November 5, 2024

Newsnap Kannada

The World at your finger tips!

mandyaa

ರಾಜಕೀಯ ಸ್ವಾರ್ಥಕ್ಕಾಗಿ ನೆರೆ ರಾಜ್ಯಕ್ಕೆ ಕಾವೇರಿ ನೀರು ಮಾರಿಕೊಂಡ ಕಾಂಗ್ರೆಸ್!

Spread the love
  • ಮೇಕೆದಾಟು ಮಾಡಲು ಬಿಡಲ್ಲ ಎಂದ ಡಿಎಂಕೆ ಪ್ರಣಾಳಿಕೆ ಸಿಎಂ, ಡಿಸಿಎಂ ಮೌನ ಯಾಕೆ?
  • ಬರಗಾಲ ಬಂದರೆ ಹಣ ಮಾಡಲು ಕಾಂಗ್ರೆಸ್ಸಿಗರಿಗೆ ಸುವರ್ಣಕಾಲ
  • ಮದ್ದೂರು ಪಟ್ಟಣದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾಜಿ ಸಿಎಂ ಭಾಷಣ


ಮಂಡ್ಯ/ಮಳವಳ್ಳಿ: ಕಾವೇರಿ ನೀರನ್ನು ತನ್ನ ರಾಜಕೀಯ ಸ್ವಾರ್ಥಕ್ಕಾಗಿ ನೆರೆಯ ರಾಜ್ಯಕ್ಕೆ ಮಾರಾಟ ಮಾರಿಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಮಂಡ್ಯದ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.

ಮದ್ದೂರಿನಲ್ಲಿ ಆಯೋಜಿಸಲಾಗಿದ್ದ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು; ಕಾವೇರಿ ವಿಷಯದಲ್ಲಿ ಕಾಂಗ್ರೆಸ್ ಮಾಡಿರುವ ಅನ್ಯಾಯವನ್ನು ಎಳೆಎಳೆಯಾಗಿ ಬಿಡಿಸಿಟ್ಟರು.

ನಮ್ಮ ರೈತರ ಹಾಳು ಮಾಡಿ ಕಾವೇರಿ ನೀರನ್ನು ಮಾರಾಟ ಮಾಡಿಕೊಂಡವರು ನೀವು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ಅವರು.

ಡಿಎಂಕೆ ಪ್ರಣಾಳಿಕೆ ಬಗ್ಗೆ ಕಾಂಗ್ರೆಸ್ ಮೌನ

ಇಲ್ಲಿ ಮೇಕೆದಾಟು ತರುತ್ತೇವೆ ಎನ್ನುತ್ತಾರೆ, ಕಾವೇರಿಯನ್ನು ಕಾಪಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ, ತಮಿಳುನಾಡಿನಲ್ಲಿ ಮೇಕೆದಾಟು ವಿರೋಧಿ ಆಗಿರುವ ಡಿಎಂಕೆ ಪಕ್ಷದ ಜತೆ ಮೈತ್ರಿ ಮಾಡಿಕೊಂಡು ರಾಜಕೀಯ ಸ್ವಾರ್ಥಕ್ಕಾಗಿ ಸ್ಟಾಲಿನ್ ಅವರನ್ನು ಓಲೈಕೆ ಮಾಡುತ್ತಿದೆ ಎಂದು ಟೀಕಾ ಪ್ರಹಾರ ನಡೆಸಿದರು.

