ನಮ್ಮ ಕರ್ನಾಟಕ ಸಾಹಿತ್ಯಕ್ಕೆ& ಸಂಗೀತಕ್ಕೆ ದಾಸಶ್ರೇಷ್ಠರಾದ ಪುರಂದರ ದಾಸರ ಕೊಡುಗೆ ಅನುಪಮವಾದದ್ದು,ಆಚಾರ್ಯಪುರುಷರಾದ ಪುರಂದರದಾಸರು ಕರ್ನಾಟಕ ಸಂಗೀತ ಪಿತಾಮಹರೆಂದೇ ಸುಪ್ರಸಿದ್ಧರಾದವರು.
ಐಶ್ವರ್ಯದಲ್ಲಿ ನವಕೋಟಿ ನಾರಾಯಣರೆನಿಸಿದ್ದವರು,ಅಂತಸ್ತಿನಲ್ಲಿ ಉಪ್ಪರಿಗೆ ಮನೆ,ಕೊಪ್ಪರಿಗೆ ಹೊನ್ನು ಇದ್ದ ಭೂಪತಿ ಮುಂದೆ ತ್ಯಾಗದಲ್ಲಿ ಇವೆಲ್ಲದರ ಮೇಲೆ ಒಂದು ತುಳಸೀ ದಳ ಇಟ್ಟು ಶ್ರೀಕೃಷ್ಣಾರ್ಪಣ ಎಂದು ಹೇಳಿ,ಒಂದೇ ಕ್ಷಣದಲ್ಲಿ ಗೆಜ್ಜೆಕಟ್ಟಿ ಕೈಯಲ್ಲಿ ತಂಬೂರಿಯನ್ನು ಹಿಡಿದು ಹೆಗಲಿಗೆ ಜೋಳಿಗೆ ಹಾಕಿಕೊಂಡು ಮಧುಕರವೃತ್ತಿಯನ್ನು ಹಿಡಿದವರು.ಸಾಹಿತ್ಯದಲ್ಲಿ ಐದು ಶತಮಾನಗಳ ಕಾಲ ತನ್ನ ಜ್ಞಾನಪ್ರಭೆಯಿಂದ ಉಳಿದು ಬಂದ ಅಪೂರ್ವವಾದ ದಾಸ ಸಾಹಿತ್ಯ ನಿಧಿಯನ್ನು ನೀಡಿದವರು,ಪ್ರಮೇಯಭರಿತ ಶಾಸ್ತ್ರಜ್ಞಾನದಲ್ಲಿ ಸಕಲಶಾಸ್ತ್ರಕೋವಿದರಾಗಿ ಅಪರೋಕ್ಷ ಜ್ಞಾನಿಗಳೆಂದು ಕರೆಸಿಕೊಂಡವರು.ಇನ್ನು ಇವರ ಹಿರಿಮೆಯೆಂಬಂತೆ ಭಗವಂತನನ್ನು ಆರು ತಿಂಗಳ ಕಾಲ ತನ್ನ ಮನೆ ಬಾಗಿಲಿಗೆ ಅಲೆಸಿಕೊಂಡವರು ಎಂಬ ಕೀರ್ತಿಗೆ ಪಾತ್ರರಾದ ಮಹನೀಯರು.
ನಮಗೆಲ್ಲ ತಿಳಿದಂತೆ ಪುರಂದರದಾಸರು ಹುಟ್ಟುತ್ತಲೇ ಹರಿದಾಸರಾಗಿರಲಿಲ್ಲ,ಅವರ ಪೂರ್ವ ನಾಮ ಶ್ರೀನಿವಾಸನಾಯಕ ಎಂಬುದಾಗಿತ್ತು . ಅವರು ವಿಜಯನಗರದಲ್ಲಿ ರತ್ನಪಡಿ( ಮುತ್ತುರತ್ನಗಳನ್ನು ಮಾರುವ) ವ್ಯಾಪಾರಿಯಾಗಿದ್ದರು.ವಿಜಯನಗರದಂತಹ ಸಮೃದ್ಧ ಸೀಮೆಯಲ್ಲಿಯೇ ‘ನವಕೋಟಿ ನಾರಾಯಣ’ಎಂದು ಹೆಸರನ್ನು ಪಡೆದಿದ್ದ ದೊಡ್ಡ ಶ್ರೀಮಂತರಾಗಿದ್ದರು.ಸಿರಿವಂತಿಕೆ ಅಪಾರವಾಗಿದ್ದರೂ ಅವರ ಮನಸ್ಸು ಶ್ರೀಮಂತವಾಗಿರಲಿಲ್ಲ,ಅವರು ‘ಎಂಜಲು ಕೈಯಲ್ಲಿ ಕಾಗೆಯನ್ನು ಓಡಿಸದ’ ಪರಮಲೋಭಿಯಾಗಿದ್ದರು.ಇಂತಹ ಜಿಪುಣಾಗ್ರೇಸರನಾಗಿದ್ದ ವ್ಯಕ್ತಿ,ಹೆಂಡತಿಯ ಮೂಗುತಿಯ ನಿಮಿತ್ತವಾಗಿ ಒಮ್ಮೆಗೇ ವೈರಾಗ್ಯ ಭಾವ ಆವರಿಸಿ ವಿಜಯನಗರದ ಕಡೆ ಧಾವಿಸಿಬಂದು ವ್ಯಾಸರಾಜರಿಂದ ‘ಪುರಂದರವಿಠಲ’ ಎಂಬ ಅಂಕಿತ ಹಾಗೂ ಹರಿದಾಸ ದೀಕ್ಷೆಯನ್ನು ಸ್ವೀಕರಿಸುತ್ತಾರೆ.
