November 5, 2024

Newsnap Kannada

The World at your finger tips!

WhatsApp Image 2023 07 22 at 3.16.59 PM

ಅನುಮತಿ ಇಲ್ಲದ ವನ್ಯಜೀವಿ ಉತ್ಪನ್ನಗಳನ್ನು ಸರ್ಕಾರಕ್ಕೆ ಮರಳಿಸಲು ಕೊನೆ ಅವಕಾಶ ನೀಡುವ ಚಿಂತನೆ : ಸಚಿವ ಖಂಡ್ರೆ

Spread the love

ಬೆಂಗಳೂರು : ಹುಲಿ ಉಗುರಿನ ಲಾಕೆಟ್ ಇರುವ ಸರ ಧರಿಸಿರುವವರ ವಿರುದ್ಧ ನಿತ್ಯ ದೂರುಗಳು ಬರುತ್ತಿವೆ, ಬಹುತೇಕರಿಗೆ ಇದು ಅಪರಾಧ ಎಂಬ ಅರಿವೇ ಇಲ್ಲ ಎಂಬುದು ಗೋಚರವಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಅಕ್ರಮವಾಗಿ ವನ್ಯಜೀವಿ ಉತ್ಪನ್ನಗಳನ್ನು ಇಟ್ಟುಕೊಂಡಿರುವವರು ಅವುಗಳನ್ನು ಸರ್ಕಾರಕ್ಕೆ ಮರಳಿಸಲು ಕೊನೆಯ ಅವಕಾಶ ನೀಡುವ ಕಾನೂನು ಸಾಧ್ಯತೆಗಳನ್ನು ಪರಾಮರ್ಶಿಸಲಾಗುತ್ತಿದೆ ಎಂದು ಅರಣ್ಯ, ವನ್ಯಜೀವಿ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಗುರುವಾರ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ ತರುವಾಯ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ತಮ್ಮ ಪೂರ್ವಜರು ಹೊಂದಿದ್ದ ವನ್ಯಜೀವಿ ಅಂಗಾಂಗದಿಂದ ಮಾಡಿದ ಟ್ರೋಫಿ, ಫಲಕ, ಪೆಂಡೆಂಟ್ ಸೇರಿದಂತೆ ಯಾವುದೇ ಉತ್ಪನ್ನಗಳನ್ನು ಅರಣ್ಯ ಇಲಾಖೆಯಿಂದ ದೃಢೀಕರಿಸಿಕೊಂಡು ಮಾಲೀಕತ್ವದ ಹಕ್ಕು ಪಡೆದುಕೊಳ್ಳಲು 2003ರವರೆಗೆ ಹಲವು ಅವಕಾಶ ನೀಡಲಾಗಿತ್ತು. ಹಲವರು ತಮ್ಮ ಬಳಿ ಇದ್ದ ವನ್ಯಜೀವಿ ಉತ್ಪನ್ನಗಳಿಗೆ ಮಾಲೀಕತ್ವದ ಹಕ್ಕು ಪಡೆದಿದ್ದಾರೆ. ಇನ್ನೂ ಅನೇಕರು ದೃಢೀಕರಣ ಮತ್ತು ಪ್ರಮಾಣ ಪತ್ರ ಪಡೆದಿಲ್ಲ ಎಂದು ಹೇಳಿದರು.

ಗ್ರಾಮೀಣ ಪ್ರದೇಶದ ಕೆಲವರ ಮನೆಗಳಲ್ಲಿ ಜಿಂಕೆ ಚರ್ಮ, ಆನೆ ದಂತದಿಂದ ಮಾಡಿದ ಕಲಾಕೃತಿಗಳು, ಜಿಂಕೆ ಮತ್ತು ಸಾರಂಗದ ಕೊಂಬು ಇತ್ಯಾದಿಗಳನ್ನು ಇಟ್ಟುಕೊಂಡಿರುತ್ತಾರೆ. ಇದು ಅಪರಾಧ ಎಂಬುದೂ ಅವರಿಗೆ ತಿಳಿದಿಲ್ಲ. ವರ್ತೂರು ಸಂತೋಷ ಪ್ರಕರಣ ವರದಿಯಾದ ಬಳಿಕ, ವನ್ಯಜೀವಿ ಉತ್ಪನ್ನಗಳ ಅಕ್ರಮ ದಾಸ್ತಾನಿನ ಬಗ್ಗೆ ಹೆಚ್ಚಾಗಿ ದೂರುಗಳು ಬರುತ್ತಿವೆ. ಕಾನೂನಿನ ಅರಿವಿಲ್ಲದ ಶ್ರೀಸಾಮಾನ್ಯರಿಗೆ ಆಗುವ ತೊಂದರೆ ತಪ್ಪಿಸಲು ಒಂದು ಬಾರಿ ಕೊನೆಯದಾಗಿ ಇಂತಹ ಅಕ್ರಮ ಸಂಗ್ರಹಣೆ/ದಾಸ್ತಾನಿನ ಬಗ್ಗೆ ಘೋಷಣೆ ಮಾಡಿಕೊಳ್ಳಲು ಮತ್ತು ಸರ್ಕಾರಕ್ಕೆ ಮರಳಿಸಲು ಅವಕಾಶ ನೀಡುವ ಬಗ್ಗೆ ಪರಾಮರ್ಶಿಸಿ, ಇದಕ್ಕೆ ಇತಿಶ್ರೀ ಹಾಡಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.

