January 13, 2026

Newsnap Kannada

The World at your finger tips!

crime scene

ಕಾನ್‌ಸ್ಟೆಬಲ್ ಕೆಲಸ ಕೊಡಿಸುವ ಆಮಿಷ: ₹31 ಲಕ್ಷ ವಂಚನೆ ಪ್ರಕರಣ ದಾಖಲು

Spread the love

ಕಲಬುರಗಿ: ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆ ಕೊಡಿಸುವುದಾಗಿ ನಂಬಿಸಿ ಐವರು ಆಕಾಂಕ್ಷಿಗಳಿಂದ ₹31 ಲಕ್ಷ ಪಡೆದು ವಂಚಿಸಿದ ಪ್ರಕರಣ ಸಬರ್ಬನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿರೋಳಿ ತಾಲ್ಲೂಕಿನ ಜಾಂಬಳಿ ಗ್ರಾಮದ ಹೇಮಂತ್ ಪಾಟೀಲ ವಿರುದ್ಧ ದೂರು ದಾಖಲಾಗಿದೆ.

ಸಾವಳಗಿ (ಬಿ) ಗ್ರಾಮದ ಚನ್ನಬಸಪ್ಪ ನಿಂಬಾಳ, ಸುರೇಶ ರಾಜಶೇಖರ, ಪ್ರಿಯಾಂಕಾ ಗುರುರಾಜ, ರೇವೂರ (ಬಿ) ಗ್ರಾಮದ ದಿವಾಕರ್ ಬಸವರಾಜ ಹಾಗೂ ಚನ್ನವೀರ ವಂಚಿತರು ಎಂದು ಪೊಲೀಸರು ತಿಳಿಸಿದ್ದಾರೆ.

ವಂಚನೆಯ ವಿವರ

2020ರಲ್ಲಿ ನಡೆದ ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿ ಪ್ರಕ್ರಿಯೆಗೆ ಈ ಐವರು ಅರ್ಜಿ ಸಲ್ಲಿಸಿದ್ದರು. ಪ್ರಿಯಾಂಕಾ ಅವರ ಪತಿ ಗುರುರಾಜ ಹಡಗಿಲ್ ತಮ್ಮ ಪತ್ನಿಗೆ ಕೆಲಸ ಕೊಡಿಸುವಂತೆ ಪರಿಚಯಸ್ಥ ಹೇಮಂತ್‌ಗೆ ಹಣ ನೀಡಿದ್ದರು. ಅವರ ಮಾತಿಗೆ ಭರವಸೆ ಇಟ್ಟು ಉಳಿದವರೂ ಅರುಣಕುಮಾರ ಮುಖಾಂತರ ತಲಾ ₹1 ಲಕ್ಷ ಮುಂಗಡವಾಗಿ ನೀಡಿದ್ದರು. ಆಯ್ಕೆ ಪಟ್ಟಿ ಪ್ರಕಟವಾದ ನಂತರ ತಲಾ ₹7 ಲಕ್ಷ ನೀಡುವುದಾಗಿ ಒಪ್ಪಿಕೊಂಡಿದ್ದರು.

ಆಯ್ಕೆ ಪಟ್ಟಿ ಪ್ರಕಟಗೊಂಡಾಗ ಈ ಐವರು ಅಭ್ಯರ್ಥಿಗಳ ಹೆಸರುಗಳು ಇರಲಿಲ್ಲ. ವಿಚಾರಿಸಿದಾಗ, “ಉಳಿದ ಹಣವನ್ನು ನೀಡಿದರೆ ಮುಂದಿನ ಪಟ್ಟಿಯಲ್ಲಿ ನಿಮ್ಮ ಹೆಸರು ಬರುತ್ತದೆ” ಎಂದು ಹೇಮಂತ್ ಅವರು ನಂಬಿಸಿದ್ದಾರೆ.

ಆತನ ಮಾತಿಗೆ ನಂಬಿಕೆ ಇಟ್ಟು, ಚನ್ನಬಸಪ್ಪ, ದಿವಾಕರ್ ಮತ್ತು ಸುರೇಶ್ ತಲಾ ₹8 ಲಕ್ಷ, ಚನ್ನವೀರ ₹5 ಲಕ್ಷ ಹಾಗೂ ಪ್ರಿಯಾಂಕಾ ₹2 ಲಕ್ಷ ಸೇರಿ ಒಟ್ಟು ₹31 ಲಕ್ಷ ನೀಡಿದ್ದರು. ಈ ಹಣವನ್ನು ಪೂಲಾಬಾಯಿ ಮತ್ತು ಹೇಮಂತ್ ಪತ್ನಿ ಶಾಂಬಲಾ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದರು. ಇದಲ್ಲದೆ, ₹11 ಲಕ್ಷ ನಗದು ರೂಪದಲ್ಲೂ ನೀಡಿದ್ದರು.ಇದನ್ನು ಓದಿ –MUDA ಪ್ರಕರಣ: CBI ತನಿಖೆಗೆ ಹೈಕೋರ್ಟ್‌ ನಿರಾಕರಣೆ, ಸಿಎಂ ಸಿದ್ದರಾಮಯ್ಯ ಅವರಿಗೆ ರಿಲೀಫ್

ವರ್ಷಗಳೇ ಕಳೆದರೂ ನೇಮಕಾತಿ ಪ್ರಕ್ರಿಯೆ ಆಗದಿದ್ದಾಗ ಸಂತ್ರಸ್ತರು ಹಣ ವಾಪಸ್ ಕೇಳಿದರೂ ಹೇಮಂತ್ ಯಾವುದೇ ಪ್ರತಿಕ್ರಿಯೆ ನೀಡದೆ ತಪ್ಪಿಸಿಕೊಂಡಿದ್ದಾರೆ. ಇದರಿಂದ ವಂಚನೆಗೆ ಒಳಗಾದದ್ದು ಗೊತ್ತಾಗಿ, ಅವರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!