ಅಂದು ಕಾಲೇಜಿನ ಮೊದಲನೇ ದಿನ, ಒಂದೊಂದು ಗುಂಪು ಕಟ್ಟಿಕೊಂಡು ಓಡಾಡುವ ವಿದ್ಯಾರ್ಥಿಗಳು, ಹೀಗೆ ಒಂದು ಗುಂಪು ಅಲೆದಾಡುವಾಗ ಅಲ್ಲೊಬ್ಬ ಸುಂದರ ಹುಡುಗನನ್ನು ನೋಡಿದೆ. ಊಫ್ ! ಅದೇ ಮೊದಲು, ಈ ರೀತಿಯ ಅನುಭವ ಎಂದೂ ಆಗಿರಲ್ಲಿಲ್ಲ. ಆ ಅನುಭವಕ್ಕೆ ಕೊಟ್ಟ ಹೆಸರೇ ಕ್ರಶ್.
ಸರಿ..! ಕ್ರಶ್ ಎಂದರೇನು?
ಈ ಕ್ರಶ್ ಎಂಬ ಹೆಸರು ಇದೆಯಲ್ಲಾ ಇನ್ಸ್ಟ, ಫೇಸ್ಬುಕ್ನಲ್ಲಿ ಒಂದು ಸುತ್ತು ಹಾಕಿ ಮ್ಯೂಚುವಲ್ ಅಕೌಂಟ್ಗಳ ಮೂಲಕ ಹುಡುಕಿದೆ, ಅಬ್ಬಾ! ಹುಡುಕಿದ್ದಕ್ಕೂ ಸಾರ್ಥಕವಾಯಿತು. ಹೆಸರು ಸಿಕ್ಕಿತ್ತು ಆದರೆ ಮುಂದೆ? ಇದು ಅಕರ್ಷಣೆಯೇ ಅಥವಾ ನಿಜವಾದ ಲವ್ವಾ ಅನ್ನುವಂತಹ ಪ್ರಶ್ನೆ. ಇವೆರೆಡು ಅಲ್ಲಾ. ನಮ್ಮ ಮನಸ್ಥಿತಿಗೆ ಇದನ್ನರಿಯಲು ಸಮಯ ತೆಗೆದುಕೊಳ್ಳುತ್ತೆ ಅಂದುಕೊಂಡು ಒಂದು ಕ್ಷಣ ಸುಮ್ಮನಾದೆ. ಆದರೆ ಈ ಕ್ರಶ್ ಎಂಬುದು ಈಗಿನ ಜನರೇಷನ್ ಹಾಗೆ ದಿನಕ್ಕೊಂದೊಂದು ಅರ್ಥ ಹುಡುಕುತ್ತಾ ವಾಸ್ತವದ ಅರಿವಿಲ್ಲದೆ ಇದ್ದು ಬಿಡುತ್ತೇವೆ. ಹಾಗಂತ ಕ್ರಶ್, ಲವ್ ಇರಬಾರದು ಅಂತ ಏನಿಲ್ಲಾ, ಕೆಲವೊಮ್ಮೆ ಅಗುವ ಕ್ರಶ್ಗಳಿಂದ ಅನುಕೂಲ ಜಾಸ್ತಿ ಇರುತ್ತೆ. ಬೋರಿಂಗ್ ಕ್ಲಾಸ್ಗಳಲ್ಲಿ ಪ್ರತಿ ದಿನ ಹೊಸ ಹೊಸ ಸ್ನೇಹ ಹುಟ್ಟುತ್ತದೆ. ಹೊರಗಡೆ ಸುರಿಯವ ಸೋನೆ ಮಳೆ ಹಿತ ಅನಿಸದೇ ಇರಲ್ಲ. ರಾಜಕುಮಾರ್, ಮೊಹಮದ್ ರಫೀ ಮುಂತಾದವರ ಹಾಡು ಖುಷಿ ಕೊಡದೆ ಇರುವುದಿಲ್ಲ, ನಮ್ಮೆಾಳಗೆ ಇರುವ ಒಬ್ಬ ಸೋನು ನಿಗಮ್, ರಾಜೇಶ್ ಕೃಷ್ಣನ್, ನೇಹಾ ಕಕ್ಕರ್, ಶ್ರೇಯಾ ಘೋಷಲ್ ಆಚೆ ಬಂದರೂ ಅಚ್ಚರಿಿುಯಿಲ್ಲ. ರವಿವರ್ಮನಂತ ಕಲಾಕಾರರು ಇರಬಹುದು ಅಥವಾ ಒಳ್ಳೆ ಕವಿ/ಕವಯಿತ್ರಿ ಕೂಡ ಹುಟ್ಟಿಕೊಳ್ಳಬಹುದು. ಆದರೆ ಈ ಮಾಯ ಪ್ರಪಂಚ ಎಷ್ಟು ದಿನ? 1, 2, 3 ದಿನಗಳ? ಅಥವಾ ಇನ್ನೊಬ್ಬರು ಸಿಗುವ ತನಕವಾ?
