- ರಾಜ್ಯದಲ್ಲೇ ಪಟ್ಟಿ ಅಂತಿಮಗೊಳಿಸಿಕೊಂಡು ದೆಹಲಿಗೆ ತೆರಳಿದ್ದ ಸಿದ್ದು- ಡಿಕೆಶಿ
- ಮಂತ್ರಿಗಿರಿ ಭರವಸೆ ಕೊಟ್ಟರೆ ಮಾತ್ರ ಹುದ್ದೆ ಒಪ್ಪುತ್ತೇವೆ ಎನ್ನುತ್ತಿರುವ ಕೆಲ ಶಾಸಕರು
ಭವಿಷ್ಯದಲ್ಲಿ ಸಚಿವ ಸ್ಥಾನ ಸಿಗುವುದಿಲ್ಲ ಎಂದಾದರೆ ನಿಗಮ ಹುದ್ದೆಯೂ ಬೇಡ ಎಂದು ವಾದ
- ಶಾಸಕರಾಗಿಯೇ ಉಳಿಯುವುದಾಗಿ ಬೆದರಿಕೆ. ಹೀಗಾಗಿ ಪಟ್ಟಿ ಬದಲಿಸುವ ಅನಿವಾರ್ಯತೆ
- ದೆಹಲಿಯಲ್ಲಿ ಆಕಾಂಕ್ಷಿಗಳ ಕಣ್ತಪ್ಪಿಸಿ, ಸಭೆ ನಡೆಸಿ ಪಟ್ಟಿ ಪರಿಷ್ಕರಿಸಿದ ಸಿದ್ದು- ಡಿಕೆಶಿ
ಇಂದು ಖರ್ಗೆ, ವೇಣುಗೋಪಾಲ್‌ಗೆ ತೋರಿಸಿ ಒಪ್ಪಿಗೆ ಪಡೆವ ಸಾಧ್ಯತೆ
ಬೆಂಗಳೂರು : ಕಾರ್ಯಕರ್ತರ ಮಿತಿ ಮೀರಿದ ಒತ್ತಡ, ನಿಗಮ-ಮಂಡಳಿ ಸ್ಥಾನ ಒಪ್ಪಲು ಸಚಿವ ಸ್ಥಾನಾಕಾಂಕ್ಷಿಗಳ ಹಿಂಜರಿಕೆ ಹಾಗೂ ದೆಹಲಿಗೆ ಆಗಮಿಸಿದ ದಂಡು ದಂಡು ನಾಯಕರ ಒತ್ತಡ ನಿಭಾಯಿಸುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಹೈರಾಣಾಗಿದೆ .
ಕಾಂಗ್ರೆಸ್ ನಾಯಕತ್ವ, ನಿಗಮ-ಮಂಡಳಿ ಅಧ್ಯಕ್ಷ ಹುದ್ದೆಗೆ ಪಟ್ಟಿ ಅಖೈರುಗೊಳಿಸಲು ಮಂಗಳವಾರ ತಡರಾತ್ರಿವರೆಗೂ ಸರಣಿ ಸಭೆ ನಡೆಸಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಬ್ಬರೇ ಎರಡು ತಾಸಿಗೂ ಹೆಚ್ಚು ಪ್ರತ್ಯೇಕವಾಗಿ ಸಭೆ ನಡೆಸಿದ್ದು, ಪಟ್ಟಿ ಬಗ್ಗೆ ಮೂಡಿದ್ದ ಗೊಂದಲ ಬಗೆಹರಿಸಿಕೊಳ್ಳಲು ಯತ್ನಿಸಿದರು. ರಾಜ್ಯದಲ್ಲಿ ಪಟ್ಟಿ ಅಂತಿಮಗೊಳಿಸಿಕೊಂಡು ದೆಹಲಿಗೆ ತೆರಳಿದ್ದರೂ ಪಟ್ಟಿಯಲ್ಲಿದ್ದ ಕೆಲ ಹಿರಿಯ ಶಾಸಕರು ಭವಿಷ್ಯದಲ್ಲಿ ಸಚಿವ ಸ್ಥಾನ ನೀಡುವ ಭರವಸೆಯನ್ನು ನೀಡಿದರೆ ಮಾತ್ರ ಈಗ ನಿಗಮ-ಮಂಡಳಿ ಸ್ಥಾನ ಒಪ್ಪುವುದಾಗಿ, ಒಂದು ವೇಳೆ ಸಚಿವ ಸ್ಥಾನ ನೀಡುವುದಿಲ್ಲ ಎಂದರೆ ನಿಗಮ- ಮಂಡಳಿಯೂ ಬೇಡ.ತಾವು ಶಾಸಕರಾಗಿಯೇ ಉಳಿಯುವುದಾಗಿ ಬೆದರಿಕೆ ಹಾಕಿದ್ದರಿಂದ ಪಟ್ಟಿಯಲ್ಲಿ ಕೆಲ ಬದಲಾವಣೆ ಮಾಡಬೇಕಾದ ಅನಿವಾರ್ಯ ಮೂಡಿತು ಎನ್ನಲಾಗಿದೆ.
ರಾಜ್ಯದಿಂದ ತೆರಳುವಾಗ 39 ಮಂದಿಯ ಪಟ್ಟಿ ಸಿದ್ಧಪಡಿಸಿಕೊಂಡಿದ್ದರೂ ಅದರಲ್ಲಿ ಕೆಲ ಬದಲಾವಣೆ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿತ್ತು.
ಪಟ್ಟಿಯನ್ನು ಪರಿಷ್ಕರಿಸಿಕೊಂಡ ನಂತರ ಉಭಯ ನಾಯಕರು ತಡರಾತ್ರಿ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರೊಂದಿಗೆ ಸಭೆ ನಡೆಸಿದ್ದರು.
ಈ ಸಭೆಯಲ್ಲಿ ಪಟ್ಟಿ ಬಹುತೇಕ ಅಂತಿಮಗೊಳ್ಳಲಿದೆ. ಇದಾದ ನಂತರ ಬುಧವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿ ಮಾಡಿ ಪಟ್ಟಿಗೆ ಒಪ್ಪಿಗೆ ಪಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಕಾರ್ಯಕರ್ತರ ತೀವ್ರ ಒತ್ತಡ:
ಮೊದಲ ಹಂತದಲ್ಲಿ ಕೇವಲ ಶಾಸಕರಿಗೆ ನಿಗಮ-ಮಂಡಳಿ ಸ್ಥಾನದ ಅವಕಾಶ ನೀಡುವ ಉದ್ದೇಶ ಹೊಂದಿದ್ದ ರಾಜ್ಯ ನಾಯಕತ್ವದ ಮೇಲೆ ಕಾರ್ಯಕರ್ತರು ತೀವ್ರ ಒತ್ತಡ ನಿರ್ಮಾಣ ಮಾಡಿದ್ದಾರೆ. ತಂಡೋಪತಂಡವಾಗಿ ದೆಹಲಿಗೆ ತೆರಳಿರುವ ಕಾಂಗ್ರೆಸ್ ಕಾರ್ಯಕರ್ತರು ಹೈಕಮಾಂಡ್‌ವರೆಗೂ ಈ ಬಗ್ಗೆ ದೂರು ಒಯ್ದಿದ್ದಾರೆ ಎನ್ನಲಾಗಿದೆ. ಗೃಹಲಕ್ಷ್ಮೀ ಯೋಜನೆ : ಡಿಸೆಂಬರ್’ ತಿಂಗಳ ಹಣ ಪ್ರಸ್ತುತ ಜಿಲ್ಲೆಯವರಿಗೆ ಬಿಡುಗಡೆ
ಈ ಒತ್ತಡ ತೀವ್ರಗೊಂಡಿರುವ ಬಗ್ಗೆಯೂ ರಾಜ್ಯ ನಾಯಕರು ಚರ್ಚೆ ನಡೆಸಿದ್ದು, ಅಂತಿಮ ಹಂತದಲ್ಲಿ ಕೆಲ ಕಾರ್ಯಕರ್ತರು ಪಟ್ಟಿಗೆ ಸೇರ್ಪಡೆಯಾದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.
More Stories
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