ಕಾಂಗ್ರೆಸ್‍ನವರದ್ದು ಕತ್ತು ಕುಯ್ಯುವ ಸಂಸ್ಕೃತಿ – ಕೃತಜ್ಞತೆ ಇಲ್ಲದ ಪಕ್ಷ ಕುಮಾರಸ್ವಾಮಿ ಕಟು ಟೀಕೆ

Team Newsnap
1 Min Read

ಸರ್ಕಾರ ರಚನೆಯ ಸಂದರ್ಭದಲ್ಲಿ ಬೆಂಬಲ ಕೊಡುವ ರೀತಿ ನಾಟಕವಾಡಿ ಕುತ್ತಿಗೆ ಕುಯ್ಯುವುದೇ ಕಾಂಗ್ರೆಸ್ ಕೆಲಸ. ಇದು ಆ ಪಕ್ಷದ ಸಂಸ್ಕೃತಿಯಾಗಿಬಿಟ್ಟಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಾಮನಗರದಲ್ಲಿ ತೀವ್ರ ವಾಗ್ದಾಳಿ ನಡೆಸಿದರು.

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ನಲ್ಲಿ ನಡೆದ ಚುನಾವಣೆಯಲ್ಲಿ ಮತ ಚಲಾಯಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ ಕಾಂಗ್ರೆಸ್ ಪಕ್ಷ ಅಹಂಕಾರದಿಂದ ವರ್ತಿಸುತ್ತಿದೆ. ಕೃತಜ್ಞತೆ-ಔದಾರ್ಯ ಗುಣಗಳಿಲ್ಲದ ಪಕ್ಷ ಎಂದರೆ ಅದು ಕಾಂಗ್ರೆಸ್ ಮಾತ್ರ ಎಂದು ಟೀಕಿಸಿದರು.

ಜೆಡಿಎಸ್-ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿವೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ಕುರಿತಂತೆ ಮಾತನಾಡಿದ ಅವರು, 2023ರ ವಿಧಾನಸಭೆ ಚುನಾವಣೆ ಹಾಗೂ 123 ಸೀಟು ಗೆಲ್ಲುವ ಗುರಿಯೊಂದಿಗೆ ಸ್ಥಳೀಯ ಮಟ್ಟದಲ್ಲೇ ಪಕ್ಷಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳುವಂತೆ ಪಕ್ಷ ಸೂಚನೆ ನೀಡಿದೆ. ಕೆಲವು ಕಡೆ ಬಿಜೆಪಿಗೆ, ಇನ್ನು ಕೆಲವು ಕಡೆ ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳಿಗೆ ನಮ್ಮ ಮತದಾರರು ಬೆಂಬಲ ನೀಡಿದ್ದಾರೆ. ಈ ಮಾಹಿತಿ ಕಾಂಗ್ರೆಸ್ ಅಧ್ಯಕ್ಷರಿಗೆ ಗೊತ್ತಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.

ದೊಡ್ಡತನ ತೋರಿದ ಯಡಿಯೂರಪ್ಪ :

ಅಭ್ಯರ್ಥಿಗಳು ಇಲ್ಲದ ಕಡೆ ಜೆಡಿಎಸ್ ಬಿಜೆಪಿಗೆ ಬೆಂಬಲ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೇಳಿದ್ದರು.

ಅವರು ಬಹಿರಂಗವಾಗಿಯೇ ಯಾವುದೇ ಮುಚ್ಚುಮರೆ ಇಲ್ಲದೇ ಈ ಹೇಳಿಕೆ ನೀಡಿದ್ದರು. ಅವರು ತಮ್ಮ ರಾಜಕೀಯ ಹಿರಿತನಕ್ಕೆ ತಕ್ಕಂತೆ ವರ್ತಿಸಿದ್ದರು ಹಾಗೂ ಅದು ಅವರ ದೊಡ್ಡತನವನ್ನು ತೋರಿಸುತ್ತದೆ. ಹಾಗೇ ನೋಡಿದರೆ ಕೆಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬಹಿರಂವಾಗಿಯೇ ಬೆಂಬಲ ನೀಡಿದೆ ನಮ್ಮ ಪಕ್ಷ. ಕಾಂಗ್ರೆಸ್ ನಡೆಸಿದ ಪ್ರಚಾರ ಸಭೆಗಳಲ್ಲೂ ನಮ್ಮ ನಾಯಕರು ಪಾಲ್ಗೊಂಡಿದ್ದಾರೆ ಎಂದು ಹೇಳಿದರು.

Share This Article
Leave a comment