“ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆ” ಎಂಬ ಅವರ ಮಾತು ಕೇವಲ ಕವಿಯ ವಾಕ್ಯವಲ್ಲ, ಅವರ ಬದುಕಿನ ತತ್ತ್ವವೂ ಹೌದು. ನೋವನ್ನು ಎದೆಯಲ್ಲಿ ಬಚ್ಚಿಟ್ಟುಕೊಂಡು ನಗುವನ್ನಷ್ಟೇ ಹರಡುವ ಮನೋಭಿಲಾಷೆ ಹೊತ್ತ ಅವರು .”ಕಲ್ಲುಸಕ್ಕರೆಯಂಥಾ ನಿನ್ನೆದೆಯು ಕರಗಿದರೆ, ಆ ಸವಿಯ ಹಣಿಸು ಎನಗೆ”, ಎಂದು ಜೀವನದುದ್ದಕ್ಕೂ ನಂಜುಂಡರೂ, ನಗೆಮೊಗದ, ಮಾಗಿದ ಮನಸಿನ ವಿಷಕಂಠರಾಗಿ ಪ್ರಕಾಶಿಸಿದ್ದಾರೆ. ಅನೇಕ ಕಾವ್ಯಗಳಲ್ಲಿ ಅವರ ಜೀವನದ ದುರಂತ ಕತೆಗಳೇ ಅಡಗಿದ್ದವು ಎನ್ನುವುದು ಅವರನ್ನು ಹತ್ತಿರದಿಂದ ಬಲ್ಲವರು ಕಂಡ ಸತ್ಯ.
ನೋವನ್ನೂ ಸುಂದರ ಗೀತೆಯಾಗಿ ರೂಪಿಸುವಲ್ಲಿ ಅವರು ಸಿದ್ದಹಸ್ತರಾಗಿದ್ದರು.
1896ರ ನವೆಂಬರ್ 31ರಂದು ಧಾರವಾಡದಲ್ಲಿ ಜನಿಸಿದ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಬಾಲ್ಯ ನೋವಿನ ನೆರಳಲ್ಲೇ ಕಳೆದಿತ್ತು. ಹನ್ನೊಂದನೇ ವಯಸ್ಸಿನಲ್ಲಿ ತಂದೆ ರಾಮಚಂದ್ರ ಭಟ್ಟರನ್ನು ಕಳೆದುಕೊಂಡರು. ಗಂಡಮಾಲಿ ರೋಗದ ಬಾಧೆಯಿಂದ ತಂದೆಯ ಅಗಲಿಕೆಯ ಬಳಿಕ ಅವರ ಕುಟುಂಬ ದಾರಿದ್ರ್ಯದ ಕಹಿ ಅನುಭವಿಸಿತು. ಆದರೆ ಈ ಬಡತನವೇ ಅವರ ಜೀವನದ ಪ್ರೇರಕ ಶಕ್ತಿ! ಬಾಲ್ಯದಲ್ಲಿಯೇ ಸಾಹಿತ್ಯದ ಮೇಲಿನ ಆಸಕ್ತಿ ಬೆಳೆಯಲು ಅವರ ಮನೆಯ ವಾತಾವರಣ ಸಹಕಾರಿಯಾಯಿತು. ಅಮ್ಮನೇ ಮೊದಲ ಗುರುವಾದರು. ಹಾಗಾಗಿ ತಾಯಿಯನ್ನು ಕಂಡರೆ ವಿಶೇಷ ಒಲವು. ತಮ್ಮ ಕಾವ್ಯ ನಾಮವನ್ನು ,”ಅಂಬಿಕಾತನಯದತ್ತ”, ಎಂದೇ ಬಳಸಿಕೊಂಡು ಲೋಕವಿಖ್ಯಾತರಾದರು.
