November 16, 2024

Newsnap Kannada

The World at your finger tips!

deepa1

ಅಭಿವ್ಯಕ್ತಿ ಸ್ವಾತಂತ್ರ್ಯ ವ್ಯಕ್ತಪಡಿಸಲು ಉತ್ತಮ ವೇದಿಕೆ ಕ್ಲಬ್ ಹೌಸ್

Spread the love

ಅಭಿವ್ಯಕ್ತಿ ಸ್ವಾತಂತ್ರ್ಯ ವ್ಯಕ್ತಪಡಿಸಲು ಸಾಮಾಜಿಕ ಜಾಲತಾಣದ ಮತ್ತೊಂದು ಉತ್ತಮ ವೇದಿಕೆ ಕ್ಲಬ್ ಹೌಸ್…….. ( Clubhouse )

ಫೇಸ್‌ಬುಕ್, ವಾಟ್ಸ್ ಆಪ್, ಟ್ವಿಟರ್, ಇನ್ಸ್ಟಾಗ್ರಾಮ್, ಮೆಸೆಂಜರ್, ಟೆಲಿಗ್ರಾಂ, ವಿಡಿಯೋ ಕಾನ್ಫರೆನ್ಸ್, ಗೂಗಲ್ ಮೀಟ್, ಜೂಮ್ ಮೀಟಿಂಗ್, ಯೂಟ್ಯೂಬ್ ಇತ್ಯಾದಿ ಇತ್ಯಾದಿಗಳ ನಂತರ ನೇರ ಚರ್ಚೆಗೆ ಇತ್ತೀಚೆಗೆ ಮತ್ತೊಂದು ಸೇರ್ಪಡೆ ಕ್ಲಬ್ ಹೌಸ್……

ಒಂದು ಗುಂಪು ರಚಿಸಿಕೊಂಡು ಯಾವುದಾದರೂ ವಿಷಯದ ಬಗ್ಗೆ ಆಸಕ್ತರೆಲ್ಲಾ ಸೇರಿಕೊಂಡು ಮಾತುಗಳ ಮೂಲಕ ಸಂಭಾಷಣೆ ನಡೆಸಲು ಉಪಯುಕ್ತ ಹೊಸ‌‌ ಆಪ್. ಅತಿ ವೇಗವಾಗಿ ಜನಪ್ರಿಯತೆ ಗಳಿಸುತ್ತಿದೆ.

ಅದನ್ನು ಸ್ವಾಗತಿಸುತ್ತಾ…….

ಸಾಮಾನ್ಯ ಜನರ ಧ್ವನಿಗೆ ವೇದಿಕೆಯೇ ಇಲ್ಲದಿದ್ದ, ಕೇವಲ ಕೆಲವೇ ವರ್ಗದ ಸ್ವತ್ತಾಗಿದ್ದ ಅಭಿವ್ಯಕ್ತಿ ಸ್ವಾತಂತ್ರ್ಯ ವ್ಯಕ್ತಪಡಿಸುವ ವೇದಿಕೆಗಳಿಗೆ ಪರ್ಯಾಯವಾಗಿ ಸಾಮಾಜಿಕ ಜಾಲತಾಣಗಳು ಸಮೂಹ ಸಂಪರ್ಕ ಕ್ರಾಂತಿಯನ್ನೇ ಮಾಡುತ್ತಿವೆ. ಎಲ್ಲಾ ರೀತಿಯಲ್ಲೂ ಅಂದರೆ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಗ್ರಾಮೀಣ ಲಿಂಗಾಧಾರಿತ ಮುಂತಾದ ಅತ್ಯಂತ ಕೆಳಮಟ್ಟದ ಜನರಿಗೂ ಇಂದು ವಿಶ್ವಮಟ್ಟದ ವೇದಿಕೆಗಳನ್ನು ಸಾಮಾಜಿಕ ಜಾಲತಾಣಗಳು ಕಲ್ಪಿಸುತ್ತಿವೆ. ಇದನ್ನು ಅತ್ಯಂತ ಪರಿಣಾಮಕಾರಿಯಾಗಿ, ಮಾನವ ಜನಾಂಗದ ಸುಸ್ಥಿರ ಅಭಿವೃದ್ಧಿಗೆ ಉಪಯೋಗಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ.

ಪ್ರತಿ ಮನುಷ್ಯನಿಗೂ ಇರುವ ಮೆದುಳಿನ ಗ್ರಹಿಸುವ ಸಾಮರ್ಥ್ಯ ಒಂದು ವಿಷಯವಾಗಿ ಮನಸ್ಸಿನಲ್ಲಿ ಮೂಡಿ ಭಾವತರಂಗಗಳಾಗಿ ಧ್ವನಿಪಟ್ಟಿಗೆಯಲ್ಲಿ ಮೂಡಿ ಬಾಯಿಯ ಮೂಲಕ ಭಾಷೆಯ ರೂಪದಲ್ಲಿ ಹೊರಹೊಮ್ಮುತ್ತದೆ. ಅದು ಪ್ರತಿ ವ್ಯಕ್ತಿಯ ಸ್ವಂತಿಕೆಯಾಗಿರುತ್ತದೆ.

