ನಾಳೆ ಸಿಎಂ ಯಡಿಯೂರಪ್ಪ ದೆಹಲಿಗೆ : ಗರಿಗೆದರಿದ ಸಂಪುಟ ವಿಸ್ತರಣೆಯ ಲೆಕ್ಕಾಚಾರ

Team Newsnap
1 Min Read

ಕೊನೆಗೂ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್ ದೆಹಲಿಗೆ ಬರುವಂತೆ ಬುಲಾವ್ ನೀಡಿದೆ.

ಬುಲಾವ್ ಬರುತ್ತಿದ್ದಂತೆ ಸಿಎಂಗೆ ಖುಷಿಯಾಗಿ ನಾಳೆಯ ಎಲ್ಲಾ ಕಾರ್ಯಕ್ರಮ ಗಳನ್ನು ರದ್ದು ಮಾಡಿ ಭಾನುವಾರ ಬೆಳಗ್ಗೆಯೇ ಸಿಎಂ ದೆಹಲಿಗೆ ಹೊರಡಲಿದ್ದಾರೆ.

ಬಿಜೆಪಿ ಕರ್ನಾಟಕ ಉಸ್ತುವಾರಿ ಅರುಣ ಸಿಂಗ್ ಯಡಿಯೂರಪ್ಪ ಅವರಿಗೆ ದೂರವಾಣಿ ಕರೆ ಮಾಡಿ ದೆಹಲಿಗೆ ಬರುವಂತೆ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ 11 ಗಂಟೆ ಹೊತ್ತಿಗೆ ಯಡಿಯೂರಪ್ಪ ದೆಹಲಿ ತಲುಪಲಿದ್ದಾರೆ.

ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತು ರಾಜ್ಯದಲ್ಲಿ ನಡೆಯಲಿರುವ ಉಪ ಚುನಾವಣೆಗಳ ವಿಷಯವಾಗಿ ಹೈಕಮಾಂಡ್ ಜೊತೆ ಯಡಿಯೂರಪ್ಪ ಚರ್ಚೆ ನಡೆಸುವ ನಿರೀಕ್ಷೆ ಇದೆ. ಅಲ್ಲದೇ ಸಂಕ್ರಾಂತಿ ಹೊತ್ತಿಗೆ ಸಂಪುಟ ವಿಸ್ತರಣೆಗೆ ಅವಕಾಶ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಹೈಕಮಾಂಡ್ ಒಪ್ಪಿಗೆ ಕೊಟ್ಟ ತಕ್ಷಣ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಇಂದು ಬೆಳಗ್ಗೆ ಯಡಿಯೂರಪ್ಪ ಕೊಪ್ಪಳದಲ್ಲಿ ಹೇಳಿಕೆ ನೀಡಿದ್ದರು. ಸಂಜೆಯ ಹೊತ್ತಿಗೆ ದೆಹಲಿಗೆ ಕರೆ ಬಂದಿದೆ.

ಏನೆಲ್ಲಾ ವಿಷಯ ಚರ್ಚೆ ಸಾಧ್ಯತೆ ? :
  • ಬೆಳಗಾವಿ ಲೋಕಸಭೆ ಮತ್ತು ಬಸವಕಲ್ಯಾಣ ಉಪಚುನಾವಣೆ ವಿಷಯ
  • ಶೀಘ್ರದಲ್ಲಿ ಈ ಚುನಾವಣೆಗಳು ಘೋಷಣೆಯಾಗುವ ಸಾಧ್ಯತೆ ಇದೆ. ಚುನಾವಣೆ ಸಂಬಂಧ ಯಡಿಯೂರಪ್ಪ ಜೊತೆ ಚರ್ಚೆ ನಡೆಸುವ ಸಾಧ್ಯತೆ ಕಡಿಮೆ.
  • ಸಂಪುಟ ವಿಸ್ತರಣೆಯೇ ನಾಳೆಯ ಹೈಕಮಾಂಡ್ ಭೇಟಿಯ ಕಾರ್ಯಸೂಚಿ ಅಥವಾ ಇನ್ನೇನಾದರೂ ಇದೆಯೋ ಎನ್ನುವುದನ್ನು ಗೊತ್ತಿಲ್ಲ.
  • ಯಡಿಯೂರಪ್ಪ ಅವರಿಗೆ ದೆಹಲಿಗೆ ಬುಲಾವ್ ಬರುತ್ತಿದ್ದಂತೆ ಸಚಿವಾಕಾಂಕ್ಷಿಗಳಲ್ಲಿ ಆಸೆ ಚಿಗುರಿದೆ ಅಲ್ಲದೆ ಸ್ವತಃ ಸಿಎಂ ಆತ್ಮವಿಶ್ವಾಸ ಹೆಚ್ಚಾಗಿದೆ.
Share This Article
Leave a comment