ಧಾರವಾಡದ ಪ್ರಾಥಮಿಕ ಶಿಕ್ಷಣದ ಬಳಿಕ 1913ರಲ್ಲಿ ಮೆಟ್ರಿಕ್ಯುಲೇಶನ್ ಮುಗಿಸಿ, ಪುಣೆಯ ಫರ್ಗೂಸನ್ ಕಾಲೇಜಿನಲ್ಲಿ ಅಧ್ಯಯನ ಮಾಡಿ 1918ರಲ್ಲಿ ಬಿ.ಎ. ಪದವಿಯನ್ನು ಪಡೆದರು. ಅದೇ ವರ್ಷ ಪ್ರಭಾತ ಪತ್ರಿಕೆಯಲ್ಲಿ ಅವರ ಮೊದಲ ಕವನ ‘ಬೆಳಗು’ ಪ್ರಕಟವಾಯಿತು.
ಬೇಂದ್ರೆಯವರು ನಾಲ್ಕನೇ ತರಗತಿಯವರೆಗೆ ಓದಿದ್ದರೂ, ಬೇಂದ್ರೆಯವರು ಲಕ್ಷ್ಮೀಬಾಯಿಯನ್ನು ತಮ್ಮ ಕಾವ್ಯದಲ್ಲಿ ತೊಡಗಿಸಿಕೊಂಡರು ಮತ್ತು ಬೇಂದ್ರೆಯವರ ಕವಿತೆಗಳನ್ನು ಕೇಳಲು ಯಾವಾಗಲೂ ಮೊದಲಿಗರು. 1937 ರಲ್ಲಿ, ಬೇಂದ್ರೆಯವರು ತಮ್ಮ ಪ್ರಸಿದ್ಧ ಸಖೀಗೀತೆಯನ್ನು ಬರೆದರು , ಇದುವರೆಗಿನ ಅವರ ವೈವಾಹಿಕ ಜೀವನದ ವಿವರಣಾತ್ಮಕ ಕೃತಿಯಾಗಿದೆ. ಅದರಲ್ಲಿ, ಅವನು ತನ್ನ ಹೆಂಡತಿ ಲಕ್ಷ್ಮೀಬಾಯಿಯನ್ನು ತನ್ನ ಸಖೀ ಎಂದು ಉಲ್ಲೇಖಿಸುತ್ತಾನೆ, ಇದು ಕನ್ನಡ ಸಾಹಿತ್ಯದಲ್ಲಿ ಮತ್ತು ಬಹುಶಃ ಭಾರತೀಯ ಸಾಹಿತ್ಯದಲ್ಲೇ ಮೊದಲನೆಯದು. ಕವನದ ಮುನ್ನುಡಿಯಲ್ಲಿ, ಬೇಂದ್ರೆ ಅವರು “ವೈಯಕ್ತಿಕ ಅನುಭವದ ಹಂದರದ ಮೇಲೆ ಸಾಮಾನ್ಯ ದಾಂಪತ್ಯ ಜೀವನದ ಸಂತೋಷ-ದುಃಖದ ಬಳ್ಳಿಯನ್ನು ಹರಡಲು ಬಿಡುತ್ತಾರೆ” ಎಂದು ಹೇಳುತ್ತಾರೆ. ಅವರ ಸ್ವಂತ ಆವಿಷ್ಕಾರದ ಒಂದು ಧಾಟಿಯಲಿ ಬರೆಯಲಾದ ಈ ಕವಿತೆಯು ಅದರ ಸಾರ್ವತ್ರಿಕತೆಗಾಗಿ ಮತ್ತು ಸಂಸ್ಕೃತವಲ್ಲದ ಕನ್ನಡದ ಸಮೃದ್ಧ ಬಳಕೆಗಾಗಿ ವಿಶೇಷವಾಗಿ ಗಮನಾರ್ಹವಾಗಿದೆ.