ಮೇಕೆದಾಟು ಯೋಜನೆಗೆ ಡಿಎಂಕೆ ತಕರಾರು ತೆಗೆದಿದೆ. ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಕರ್ನಾಟಕ ರಾಜ್ಯ ಮೇಕೆದಾಟು ಯೋಜನೆ ಮಾಡಲು ಬಿಡುವುದಿಲ್ಲ. ಎಲ್ಲಾ ರೀತಿಯಲ್ಲಿಯೂ ಅಡ್ಡಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಅದರ ಬಗ್ಗೆ ಸಿದ್ದರಾಮಯ್ಯ ಅವರಾಗಲಿ, ಡಿ.ಕೆ.ಶಿವಕುಮಾರ್ ಅವರಾಗಲಿ ಈ ಬಗ್ಗೆ ಇದುವರೆಗೂ ಚಕಾರ ಎತ್ತಿಲ್ಲ ಎಂದು ಅವರು ಕಿಡಿಕಾರಿದರು.

ಕೋಟ್ಯಂತರ ರು. ಮೌಲ್ಯದ ಬೆಳೆ ನಾಶ

ಕೆಆರ್ ಎಸ್ ನಲ್ಲಿ 98 ಅಡಿ ನೀರಿದ್ದರೂ ಭತ್ತ ನಾಟಿ ಮಾಡಬೇಡಿ ಈ ಸರ್ಕಾರ ಫರ್ಮಾನು ಹೊರಡಿಸಿದೆ. ಮಂಡ್ಯ ಜನರನ್ನು ಅಪಮಾನ ಮಾಡಿದೆ. ಮಂಡ್ಯ ನೆಲಕ್ಕೆ ಪ್ರವೇಶ ಮಾಡುವಾಗ ‘ ಸಕ್ಕರೆ ನಾಡಿಗೆ ಸ್ವಾಗತ’ ಎಂದು ನಾಮಫಲಕ ಇರುತ್ತದೆ, ಆದರೆ, ಈ ಸರಕಾರ ಮಂಡ್ಯವನ್ನು ಬರುಡು ಜಿಲ್ಲೆ ಮಾಡಿದೆ. ಈ ಸರ್ಕಾರ ಬಂದ ಮೇಲೆ ಎಲ್ಲಾ ಕಡೆ ಕಬ್ಬು ಒಣಗಿದೆ. ಇನ್ನು ಅದಕ್ಕೆ ಬೆಂಕಿ ಹಾಕೋದು ಮಾತ್ರ ಬಾಕಿ ಇದೆ. ಕೋಟ್ಯಂತರ ರುಪಾಯಿ ನಾಶವಾಗಿದೆ. ಆದರೆ, ಕಾಂಗ್ರೆಸ್, ₹2000 ಕೊಟ್ಟರೆ ಉಪಯೋಗ ಏನು? ಎಂದು ಅವರು ಪ್ರಶ್ನಿಸಿದರು.

ಕಾವೇರಿ ಬಗ್ಗೆ ಕಾಂಗ್ರೆಸ್ ಮೌನ

ದೇವೇಗೌಡರು ಈ ಜಿಲ್ಲೆಗೆ ಏನು ಮಾಡಿದ್ದಾರೆ ಎಂದು ಕೆಲವರು ಕೇಳಿದ್ದಾರೆ. ಅವರು ಕೊಟ್ಟಿರುವ ಕೊಡುಗೆ ಏನು ಎನ್ನುವುದು ಜನರಿಗೆ ಗೊತ್ತಿದೆ. ಗೊತ್ತಿಲ್ಲ ಎಂದರೆ ತಿಳಿದುಕೊಳ್ಳಿ. ಮೇಕೆದಾಟು, ಕಾವೇರಿ ನೀರಿನ ವಿಷಯದಲ್ಲಿ ರಾಜ್ಯಸಭೆಯಲ್ಲಿ ದೇವೇಗೌಡರು ಪರಿಪರಿಯಾಗಿ ಬೇಡಿಕೊಂಡರೂ ಸದನದಲ್ಲಿಯೇ ಕೂತಿದ್ದ ಮಲ್ಲಿಕಾರ್ಜುನ ಖರ್ಗೆ, ಇತರೆ ಕಾಂಗ್ರೆಸ್ ಸದಸ್ಯರು ಮೌನವಾಗಿ ಕೂತಿದ್ದರು. ಅವರು ಒಂದು ಮಾತನ್ನು ಆಡಲಿಲ್ಲ. ಯಾಕೆ? ಎಂದು ಖಾರವಾಗಿ ಪ್ರಶ್ನಿಸಿದರು ಕುಮಾರಸ್ವಾಮಿ ಅವರು.