ಅಂದಿನಿಂದ ‘ಶ್ರೀಶನ್ನ ಭಜಿಸುವುದಕ್ಕೆ ಅಧಿಕಾರಿ’ ಯಾದರು,ಎಂದರೆ ದಾಸರಾಗುವುದಕ್ಕೆ ಮೊದಲೇ ಅವರಿಗೆ ಶಾಸ್ತ್ರಜ್ಞಾನ,ಸಂಗೀತ ಜ್ಞಾನ ಇತ್ತು,ಆದರೆ ಅದು ಅಂತರ್ಗತವಾಗಿತ್ತು.ಈಗ ವರಗುರುಗಳ ಉಪದೇಶವಾಗಿ ಹರಿದಾಸರ ಸಂಗ ದೊರೆಯಿತು,ಮಾಯದ ಸಂಸಾರ ಮಮಕಾರ ಹಿಂಗಿತು.ಇಂತಹ ದಾರಿಗೆ ತನ್ನ ಬದುಕನ್ನು ತಿರುಗಿಸಿದ ‘ಹೆಂಡತಿ ಸಂತತಿ ಸಾವಿರವಾಗಲಿ’ ಎಂದ ದಾಸರಿಗೆ ‘ ಆದದ್ದೆಲ್ಲಾ ಒಳಿತೇ ಆಯಿತು,ಶ್ರೀಧರನ್ನ ಸೇವೆ ಮಾಡಲು ಸಾಧನ ಸಂಪತ್ತಾಯಿತು’.ಅದುವರೆಗೂ ತಮ್ಮಲ್ಲಿದ್ದ ಮೋಹಗಳನ್ನೆಲ್ಲಾ ಸ್ಮರಿಸಿಕೊಂಡ ದಾಸರು ಭಗವಂತನಲ್ಲಿ ‘ಬಿನ್ನಹಕೆ ಬಾಯಿಲ್ಲವಯ್ಯಾ,ಅನಂತ ಅಪರಾಧ ಎನ್ನಲ್ಲಿ ಇರಲಾಗಿ’ ಎಂದು ತಮ್ಮನ್ನು ಅವನಿಗೆ ಸಂಪೂರ್ಣವಾಗಿ ಒಪ್ಪಿಸಿಕೊಂಡರು.
ಪುರಂದರದಾಸರು ಭಗವತ್ ಚಿಂತನೆಯತ್ತ,ಸಾಧನೆಯತ್ತ ಮುನ್ನೆಡೆದರೂ ಹೆಂಡತಿ- ಮಕ್ಕಳನ್ನು ಬಿಟ್ಟು ಕಾಡಿಗೆ ಹೋಗಿ ಮೂಗು ಹಿಡಿದು ಕೂಡಲಿಲ್ಲ,’ಈಸಬೇಕು ಇದ್ದು ಜೈಸಬೇಕು’ ಎಂದು ಹೇಳಿ ಸಮಾಜದ ಜನತೆಯಲ್ಲಿ ಆತ್ಮಸ್ಥೈರ್ಯ, ಧೈರ್ಯ ತುಂಬಿ,ಕರ್ತವ್ಯ ಪ್ರಜ್ಞೆಯನ್ನು ತೋರಿದವರು .ಜನಸಾಮಾನ್ಯರ ನಡುವೆಯೇ ಬೆರೆತ ಅವರು ‘ ಗಾಳಿ ಬಂದ ಕೈಯಲ್ಲಿ ತೀರಿಕೊಳ್ಳಿರೋ’ ಎಂದು ವಿವೇಕ ಹೇಳಿದರು.’ ದುಷ್ಟ ಜನಂಗಳು ಈ ಸೃಷ್ಟಿಯೊಳಿದ್ದರೆ ಶಿಷ್ಟ ಜನರಿಗೆಲ್ಲ ಕೀರ್ತಿಗಳು’ ಎಂದು, ನಿಂದಕರ ಮಧ್ಯ ಇದ್ದುಕೊಂಡೇ ಪುಟಕ್ಕಿಟ್ಟ ಚಿನ್ನದಂತಾದ ದಾಸರು ‘ಸಾಧು ಸಜ್ಜನರೊಡನಿರುವುದೇ ಹಬ್ಬ ‘ ವೆಂದು ಬಣ್ಣಿಸಿದರು.
