ಬನ್ನಿ ಕಟ್ಟೋಣ ಹೊಸ ನಾಡೊಂದನ್ನು…

Team Newsnap
1 Min Read

ನಾನು ಚಿಗುರೆಯಂತೆ ಓಡಬಲ್ಲೆ,
ಆದರೆ ಅವಕಾಶಗಳಿಲ್ಲ,

ನಾನು ಕೋಗಿಲೆಯಂತೆ ಹಾಡಬಲ್ಲೆ,
ಆದರೆ ಕೇಳುವವರಿಲ್ಲ,

ನಾನು ನವಿಲಿನಂತೆ ನರ್ತಿಸಬಲ್ಲೆ,
ಆದರೆ ನೋಡುವವರಿಲ್ಲ,

ನಾನು ಅಳಿಲಿನಂತೆ ಸೇವೆ ಸಲ್ಲಿಸಬಲ್ಲೆ,
ಆದರೆ ಪಡೆಯುವವರಿಲ್ಲ,

ನಾನು ನಾಯಿಯಂತೆ ನಿಯತ್ತಾಗಿರಬಲ್ಲೆ,
ಆದರೆ ಗಮನಿಸುವವರಿಲ್ಲ,

ನಾನು ಸಿಂಹದಂತೆ ನಾಡಿನ ರಾಜನಾಗಬಲ್ಲೆ,
ಆದರೆ ಆರಿಸುವವರಿಲ್ಲ,

ನಾನು ಎರೆಹುಳುವಿನಂತೆ ಪರಿಸರ ಪ್ರೇಮಿ,
ಆದರೆ ಪ್ರೀತಿಸುವವರಿಲ್ಲ,

ನಾನು ಜೇಡನಂತೆ ಬಲೆ ಎಣೆಯಬಲ್ಲೆ,
ಆದರೆ ಪ್ರೋತ್ಸಾಹಿಸುವವರಿಲ್ಲ,

ನಾನು ಗೀಜಗದಂತೆ ಗೂಡು ಕಟ್ಟಬಲ್ಲೆ,
ಆದರೆ ಸಂತೋಷಿಸುವವರಿಲ್ಲ,

ನಾನು ಹುಲಿಯಂತೆ ಹೋರಾಡಬಲ್ಲೆ,
ಆದರೆ ವೇದಿಕೆ ಕಲ್ಪಿಸುವವರಿಲ್ಲ,

ನನಗೂ ಆನೆಯಂತ ಶಕ್ತಿ ಇದೆ,
ಆದರೆ ಉಪಯೋಗಿಸಿಕೊಳ್ಳುವವರಿಲ್ಲ,

ನನಗೂ ನರಿಯ ಚಾಣಕ್ಷತೆ ಇದೆ,
ಆದರೆ ಗುರುತಿಸುವವರಿಲ್ಲ,

ನನಗೂ ಹಂಸ ಪಕ್ಷಿಯ ನಡೆಯಿದೆ,
ಆದರೆ ನೋಡುವವರಿಲ್ಲ,

ನನಗೂ ಹದ್ದಿನ ಕಣ್ಣಿನಷ್ಟು ತೀಕ್ಷ್ಣ ನೋಟವಿದೆ,
ಆದರೆ ಕಾಣುವವರಿಲ್ಲ,

ನನಗೂ ಹಸುವಿನ ಮುಗ್ಧತೆ ಇದೆ,
ಆದರೆ ಗಮನಿಸುವವರಿಲ್ಲ,

ನನಗೂ ಮೀನಿನ ಚಲನೆಯಿದೆ,
ಆದರೆ ಅರ್ಥಮಾಡಿಕೊಳ್ಳುವವರಿಲ್ಲ,

ನನಗೂ ಆಮೆಯಷ್ಟು ಆಯಸ್ಸಿದೆ,
ಆದರೆ ಪ್ರಯೋಜನವಿಲ್ಲ,

ನಾನು ನಿಮ್ಮಂತೆ ಬರೆಯಬಲ್ಲೆ,
ಆದರೆ ಓದುಗರಿಗೆ ತಲುಪಿಸುವವರಿಲ್ಲ,

ಈ ರೀತಿಯಲ್ಲಿ ಅನೇಕರಿಗೆ ಕೊರಗಿದೆ,

ಬನ್ನಿ ಗೆಳೆಯರೆ ಈಗಲಾದರೂ ನಾವು ಎಚ್ಚೆತ್ತುಕೊಳ್ಳೋಣ,

ಅವಕಾಶ ವಂಚಿತರಿಗೆ ವೇದಿಕೆ ಕಲ್ಪಿಸೋಣ,

ಇದು ಸಾಧ್ಯವಿರುವುದು ಮಾನವೀಯ ಮೌಲ್ಯಗಳ ಪುನರುತ್ಥಾನದಿಂದ ಮಾತ್ರ.

ನಾಗರಿಕ ಸಮಾಜದ ನೈತಿಕ ಮೌಲ್ಯಗಳನ್ನು ಉಳಿಸುವುದರಿಂದ ಮಾತ್ರ,

ಬನ್ನಿ ಕಟ್ಟೋಣ ಹೊಸ ನಾಡೊಂದನ್ನು…

  • ವಿವೇಕಾನಂದ. ಹೆಚ್.ಕೆ.
Share This Article
Leave a comment