ಅಳಿವಿನಂಚಿನಲ್ಲಿರುವ, ಅಮೂಲ್ಯ ಮತ್ತು ಅಪರೂಪದ ವನ್ಯ ಜೀವಿಗಳಾದ ಹುಲಿ, ಚಿರತೆ, ಚಿಂಕಾರ, ಕೃಷ್ಣಮೃಗ, ಸಾಂಬಾರ್, ಕರಡಿ ಸೇರಿದಂತೆ ಹಲವು ಕಾಡು ಪ್ರಾಣಿಗಳನ್ನು ಪರಿಶಿಷ್ಟ 1ರಲ್ಲಿ ಪಟ್ಟಿ ಮಾಡಲಾಗಿದ್ದು, ಇಂತಹ ಪ್ರಾಣಿಗಳನ್ನು ಕೊಲ್ಲುವುದು, ಬೇಟೆ ಆಡುವುದು, ಅಂತಹ ಪ್ರಾಣಿಗಳ ದೇಹದ ಯಾವುದೇ ಭಾಗದಿಂದ ತಯಾರಿಸಿದ ವಸ್ತುವನ್ನು ಅಲಂಕಾರಿಕವಾಗಿ ಮನೆಯಲ್ಲಿಡುವುದು, ಧರಿಸುವುದು ಕೂಡ ಅಪರಾಧವಾಗಿರುತ್ತದೆ ಎಂದು ತಿಳಿಸಿದರು.
ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಎಲ್ಲರಿಗೂ ಕಾನೂನು ಸಮಾನವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಗಣ್ಯರೂ ಸೇರಿದಂತೆ ಹಲವರಿಗೆ ನೋಟಿಸ್ ನೀಡಲಾಗಿದೆ. ಅಧಿಕಾರಿಗಳು ಕಾನೂನು ರೀತ್ಯ ಮತ್ತು ಆಯಾ ಸಂದರ್ಭಕ್ಕೆ ಅನುಗುಣವಾಗಿ ತಮ್ಮ ವಿವೇಚನಾಧಿಕಾರ ಬಳಸಿ ಕ್ರಮ ಜರುಗಿಸಲಿದ್ದಾರೆ ಎಂದರು.

ನಕಲಿ ಲಾಕೆಟ್ ಕೂಡ ಧರಿಸದಂತೆ ಮನವಿ:

ಚಿತ್ರನಟರು, ಗಣ್ಯರು ನಕಲಿ ಹುಲಿ ಉಗುರಿನ ಲಾಕೆಟ್ ಕೂಡ ಧರಿಸಿದರೂ ಇತರರಿಗೆ ಪ್ರೇರಣೆ ಸಿಗುತ್ತದೆ. ಅವರಿಗೆ ಸಾವಿರಾರು ಅಭಿಮಾನಿಗಳು ಇರುತ್ತಾರೆ. ಅವರು ಕೂಡ ತಮ್ಮ ನಾಯಕನಂತೆ ಹುಲಿ ಉಗುರಿನ ಲಾಕೆಟ್ ಧರ ಧರಿಸಲು ಬಯಸುತ್ತಾರೆ. ಆಗ ಬೇಡಿಕೆ ಹೆಚ್ಚುತ್ತದೆ. ವನ್ಯಜೀವಿಗಳ ಹತ್ಯೆ ಆಗುತ್ತದೆ. ಇದಕ್ಕೆ ಪರೋಕ್ಷ ಕುಮ್ಮಕ್ಕು ನೀಡಿದಂತೆ ಆಗುತ್ತದೆ. ಹೀಗಾಗಿ ಸಾಮಾಜಿಕ ಬದ್ಧತೆಯ ದೃಷ್ಟಿಯಿಂದ ಗಣ್ಯರು, ನಟರು ನಕಲಿ ಪೆಂಡೆಂಟ್ ಕೂಡ ಧರಿಸಬಾರದು ಎಂದು ಮನವಿ ಮಾಡಿದರು.

