ಸಿಎಂ‌ ಕುಟುಂಬದ ವಿರುದ್ದ ತನಿಖೆಗೆ ಒತ್ತಾಯ : ಶೋಕಾಸ್ ನೋಟಿಸ್​​ಗೆ 11 ಪುಟಗಳ ಉತ್ತರ – ಯತ್ನಾಳ್

Team Newsnap
1 Min Read

ಪಕ್ಷದಿಂದ ನನಗೆ ಶೋಕಾಸ್​ ನೋಟಿಸ್​​ ಬಂದಿರುವುದು ನಿಜ. ಅದಕ್ಕೆ 11 ಪುಟಗಳ ಉತ್ತರ ನೀಡಿದ್ದೇನೆ. ನಾನು ಎಲ್ಲೂ ಕ್ಷಮೆ ಅಥವಾ ವಿಷಾದ ವ್ಯಕ್ತಪಡಿಸಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಯತ್ನಾಳ್ ಸಿಎಂ ಯಡಿಯೂರಪ್ಪರಿಂದ ಸರ್ಕಾರಕ್ಕೆ ಹೇಗೆ ಕೆಟ್ಟ ಹೆಸರು ಬರುತ್ತಿದೆ ಎಂಬುದನ್ನು ಪತ್ರದಲ್ಲಿ ಪ್ರಸ್ತಾಪಿಸಿದ್ದೇನೆ. ಪಕ್ಷಕ್ಕೆ ದ್ರೋಹ ಬಗೆದು ಯಡಿಯೂರಪ್ಪ ಅವರ ಕುಟುಂಬ ರಾಜಕಾರಣವನ್ನು ಹೇಗೆ ಮಾಡುತ್ತದೆ ಎನ್ನುವುದನ್ನು 45 ಪ್ಯಾರಾದಲ್ಲಿ ಬರೆದಿದ್ದೇನೆ ಎಂದರು.

ಯಡಿಯೂರಪ್ಪ ಕುಟುಂಬ ಬಿಜೆಪಿ ಶಾಸಕರನ್ನು ಗೌರವಿಸುತ್ತಿಲ್ಲ. ಬಿಜೆಪಿ ಆಶಯಕ್ಕೆ ತಕ್ಕಂತೆ ಅಧಿಕಾರ ನಡೆಸುತ್ತಿಲ್ಲ. ಯಡಿಯೂರಪ್ಪ ಅವರ ಕುಟುಂಬದ ಬಗ್ಗೆ ಸಮಗ್ ತನಿಖೆಗೆ ಒತ್ತಾಯಿಸಿದ್ದೇನೆ ಎಂದು ಹೇಳಿದರು.‌

ಬಿಹಾರದ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಎಷ್ಟು ಹಣ ಕಳುಹಿಸಿದ್ದಾರೆ? ಕಾಂಗ್ರೆಸ್​ ಮತ್ತು ಜೆಡಿಎಸ್​ ನಾಯಕರ ಮುಖಾಂತರ ಆರ್‌ಜೆಡಿ, ಕಾಂಗ್ರೆಸ್​ಗೆ ವಿಜಯೇಂದ್ರ ಎಷ್ಟು ಹಣ ಕಳುಹಿಸಿದ್ದಾರೆ? ಎನ್ನುವ ಪ್ರಶ್ನೆ ಎತ್ತಿದ್ದೇನೆ. ಆ ಪ್ರಶ್ನೆಗೆ ವಿಜಯೇಂದ್ರ ಉತ್ತರಿಸಬೇಕು. ಭ್ರಷ್ಟಾಚಾರ, ಹಸ್ತಕ್ಷೇಪ, ವರ್ಗಾವಣೆ ದಂಧೆ ಬಗ್ಗೆ ತನಿಖೆ ಮಾಡಬೇಕು ಎಂದು ಪತ್ರದಲ್ಲಿ ಹೇಳಿದ್ದೇನೆ ಎಂದರು.

ನೋಟಿಸ್​​ಗೆ ಉತ್ತರ ಕೊಡುವಾಗ ಪತ್ರದಲ್ಲಿ ಎಲ್ಲೂ ಕ್ಷಮೆಯಾಚಿಸಿಲ್ಲ. ಅಥವಾ ವಿಷಾದ ವ್ಯಕ್ತಪಡಿಸಿಲ್ಲ. ಪ್ರತಿ ಪ್ಯಾರದ ವಿಚಾರಗಳನ್ನು ಹಂತ ಹಂತವಾಗಿ ಮಾಧ್ಯಮದ ಮುಂದೆ ಹೇಳುತ್ತೇನೆ ಎಂದರು.

Share This Article
Leave a comment