November 19, 2024

Newsnap Kannada

The World at your finger tips!

Dr K Sudhakar 1581670361

sudhakar picture

ರಾಜ್ಯದ 16% ಜನರಲ್ಲಿ ಕೋವಿಡ್ ಪ್ರತಿಕಾಯ ಪತ್ತೆ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

Spread the love

ರಾಜ್ಯದಲ್ಲಿ ಶೇ.16 ರಷ್ಟು ಜನರಲ್ಲಿ ಕೋವಿಡ್ ಪ್ರತಿಕಾಯ ಇದೆ ಎಂಬ ಅಂಶ ಸಿರೋ ಸರ್ವೆಯಲ್ಲಿ ತಿಳಿದುಬಂದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬೈ, ಪುಣೆ, ದೆಹಲಿ ನಗರಗಳಲ್ಲಿ ಕೆಲ ಸ್ಥಳಗಳಲ್ಲಿ ಸರ್ವೆ ಮಾಡಲಾಗಿದೆ. ಆದರೆ ಕರ್ನಾಟಕದಲ್ಲಿ ಎಲ್ಲ 30 ಜಿಲ್ಲೆಗಳಲ್ಲೂ ಸರ್ವೆ ನಡೆಸಲಾಗಿದೆ. ಬೆಂಗಳೂರಿನಲ್ಲಿ ಎಂಟು ವಲಯಗಳಲ್ಲೂ ನಡೆದಿದೆ ಸರ್ವೆ ನಡೆದಿದೆ ಎಂದರು.

16,585 ಜನರ ಮಾದರಿಗಳನ್ನು ಪಡೆದು ಪರೀಕ್ಷೆ ಮಾಡಲಾಗಿತ್ತು. 15,624 ಜನರ ಫಲಿತಾಂಶ ಬಂದಿದೆ. ಸರ್ವೆ ಮಾಡುವ ಸಮಯದಲ್ಲಿ ಸೋಂಕಿಗೆ ಒಳಗಾಗಿದ್ದವರ ಒಟ್ಟು ಪ್ರಮಾಣ 27.3% ರಷ್ಟಿದೆ ಎಂದು ತಿಳಿಸಿದರು.

sudhakar

ಕಡಿಮೆ ರಿಸ್ಕ್, ಮಧ್ಯಮ ರಿಸ್ಕ್ ಮತ್ತು ಹೆಚ್ಚು ರಿಸ್ಕ್ ಎಂದು ವರ್ಗೀಕರಣ ಮಾಡಿ ಪರೀಕ್ಷೆ ನಡೆಸಲಾಗಿದೆ. ಕೋವಿಡ್ ವೈರಸ್ ದೇಹಕ್ಕೆ ಬಂದಾಗ ಪ್ರತಿರೋಧಕವಾಗಿ ಐಜಿಜಿ ಉತ್ಪತ್ತಿಯಾಗುತ್ತದೆ. ಐಜಿಜಿ ಹೊಂದಿದವರು ಹಾಗೂ ಸಕ್ರಿಯ ಸೋಂಕಿತರನ್ನು ಪತ್ತೆ ಮಾಡುವ ಮೂಲಕ ಈ ಸರ್ವೆಯನ್ನು ಕ್ರಮಬದ್ಧವಾಗಿ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

15,624 ಜನರಲ್ಲಿ ಐಜಿಜಿ ಪ್ರತಿಕಾಯ ಇರುವವರ ಪ್ರಮಾಣ 16.4% ಇದೆ. ಅಂದರೆ ಇಷ್ಟು ಜನರು ಸೋಂಕಿಗೊಳಗಾಗಿ ಗುಣಮುಖರಾಗಿದ್ದಾರೆ. ಈ ಪ್ರಮಾಣ ದೆಹಲಿಯಲ್ಲಿ 29.1%, ಮುಂಬೈ ಸ್ಲಮ್ ರಹಿತ ಪ್ರದೇಶಗಳಲ್ಲಿ 16% ಹಾಗೂ ಸ್ಲಮ್ ಗಳಲ್ಲಿ 57%, ಪುಣೆಯ 5 ಪ್ರದೇಶಗಳಲ್ಲಿ 36.1 ರಿಂದ 65.4%, ಇಂದೋರ್ ನಲ್ಲಿ 7.8%, ಪಾಂಡಿಚೆರಿಯಲ್ಲಿ 22.7%, ಚೆನ್ನೈನಲ್ಲಿ 32.3% ಇದೆ. 15,624 ಜನರಲ್ಲಿ ಸಕ್ರಿಯ ಸೋಂಕಿತರ ಪ್ರಮಾಣ 12.7% ರಷ್ಟಿದೆ ಎಂದು ವಿವರಿಸಿದರು.

