December 22, 2024

Newsnap Kannada

The World at your finger tips!

dasara meeting scaled

ದಸರಾ ಸ್ತಬ್ಧಚಿತ್ರ: ಸಾಮರಸ್ಯ ಸಂದೇಶ

Spread the love
  • ಅಧಿಕಾರಿಗಳಿಗೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸೂಚನೆ

ಮೈಸೂರು: ಸಾಂವಿಧಾನಿಕ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುವ, ಸಾಮಾಜಿಕ ಸಂದೇಶ ಸಾರುವ ಅರ್ಥಪೂರ್ಣವಾದ ಸ್ತಬ್ಧಚಿತ್ರಗಳನ್ನು ದಸರಾ ಉತ್ಸವದ ಮೆರವಣಿಗೆಗೆ ಸಿದ್ಧಪಡಿಸಬೇಕು ಎಂದು ಜಿಲ್ಲಾ ಉಸ್ತುವಾರ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗದಲ್ಲಿ ದಸರಾ ಮೆರವಣಿಗೆಯಲ್ಲಿ ಭಾಗವಹಿಸುವ ಸ್ತಬ್ಧಚಿತ್ರಗಳ ಸಿದ್ಧತೆ ಸಂಬಂಧ ವಿವಿಧ ಜಿಲ್ಲೆಗಳ ನೋಡೆಲ್ ಅಧಿಕಾರಿಗಳು ಹಾಗೂ ಕಲಾವಿದರೊಂದಿಗೆ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಸಚಿವರು ಮಾತನಾಡಿದರು. ಸಮಾಜದ ಸಾಮರಸ್ಯ, ಸೌಹಾರ್ದತೆ ಪ್ರತಿಬಿಂಬಿಸುವ ಮತ್ತು ಸಮಾಜದ ಪರಿವರ್ತನೆಗೆ ಅನುಕೂಲವಾಗುವಂಥ ಪರಿಕಲ್ಪನೆ ಅಡಿಯಲ್ಲಿ ಸ್ತಬ್ಧಚಿತ್ರಗಳನ್ನು ರೂಪಿಸಿ ಎಂದು ಸಲಹೆ ನೀಡಿದರು.

ನಾರಾಯಣ ಗುರು ಸಮಾನತೆಗಾಗಿ ಶ್ರಮಿಸಿದರು. ದೇಶದಲ್ಲೇ ಮೊದಲು ಮಹಿಳೆಯರಿಗೆ ಶಿಕ್ಷಣವನ್ನು ಸಾವಿತ್ರಿ ಬಾಯಿ ಫುಲೆ ನೀಡಿದರು. ಸಮೃದ್ಧ ಭಾರತ ನಿರ್ಮಾಣಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಶಿಕ್ಷಣ, ನೀರಾವರಿ, ಕೃಷಿ ಕ್ಷೇತ್ರಕ್ಕೆ ಕೊಡುಗೆ ನೀಡಿ ಸಾಮಾಜಿಕ ನ್ಯಾಯದ ಪರ ಆಡಳಿತ ನಡೆಸಿದರು. ಹೀಗೆ ದೇಶದ ಹಲವಾರು ಮಹಾನ್ ಸಮಾಜ ಸುಧಾರಕರ ಬದುಕು, ಹೋರಾಟವನ್ನು ತಿಳಿಸಿಕೊಡುವ ಕೆಲಸವಾಗಬೇಕು ಎಂದರು.  

ಕಲೆ ಎಂಬುದು ಒಂದು ಸೃಜನಶೀಲ ಕ್ರಿಯೆಯಾಗಿದ್ದು, ಜನರ ಮನಸ್ಸಿಗೆ ಮುದ ನೀಡುವ ಹಾಗೂ ಪ್ರಫುಲ್ಲವಾಗಿಸುವ ಶಕ್ತಿ ಹೊಂದಿದೆ. ಈ ಹಿನ್ನೆಲೆಯಲ್ಲಿ ಐತಿಹಾಸಿಕ ಚರಿತ್ರೆ, ಸ್ವಾತಂತ್ರ್ಯ ಹೋರಾಟ, ಸಾಂಸ್ಕøತಿಕ ಬದುಕು, ಸಂಗೀತ, ಸಾಹಿತ್ಯ ಸೇರಿದಂತೆ ಸಾಮಾಜಿಕ ಸಂದೇಶ ನೀಡುವ ಸ್ತಬ್ಧಚಿತ್ರಗಳನ್ನು ಅಚ್ಚುಕಟ್ಟಾಗಿ ಸಿದ್ಧಪಡಿಸಬೇಕು ಎಂದು ತಿಳಿಸಿದರು.

ಪ್ರತಿ ಜಿಲ್ಲೆಗೆ ಅದರದೇ ಆದಂತಹ ಐತಿಹಾಸಿಕ ಘಟನೆಗಳು ಇರುತ್ತವೆ. ವಿಭಿನ್ನ ಆಚಾರ, ವಿಚಾರಗಳು, ಕಲೆ, ಸಂಸ್ಕೃತಿಗಳನ್ನು ಒಳಗೊಂಡಿರುತ್ತವೆ. ಐತಿಹಾಸಿಕ ಮಾಹಿತಿ ಜೊತೆಗೆ ಜೀವಂತವಾಗಿ ನಡೆದಿರುವಂತೆ ಘಟನೆಗಳನ್ನು ಬಿಂಬಿಸುವ ಶಿಸ್ತುಬದ್ಧ ಎಲ್ಲರ ಕಣ್ಮನ ಸೆಳೆಯುವ ಕಲಾಕೃತಿ ಒಳಗೊಂಡಿರಲಿ ಎಂದು ತಿಳಿಸಿದರು.

ಸ್ತಬ್ಧಚಿತ್ರದ ಜೊತೆಗೆ ಆಯಾ ಜಿಲ್ಲೆಯ ಕಲಾತಂಡಗಳನ್ನು ನಿಯೋಜಿಸುವುದು. ಅಕ್ಕಪಕ್ಕದಲ್ಲಿ ಸಂಬಂಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾತ್ರ ಇರಬೇಕು. ಅನವಶ್ಯಕವಾಗಿ ಯಾರಿಗೂ ಅವಕಾಶ ನೀಡಬಾರದು. ಸ್ತಬ್ಧಚಿತ್ರದ ಅಳತೆಯಲ್ಲಿ ಯಾವುದೇ ಕಾರಣಕ್ಕೂ ವ್ಯತ್ಯಾಸ ಇರಬಾರದು. ಅಗಲ, ಎತ್ತರ, ಉದ್ದವು ಜಿಲ್ಲಾಡಳಿತ ನಿಗದಿಪಡಿಸಿದ ಅಳತೆಯನ್ನು  ಮೀರಬಾರದು ಎಂದು ಸೂಚಿಸಿದರು.ಇದನ್ನು ಓದಿ – ಬರ ಅಧ್ಯಯನಕ್ಕೆ ಕೇಂದ್ರ ತಂಡ

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪಂಚಾಯತ್ ಸಿಇಒ ಕೆ.ಎಂ.ಗಾಯಿತ್ರಿ, ಉಪ ಕಾರ್ಯದರ್ಶಿ ಡಾ.ಎಂ.ಕೃಷ್ಣರಾಜು ಉಪಸ್ಥಿತರಿದ್ದರು.

Copyright © All rights reserved Newsnap | Newsever by AF themes.
error: Content is protected !!