November 15, 2024

Newsnap Kannada

The World at your finger tips!

vote , election , Tripura

ಡಿ 22 ಮೊದಲ ಹಂತದ ಗ್ರಾಪಂ ಚುನಾವಣೆ: ಗ್ರಾಮಗಳಲ್ಲಿ ನುಚ್ಚು ನೂರಾಗುತ್ತಿರುವ ಸಂಬಂಧ, ಮನಸ್ಸುಗಳು…..

Spread the love

ಗ್ರಾಮ ಪಂಚಾಯತಿ ಮೊದಲ ಹಂತದ ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಪ್ರತಿ ಹಳ್ಳಿಗಳಲ್ಲೂ ಅಬ್ಬರ ಪ್ರಚಾರ , ತಂತ್ರಗಾರಿಕೆ ಭರದಿಂದ ಸಾಗಿದೆ.

ರಾಜ್ಯದಲ್ಲಿ 3020 ಗ್ರಾಪಂಗಳಿಗೆ ಡಿಸೆಂಬರ್ 22 ರಂದು ಚುನಾವಣೆ ನಡೆಯಲಿದೆ. 1, 06, 071 ಮಂದಿ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. 47, 581 ಮಂದಿಯನ್ನು ಆಯ್ಕೆ ಮಾಡಬೇಕಿದೆ. ಈ ಪೈಕಿ 4375 ಮಂದಿ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಇವಿಷ್ಟು ಮೊದಲ ಹಂತದ ಚುನಾವಣೆಯ ರಾಜ್ಯದ ಅಂಕಿ ಅಂಶಗಳು.

ರಾಜಕೀಯ ದಿಂದ ಕುಲಗೆಟ್ಟು ಹೋದ ಹಳ್ಳಿಗಳು:

ರಾಜ್ಯ ರಾಜಕಾರಣ ಮಾತ್ರವಲ್ಲ ಗ್ರಾಮ ಪಂಚಾಯತಿ ಹಂತದಿಂದಲೂ ಈ ರಾಜಕೀಯ ಅವ್ಯವಸ್ಥೆ, ದೊಂಬರಾಟ ಹಾಗೂ ಅಧಿಕಾರದಾಹ ಎಲ್ಲವೂ ಹಾಸುಹೊಕ್ಕಾಗಿವೆ.

ಕುಲಗೆಟ್ಟಿರುವುದು ಕೇವಲ ರಾಜಕಾರಣ ಮಾತ್ರವಲ್ಲ ಮತದಾರನಿಂದ ಹಿಡಿದು ರಾಜಕೀಯ ವ್ಯಕ್ತಿ ಗಳು, ಪಕ್ಷಗಳು. ನಾಯಕರು, ಕಾರ್ಯಕರ್ತರು ಹೀಗೆ ಇಡೀ ವ್ಯವಸ್ಥೆ ಬರು , ಬರುತ್ತಾ ಅಧಃಪತನದ ಹಾದಿ ಹಿಡಿದಿದೆ.

ಚುನಾವಣೆಯ ವ್ಯವಸ್ಥೆ ಯಲ್ಲಿ ಸುಧಾರಣೆಗಳು ಬರುತ್ತಲೇ ಇದೆ. ಆದರೆ ಹಣ, ಹೆಂಡದ ಮೂಲಕ ಚುನಾವಣೆ ಗೆಲ್ಲುವ ತಂತ್ರ- ಕುತಂತ್ರಗಳಿಗೆ ಕಡಿವಾಣ ಹಾಕುವುದು ಮಾತ್ರ ಯಾರಿಗೂ ಸಾಧ್ಯವಾಗಿಲ್ಲ ಎಂಬುದನ್ನು ಇಂದಿನ ದಿನಗಳಲ್ಲಿ ಹಳ್ಳಿಗಳಲ್ಲಿ ಗ್ರಾ ಪಂ ಚುನಾವಣೆ ರೀತಿ ನೀತಿಗಳನ್ನು ನೋಡಿದರೆ ಗೊತ್ತಾಗುತ್ತದೆ.