ಮೊದಲು ಡಿಎಂಕೆಗೆ ಹೇಳಿ ಮನವೊಲಿಕೆ ಮಾಡಿ. ಅಥವಾ ಡಿಎಂಕೆ ಬೆದರಿಕೆ ಸೊಪ್ಪು ಹಾಕಲ್ಲ, ನಮಗೆ ಮೇಕೆದಾಟು ಬೇಕು ಎಂದು ಹೇಳಿ. ಮೇಕೆದಾಟು ಯೋಜನೆಗೆ ನಾವು ಐದು ನಿಮಿಷದಲ್ಲಿ ಅನುಮತಿ ಕೊಡಿಸುತ್ತೇವೆ. ನಿಮ್ಮ ಮಿತ್ರಪಕ್ಷ ಡಿಎಂಕೆ ಸರ್ಕಾರದ ಮನವೊಲಿಸಿ ತಮಿಳುನಾಡು ಸಲ್ಲಿಸಿರುವ ತಕರಾರು ಅರ್ಜಿಗಳನ್ನು ಹಿಂಪಡೆಯುವಂತೆ ಮಾಡಿ ಎಂದು ಅವರು ಕಾಂಗ್ರೆಸ್ ನಾಯಕರಿಗೆ ಚಾಟಿ ಬೀಸಿದರು.

ನಾನು ಸಾಯಲ್ಲ, ಇನ್ನೂ ಬದುಕಿರುತ್ತೇನೆ, ನಿನ್ನ ಕೈಯ್ಯಿಂದಲೇ ಕಾವೇರಿ ನೀರಿನ ವಿಷಯದಲ್ಲಿ ನ್ಯಾಯ ಕೊಡಿಸುತ್ತೇನೆ ಎಂದು ಮೂರು ದಿನಗಳ ಹಿಂದೆಯೂ ನನಗೆ ನಮ್ಮ ತಂದೆಯವರು ಹೇಳಿದ್ದರು. ಅವರ ಮಾತು ನಡೆದೇ ನಡೆಯುತ್ತದೆ. ಮೈಸೂರಿನಲ್ಲಿ ಮೋದಿ ಅವರೂ ಹೇಳಿದ್ದರು. ದೇವೇಗೌಡರ ಮಾರ್ಗದರ್ಶನ, ಕುಮಾರಸ್ವಾಮಿ ಅವರ ಅನುಭವವನ್ನು ಬಳಸಿಕೊಳ್ಳುತ್ತೇವೆ ಎಂದು ಘೋಷಣೆ ಮಾಡಿದ್ದರು ಎಂಬುದನ್ನು ಇದೇ ವೇಳೆ ಅವರು ಜನತೆಯ ಗಮನಕ್ಕೆ ತಂದರು.