ಈ ಸ್ಕೂಲ್ ಕಾಲೇಜು ಎಲ್ಲಾ ಮುಗೀತು, ಇನ್ನೇನು ಯಾವುದಾದರೂ ಒಳ್ಳೆ ಕಂಪೆನಿಲಿ ಕೆಲಸಕ್ಕೆ ಸೇರೊ ಹೊತ್ತು, ಅಲ್ಲೂ ಇದೇ ಕ್ರಶ್, ಯಾರ ಮೇಲೆ ಯಾವಾಗ ಕ್ರಶ್ ಆಗುತ್ತೊ ಅಥವಾ ಲವ್ ಆಗುತ್ತೊ ಗೊತ್ತಿಲ್ಲ. ಅದೇನೋ ಒಂದು ಆಯಿತು, ವಯಸ್ಸಲ್ವ ಅಂದುಕೊಂಡು ಸುಮ್ಮನಾಗಬಹುದು. ಅದೇನೋ ಒಂದು ಆಗಿ ಮದುವೆ, ಮಕ್ಕಳು ಎಲ್ಲಾ ಆಯಿತು. ಮತ್ತೆ ಒಂದು ಕಡೆ ಬಿಡುವೇ ಇಲ್ಲದ ಕೆಲಸ ಕಾರ್ಯಗಳು ಅದರ ನಡುವಲ್ಲಿ ಗೊತ್ತೇ ಆಗದಂತೆ ಬಂದು ಹೋಗುವುದು ಈ ಕ್ರಶ್ ಎಂಬ ಮಾಯಾ ಜಿಂಕೆ. ಈ ಕ್ರಶ್ ಅಂದರೇನು? ಇದು ಸಾಮಾನ್ಯವಾದ ಒಂದು ಮೋಹವೇ? ಅಥವಾ ಆಕರ್ಷಣೆಯೇ ಒಂದು ಗೊತ್ತಾಗುವುದಿಲ್ಲ,.
ಬದುಕು ಒಂದು ಜಾತ್ರೆಯ ತರಹ ಬಂದು ಹೋಗುವ ಮಂದಿ ಜಾಸ್ತಿ, ಆದರೆ ಯಾರು ಕೂಡ ಕೊನೆತನಕ ಉಳಿಯವುದಿಲ್ಲ. ಹಾಗಂತ ಕ್ರಶ್ ಇರಬಾರದು ಅಂತ ಅಲ್ಲ, ಭಾವನೆಗಳನ್ನ ಬೆಸೆಯುವವರು ತುಂಬಾ ಕಡಿಮೆ. ಆಕರ್ಷಣೆ ಸಹಜ! ಆದರೆ ಅತೀಯಾದರೆ ಅಮೃತವೂ ವಿಷ ಎನ್ನುವ ಹಾಗೆ ಎಲ್ಲವು ಕಷ್ಟ. ನಾನಿಲ್ಲಿ ಏನು ಹೇಳುತ್ತಿದ್ದೇನೆ ಎಂಬದು ಯಾರಿಗೂ ಅರ್ಥವಾಗುವುದಿಲ್ಲ. ಯಾಕೆಂದರೆ ಲವ್, ಕ್ರಶ್ ಇವೆಲ್ಲಾ ಮಾಮೂಲಿ, ದಿನಕೊಬ್ಬರ ಮೇಲೆ ಕ್ರಶ್ ಆಗಬಹುದು, ಹಾಗಂತ ನನಗೆ ಇವೆಲ್ಲಾ ಬಹಳ ದೂರ. ಎಲ್ಲಾ ಅಕ್ಷರಗಳಿಗೆ ಸೀಮಿತ, ಹಿಂದೆ ಕೆಲವರ ಗುಣ-ನಡತೆಗಳನ್ನು ದ್ವೇಷ ಮಾಡುತ್ತಾ ಇದ್ದೆ. ನಿನ್ನ ಹೃದಯ ಕಲ್ಲು ಅಂತ ನನ್ನ ಸ್ನೇಹಿತರು ರೇಗಿಸಿದ್ದು ಕೂಡ ಉಂಟು. ನಂತರ ಬರವಣಿಗೆ, ಪುಸ್ತಕ ಓದುವುದು, ಕೆಲಸ ಮಾಡುವ ಸ್ಧಳ ಅಥವಾ ಸಂದರ್ಭಗಳು ಇವೆಲ್ಲವನ್ನು ಬದಲಿಸಿಬಿಟ್ಟವು.