ಬೇಂದ್ರೆಯವರ ದಾಂಪತ್ಯ ಜೀವನ ಕಷ್ಟಕರವಾಗಿತ್ತು. ಅವರು ತಮ್ಮ ಒಂಬತ್ತು ಮಕ್ಕಳಲ್ಲಿ ಆರು ಮಕ್ಕಳನ್ನು ಕಳೆದುಕೊಳ್ಳುವಷ್ಟು ದುರದೃಷ್ಟಕರರು. ಅವರಲ್ಲಿ ಒಬ್ಬ, ಸ್ವತಃ ಉದಯೋನ್ಮುಖ ಕವಿ ರಾಮಚಂದ್ರ, 20 ನೇ ವಯಸ್ಸಿನಲ್ಲಿ ಸೋಂಕಿನಿಂದ ಮರಣಹೊಂದಿದನು.ಇನ್ನೊಂದು ಕವಿತೆ, “ನೀ ಹೀಂಗ ನೋಡಬ್ಯಾಡ ನನ್ನ”, ತನ್ನ ಮಗಳು ಲಲಿತಾಳನ್ನು ಕಳೆದುಕೊಂಡ ದುಃಖದಲ್ಲಿ ಬರೆಯಲ್ಪಟ್ಟಿತು, ಇದು 20 ನೇ ಶತಮಾನದ ಕನ್ನಡ ಸಾಹಿತ್ಯದ ಅತ್ಯಂತ ಜನಪ್ರಿಯ ಮತ್ತು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದಿದೆ. ಜೀವನೋಪಾಯಕ್ಕಾಗಿ ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿದರು. ಆದರೆ ಕವಿತೆಯೇ ಅವರ ಜೀವ, ಅವರ ಉಸಿರು. 1921ರಲ್ಲಿ ಧಾರವಾಡದಲ್ಲಿ ಗೆಳೆಯರ ಬಳಗವನ್ನು ಕಟ್ಟಿದರು. ಈ “ಗೆಳೆಯರ ಗುಂಪು”ಯಲ್ಲಿ ವಿ.ಕೃ. ಗೋಕಾಕ, ಕಾವ್ಯಾನಂದ, ಚೆನ್ನವೀರ ಕಣವಿ ಮುಂತಾದ ಕಾವ್ಯಾಸಕ್ತರು ಇದ್ದರು. ಇದು ಚಿಂತನಪರ ಸಂಘಟನೆಯಾಗಿ ಬೆಳೆದು ಕನ್ನಡದ ನವೋದಯ ಚಳುವಳಿಗೆ ಬಲ ತುಂಬಿತು.
ಬೇಂದ್ರೆಯವರು ಕೇವಲ ಕವಿ ಮಾತ್ರವಲ್ಲ, ಕ್ರಾಂತಿಕಾರಿ ಕವಿಯೂ ಹೌದು. ಬ್ರಿಟಿಷರ ವಿರುದ್ಧ ನರಬಲಿ ಕವನವನ್ನು ಪ್ರಕಟಿಸಿ, ಅವರ ದಾಸ್ಯವನ್ನು ತೀಕ್ಷ್ಣವಾಗಿ ಪ್ರತಿಭಟಿಸಿದರು. ಈ ಕವನ ಅವರ ಹಕ್ಕುಚ್ಯುತಿ ಹಾಗೂ ಹಿಂಡಲಗಿ ಕಾರಾಗೃಹದ ಮೂರು ತಿಂಗಳ ಶಿಕ್ಷೆಗೆ ಕಾರಣವಾಯಿತು. ಜೊತೆಗೆ 1924ರಲ್ಲಿ ತಾಯಿಯನ್ನೂ ಕಳೆದುಕೊಂಡ ನೋವು ಅವರ ಜೀವನದಲ್ಲಿ ಮತ್ತೊಂದು ಕಹಿ ಘಟನೆಯಾಯಿತು. .
ನಿರುದ್ಯೋಗದ ಸಂಕಟ, ಕುಟುಂಬದ ಹೊಣೆ, ತಾಯಿ-ತಂದೆಯ ವಿಯೋಗ – ಈ ಎಲ್ಲಾ ನೋವುಗಳು ಅವರ ಕಾವ್ಯದಲ್ಲಿ ಮತ್ತಷ್ಟು ಭಾವನಾತ್ಮಕತೆಗೆ ಕಾರಣವಾಯಿತು. 1925ರಿಂದ 1932ರವರೆಗೆ ಧಾರವಾಡದ ವಿದ್ಯಾರಣ್ಯ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ, ಗದಗಿನ ವಿದ್ಯಾದಾನ ಸಮಿತಿಯಲ್ಲಿ ಮುಖ್ಯೋಪಾಧ್ಯಾಯರಾಗಿಯೂ, ಬಳಿಕ ವಿವಿಧ ವಿದ್ಯಾಸಂಸ್ಥೆಗಳಲ್ಲಿ ಕೆಲಸ ಮಾಡಿದರೂ ಅವರ ಹೃದಯದ ತುಂಬಾ ಕವನ, ಕಾವ್ಯ, ಲೇಖನ, ಬರಹಗಳೆಂಬ ಸಾಹಿತ್ಯ ಲೋಕವೇ ತುಂಬಿ ತುಳುಕುತ್ತಿತ್ತು.