ಮನೆ, ಮನಸ್ಸು ಹಾಳು ಮಾಡಿರುವ ವ್ಯವಸ್ಥೆ:

ಗ್ರಾಮ ಪಂಚಾಯತಿ ಚುನಾವಣೆಗಳು ಹಳ್ಳಿಗರ ಮನೆ, ಮನಸ್ಸನ್ನು ಕೆಡಿಸಿ ಇಟ್ಟಿವೆ. ಜನ ಹಣಕ್ಕಾಗಿ ತಮ್ಮನ್ನು ತಾವೇ ಹರಾಜು ಹಾಕಿಕೊಳ್ಳುವ ವ್ಯವಸ್ಥೆಗೆ ತಂದು ನಿಲ್ಲಿಸಿದೆ ಈ ಪಂಚಾಯತಿ ಚುನಾವಣೆಗಳು.

ಉತ್ತಮ ಅಭ್ಯರ್ಥಿ ಆಯ್ಕೆ ನಮ್ಮ ಹಕ್ಕು

  1. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಸಂವಿಧಾನಾತ್ಮಕ ವಾಗಿ ಮತವನ್ನು ಚಲಾಯಿಸುವ ಹಕ್ಕಿದೆ.
    ಹಳ್ಳಿಯಿಂದ ದಿಲ್ಲಿಯತನಕ ನಮ್ಮನ್ನಾಳುವ ನಾಯಕರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ನಮಗಿದೆ.
    ಉತ್ತಮವಾದ ನಾಯಕನನ್ನು ಆಯ್ಕೆ ಮಾಡದೇ ಇದ್ದಾಗ ಆಯಾ ಕ್ಷೇತ್ರದಲ್ಲಿ ಅಭಿವೃದ್ಧಿಯಿಂದ ನಾವೆಲ್ಲ ವಂಚಿತರಾಗ ಬೇಕಾಗುತ್ತದೆ.
  2. ಈಗಾಗಲೇ ಗ್ರಾಮ ಪಂಚಾಯಿತಿ ಚುನಾವಣೆ ಕಣ ರಂಗೇರಿದ್ದು ಭಿನ್ನ – ವಿಭಿನ್ನ ರೀತಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.
  3. ಒಂದೆಡೆ ಅಭ್ಯರ್ಥಿಗಳ ಆಯ್ಕೆಗೆ ಹರಾಜು ಪ್ರಕ್ರಿಯೆ ನಡೆಯುತ್ತಿದ್ದರೆ ಮತೊಂದೆಡೆ ಸ್ವಯಂ ಸದಸ್ಯನೆಂದು ಘೋಷಿಸಿ ಕೊಂಡು ಎದುರಾಳಿ ಪಕ್ಷದವರನ್ನು ಹಣದ ಆಮಿಷವೊಡ್ಡಿ ಕೊಂಡು ಕೊಳ್ಳುವ ದುಸ್ಥಿತಿಗೆ ಇಂದಿನ ಗ್ರಾಮ ಪಂಚಾಯಿತಿ ಕಾರ್ಯಕ್ರಮ ಸಿದ್ಧವಾಗುತ್ತಿದೆ.
  4. ಇಂದಿನ ಚುನಾವಣೆಗಳು ಗ್ರಾಮೀಣ ಜನರಲ್ಲಿ ಅಸಹ್ಯವಾದ ವಾತಾವರಣ ವನ್ನು ಸೃಷ್ಟಿ ಮಾಡಿರುವಂತಿದೆ.
    ಹೌದು ಹಣವಿದ್ದ ಆಯೋಗ್ಯರೆಲ್ಲ ಇಂದು ಚುನಾವಣೆಗೆ ಸ್ಪರ್ದಿಸುತ್ತಿದ್ದು ಮತದಾರರು ಸಹ ತಮ್ಮ ಅಮೂಲ್ಯವಾದ ಮತಗಳನ್ನು ಹರಾಜು ಹಾಕಿಕೊಳ್ಳುತ್ತಿದ್ದಾರೆ.
  5. ಹೆಚ್ಚಿನ ಹಣವನ್ನು ಯಾರು ತನಗೆ ನೀಡುವರೂ ಅವರಿಗೆ ಮತವನ್ನು ಹಾಕುವ ಸಂಪ್ರಾದಯಕ್ಕೆ ನಾವೆಲ್ಲ ತಳಪಾಯ ಹಾಕುತ್ತಿರುವುದು ನಿಜಕ್ಕೂ ವಿಪರ್ಯಾಸವಲ್ಲವೇ! ಇದು ಮುಂದಿನ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.