ಕೊನೆಯ ಪುಟಕ್ಕೆ ಬರುವಾಗ ವಿಷಾದ ಭಾವ, ನಿಜವಾದ ಭಾವನೆಗಳ ಕೊರತೆ ಎದ್ದು ಕಾಣುತಿತ್ತು, ಯಾವಗಲುಾ ಹೆಳುವ ಹಾಗೆ ಮನುಷ್ಯ ಸಾವು, ನೋವು ಏನು ಇಲ್ಲವೆಂಬಂತೆ ಹೇಗಾದರೂ ಬದುಕಬಲ್ಲಾ, ಆದರೆ ಭಾವನೆಗಳು ಇಲ್ಲದೆ ಎಂದಿಗೂ ಬದುಕಲಾರ. ನಮ್ಮ ಜೀವನದಲ್ಲಿ ಶಕ್ತಿ ಮೀರಿ ಕನಸುಗಳನ್ನು ಕಾಣುತ್ತೇವೆ. ಈ ಪ್ರಪಂಚದಲ್ಲಿ ಹುಟ್ಟಿನಿಂದ ಸಾಯುವವರೆಗೂ ಯಾರಿಂದಲೂ ಯಾವಾಗಲೂ ಸಂತೋಷವಾಗಿರುವುದು ಸಾಧ್ಯವೇ ಇಲ್ಲ. ಅದು ಸಾಧ್ಯವಾಗುವುದು ಕೂಡ ಅಷ್ಟು ಸುಲಭದ ಮಾತಲ್ಲ. ಆದರೆ, ಹುಟ್ಟಿನಿಂದ ಸಾಯುವವರೆಗೂ ನಮ್ಮ ಜೀವನದಲ್ಲಿ ಎದುರಾಗಿ ನಮಗಾಗಿ ಸಿಗುವ ಸಣ್ಣ ಸಣ್ಣ ಖು್ಷಿಯನ್ನು ಸಂಭ್ರಮಿಸುವುದು ಕೂಡ ಸಂತೋಷದ ಸಾಧನೆಯೇ. ಚಿಕ್ಕ ಮಕ್ಕಳಿಗೆ ಇಷ್ಟವಾಗುವ ಆಟಿಕೆ ಕೊಡಿಸಿದಾಗ ಆ ಮಗು ಪಡುವ ಸಂಭ್ರಮ ಚಿಟ್ಟೆಯೊಂದು ಹಿಡಿದಾಗ ಕುಣಿದು ಕುಪ್ಪಳಿಸಿ ಸಂತೋಷ ಪಡುವುದನ್ನು ಕಂಡು ಸಾಮಾನ್ಯವಾಗಿ ಎಲ್ಲರಿಗೂ ತಮ್ಮ ಬಾಲ್ಯದ ಸವಿನೆನಪುಗಳು ಕಾಡುತ್ತವೆ. ಹಾಗೆಯೇ ಮಗುವಾಗಿಯೇ ಇದ್ದುಬಿಡಬೇಕಿತ್ತು ಅನ್ನಿಸಿಬಿಡುತ್ತದೆ. ನಮ್ಮ ಮಹತ್ವಾಕಾಂಕ್ಷೆಗಳ ಈಡೇರಿಕೆಯ ಬೆನ್ನು ಹತ್ತಿ ನಾವು ನಮಗೆ ಅರಿವಿಲ್ಲದೆಯೇ ನಮ್ಮಲ್ಲಿ ನಕಾರಾತ್ಮಕ ಮನೋಭಾವವನ್ನು ಸಹಜಗುಣವನ್ನಾಗಿ ಮಾಡಿಕೊಂಡಿರುತ್ತೇವೆ. ನಾನು ಯಾಕೆ ಹೀಗೆ ನಡೆದುಕೊಂಡೆ ಎಂದು ನಮ್ಮ ಮನಸ್ಸಿಗೆ ತಿಳಿದಿದ್ದರೆ ಸಾಕಲ್ಲವೇ ನಮ್ಮ ತಪ್ಪಿದ್ದರೆ ನೇರವಾಗಿ ಕ್ಷಮೆ ಕೇಳಬೇಕು ಅದು ಬಿಟ್ಟು ನಮ್ಮ ಯೋಚನೆಯಿಂದ ಹಿಡಿದು ನಮ್ಮ ಪ್ರತಿಕ್ರಿಯೆಯ ಪ್ರತಿ ನಡುವಳಿಕೆಯ ವಿವರಣೆ ಇನ್ನೊಬ್ಬರಿಗೆ ನೀಡುವ ಅಗತ್ಯವಂತೂ ಇಲ್ಲ ಅಂತ ನನ್ನ ಅನಿಸಿಕೆ. ನಮ್ಮ ಮನಸ್ಥಿತಿ ಹಾಗೂ ಪರಿಸ್ಥಿತಿಯ ಅರಿವು ನಮಗಿದ್ದರೆ ಸಾಕಲ್ಲವೇ.