1926 ಹೆಲ್ಪ್ ಲೈನ್ ನಂಬರ್ :

ಅರಣ್ಯ ಇಲಾಖೆಗೆ 1926 ಎಂಬ ಸಹಾಯವಾಣಿ ಇದ್ದು ಸಾರ್ವಜನಿಕರು ಈ ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಲು, ಅರಣ್ಯ ಇಲಾಖೆಗೆ ಸಂಬಂಧಿಸಿದ ಮಾಹಿತಿ ಪಡೆಯಲು ಅವಕಾಶವಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

4000 ಹುದ್ದೆ ಖಾಲಿ:

ಅರಣ್ಯ ಇಲಾಖೆಯಲ್ಲಿ ಸುಮಾರು 4 ಸಾವಿರ ಹುದ್ದೆ ಖಾಲಿ ಇದ್ದು, ಈಗಾಗಲೇ ಹಣಕಾಸು ಇಲಾಖೆ 800 ಹುದ್ದೆ ಭರ್ತಿಗೆ ಅನುಮತಿ ನೀಡಿದೆ. ಶೀಘ್ರವೇ ಇದರ ಭರ್ತಿ ಪ್ರಕ್ರಿಯೆ ಆರಂಭಿಸಲಾಗಿದೆ ಎಂದರು.


ಚಿನ್ನಾಭರಣ ತಯಾರಕರಿಗೆ ಮನವಿ : ಎಲ್ಲ ಚಿನ್ನಾಭರಣ ಮಳಿಗೆಗಳಲ್ಲಿ ತಮ್ಮಲ್ಲಿ ವನ್ಯಜೀವಿಯ ಯಾವುದೇ ಆಭರಣ ತಯಾರಿಸುವುದಿಲ್ಲ, ಮಾರಾಟ ಮಾಡುವುದಿಲ್ಲ. ಇದು ಶಿಕ್ಷಾರ್ಹ ಅಪರಾಧ ಎಂಬ ಫಲಕ ಹಾಕುವಂತೆ ಸೂಚಿಸಲಾಗುವುದು ಎಂದು ಈಶ್ವರ ಖಂಡ್ರೆ ತಿಳಿಸಿದರು.


ಹುಲಿ ಬೇಟೆಗಾರನ ಸೆರೆ: ಇತ್ತೀಚೆಗೆ ಬೆಳಗಾವಿ ವಿಭಾಗದಲ್ಲಿ ಖಾನಾಪುರ ಬಳಿಯ ಜಳಗಾ ಅರಣ್ಯದ ವ್ಯಾಪ್ತಿಯಲ್ಲಿ ಮಧ್ಯಪ್ರದೇಶದ ಚಿಕ್ಕಾಅಲಿಯಾಸ್ ಕೃಷ್ಣಾ ಪಾಟ್ಲೆ ಪವಾರ್ ಎಂಬುವನನ್ನು ಬಂಧಿಸಲಾಗಿದೆ. ಆತ ಹುಲಿ ಕಳ್ಳಬೇಟೆಗಾರನಾಗಿದ್ದು, ಆತನ ವಿರುದ್ಧ ಹಲವು ರಾಜ್ಯಗಳಲ್ಲಿ ದೂರು ದಾಖಲಾಗಿದೆ. ಅರಣ್ಯ ಇಲಾಖೆ ಕಳ್ಳಬೇಟೆ ನಿಗ್ರಹಕ್ಕೂ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ : ಸಿ ಎಂ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ

ಸುದ್ದಿಗೋಷ್ಠಿಯಲ್ಲಿ ಅರಣ್ಯ ಪಡೆ ಮುಖ್ಯಸ್ಥರಾದ ಬ್ರಿಜೆಶ್ ಕುಮಾರ್ ದೀಕ್ಷಿತ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಸುಭಾಶ್ ಮಾಲ್ಕಡೆ ಮತ್ತಿತರರು ಪಾಲ್ಗೊಂಡಿದ್ದರು.

Copyright © All rights reserved Newsnap | Newsever by AF themes.
error: Content is protected !!