲಿರುವವರು,……

ಹೇಗೋ ಏನೋ ಊಟ ಬಟ್ಟೆ ವಾಸಕ್ಕೆ ಅನುಕೂಲವಾದರೆ ಸಾಕು ಎಂದು ಅದಕ್ಕಾಗಿ ಜೀವನವನ್ನೇ ಸವೆಸುವ ರೈತರು ಕಾರ್ಮಿಕರು ಬಡವರನ್ನು ಒಳಗೊಂಡ ಮಧ್ಯಮ ವರ್ಗ. ವರದಕ್ಷಿಣೆಗಾಗಿ ಸಾಯುತ್ತಾ, ಪ್ರೀತಿ ಪ್ರೇಮಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾ, ಜಾತಿಗಾಗಿ ಹೊಡೆದಾಡಿಕೊಳ್ಳುತ್ತಾ, ಅಜ್ಞಾನ ದುರಹಂಕಾರದಿಂದ ಅಪಘಾತಕ್ಕೆ ಬಲಿಯಾಗುತ್ತಾ, ಹೆಣ್ಣಾದ ತಪ್ಪಿಗೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾ, ಅನೇಕ ಕೊರಗುಗಳಲ್ಲಿ ಅನಾರೋಗ್ಯಕ್ಕೆ ತುತ್ತಾಗುತ್ತಾ ಬದುಕುವ ಸಾಮಾನ್ಯರು……..

ಮೂರನೇ ಗುಂಪಿನಲ್ಲಿ,……..

ಅಧಿಕಾರಸ್ತ ರಾಜಕಾರಣಿಗಳು, ದೊಡ್ಡ ದೊಡ್ಡ ಭ್ರಷ್ಠ ಅಧಿಕಾರಿಗಳು, ಬೃಹತ್ ಉದ್ಯಮಿಗಳು, ಮಾಫಿಯಾದವರು, ಅತಿ ವಂಚಕ ದಲ್ಲಾಳಿಗಳು, ಜನಪ್ರಿಯ ಸಿನಿಮಾ ನಟರುಗಳು, ಎಲ್ಲಾ ಧರ್ಮಗಳ ಧರ್ಮಾಧಿಕಾರಿಗಳು , ಮಾಧ್ಯಮಗಳ ಧಣಿಗಳು ಮುಂತಾದ ಜನರಿದ್ದಾರೆ….‌.

ಮೊದಲನೆಯ ವರ್ಗದವರು ತಮ್ಮ ಜೀವ – ಜೀವನದ ಜೊತೆ ಸೆಣೆಸುತ್ತಾ ಅಭದ್ರತೆಯಲ್ಲಿಯೇ ಬದುಕುತ್ತಾ ಬಹುತೇಕ ಅಕಾಲ ಮರಣಕ್ಕೆ ತುತ್ತಾಗುತ್ತಾರೆ……

ಎರಡನೆಯ ವರ್ಗದವರ ಬದುಕಿಡೀ ಬಹುತೇಕ ಸಂಘರ್ಷಮಯವಾಗಿಯೇ ಕಳೆಯುತ್ತದೆ. ಇವರೇ ಬಹುಸಂಖ್ಯಾತರು……

ಆದರೆ ಈ ಮೂರನೇ ವರ್ಗ ಇದೆಯಲ್ಲ ಇದು ಅತಿ ಕಡಿಮೆ ಸಂಖ್ಯೆಯಲ್ಲಿದ್ದರೂ ನಮ್ಮ ಸಂಪತ್ತಿನ ಬಹುಭಾಗವನ್ನು ಆಕ್ರಮಿಸಿ ಮಜಾ ಮಾಡುತ್ತಾ, ಮೊದಲನೇ ವರ್ಗವನ್ನು ಭಾವನಾತ್ಮಕವಾಗಿ ಪೋಷಿಸಿತ್ತಾ ತಮ್ಮ ಹಿತ ಕಾಯ್ದುಕೊಂಡರೆ, ಎರಡನೇ ವರ್ಗವನ್ನು ಸಿನಿಮಾ, ಐಪಿಎಲ್, ಧಾರಾವಾಹಿ, ದೇವರು, ಧರ್ಮ, ವಿಶ್ವ ನಾಯಕತ್ವ, ದುಡ್ಡು ದೇಶಭಕ್ತಿ, ಶೌರ್ಯ, ಶೋಷಣೆ, ಹೋರಾಟ, ಸಮಾಜ ಸುಧಾರಣೆ ಮುಂತಾದ ಹುಚ್ಚು ಹಿಡಿಸುವ ಅಫೀಮಿನಂತ ವಿಷಯಗಳಲ್ಲಿ ಬಂಧಿಸಿಬಿಡುತ್ತಾರೆ……

ಈಗ ಯೋಚಿಸಿ ಹೇಳಿ.
” ಮೇರಾ ಭಾರತ್ ಮಹಾನ್ ” ಯಾರಿಗೆ ?

ಶ್ರಮ ಪಡುವವರು ಯಾರೋ ?
ಸುಖ ಪಡುವವರು ಇನ್ಯಾರೋ ?
ಈ ಸಂಕಷ್ಟದ ಸಮಯದಲ್ಲಿ ಎಲ್ಲರ ಮುಖವಾಡಗಳು ಕಳಚಿ ಬೀಳುತ್ತಿದೆ.

ಕ್ಷಮಿಸಿ,
ಇತ್ತೀಚಿನ ದಿನಗಳಲ್ಲಿ ಪತ್ರಿಕೆ, ಟಿವಿ,, ಸಾಮಾಜಿಕ ಜಾಲತಾಣಗಳಲ್ಲಿ ನಮ್ಮದೇ ಜನರ ಅಮಾಯಕ ಅಸಹಾಯಕ ಭಯಂಕರ ಸಾವುಗಳನ್ನು ಕಂಡಾಗ ಅನಿಸಿದ್ದು……,…..

ಸಾಮಾನ್ಯರೆ,
ಏಳಿ ಎದ್ದೇಳಿ, ನಿಮ್ಮ ಜೀವ ಅಮೂಲ್ಯ. ಈಗ ಇರುವುದಕ್ಕಿಂತ ಉತ್ತಮ ಬದುಕು ಕಟ್ಟಿಕೊಳ್ಳುವ ಅವಕಾಶ ಈ ಸೃಷ್ಟಿ ನಮಗೆ ನೀಡಿದೆ. ಅದು ನಮ್ಮ ಕೈಯಲ್ಲೇ ಇದೆ. ಸ್ವಲ್ಪ ತಾಳ್ಮೆ ವಿವೇಚನೆ ವಿಶಾಲ ಮನೋಭಾವ ಬೆಳೆಸಿಕೊಂಡರೆ ಸಾಕು.

ಮನಗಳಲ್ಲಿ,
ಮನೆಗಳಲ್ಲಿ,
ಮತಗಳಲ್ಲಿ,
ಬದಲಾವಣೆ ಮಾಡಿಕೊಳ್ಳೋಣ…..

ಅತ್ಯುತ್ತಮ ಆಡಳಿತಗಾರರು ನಮ್ಮ ನಡುವೆಯೇ ಇದ್ದಾರೆ.
ಅವರನ್ನು ಗುರುತಿಸುವ ಕೆಲಸ ಮಾಡೋಣ……

ವಿವೇಕಾನಂದ. ಹೆಚ್.ಕೆ.

Copyright © All rights reserved Newsnap | Newsever by AF themes.
error: Content is protected !!