ಈ ಕ್ರಶ್ ಎಂಬುದು ಅರಿಷಡ್ವರ್ಗಗಳಲ್ಲಿ ಒಂದು. ಇದು ಮನುಷ್ಯನ ಸಾಧನೆಗೆ ಬಹುದೊಡ್ಡ ಅಡ್ಡಿ. ಎಂತಹ ಉನ್ನತಿಗೇರಿದ ಸಂತರೂ, ಸಾಧಕರೂ ಕ್ರಶ್‍ನಿಂದ ಅವನತಿ ಹೊಂದಿದ ಉದಾಹರಣೆಗಳು ಅನೇಕ. ಅಹಂಕಾರವನ್ನಾದರೂ ಗೆಲ್ಲಬಹುದು; ಆದರೆ ಮಮಕಾರವನ್ನು ಗೆಲ್ಲುವುದು ಕಷ್ಟ. ಅರಿಷಡ್ವರ್ಗದಲ್ಲಿ ಕಾಮವೊಂದು ಅಗ್ನಿ, ಕ್ರೋಧವೊಂದು ಅಗ್ನಿ. ಆದರೆ ಕ್ರಶ್ ಅಥವಾ ಮೋಹವು ಅಗ್ನಿಯಲ್ಲ, ಪಾಶ. ಏಕೆಂದರೆ ಕಾಮಕ್ರೋಧಗಳು ಉದ್ರೇಕಗೊಂಡಾಗ ಅವು ನಮ್ಮ ವ್ಯಕ್ತಿತ್ವವನ್ನೇ ಸುಡುತ್ತವೆ. ಆದರೆ ಈ ರೀತಿಯಲ್ಲಿ ಕ್ರಶ್ ನಮ್ಮನ್ನು ಸುಡುವುದಿಲ್ಲ; ಬದಲಾಗಿ ಬಿಗಿಯುತ್ತದೆ, ಬಂಧಿಸುತ್ತದೆ. ಕಾಮ, ಕ್ರೋಧಗಳು ನಮ್ಮ ಮನಸ್ಸನ್ನು ಕೆಡಿಸಿದರೆ ಕ್ರಶ್ ಹೃದಯವನ್ನು ಹಿಂಡುತ್ತದೆ.
ನನ್ನವರು ತನ್ನವರು, ನನ್ನದು ತನ್ನದು ಎಂಬ ಭಾವವೇ ಈ ಕ್ರಶ್. ಸಂಸಾರದ ಸಂಬಂಧಗಳನ್ನು ಅತಿಯಾಗಿ ಹಚ್ಚಿಕೊಂಡಾಗ ಕ್ರಶ್ ಎಂಬ ಬಲೆಗೆ ಬೀಳುತ್ತೇವೆ. ಈ ಸಂಬಂಧಗಳು ಶಾಶ್ವತವಲ್ಲವೆಂದು ಮೊದಲು ತಿಳಿದುಕೊಳ್ಳಬೇಕು. ನಶ್ವರವನ್ನು ನೆಚ್ಚಿಕೊಂಡಷ್ಟೂ ನಿರಾಶರಾಗುವುದು ಹೆಚ್ಚು. ತಾತ್ಕಾಲಿಕ ಸತ್ಯದ ಮೇಲಿನ ಕ್ರಶ್ ಶಾಶ್ವತ ಸತ್ಯದ ಮೇಲಿನ ಪ್ರೇಮವನ್ನಾಗಿ ಪರಿವರ್ತಿಸಿದರೆ ಮನುಷ್ಯನ ಬದುಕು ಸ್ವರ್ಗವಾಗಬಹುದು. ಈ ಕ್ರಶ್ ಎಂಬುದು ಒಂದು ರೀತಿಯಲ್ಲಿ ಮಾಯಾ ಜಿಂಕೆಯೇ ಹೌದು. ಭಗವಂತನ ಸೃಷ್ಟಿಯೆಲ್ಲವೂ ಮಾಯೆಯಿಂದ ಆವರಿಸಿದೆ ಎಂದ ಮೇಲೆ ಮನುಷ್ಯನೂ ಇದಕ್ಕೆ ಹೊರತಾಗಿರಲು ಸಾಧ್ಯವಿಲ್ಲ.