ಬೇಂದ್ರೆಯ ಕಾವ್ಯ ವೈವಿಧ್ಯಮಯ. ಅವರು ಭಕ್ತಿಯ ಕವಿ, ಪ್ರೇಮದ ಕವಿ, ದಾರ್ಶನಿಕ ಕವಿ, ಕ್ರಾಂತಿಕಾರಿ ಕವಿ – ಎಲ್ಲವೂ ಹೌದು. ನಾದ ಲಯದ ಕವಿ ಎಂಬ ಖ್ಯಾತಿಯನ್ನು ಪಡೆದ ಅವರು, ತಮ್ಮ ಕವನಗಳಲ್ಲಿ ಭಾವಸೌಂದರ್ಯ, ವಿಚಾರಧಾರೆ, ಸೋದರತ್ವ, ಸಾಮಾಜಿತ ಕಳಕಳಿ, ಹಾಗೂ ಕನ್ನಡದ ಸೊಗಡನ್ನು ಬಿಂಬಿಸಿದ್ದರು.
“ನಾಕು ತಂತಿ, ನಾನು, ನೀನು, ಆನು, ತಾನು” – ಇದು ಅವರ ಕಾವ್ಯಶೈಲಿಯ ಸಾರ್ಥಕ ವಿವರಣೆ. ನಾಕುತಂತಿ ನಾಲ್ಕು ಅಂಶಗಳನ್ನು ಕೇಂದ್ರೀಕರಿಸುವ ಕವಿತೆಗಳನ್ನು ಹೊಂದಿದೆ, ಅವುಗಳೆಂದರೆ ನಾನು, ನೀನು, ಆನು, ತಾನು. ಅದ್ವೈತ ಸಿದ್ಧಾಂತದ ಪ್ರಕಾರ ಇವು ಆತ್ಮ ಸಾಕ್ಷಾತ್ಕಾರದ ಹಾದಿಯಲ್ಲಿಯ ನಾಲ್ಕು ಹಂತಗಳು. ನಾಕು ತಂತಿ’ ಅತ್ಯಂತ ಸರಳ ಕನ್ನಡದಲ್ಲಿ ರಚಿಸಲಾದ ಕವನ. ಆದರೆ ಅಷ್ಟೇ ನಿಗೂಢವಾದ ಕವನ. ಈ ಕವನದಲ್ಲಿ ಪದಗಳಿಗೆ ಅನೇಕ ಅರ್ಥಗಳು ಇರುವಂತೆಯೇ, ಪದಗಳ ನಾದಕ್ಕೂ ಸಹ ಅರ್ಥವಿದೆ. ಲೌಕಿಕ ಹಾಗು ಅಲೌಕಿಕ ಆಯಾಮಗಳಲ್ಲಿ ಈ ಕವನದ ಅರ್ಥವನ್ನು ಅನುಭವಿಸಬೇಕಾಗುತ್ತದೆ.
