January 16, 2025

Newsnap Kannada

The World at your finger tips!

MAHADEV PRASAD

ಸಿಎಂ ಮಾಜಿ ಮಾಧ್ಯಮ ಸಲಹೆಗಾರ, ಹಿರಿಯ ಪತ್ರಕರ್ತ ಮಹದೇವ್ ಪ್ರಕಾಶ್ ಕೊರೋನಾಗೆ ಬಲಿ

Spread the love

ಹಿರಿಯ ಪತ್ರಕರ್ತ, ಸಿಎಂ
ಯಡಿಯೂರಪ್ಪನವರ ಮಾಜಿ ಮಾಧ್ಯಮ ಸಲಹೆಗಾರ ಮಹದೇವ್ ಪ್ರಕಾಶ್ (65) ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.

ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿನಿಂದಾಗಿ, ನಾರಾಯಣ ಹೃದಯಾಲಯಕ್ಕೆ ದಾಖಲಾಗಿ, ಚಿಕಿತ್ಸೆಯನ್ನು ಹಿರಿಯ ಪತ್ರಕರ್ತ ಮಹದೇವ್ ಪ್ರಕಾಶ್ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮಹದೇವ್ ಪ್ರಕಾಶ್, ಈ ಭಾನುವಾರ ಎಂಬ ಪತ್ರಿಕೆಯ ಸಂಪಾದಕರಾಗಿಯೂ ಕೆಲಸ ಮಾಡುತ್ತಿದ್ದರು. ಈ ಹಿಂದೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮಾಧ್ಯಮ ಸಲಹೆಗಾರರಾಗಿಯೂ ಕೆಲಸ ಮಾಡಿದ್ದರು. ರಾಜ್ಯದಲ್ಲಿ ರಾಜಕೀಯ ವಿಶ್ಲೇಷಕರೆಂದೂ ಸಹ ಗುರುತಿಸಿ ಕೊಂಡಿದ್ದರು.

ಸಿಎಂ ಯಡಿಯೂರಪ್ಪ ಟ್ವಿಟರ್ ಮೂಲಕ ಸಂತಾಪ ಸೂಚಿಸಿದ್ದಾರೆ. ‘ ಮಹದೇವ್ ಪ್ರಕಾಶ್ ನಿಧನದ ಸುದ್ದಿ ಕೇಳಿ ಆಘಾತವಾಯಿತು, ಅವರು ನನ್ನ ಮಾಧ್ಯಮ ಸಲಹೆಗಾರರಾಗಿ ಕೆಲಸ ಮಾಡಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ದೇವರು ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ’ ಎಂದು ಸಿಎಂ ಸಂತಾಪ ಸೂಚಿಸಿದ್ದಾರೆ.

ಕೆಯುಡಬ್ಲ್ಯೂಜೆ ಸಂತಾಪ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿಕಟ ಪೂರ್ವ ಮಾಧ್ಯಮ ಸಲಹೆಗಾರ, ಈ ಭಾನುವಾರ ಪತ್ರಿಕೆ ಸಂಪಾದಕರು, ಎಲ್ಲಾ ಕಾಲಘಟ್ಟದಿಂದ ಹಿಡಿದು ಇಂದಿನ ಬೆಳವಣಿಗೆ ತನಕ ರಾಜಕೀಯ ವಿಮರ್ಶೆಗಳನ್ನು ಸಮರ್ಥವಾಗಿ ಮಾಡುವ ಮೂಲಕ ಮನೆ ಮಾತಾಗಿದ್ದ, ಅಪಾರ ಜ್ಞಾನ ಭಂಡಾರ ಹೊಂದಿದ ಹಿರಿಯ ಪತ್ರಕರ್ತ
ಮಹದೇವ ಪ್ರಕಾಶ್ ಅವರು ಕೋವಿಡ್ ಗೆ ಬಲಿಯಾಗಿದ್ದು ಅತ್ಯಂತ ನೋವಿನ ಸಂಗತಿ.

ಕಲಬುರ್ಗಿ ಸಂಯುಕ್ತ ಕರ್ನಾಟಕ ಬ್ಯೂರೋ ಮುಖ್ಯಸ್ಥರಾಗಿದ್ದ ಕ್ರೀಯಾಶೀಲ
ಪತ್ರಕರ್ತ ಜಯತೀರ್ಥ ಕಾಗಲಕರ ಅವರ ಸಾವು ಕೂಡ ನೋವಿನ ಸಂಗತಿ.

ಮಹದೇವ ಪ್ರಕಾಶ್ ಮತ್ತು ಜಯತೀರ್ಥ ಕಾಗಲಕರ ಅವರ
ಸಾವಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಮಹದೇವ ಪ್ರಕಾಶ್ ಮತ್ತು ಜಯತೀರ್ಥ ಕಾಗಲಕರ
ಅವರುಗಳ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ತಡೆಯುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಪ್ರಾರ್ಥಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!