ಆಶ್ಚರ್ಯದ ಸಂಗತಿ ಎಂದರೆ ಇದರ ಬಲೆಯೊಳಗೆ ನಾವೆಲ್ಲರೂ ಭದ್ರವಾಗಿರಲು ಬಯಸುತ್ತೇವೆ. ಇದರ ಒಳಹೊಕ್ಕಷ್ಟೂ ನಾವು ಇನ್ನಷ್ಟು ಬಂಧಿತರಾಗುತ್ತೇವೆ. ಬಂಧನವನ್ನೇ ನಾವು ಭದ್ರತೆ ಎಂಬುದಾಗಿ ಭ್ರಮಿಸುತ್ತೇವೆ. ಈ ಕ್ರಶ್ ಎಂಬ ಮಾಯೆ ಎಲ್ಲರನ್ನೂ ವಿವೇಕಶೂನ್ಯರನ್ನಾಗಿಸುತ್ತದೆ. ಈ ಮಾಯೆಯನ್ನೇ ಭುವನಮೋಹಿನೀ ಮಾಯೆಯೆನ್ನುವುದು. ಕ್ರಶ್ ಎಂಬುದು ಯಾರನ್ನೂ ಬಿಟ್ಟಿಲ್ಲ. ಜನಸಾಮಾನ್ಯರಿಂದ ಹಿಡಿದು ಕವಿಗಳು, ವಿದ್ವಾಂಸರು, ವಿಜ್ಞಾನಿಗಳು, ರಾಜಕಾರಣಿಗಳು, ಸನ್ಯಾಸಿಗಳು ಎಲ್ಲರನ್ನೂ ತನ್ನ ಪಾಶದಲ್ಲಿ ಬಂಧಿಸಿದೆ. ಒಬ್ಬೊಬ್ಬರಿಗೆ ಒಂದೊಂದರ/ಒಬ್ಬೊಬ್ಬರ ಮೇಲೆ ಕ್ರಶ್ ಆಗಬಹುದು, ಜೀವನದಲ್ಲಿ ನಾವು ಎಷ್ಟೋ ಸಲ, ಏನೇನೋ ಕಾರಣಗಳಿಗೆ ಬೇಸರಗೊಂಡ ಸಮಯ ಅದನ್ನು ಒಬ್ಬರೊಂದಿಗೆ ಹಂಚಿಕೊಳ್ಳುವ ಮೂಲಕವೂ ಕ್ರಶ್ ಆಗಬಹುದು. ಏನೇ ಆಗಲಿ ಕ್ರಶ್ ಎಂಬ ಮಾಯಾವಿ ಯಾರ ಬದುಕನ್ನು ಹಾಳು ಮಾಡದಿದ್ದರೆ ಅಷ್ಟೇ ಸಾಕು.
ಪುಷ್ಪ ಪ್ರಸಾದ. ಉಡುಪಿ
More Stories
ಹುಟ್ಟುಹಬ್ಬದ ದಿನವೇ ಬಾಲಕನ ದುರ್ಮರಣ
KPSC ಪರೀಕ್ಷೆಗಳಲ್ಲಿ ಕನ್ನಡ ದೋಷಗಳ ವಿವಾದ – ಮರುಪರೀಕ್ಷೆಗೆ ಪ್ರಬಲ ಒತ್ತಾಯ
ಮಂಡ್ಯ ರೈತರನ್ನು ಕಾಡುತ್ತಿರುವ ವಕ್ಫ್ ಭೂಮಿ ವಿವಾದ