ಈ ಸರ್ವೆ 2020 ರ ಸೆಪ್ಟೆಂಬರ್ 3 ರಿಂದ 16 ರವರೆಗೆ ನಡೆದಿತ್ತು. ಕೋವಿಡ್ ಮರಣ ಪ್ರಮಾಣವನ್ನು ಸೋಂಕಿಗೆ ಒಳಗಾದ ಒಟ್ಟು ಜನರಿಗೆ ಹೋಲಿಸಿದರೆ, ಬಹಳ ಕಡಿಮೆ ಇದೆ. ರಾಜ್ಯದಲ್ಲಿ ಮರಣ ಪ್ರಮಾಣ 0.05% ಇದೆ. ಮುಂಬೈಯಲ್ಲಿ 0.05-0.10%, ಪುಣೆಯಲ್ಲಿ 0.08%, ದೆಹಲಿಯಲ್ಲಿ 0.09%, ಚೆನ್ನೈನಲ್ಲಿ 0.13% ಮರಣ ಪ್ರಮಾಣವಿದೆ ಎಂದು ವಿವರಿಸಿದರು.

ಎರಡು ಸರ್ವೆ ಮಾಡಲು ನಿರ್ಧಾರ

ಇದೇ ರೀತಿ ಡಿಸೆಂಬರ್ ಅಂತ್ಯದಲ್ಲಿ ಒಂದು ಹಾಗೂ ಮಾರ್ಚ್ ಅಂತ್ಯಕ್ಕೆ ಮತ್ತೊಂದು ಸರ್ವೆ ನಡೆಸಲಾಗುವುದು ಎಂದು ತಿಳಿಸಿದರು.

ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ, ಕೋವಿಡ್ ಸರ್ವೆ ಸಮಿತಿಯ ಮುಖ್ಯಸ್ಥ ಡಾ.ಗಿರಿಧರ ಬಾಬು ಉಪಸ್ಥಿತರಿದ್ದರು.

ಸಚಿವರು ಹೇಳಿದ ಇತರೆ ಅಂಶಗಳು

  • ಹೆಚ್ಚು ಪರೀಕ್ಷೆ ನಡೆಸಿ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು, ಚಿಕಿತ್ಸೆಯ ಗುಣಮಟ್ಟ ಹೆಚ್ಚಿಸುವುದು ಸೇರಿದಂತೆ ಹಲವಾರು ಕ್ರಮಗಳನ್ನು ಜಾರಿ ಮಾಡಲು ಈ ಸರ್ವೆ ನೆರವಾಗಲಿದೆ.
  • ರಾಜ್ಯದಲ್ಲಿ ಸಾವಿನ ಪ್ರಮಾಣ ಬಹಳ ಕಡಿಮೆ ಇದೆ. ಗುಣಮುಖರ ಪ್ರಮಾಣ 95% .
  • ದೀಪಾವಳಿ ಆಚರಣೆಗೆ ಸಂಬಂಧಿಸಿದಂತೆ ವರದಿ ನೀಡಲು ತಜ್ಞರಿಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು.
  • ಕೋವಿಡ್ ಸೋಂಕಿಗೊಳಗಾಗಿ ಗುಣಮುಖರಾದವರ ಆರೋಗ್ಯದ ನಿಗಾ ಇರಿಸಲು ಪುನರ್ವಸತಿ ಕೇಂದ್ರ ಆರಂಭಿಸಲಾಗುವುದು.
Copyright © All rights reserved Newsnap | Newsever by AF themes.
error: Content is protected !!