ಕೋವಿಡ್ ಎರಡನೇ ಅಲೆಯ ಪ್ರಭಾವ ಜೂನ್ ತಿಂಗಳಲ್ಲಿ ತಗ್ಗಲಿದೆ, ಮೂರನೇ ಅಲೆ ಎದುರಿಸಲು ಈಗಿನಿಂದಲೇ ಸಜ್ಜಾಗಬೇಕಿದೆ ಎಂದು ಮಣಿಪಾಲ್ ಆಸ್ಪತ್ರೆಗಳ ಚೇರ್ಮನ್ ಡಾ.ಸುದರ್ಶನ ಬಲ್ಲಾಳ ಹೇಳಿದ್ದಾರೆ.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (KUWJ)ದಿಂದ ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರ ಜವಾಬ್ದಾರಿ ಎಂಬ ವಿಷಯದ ಬಗ್ಗೆ ಏರ್ಪಡಿಸಿದ್ದ ಜೂಮ್ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೋವಿಡ್ ಮೊದಲ ಅಲೆಯ ಬಳಿಕ ಮುಂಜಾಗ್ರತೆಯ ಕ್ರಮಗಳನ್ನು ಎಲ್ಲರೂ ನಿರ್ಲಕ್ಷಿಸಿದ ಪರಿಣಾಮವಾಗಿ ಇಂದು ಸೋಂಕು ವ್ಯಾಪಕವಾಗಿ ಉಲ್ಬಣಗೊಂಡು ಸಾವು, ನೋವು ಹೆಚ್ಚಲು ಕಾರಣವಾಗಿದೆ ಎಂದರು.
ಕೋವಿಡ್ ಮೂರನೇ ಅಲೆಯ ಪರಿಣಾಮ ತಡೆಯಲು ಗ್ರಾಮೀಣ ಮಟ್ಟದ ತನಕ ಆರೋಗ್ಯ ವ್ಯವಸ್ಥೆ ಇನ್ನಷ್ಟು ಸುಧಾರಣೆ ಮಾಡಲು ಮೊದಲ ಆದ್ಯತೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಸೇರಿದಂತೆ ಎಲ್ಲರ ಪ್ರಯತ್ನ ಮುಖ್ಯವಾಗಿದೆ ಎಂದರು.
ಕೋವಿಡ್ ಮೊದಲ ಅಲೆ ಸಂದರ್ಭದಲ್ಲಿ ಅಷ್ಟು ಮುಂದುವರಿದ ಅಮೇರಿಕಾದಲ್ಲಿ ಸೋಂಕಿತರಿಗೆ ಬೆಡ್ ನೀಡಲಾಗದಷ್ಟು ಪರಿಸ್ಥಿತಿ ಹದಗೆಟ್ಟಿತು. ಅಂತಹ ಸ್ಥಿತಿ ಈಗ ನಮಗೆ ಬಂದೊದಗಿದೆ. ಜನರು ಕಟ್ಟು ನಿಟ್ಟಾಗಿ ಮುಂಜಾಗ್ರತೆ ವಹಿಸಲು ಸಹಕಾರ ನೀಡಬೇಕಿದೆ ಎಂದು ಹೇಳಿದರು.
ಚೀನಾದಲ್ಲಿ ವೈರಸ್ ಕೃತಕವಾಗಿ ಸೃಷ್ಟಿ ಮಾಡಿದ್ದು ಎನ್ನುವುದಕ್ಕೆ ಯಾವುದೇ ವೈದ್ಯಕೀಯ ಪುರಾವೆಗಳಿಲ್ಲ. ಆದರೆ ಚೀನಾ ಈ ರೋಗದ ಹತೋಟಿ ತರುವಲ್ಲಿ ಪರಿಣಾಮಕಾರಿ ಕ್ರಮ ಕೈಗೊಂಡಿತು. ನಮ್ಮದು ಪ್ರಜಾಪ್ರಭುತ್ವ ದೇಶ. ಇಲ್ಲಿ ಅಷ್ಟು ಬಿಗಿ ನಿಲುವು ತೆಗೆದುಕೊಳ್ಳುವುದು ಸವಾಲಾಗಿದೆ ಎಂದರು.
ಕೋವಿಡ್ ಸೋಂಕು ಹೆಚ್ಚು ಜನಸಂದಣಿಯ ಪ್ರದೇಶದಲ್ಲಿ ಗಾಳಿ ಮೂಲಕ ಹರಡುತ್ತಿರುವುದು ಧೃಢವಾಗಿದೆ. ಆದ್ದರಿಂದ ಮಾಸ್ಕ್ ಕಡ್ಡಾಯ ಧರಿಸಬೇಕು ಎಂದರು.