ಇದೆಲ್ಲದರ ನಂತರ ಅತಿಮುಖ್ಯವಾಗಿ ಇಲ್ಲಿ ಅಧ್ಯಯನ ಚಿಂತನೆ ಮಾನವೀಯ ಮೌಲ್ಯಗಳು, ಅದರಿಂದ ಸಿಗುವ ಮಾಹಿತಿ ಜ್ಞಾನ, ಅದನ್ನು ವ್ಯಕ್ತಪಡಿಸುವ ರೀತಿ ನೀತಿಗಳು, ನೈತಿಕತೆ, ಕಾನೂನು, ಜೀವಪರ ನಿಲುವು ಎಲ್ಲದರ ಅರಿವು ಇರಬೇಕಾಗುತ್ತದೆ. ಆಗ ಮಾತ್ರ ಈ ವೇದಿಕೆಗಳು ಮಾನವನ ಮತ್ತಷ್ಟು ವಿಕಾಸಕ್ಕೆ ಕಾರಣವಾಗುತ್ತದೆ. ಇಲ್ಲದಿದ್ದರೆ ಇದನ್ನು ಬೇಜವಾಬ್ದಾರಿಯಿಂದ, ಸ್ವಾರ್ಥದಿಂದ, ಅಜ್ಞಾನದಿಂದ ಉಪಯೋಗಿಸಿದರೆ ಸಮಾಜದ ಮತ್ತಷ್ಟು ಅಧೋಗತಿ ಖಚಿತ.

ಆದ್ದರಿಂದ ಚರ್ಚೆಗಳ ಬಗ್ಗೆಯೇ ಚರ್ಚಿಸುವ ಸಮಯ ಬಂದಿದೆ……,

ಚರ್ಚೆಗಳು ವಾಗ್ಯುದ್ಧಗಳೇ,
ಪ್ರತಿಭಾ ಪ್ರದರ್ಶನಗಳೇ,
ಸಮರ್ಥನೆಗಳೇ,
ಜಗಳಗಳೇ,
ಭಾವನೆಗಳೇ,
ವಿಷಯ ವಿನಿಮಯಗಳೇ,
ಚರ್ಚೆಗಳ ಕೊನೆ ಮನಸ್ತಾಪವೇ,
ಹೊಡೆದಾಟಗಳೇ, ಗುಂಪುಗಾರಿಕೆಗಳೇ
ರಾಜಕೀಯವೇ….

ದಿನನಿತ್ಯದ ಸಾಮಾಜಿಕ ಜಾಲತಾಣಗಳ ಚರ್ಚೆಗಳನ್ನು ಗಮನಿಸಿದಾಗ ಹೀಗೆ ಅನಿಸುತ್ತದೆ.

ನಮ್ಮ ಜ್ಞಾನದ ಮಿತಿಯಲ್ಲಿ, ಆತ್ಮಸಾಕ್ಷಿಗೆ ಅನುಗುಣವಾಗಿ ವಿಷಯದ ಗೊಂದಲಗಳಿಗೆ, ಅಥವಾ ವಿಚಾರ ವಿನಿಮಯಗಳಿಗೆ ಚರ್ಚೆ ವೇದಿಕೆಯಾಗಿರಬೇಕು,
ಕಲಿಕೆ, ತಿಳಿವಳಿಕೆ, ಸತ್ಯದ ದರ್ಶನಕ್ಕೆ ಪ್ರಯತ್ನಿಸುವುದು ಚರ್ಚೆಯ ಬಹುದೊಡ್ಡ ಆಶಯವಾಗಿರಬೇಕು.
ಭಿನ್ನಾಭಿಪ್ರಾಯಗಳ ನಿವಾರಣೆ, ಗುರಿ – ಮಾರ್ಗಗಳ ಸಮಾಲೋಚನೆ, ಸಹಬಾಳ್ವೆ, ಸಹಕಾರದ ಹಿತವೂ ಕೂಡ ಚರ್ಚೆಯ ಮುಖ್ಯ ಅಂಶವಾಗಿರಬೇಕು.

