ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆ ಕಣ ರಂಗೇರುತ್ತಿದೆ. ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಎಚ್. ಕುಸುಮಾ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ನಡುವೆ ಜುಗಲ್ ಬಂದಿ ಆರಂಭವಾಗಿದೆ.
ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಕುಸುಮಾ ಪತಿ, ಐಎಎಸ್ ಅಧಿಕಾರಿಯಾಗಿದ್ದ ದಿ. ಡಿ. ಕೆ. ರವಿ ಹೆಸರನ್ನು ಪ್ರಸ್ತಾಪಿಸಿದ್ದರು. “ರವಿ ಹೆಸರನ್ನು ಯಾರು ಬಳಸಿಕೊಂಡರೂ ಅವರಿಗೆ ಒಳ್ಳೆದಾಗಲ್ಲ” ಎಂದು ಹೇಳಿಕೆ ನೀಡಿದ್ದರು.
ಫೇಸ್ ಬುಕ್ ಪೋಸ್ಟ್ ಮೂಲಕ ಕುಸುಮಾ ಅವರು ಶೋಭಾ ಕರಂದ್ಲಾಜೆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. “ಪ್ರೀತಿಯ ಅಕ್ಕ, ನನ್ನ ಗಂಡನ ಹೆಸರಿನಲ್ಲಿ ರಾಜಕೀಯ ಮಾಡಿದವರು ಯಾರು? ಮಾಡುತ್ತಿರುವವರು ಯಾರು? ಎನ್ನುವುದನ್ನು ಇಡೀ ದೇಶವೇ ನೋಡಿದೆ, ನೋಡುತ್ತಿದೆ” ಎಂದು ಹೇಳಿದ್ದಾರೆ.
“ಈ ಸಂದರ್ಭದಲ್ಲಿ ನನಗೆ ಅಕ್ಕ ಮಹಾದೇವಿಯವರ ನೊಂದವರ ನೋವ ನೋಯದವರೆತ್ತ ಬಲ್ಲರೊ? ಎಂಬ ವಚನ ನೆನಪಿಗೆ ಬರುತ್ತಿದೆ. ರವಿ ಅವರ ಹೆಸರನ್ನು ಬಳಸಿಕೊಂಡವರಿಗೆ ಒಳ್ಳೆಯದಾಗುವುದಿಲ್ಲ ಎಂದಿದ್ದೀರಿ!. ಇದು ನಿಮಗೆ ನೀವೇ ಹೇಳಿದಂತೆ ಇದೆ. ಕನ್ನಡಿ ಮುಂದೆ ನಿಂತು ಇನ್ನೊಮ್ಮೆ ಈ ಹೇಳಿಕೆ ಕೊಟ್ಟು ನೋಡಿ. ಸತ್ಯ ಮನದಟ್ಟಾಗಬಹುದು” ಎಂದು ಪೋಸ್ಟ್ ಹಾಕಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ್ದ ಶೋಭಾ ಕರಂದ್ಲಾಜೆ, “ಡಿ. ಕೆ. ರವಿ ವಿಚಾರ ಚರ್ಚೆಯ ವಿಷಯವೇ ಅಲ್ಲ. ಡಿ. ಕೆ. ರವಿ ಓರ್ವ ದಕ್ಷ ಅಧಿಕಾರಿಯಾಗಿದ್ದರು. ಆದರೆ, ಇಂದು ಅವರು ನಮ್ಮ ಜೊತೆ ಇಲ್ಲ. ರವಿ ಹೆಸರನ್ನು ಯಾರು ಬಳಸಿಕೊಂಡರೂ ಅವರಿಗೆ ಒಳ್ಳೆಯದಾಗಲ್ಲ” ಎಂದು ಹೇಳಿದ್ದರು.
“ರವಿ ಅವರ ಹೆಸರು ಪ್ರಸ್ತಾಪಿಸದೆ ಇರುವುದು ಒಳ್ಳೆಯದು. ರವಿ ಪತ್ನಿಯ ಬಗ್ಗೆ ಚರ್ಚೆ ಮಾಡುವ ಅಗತ್ಯವಿಲ್ಲ. ಡಿ. ಕೆ. ರವಿ ಸಾವಿನಿಂದ ಅವರ ತಂದೆ, ತಾಯಿಗೆ ಆದ ಅವಮಾನ ಅವರ ಕೆಟ್ಟ ಪರಿಸ್ಥಿತಿ ಎಲ್ಲವೂ ಚರ್ಚೆಯ ವಿಷಯವಾಗಿದೆ” ಎಂದು ಶೋಭಾ ಕರಂದ್ಲಾಜೆ ಮಾತನಾಡಿದ್ದರು.
More Stories
ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು