November 15, 2024

Newsnap Kannada

The World at your finger tips!

sudhakar1

ಚಿಕ್ಕಬಳ್ಳಾಪುರ ಗಣಿ ಸ್ಫೋಟ: ತಪ್ಪಿತಸ್ಥರು ಯಾರೇ ಇದ್ದರೂ ಉಗ್ರ ಕ್ರಮ – ಸಚಿವ ಡಾ. ಸುಧಾಕರ್

Spread the love

ಚಿಕ್ಕಬಳ್ಳಾಪುರ ಜಿಲ್ಲೆಯ ಹಿರೇನಾಗವಲ್ಲಿ ಬಳಿ ನಡೆದಿರುವ ಗಣಿಸ್ಫೋಟ ದುರಂತ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ ಸುಧಾಕರ್, ಅಧಿಕಾರಿಗಳ ತಂಡದೊಂದಿಗೆ ಮಂಗಳವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಘಟನೆ ಕುರಿತಂತೆ ಮಾಹಿತಿ ಕಲೆ ಹಾಕಿದರು.

ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿ ಸಚಿವರು, ಫೆ 7 ರಂದು ಬ್ರಹ್ಮವರ್ಷಿಣಿ ಕ್ರಶರ್​ ಲೀಗಲ್​​ ಆಗಿದ್ದರೂ 7 ಅಡಿಯಲ್ಲಿ ಇಡಬೇಕಾದ ಸ್ಫೋಟಕಗಳನ್ನು 15 ಅಡಿ ಅಳಕ್ಕೆ ಇಟ್ಟಿದ್ದ ಕಾರಣದಿಂದ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು ಎಂದರು.

ಸ್ಫೋಟಕಗಳನ್ನು ಇದೇ ರೀತಿ ಸ್ಫೋಟಿಸಬೇಕು ಎಂಬ ನಿಯಮಗಳಿವೆ. ಅದ್ದರಿಂದಲೇ ಕಳೆದ ಫೆ. 7 ಎಸ್​ಪಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಎಫ್​​ಐಆರ್​ ಕೂಡ ದಾಖಲು ಮಾಡಿದ್ದಾರೆಂದು ತಿಳಿಸಿದರು.

ಕ್ವಾರಿಯನ್ನು ಅಂದೇ ಬಂದ್ ಮಾಡಿದ್ದರು. ಇಲ್ಲಿ ನಿರಂತರವಾಗಿ ಪೊಲೀಸರು ಪರಿಶೀಲನೆ ನಡೆಸಿದ್ದ ಕಾರಣ ಕ್ವಾರಿ ಮಾಲೀಕರು ಅಕ್ರಮವಾಗಿ ಸಂಗ್ರಹ ಮಾಡಿದ್ದ ಜಿಲೆಟಿನ್​​ಗಳನ್ನು ನಾಶಪಡಿಸಲು ಸಿಬ್ಬಂದಿಗೆ ಸೂಚನೆ ನೀಡಿದ್ದರು ಎಂದು ಸುಧಾಕರ್ ಹೇಳಿದರು.

6 ಮಂದಿ‌‌ ಸಾವು

ಮಾಲೀಕರ ಸೂಚನೆ ಮೇರೆಗೆ ತಡರಾತ್ರಿ ಇವುಗಳ ಬಗ್ಗೆ ಏನೂ ತಿಳಿಯದ ರೀತಿಯಲ್ಲಿ ನಾಶಪಡಿಸಲು ಯತ್ನಿಸಿದ ವೇಳೆ 6 ಮಂದಿ ಸಿಬ್ಬಂದಿಗಳು ಬಲಿಯಾಗಿದ್ದಾರೆ. ಅಕ್ರಮವಾಗಿ ಜಿಲೆಟಿನ್​ ಸಂಗ್ರಹಿಸುವುದು ಖಂಡನೀಯ. ಆಂಧ್ರ ಮೂಲದ ಇಬ್ಬರು, ನೇಪಾಳದ ಒಬ್ಬರು ಸಾವನ್ನಪ್ಪಿದ್ದಾರೆ, ಮೃತರ ಕುಟುಂಬಸ್ಥರು ದುಃಖ ಹೇಗೆ ಭರಿಸುತ್ತಾರೋ ಗೊತ್ತಿಲ್ಲ. ಶೀಘ್ರದಲ್ಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಯಾರೇ ಆಗಿದ್ದರೂ ಉಗ್ರವಾದ ಕ್ರಮ ತೆಗೆದುಕೊಳ್ಳುತ್ತೇವೆ. ಅಲ್ಲದೇ ಅಕ್ರಮ ಸ್ಫೋಟಕ ಸರಬರಾಜು ಮಾಡಿದವರ ಮೇಲೂ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ರು.

ಕಳೆದ ಒಂದು ತಿಂಗಳಿನಿಂದ ನಾನು ಎರಡು ಬಾರಿ ಹೇಳಿದ ಮೇಲೆ ನಮ್ಮ ಜಿಲ್ಲೆಯಲ್ಲಿ ಅನಧಿಕೃತವಾಗಿ ನಡೆಯುವ ಒಂದು ಕ್ವಾರಿ ಇಲ್ಲ. ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಗಣಿ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ ಎಂದು ಸಚಿವರು ತಿಳಿಸಿದರು.

ಒಬ್ಬನ ಬಂಧನ : ಮಾಲೀಕರ ಹುಡುಕಾಟ :

ಅಕ್ರಮ ಸ್ಫೋಟಕ ಸಂಗ್ರಹ ಮಾಡಿದರೂ ಅಧಿಕಾರಿಗಳು ಏಕೆ ಕ್ರಮಕೈಗೊಂಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕ್ವಾರಿ ನಡೆಸಬೇಕಾದರೆ ಸ್ಫೋಟಕ ಅಗತ್ಯ. ಅಭಿವೃದ್ಧಿ ಕಾರ್ಯಗಳಿಗೆ ಕ್ವಾರಿ ಎಂಬುವುದು ಒಂದು ಭಾಗ, ಆದರೆ ಇವುಗಳನ್ನು ನಿಯಮಗಳ ಅನುಸಾರ ನಡೆಸಬೇಕಾಗಿದೆ. ನಿಯಮಗಳ ಅನುಸಾರ ನಡೆಯದಿದ್ದರೆ ಇಂತಹ ದುರಂತಗಳು ನಡೆಯುತ್ತವೆ. ಈಗಾಗಲೇ ಪ್ರಕರಣ ಸಂಬಂಧ ಒಬ್ಬರನ್ನು ಬಂಧಿಸಲಾಗಿದೆ, ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ತಲೆಮರೆತಿಸಿಕೊಂಡವರನ್ನು ಪತ್ತೆ ಮಾಡಲು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ ಎಂದು ವಿವರಿಸಿದರು.

Copyright © All rights reserved Newsnap | Newsever by AF themes.
error: Content is protected !!