ನಾವಿನ್ನು ಭವಿಷ್ಯದ ದಿನಗಳಿಗೆ ಗಮನ ನೀಡಬೇಕು. ಈ ನಿಟ್ಟಿನಲ್ಲಿ ಮಾಧ್ಯಮದ ಪಾತ್ರ ಮಹತ್ವದ್ದಾಗಿದೆ. ಜನರಿಗೆ ವೈದ್ಯಕೀಯ ಮಾಹಿತಿ ನೀಡಿ ಅವರನ್ನು ಮಾನಸಿಕ ಸದೃಢಗೊಳಿಸುವುದು ಇಂದಿನ ತುರ್ತಾಗಿದೆ ಎಂದರು.
ಎರಡನೇ ಅಲೆಯ ಸಂದರ್ಭದಲ್ಲಿ 20 ರಿಂದ 50 ವರ್ಷದೊಳಗಿನ ವಯೋಮಾನದವರಿಗೆ ಸಾವು ನೋವು ಹೆಚ್ಚಾಗಿರುವುದು ಕಂಡುಬಂದಿದೆ. ಮೂರನೇ ಅಲೆ ಮಕ್ಕಳಿಗೆ ಪರಿಣಾಮ ಬೀರಬಹುದು ಎನ್ನುವ ಅಭಿಪ್ರಾಯಗಳನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಮುಂಜಾಗ್ರತೆಯೆ ದೊಡ್ಡ ಮದ್ದು ಎಂದು ಹೇಳಿದರು.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಮಾತನಾಡಿ, ಸುದ್ದಿಮನೆಯಲ್ಲಿ ಕೆಲಸ ಮಾಡುವ ಪತ್ರಕರ್ತರದ್ದು ಮಹತ್ವದ ಜವಾಬ್ದಾರಿ. ಸರ್ಕಾರ ಕೋವಿಡ್ ಫ್ರಂಟ್ ಲೈನ್ ವಾರಿಯರ್ಸ್ ಎಂದು ಘೋಷಣೆ ಮಾಡಿರುವುದು ಸ್ವಾಗತಾರ್ಹ. ಈ ಹೊತ್ತಿನಲ್ಲಿ ಪತ್ರಕರ್ತರ ಹಿತ ದೃಷ್ಟಿಯಿಂದ ಈ ಮಾಧ್ಯಮ ಸಂವಾದ ಏರ್ಪಡಿಸಲಾಗಿದೆ ಎಂದರು.
ಪತ್ರಕರ್ತರಾದ ಜೋಗಿ, ಚಂದ್ರಕಾಂತ ವಡ್ಡು, ಶ್ಯಾಮಸುಂದರ್, ಆರಾಧ್ಯ, ಕೆ.ವಿ.ಪರಮೇಶ್, ಎಸ್.ವಿ.ಲಕ್ಷ್ಮೀನಾರಾಯಣ, ಸಿರಾಜ್ ಬಿಸರಳ್ಳಿ, ಪ್ರಭಾ, ಪಂಕಜ, ಆಕಾಶವಾಣಿ ನಿರ್ದೇಶಕಿ ಡಾ.ನಿರ್ಮಲ ಎಲಿಗಾರ್, ಚಿತ್ರ ನಿರ್ದೇಶಕ ನಂಜುಂಡೇಗೌಡ, ಕೆಯುಡಬ್ಲ್ಯೂಜೆ ಪದಾಧಿಕಾರಿಗಳು ಭಾಗವಹಿಸಿದ್ದರು.
- ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ ಹುಡುಕಾಟ ಸ್ಥಗಿತ
- ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಸಾಧನೆ: ಗರಿಷ್ಠ ರನ್ ಹಾಗೂ ಭರ್ಜರಿ ಗೆಲುವು
- ಮಂಡ್ಯ: ಕಾವೇರಿ ನದಿಯಲ್ಲಿ ಮುಳುಗಿ ಬಿ.ಇ ವಿದ್ಯಾರ್ಥಿ ದುರ್ಮರಣ
- ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ 89 ಉದ್ಯೋಗಾವಕಾಶ
- ಕೆನರಾ ಬ್ಯಾಂಕ್ನಲ್ಲಿ 60 ಹುದ್ದೆಗಳಿಗೆ ಅರ್ಜಿ ಆಹ್ವಾನ
More Stories
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಸಾಧನೆ: ಗರಿಷ್ಠ ರನ್ ಹಾಗೂ ಭರ್ಜರಿ ಗೆಲುವು
KPSC ಪರೀಕ್ಷೆಗಳಲ್ಲಿ ಕನ್ನಡ ದೋಷಗಳ ವಿವಾದ – ಮರುಪರೀಕ್ಷೆಗೆ ಪ್ರಬಲ ಒತ್ತಾಯ
ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