ಹೈದರಾಬಾದ್‌ನಲ್ಲಿ ಸಿ.ಡಿ. ಸಂತ್ರಸ್ತ ಯುವತಿ ಸೇರಿ ಮೂವರು ವಶಕ್ಕೆ?

Team Newsnap
1 Min Read

ಅಶ್ಲೀಲ ಸಿ.ಡಿ. ಪ್ರಕರಣದ ಕೇಂದ್ರಬಿಂದು ಯುವತಿಯನ್ನು ಎಸ್‌ಐಟಿ ತಂಡ ಹೈದರಾಬಾದ್‌ನಲ್ಲಿ ಭಾನುವಾರ ವಶಕ್ಕೆ ಪಡೆದುಕೊಂಡಿದೆ ಎಂದು ಮೂಲಗಳು ಹೇಳಿವೆ.

ಕೆಲವು ದಿನಗಳಿಂದ ಹೈದರಾಬಾದ್‌ನ ಪರಿಚಯಸ್ಥರ ಮನೆಯಲ್ಲಿ ವಾಸವಿದ್ದ ಆ ಯುವತಿ ಶನಿವಾರ ವೀಡಿಯೋ ಬಿಡುಗಡೆ ಮಾಡಿದ್ದಳು. ಈ ಬೆನ್ನಲ್ಲೇ ತನಿಖೆ ಚುರುಕುಗೊಳಿಸಿದ ಎಸ್‌ಐಟಿ ಅಧಿಕಾರಿಗಳು ಭಾನುವಾರ ಮಹಿಳಾ ಇನ್‌ಸ್ಪೆಕ್ಟರ್‌ ನೇತೃತ್ವದಲ್ಲಿ ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಮತ್ತೊಂದು ತಂಡ ಪ್ರಕರಣದ ಕಿಂಗ್‌ಪಿನ್‌ ಪತ್ರಕರ್ತ ಸಹಿತ ಇಬ್ಬರನ್ನು ವಶಕ್ಕೆ ಪಡೆದಿದೆ. ಭಾನುವಾರ ರಾತ್ರಿಯೇ ಮಡಿವಾಳದ ಎಫ್ಎಸ್‌ಎಲ್‌ ಕೇಂದ್ರಕ್ಕೆ ಇವರನ್ನು ಕರೆತಂದು, ವಿಚಾರಣೆ ಕೊಠಡಿಯಲ್ಲಿ ಇರಿಸಲಾಗಿದೆ.

ಉತ್ತರ ಕರ್ನಾಟಕ ಮೂಲದ ಸಂತ್ರಸ್ತೆ ಬೆಂಗಳೂರಿನಲ್ಲಿ ಎಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತಿದ್ದಳು. ಸಂತ್ರಸ್ತೆಗೆ ಐದು ವರ್ಷಗಳಿಂದ ಯುವಕನೊಬ್ಬನ ಪರಿಚಯವಿದೆ. ಪ್ರೀತಿಸಿ ಮೂರು ತಿಂಗಳ ಹಿಂದೆ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಯುವಕ ತನ್ನ ಮನೆಯಲ್ಲೂ ಪ್ರೀತಿಯ ವಿಚಾರ ತಿಳಿಸಿ, ವಿವಾಹಕ್ಕೆ ಮನೆಯವರನ್ನು ಒಪ್ಪಿಸಿದ್ದ. ಸಂತ್ರಸ್ತೆಯನ್ನು ಮನೆಗೆ ಕರೆದೊಯ್ದು ಪರಿಚಯಿಸಿದ್ದ. ಹೀಗಾಗಿ ಆಕೆ ಯುವಕನ ಮನೆಯವರ ಜತೆಗೂ ಸಂಪರ್ಕದಲ್ಲಿದ್ದಳು. ಈಗ ಆಕೆಯ ಪ್ರಿಯಕರನನ್ನು ವಶಕ್ಕೆ ಪಡೆಯಲಾಗಿದೆ.

ಮೂವರು ವಶಕ್ಕೆ?
ತಲೆಮರೆಸಿಕೊಂಡಿದ್ದ ಪ್ರಕರಣದ ಕಿಂಗ್‌ಪಿನ್‌ ಸಹಿತ ಮೂವರನ್ನು ಎಸ್‌ಐಟಿ ಹೈದರಾಬಾದ್ ನಲ್ಲಿ ವಶಕ್ಕೆ ಪಡೆದಿದೆ. ಈ ಪೈಕಿ ಒಬ್ಬ ಮಹಿಳೆ ಕೂಡ ಇದ್ದಾಳೆ ಎಂದು ಮೂಲಗಳು ತಿಳಿಸಿವೆ. ಈಕೆ ಸಂತ್ರಸ್ತೆಯ ಅತ್ಯಾಪ್ತ ಗೆಳತಿಯಾಗಿದ್ದು, ಕೃತ್ಯಕ್ಕೆ ಸಹಕಾರ ನೀಡಿದ್ದಾಳೆ ಎನ್ನಲಾಗಿದೆ. ಈ ಮೂವರನ್ನು ಬೆಂಗಳೂರಿಗೆ ಕರೆತರಲಾಗಿದೆ, ರವಿವಾರ ರಾತ್ರಿ ಮಡಿವಾಳದ ಎಫ್ಎಸ್‌ಎಲ್‌ ಕೇಂದ್ರದಲ್ಲಿ ಇರಿಸಲಾಗಿದೆ. ಮಹಿಳೆಯ ರಕ್ಷಣೆಗೆ ಪಿಎಸ್‌ಐ ಸೇರಿ ಮೂವರು ಮಹಿಳಾ ಸಿಬಂದಿ ನೇಮಿಸಲಾಗಿದೆ. ಒಂದು ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಂತ್ರಸ್ತೆಯ ಪ್ರಿಯಕರ, ಚಿಕ್ಕಮಗಳೂರಿನ ವ್ಯಕ್ತಿ ಸಹಿತ ಮೂವರನ್ನು ಎಸ್ಐಟಿ ವಶಕ್ಕೆ ಪಡೆದುಕೊಂಡು ರವಿವಾರ ಮತ್ತೂಮ್ಮೆ ವಿಚಾರಣೆ ನಡೆಸಲಾಗಿದೆ.

Share This Article
Leave a comment