ಚರ್ಚೆಯ ಕೊನೆಯು ಕನಿಷ್ಟಪಕ್ಷ ನಗುವಿನಿಂದ ಮುಗಿದು ಆತ್ಮ ಮನಸ್ಸುಗಳ ಮಿಲನವಾಗುವಂತಿರಬೇಕು,

ಒಂದಷ್ಟು ಭಿನ್ನಾಭಿಪ್ರಾಯ ಇದ್ದರೂ ಕೂಡ ಪ್ರೀತಿ, ವಿಶ್ವಾಸಗಳೇ ಮೇಲುಗ್ಯೆ ಪಡೆಯುವಂತಿರಬೇಕು,

ಆದರೆ ಆಗುತ್ತಿರುವುದೇನು ?

ಬಾಯಿಬುಡುಕತನ, ಭಾಗವಹಿಸುವವರ ಅಜ್ಞಾನ ಪ್ರದರ್ಶನ, ಜೋರು ಧ್ವನಿ, ಕೋಪತಾಪಗಳ ಕೂಗಾಟ, ಹಿಡನ್ ಅಜೆಂಡಾ, ನಮ್ಮದೇ ಸರಿ ಎಂಬ ಭಂಡತನ, ಕೊನೆಗೆ ಏನೂ ಅರ್ಥವಾಗದ ಗೊಂದಲ.
ಚರ್ಚೆಗಳು ಎಲ್ಲಾ ಮಿತಿಗಳನ್ನು ದಾಟುತ್ತಿವೆ. ಉಪಯೋಗಿಸುವ ಭಾಷೆ, ಅಹಂಕಾರ, ಅಲ್ಪ ಜ್ಞಾನ, ಸಣ್ಣತನಗಳು ರಾರಾಜಿಸುತ್ತಿವೆ,

ಒಳ್ಳೆಯದು ಇಲ್ಲವೆಂದಲ್ಲ,
ಅದೂ ಬಹಳಷ್ಟಿದೆ. ಆದರೆ ತಿದ್ದಿಕೊಳ್ಳುವುದು ಸಾಕಷ್ಟಿದೆ.

ನಿಜವಾದ ಚರ್ಚೆಗಳು,
ನಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸುವಂತಿರಬೇಕು,
ನಮ್ಮ ಜ್ಞಾನ ದಾಹವನ್ನು ತೀರಿಸುವಂತಿರಬೇಕು,
ನಮ್ಮ ಮನೋಭಾವ ವಿಶಾಲಗೊಳಿಸುವಂತಿರಬೇಕು ,
ನಮ್ಮ ಮನಸ್ಸಿಗೆ ಮುದ ನೀಡುವಂತಿರಬೇಕು,
ನಮ್ಮ ಸಂಬಂಧಗಳನ್ನು ಗಟ್ಟಿಗೊಳಿಸುವಂತಿರಬೇಕು,
ನಮ್ಮ ಗೊಂದಲಗಳಿಗೆ ಪರಿಹಾರ ಸಿಗುವಂತಿರಬೇಕು,
ನಮಗೆ ಕನಿಷ್ಠ ನೆಮ್ಮದಿಯನ್ನಾದರೂ ನೀಡುವಂತಿರಬೇಕು,

ಈ ಬಗ್ಗೆ ಗಂಭೀರವಾಗಿ ಚಿಂತಿಸಿ ಎಚ್ಚರಗೊಳ್ಳೋಣ.

ಅತ್ಯುತ್ಸಾಹದಿಂದ ಭಾಗವಹಿಸುವುದು, ಬಹುಬೇಗ ತುಂಬಾ ನಿರೀಕ್ಷಿಸುವುದು, ನಿರಾಶರಾಗುವುದು, ಇದರಿಂದ ವಿಮುಖರಾಗುವುದು, ಸಿನಿಕತನ ಪ್ರದರ್ಶಿಸುವುದರ ಬಗ್ಗೆ ಎಚ್ಚರಿಕೆ ವಹಿಸೋಣ.

ತಾಳ್ಮೆಯೇ ಪ್ರಬುದ್ದತೆಯ ಮೂಲ ಬೇರು.
ಅಧ್ಯಯನ ಮತ್ತು ಚಿಂತನೆ ಅದರ ಕಾಂಡಗಳು,
ಭಾಷೆ ಅದರ ಎಲೆಗಳು,
ಜ್ಞಾನವೇ ಅದರ ನಿಜವಾದ ಫಲ.

ಇದರಿಂದ ನಮ್ಮ ಮಾನಸಿಕ ಆಂತರಿಕ ವ್ಯಕ್ತಿತ್ವಗಳನ್ನು ಮೇಲ್ದರ್ಜೆಗೆ ಏರಿಸಿಕೊಳ್ಳೋಣ.

ಸಾಮಾಜಿಕ ಜಾಲತಾಣಗಳು ನಮ್ಮ ನೆಮ್ಮದಿಯ ಜೀವತಾಣಗಳಾಗಲಿ.

  • ವಿವೇಕಾನಂದ ಹೆಚ್ ಕೆ
Copyright © All rights reserved Newsnap | Newsever by AF themes.
error: Content is protected !!