ಬರಗಾಲ ಬಂದರೆ ಹಣ ಮಾಡಲು ಕಾಂಗ್ರೆಸ್ಸಿಗರಿಗೆ ಸುವರ್ಣಕಾಲ

ಕಾಂಗ್ರೆಸ್ ಹೇಳಿಕೆ, ಟೀಕೆಗಳಿಗೆ ತಿರುಗೇಟು ಕೊಟ್ಟ ಅವರು; ದೇವೇಗೌಡರನ್ನು ಕಾಂಗ್ರೆಸ್ ಹೇಗೆ ನಡೆಸಿಕೊಂಡಿದೆ, ನರೇಂದ್ರ ಮೋದಿ ಅವರು ಹೇಗೆ ಗೌರವಿಸುತ್ತಾರೆ ಎನ್ನುವುದು ಜನರಿಗೆ ಗೊತ್ತಿದೆ. ನಾನು ಮಂಡ್ಯ ಜಿಲ್ಲೆಗೆ 700 ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದೆ. ಕಾಂಗ್ರೆಸ್ ಬಂದಾಗಲೆಲ್ಲ ಬರಗಾಲ ಬರುತ್ತದೆ. ಕಾಂಗ್ರೆಸ್ ತನ್ನ ಜತೆಯಲ್ಲಿಯೇ ಬರಗಾಲವನ್ನು ಕರೆದುಕೊಂಡು ಬರುತ್ತದೆ. ಜನರಿಗೆ ಬರಗಾಲ, ಕಾಂಗ್ರೆಸ್ ನಾಯಕರಿಗೆ ದುಡ್ಡು ಮಾಡಲು ಸುವರ್ಣಕಾಲ ಎಂದು ಅವರು ಟೀಕಾ ಪ್ರಕಾರ ನಡೆಸಿದರು.

ನಿಮ್ಮ ಆಶೀರ್ವಾದ ಹಾಗೂ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಇದ್ದರೆ ಕೇಂದ್ರದಲ್ಲಿ ನನಗೆ ಅಧಿಕಾರ ಸಿಗಬಹುದು. 2004ರಲ್ಲಿ ಮುಂದಿನ ಮುಖ್ಯಮಂತ್ರಿ ಎಂದು ಪ್ರೀತಿಯಿಂದ ಕೂಗುತ್ತಿದ್ದೀರಿ. ಆಗ ನನಗೆ ಶಾಸಕ ಆದರೆ ಸಾಕು ಎಂದುಕೊಂಡಿದ್ದೆ. ಮೊದಲ ಬಾರಿ ಶಾಸಕನಾದ 2006ರಲ್ಲಿ ಸಿಎಂ ಆದೆ. ನಿಮ್ಮ ಪ್ರೀತಿ, ದೇವರ ಆಶೀರ್ವಾದದಿಂದ ಅದೂ ಆಯಿತು. ಈಗ ನೀವು ಮುಂದಿನ ಕೇಂದ್ರ ಸಚಿವ ಎಂದು ಕೂಗುತ್ತಿದ್ದೀರಿ. ಪ್ರಜೆಗಳ ಮಾತು, ಪರೇಶ್ವರನ ಮಾತು ಎರಡೂ ಒಂದೇ ಎಂದು ಕುಮಾರಸ್ವಾಮಿ ಅವರು ಭಾವುಕರಾದರು.

ನನಗೆ ಪ್ರಧಾನಿಗಳು ಸ್ವಲ್ಪ ಒಳ್ಳೆಯ ಅವಕಾಶ, ಸ್ವಲ್ಪ ಸ್ವತಂತ್ರ್ಯವಾಗಿ ನಿರ್ಧಾರ ತೆಗೆದುಕೊಳ್ಳುವ ಅವಕಾಶ ಕೊಟ್ಟರೆ ಮಂಡ್ಯ ಜಿಲ್ಲೆಗೆ, ರಾಜ್ಯಕ್ಕೆ ನನ್ನ ಕೈಲಾದ ಸೇವೆ ಮಾಡುತ್ತೇನೆ. ಕೇಂದ್ರಕ್ಕೆ ಹೋದರೆ ನನ್ನದೇ ಕನಸುಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತೇನೆ. ಒಳ್ಳೆಯ ಕೆಲಸ ಮಾಡುವವರಿಗೆ ಮೋದಿ ಅವರು ಸದಾ ಪ್ರೋತ್ಸಾಹ ಕೊಡುತ್ತಾರೆ ಎಂದು ಅವರು ಹೇಳಿದರು.

ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಕುಮಾರಸ್ವಾಮಿ ಸೋಲೋದು ಅಷ್ಟೇ ಸತ್ಯ ಎಂದು ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆಯ ಬಗ್ಗೆ ಕಟುವಾಗಿ ತಿರುಗೇಟು ಕೊಟ್ಟ ಅವರು; ನನ್ನ ಗೆಲ್ಲಿಸುವ, ಸೋಲಿಸುವ ಶಕ್ತಿ ಇರೋದು ಮಂಡ್ಯದ ಕ್ಷೇತ್ರದ ಜನರಿಗೆ ಇದೆ. ಕ್ಷೇತ್ರದ 17 ಲಕ್ಷ ಮತದಾರ ಕೈಯಲ್ಲಿದೆ ಆ ಶಕ್ತಿ. ಆ ಶಕ್ತಿ ಶಿವಕುಮಾರ್ ಅಥವಾ ಸಿದ್ದರಾಮಯ್ಯ ಅವರ ಕೈಯ್ಯಲ್ಲಿ ಇಲ್ಲ ಎಂದು ಟಾಂಗ್ ಕೊಟ್ಟರು.

ಮಂಡ್ಯ ಕ್ಷೇತ್ರದಲ್ಲಿ ಹಣದ ಆಟ ಜಾಸ್ತಿಯಾಗಿದೆ. ಅಡ್ಡದಾರಿಯಲ್ಲಿ ಹಣ ಮಾಡಿದವರ ಉಪಟಳವೂ ಹೆಚ್ಚಾಗಿದೆ. ನಾನು ಗೆದ್ದರೆ ಇದಕ್ಕೆ ಕಡಿವಾಣ ಹಾಕುತ್ತೇನೆ. ಒಳ್ಳೆಯ ರೀತಿಯಲ್ಲಿ ಚುನಾವಣೆ ಆಗಬೇಕು, ಜನರಿಗೆ ಒಳ್ಳೆಯ ಗುಣ ನಡತೆಯ, ಜನಪರ ಕೆಲಸ ಮಾಡುವವರು ರಾಜಕಾರಣಕ್ಕೆ ಬರಬೇಕು. ಅಂತಹ ಉತ್ತಮರನ್ನು ರಾಜಕೀಯಕ್ಕೆ ತರುವುದಕ್ಕಾಗಿ ನಾನು ಮುಂದಿನ ದಿನಗಳಲ್ಲಿ ಕೆಲಸ ಮಾಡುತ್ತೇನೆ. ಪಕ್ಷದ ಸಂಘಟನೆಯಲ್ಲಿ ಕೂಡ ಬದಲಾವಣೆಗಳನ್ನು ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.Bengaluru Airport : ವಿಮಾನದಲ್ಲಿ ಅಕ್ರಮವಾಗಿ 10 ಅನಕೊಂಡ ಹಾವುಗಳ ಕಳ್ಳಸಾಗಾಟ

ಮಾಜಿ ಸಚಿವರಾದ ಡಿಸಿ ತಮ್ಮಣ್ಣ, ಡಾ.ಕೆ.ಸಿ.ನಾರಾಯಣಗೌಡ, ವೆಂಕಟರಾವ್ ನಾಡಗೌಡ, ಶಾಸಕ ರಾಜುಗೌಡ ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯೆ ತಾರಾ ಅನುರಾಧ, ಮುಖಂಡರಾದ ಸ್ವಾಮಿ, ಗುರುಚರಣ್, ಸಂತೋಷ ತಮ್ಮಣ್ಣ, ಮಂಡ್ಯ ಜಿಲ್ಲಾಧ್ಯಕ್ಷ ಡಿ.ರಮೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್, ಡಾ.ರವೀಂದ್ರ ಸೇರಿದಂತೆ ಜೆಡಿಎಸ್ ಬಿಜೆಪಿ ಪಕ್ಷಗಳ ಅನೇಕ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Copyright © All rights reserved Newsnap | Newsever by AF themes.
error: Content is protected !!