  6. ಭಾರತ ನಿಜಕ್ಕೂ ಬಡತನ ರಾಷ್ಟ್ರವೇ? ಈ ಪ್ರಶ್ನೆ ಪ್ರತಿಯೊಬ್ಬ ಭಾರತೀಯನು ಉತ್ತರಿಸಬೇಕು .ಏಕೆಂದರೆ ನಮ್ಮ ರಾಷ್ಟ್ರ ಯಾವ ರಾಷ್ಟ್ರದ ಸಂಪನ್ಮೂಲಕಿಂತ ಕಡಿಮೆಯೆನು ಇಲ್ಲ. ಆದರೆ ಇಲ್ಲಿನ ವ್ಯವಸ್ಥೆಗಳು ಆಡಳಿತಗಳು ನಮ್ಮನ್ನು ಇನ್ನಷ್ಟು ಬಡತನಕ್ಕೆ ತಳ್ಳುತ್ತಿವೆ.
  7. ಚುನಾವಣೆಗಳ ಹೆಸರಲ್ಲಿ ಕೋಟ್ಯಂತರ ಹಣವನ್ನು ಖರ್ಚು ಮಾಡುವ ಜನ ಪ್ರತಿನಿಧಿಗಳನ್ನು ಹೊಂದಿರುವ ರಾಷ್ಟ್ರ ನಮ್ಮದು. ಆದರೆ ಇಲ್ಲಿನ ಬಗೆಹರಿಸಲಾಗದಂತಹ ಅದೆಷ್ಟೋ ಸಮಸ್ಯೆಗಳು ದಿನದಿಂದ ದಿನಕ್ಕೆ ದೊಡ್ಡ ಮರದಂತೆ ಬೆಳೆಯುತ್ತಲೇ ಇದೆ.
  8. ಇಲ್ಲಿನ ಸಮಸ್ಯೆಗಳಿಗೆ ಅತೀ ಸುಲಭವಾದ ಪರಿಹಾರ ಮಾರ್ಗಗಳಿವೆ ಆದರೆ ಅವುಗಳನ್ನು ಬಳಸಿಕೊಳ್ಳುವ ವಿಧಾನ ನಮಗೆ ಬರುತ್ತಿಲ್ಲ .ಪ್ರತಿ 5 ವರ್ಷಕ್ಕೊಮ್ಮೆ ಒಂದೊಂದು ಚುನಾವಣೆ ಬಂದೆ ಬರುತ್ತದೆ.
  9. 5 ವರ್ಷದ ಆಡಳಿತದಲ್ಲಿ ಅಭಿವೃದ್ಧಿಗೆ ಹಣವಿರುವುದಿಲ್ಲ ಆದರೆ ಚುನಾವಣೆಯ ಸಮಯದಲ್ಲಿ ಎಲ್ಲಿಲ್ಲದ ಹಣದ ರಾಶಿಯೇ ಹರಿಯುತ್ತದೆ. ಅದು ಎಲ್ಲಿಂದ ಬಂತು ಹೇಗೆ ಬಂತು ಎಂಬ ಸಾಮಾನ್ಯ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕು?
  10. ಚುನಾವಣೆಯ ಸಂದರ್ಭದಲ್ಲಿ ಅನಗತ್ಯವಾಗಿ ಖರ್ಚುಮಾಡುವ ಹಣದಿಂದ ಎಷ್ಟೊಂದು ಅಭಿವೃದ್ಧಿ ಕೆಲಸಗಳನ್ನು ಮಾಡಬಹುದಲ್ಲವೆ ? ಆದರೆ ಅಂತಹ ಸತ್ಕಾರ್ಯಕ್ಕೆ ಯಾರೊಬ್ಬರೂ ಮುಂದಾಗುವು ದಿಲ್ಲ.ಇದು ನಮ್ಮಲ್ಲೆರ ದೌರ್ಭಾಗ್ಯವೇ ಸರಿ.

ನಿಜವಾಗಿಯೂ ಜನ ಸೇವೆ ಮಾಡುವ ಉದ್ದೇಶ ಇದ್ದರೆ ಮೊದಲು ಜನರ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಮಾಡಿ

ಗೌರೀಶ್ ಟಿ‌.ಎಸ್
ತಿಪ್ಪೇನಹಳ್ಳಿ

.

Copyright © All rights reserved Newsnap | Newsever by AF themes.
error: Content is protected !!