ಬೇಂದ್ರೆಯ ಕವನಗಳು ರಸ, ಸ್ವಾದ, ಜೀವನ ಸತ್ಯಗಳು ,ಭಾವನಾತ್ಮಕ, ಹಾಗೂ ಸಮಾನತೆಯ ಪ್ರಣಾಳಿಕೆ. ದಾಸಸಾಹಿತ್ಯದ ಅನುಭವದೊಂದಿಗೆ ಪಾಶ್ಚಾತ್ಯ ತತ್ತ್ವಶಾಸ್ತ್ರದ ಬಯಕೆಗೂ ತಕ್ಕಂತೆ ಅವರು ಸಾಹಿತ್ಯ ಸೃಷ್ಟಿಸಿದರು. ನಾಕು ತಂತಿ ಅವರ ಅತ್ಯಂತ ಜನಪ್ರಿಯ ಕಾವ್ಯಸಂಕಲನ, ಇದರಲ್ಲಿ ಅವರ ಭಾವನೆಗಳ ಹೊಸ ಆಯಾಮ ಗೋಚರಿಸುತ್ತದೆ. ಅವರ ಸಾಹಿತ್ಯ ಕೇವಲ ಕಲ್ಪನೆಗೆ ಸೀಮಿತವಾಗಿರದೆ, ಜೀವನದ ಸತ್ಯಗಳನ್ನ ನಿಷ್ಠೂರವಾಗಿ ವ್ಯಕ್ತ ಪಡಿಸುತ್ತವೆ, ಹಾಗೇ ನೊಂದವರನ್ನು ಸಂತೈಸುತ್ತವೆ, ಬಿದ್ದವರನ್ನು ಮೇಲೆತ್ತುತ್ತವೆ,ಜೊತೆಗೆ ಬಾಳ ಸಂಗಾತಿಗಳಿಗೆ ಒಲವಿನ ಧಾರೆ ಎರೆಯುತ್ತವೆ. ಇಂಥ ಬೇಂದ್ರೆಯವರ ಕೃತಿಗಳಲ್ಲಿ ಕೆಲವು ಪ್ರಸಿದ್ದವಾದವೆಂದರೆ, ಕೃಷ್ಣಕುಮಾರಿ, ಸಖೀಗೀತ, ಉಯ್ಯಾಲೆ, ಗರಿ, ನಾದಲೀಲೆ, ಅರುಳುಮರುಳು ಇತ್ಯಾದಿ ಕವನ ಸಂಕಲನಗಳು. ಸಾಹಿತ್ಯ ಮತ್ತು ವಿಮರ್ಶೆ, ಕಾವ್ಯೋದ್ಯೋಗ, ಸಾಹಿತ್ಯ ವಿರಾಟ ಸ್ವರೂಪ, ನಾಕುತಂತಿ, ನಿರಾಭರಣ ಸುಂದರಿ, ಶಾಂತಲಾ (ಅನುವಾದ) ಇತ್ಯಾದಿ.
1973ರಲ್ಲಿ ಬೇಂದ್ರೆಯವರಿಗೆ ನಾಕು ತಂತಿ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆಯಿತು. ಇದು ಕನ್ನಡ ಸಾಹಿತ್ಯವನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲು ನೆರವಾಯಿತು. ಈ ಯಶಸ್ಸು ಕನ್ನಡ ಸಾಹಿತ್ಯಕ್ಕೆ ಹೊಸ ಎತ್ತರ ತಲುಪಿಸಿತು. ಇದಲ್ಲದೆ, ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಹಾಗೂ ಹಲವಾರು ಪ್ರಶಂಸೆ ಪುರಸ್ಕಾರಗಳು ಇವರ ಮುಡಿಗೇರಿತು.
1981 ರಲ್ಲಿ ಅವರು ಈ ಜಗತ್ತನ್ನು ತೊರೆದರೂ, ಅವರ ಕವನಗಳು ನಮ್ಮ ಹೃದಯದಲ್ಲಿ ಇನ್ನೂ ಜೀವಂತವಾಗಿವೆ. ಅವರ ಕಾವ್ಯಗಳು ಅನಂತವಾದ ವೇದನೆಯ ಸಂಗೀತ, ಅರ್ಥಪೂರ್ಣ ಭಾವಗಳ ಲಯ, ಮತ್ತು ತತ್ತ್ವಜ್ಞಾನದ ಪ್ರತಿಬಿಂಬಗಳಾಗಿವೆ.
“ಶಾಸ್ತ್ರದಲ್ಲಿ ದೋಷವಿದ್ದರೆ ಹೃದಯದಲ್ಲಿ ತಿದ್ದಬಹುದು. ಆದರೆ ಹೃದಯದಲ್ಲಿ ದೋಷವಿದ್ದರೆ ಶಾಸ್ತ್ರ ಏನು ಮಾಡುವುದು?”