ಸುಮಾರು ನಾಲ್ಕು ಲಕ್ಷದ ಇಪ್ಪತ್ತೈದು ಸಾವಿರ ಕೀರ್ತನೆಗಳನ್ನು ರಚಿಸಿ ಹರಿದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಪುರಂದರದಾಸರು ತಮ್ಮ ಗುರುಗಳಾದ ವ್ಯಾಸರಾಜರಿಂದಲೇ ‘ದಾಸರೆಂದರೆ ಪುರಂದರ ದಾಸರಯ್ಯಾ’ ಎಂದು ಸ್ತುತಿಸಿಕೊಂಡ ಮಹಾಮಹಿಮರು.ಅವರು ರಚಿಸಿರುವ ಕೀರ್ತನೆಗಳು ಕರ್ನಾಟಕದ ಜನಮಾನಸದಲ್ಲಿ ಬೆಸೆದುಕೊಂಡಿದೆ.ಪುರಂದರ ದಾಸರ ಕೀರ್ತನೆಗಳನ್ನು ಹಾಡದೇ ಯಾವ ಸಂಗೀತಗಾರರ ಕಛೇರಿಯೂ ಪರಿಪೂರ್ಣವಾಗುವುದಿಲ್ಲ,ಅವರ ಕೃತಿರತ್ನಗಳನ್ನು ಉದಾಹರಿಸದೇ ಯಾವ ಹರಿಕಥಾ ಸಂಕೀರ್ತನೆಯೂ ಕೊನೆಗೊಳ್ಳುವುದಿಲ್ಲ.
ಅವರು ರಚಿಸಿರುವ ‘ಕೆರೆಯ ನೀರನು ಕೆರೆಗೆ ಚೆಲ್ಲಿ’,’ಲಂಬೋದರ ಲಕುಮಿಕರ’ ಮುಂತಾದ ಕೀರ್ತನೆಗಳು ಸಂಗೀತ ಕಲಿಯುವವರಿಗೆ ಮೊದಲ ಮೆಟ್ಟಿಲಾದವು.ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆಯನ್ನು ಮಾಡಿದ ತಮಿಳುನಾಡಿನ ಶ್ರೀ ತ್ಯಾಗರಾಜರು ಮತ್ತು ಆಂಧ್ರದ ಶ್ರೀ ಅಣ್ಣಮಾಚಾರ್ಯರೂ ಸಹ ಪುರಂದರ ದಾಸರಿಂದ ಪ್ರಭಾವಿತರಾಗಿದ್ದರು. ಹರಿದಾಸರಿಗೆ ಒಂದು ಸುವ್ಯವಸ್ಥಿತವಾದ ಪದ್ಧತಿಯನ್ನು ಹಾಕಿಕೊಟ್ಟ ಪುರಂದರ ದಾಸರು ತಮ್ಮ ಹೆಂಡತಿ & ಮಕ್ಕಳಿಗೂ ಸಹ ಹರಿದಾಸ ದೀಕ್ಷೆಯನ್ನು ನೀಡುತ್ತಾರೆ.ಈ ರೀತಿಯಿಂದ ಕರ್ನಾಟಕ ದಾಸ ಸಾಹಿತ್ಯದ ತುಂಬು ಹೊಳೆಯಾದ ಪುರಂದರ ದಾಸರು ಕರ್ನಾಟಕ ಸಂಗೀತದ ಗಂಗೋತ್ರಿಯಾದ ದಾಸವರೇಣ್ಯರು.
✍️ ಶ್ರೀಮತಿ ವೀಣಾ ಬರಗಿ.ಹುಬ್ಬಳ್ಳಿ
More Stories
ಫೆ. 8ಕ್ಕೆ CCL ಉದ್ಘಾಟನೆ – DCM DK ಶಿವಕುಮಾರ್ ಅವರನ್ನು ಆಹ್ವಾನಿಸಿದ ನಟ ಕಿಚ್ಚ ಸುದೀಪ್
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದಿನಿಂದ ಬಜೆಟ್ ಪೂರ್ವಭಾವಿ ಸಭೆ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಕೋಟ್ಯಂತರ ಅಕ್ರಮ – ದಾಖಲೆ ಬಿಡುಗಡೆ ಮಾಡಿದ ಕಾನೂನು ವಿದ್ಯಾರ್ಥಿ