“ಸಾವಿಗೆ ನಾ ಹೆದರುವುದಿಲ್ಲ.ಯಾಕೇಂದ್ರೆ, ನಾನು ಇರೋ ತನಕ ಅದು ಬರೋದಿಲ್ಲ. ಅದು ಬಂದಾಗ ನಾನಿರೋದಿಲ್ಲ”, ಎಂದು ಸಾವಿಗೇ ಸವಾಲನ್ನ ಹಾಕಿದ ಬೇಂದ್ರೆ ಅಜ್ಜ “ಎಂಥ ಕಟು ಅನುಭವ ಪ್ರಸಂಗ ಬಂದರೂ ಎದೆಗುಂದಬಾರದು. ಇದೇ ಜೀವನದಲ್ಲಿ ಸುಖಿಯಾಗಿರುವ ರಹಸ್ಯ”,
“ಹಚ್ಚೋದಾದ್ರೆ ದೀಪವನ್ನೇ ಹಚ್ಚು, ಬೆಂಕಿಯನ್ನಲ್ಲ. ಆರಿಸೋದಾದ್ರೆ ನೋವನ್ನೇ ಆರಿಸು, ನಗುವನ್ನಲ್ಲ”,
“ಒಬ್ಬ ಮತ್ತೊಬ್ಬನನ್ನ ತುಳಿದು ಬದುಕಬಾರದು, ತಿಳಿದು ಬದುಕಬೇಕು”, ಇಂಥ ಸರ್ವಕಾಲಿಕ ಸತ್ಯಗಳನ್ನ ಸಾರುವ ಸಂದೇಶಗಳನ್ನು ನೀಡಿದ ಬೇಂದ್ರೆಯವರೊಳಗೊಬ್ಬ ಸ್ಪೂರ್ತಿ ತುಂಬುವ ನಾಯಕನು, ಅಂತಃಕರಣಿಯು, ಮಾನವತಾವಾದಿಯೂ,ಹಾಸ್ಯಪ್ರವೃತ್ತಿಯವನೂ, ನಿರ್ಮಲ ಮನಸಿನವನೂ ಇದ್ದನೆಂಬುದನ್ನು ಸಾಬೀತುಪಡಿಸಿದ್ದಾರೆ.
ಬೇಂದ್ರೆಯವರ ಮೂಸೆಯಿಂದ ಮೂಡಿ ಬಂದ ಪ್ರತಿಯೊಂದು ಸಾಹಿತ್ಯವು ನಾಡಿನ ತುಂಬೆಲ್ಲಾ ಅವರಿಸಿಕೊಂಡು ಮಾನವನ ನಾಡಿ ಮಿಡಿತದಂತೆ ಹರಿದಾಡಿ ಇಡೀ ಕನ್ನಡ ಸಾಹಿತ್ಯ ರಂಗವನ್ನೆ ಶ್ರೀಮಂತಗೊಳಿಸಿವೆ ಎಂದರೆ ತಪ್ಪಲಾಗಲಾರದು. ತಮ್ಮ ಇಡೀ ಜೀವನದುದ್ದಕ್ಕೂ ಕನ್ನಡ ನಾಡು, ನುಡಿಗೆ ನಿಸ್ವಾರ್ಥ ಸೇವೆಯನ್ನು ಗೈದ “ಧಾರವಾಡ ದ ಅಜ್ಜ”ಇಂದಿಗೂ ನಮ್ಮ ಮನಗಳಲ್ಲಿ ನಮ್ಮ ಮನೆಯ ಅಜ್ಜನಷ್ಟೇ ಆಪ್ಯಾಯಮಾನರಾರಾಗಿ, ಹಚ್ಚಹಸುರಾಗಿ ಉಳಿದಿದ್ದಾರೆ. ವಂದನೆಗಳು.
ರೂಪ ಮಂಜುನಾಥ
ಹೊಳೆನರಸೀಪುರ
More Stories
ಮಹಾಶಿವರಾತ್ರಿ ಆಚರಣೆ
ಗಿರಿಜಾ ಕಲ್ಯಾಣ
ಶಿವನೇ ನಾ ನಿನ್ನ ಸೇವಕನಯ್ಯ….