December 23, 2024

Newsnap Kannada

The World at your finger tips!

person

10 ಜನ ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಿದ ಸಿಸಿಬಿ

Spread the love

ಕರ್ನಾಟಕದಲ್ಲಿ ಪೆಡಂಭೂತವಾಗಿ ಕಾಣುತ್ತಿರುವ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೋಲೀಸರು ನೈಜೀರಿಯಾ ಪ್ರಜೆ ಸೇರಿದಂತೆ 10 ಜನರನ್ನು ಬಂಧಿಸಿದ್ದು, 9 ಲಕ್ಷ ಮೌಲ್ಯದ ಡ್ರಗ್ಸ್‌ನ್ನು ವಶಪಡಿಸಿಕೊಂಡಿದ್ದಾರೆ. ಹಾಗೂ ಆರೋಪಿಗಳ ಮೇಲೆ ಎನ್‌ಡೀಪಿಎಸ್ ಕಾಯ್ದೆಯಡಿಯಲ್ಲಿ ಒಟ್ಟು 8 ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದು ಪೋಲೀಸ್ ಮಹಾನಿರ್ದೇಶಕ ಕಮಲ್ ಪಂಥ್ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಂಥ್, ‘ಆರೋಪಿಗಳು ಡಾರ್ಕ್‌ನೆಟ್ ಮೂಲಕ ಡ್ರಗ್ಸ್ ವ್ಯವಹಾರವನ್ನು ನಡೆಸುತ್ತಿದ್ದರು. ಟಾರ್ ಎಂಬ ಸರ್ಚ್ ಎಂಜಿನ್ ಮೂಲಕ ಡಾರ್ಕ್ ನೆಟ್‌ನಲ್ಲಿ ಎಂಪೈರ್ ಮಾರ್ಕೆಟ್, ಸಿಲ್ಕ್ ರೂಟ್, ಡ್ರಗ್ ಬೋರ್ಡ್ ಎಂಬ ನಿಷೇಧಿತ ಜಾಲತಾಣಗಳಲ್ಲಿ ಬ್ರೌಸ್ ಮಾಡಿ, ಮಾದಕವಸ್ತುಗಳನ್ನು ಗಿಫ್ಟ್ ಪ್ಯಾಕ್ ಮಾಡಿಸಿ, ಇಂಡಿಯಾ ಪೋಸ್ಟ್ ಮುಖಾಂತರ ಭಾರತಕ್ಕೆ ಡ್ರಗ್ಸ್‌ನ್ನು ಆಮದು ಮಾಡಿಕೊಂಡು ಕಾಲೇಜು ವಿದ್ಯಾರ್ಥಿಗಳಿಗೆ ಸರಬರಾಜು ಮಾಡುತ್ತಿದ್ದರು. ಆರೋಪಿಗಳು ಮಾದಕವಸ್ತುಗಳಿಗೆ ಬಿಟ್‌ಕಾಯಿನ್ ಮೂಲಕ ಹಣ ಸಂದಾಯ ಮಾಡುತ್ತಿದ್ದರು. ಆರೋಪಿಗಳ ವಿಚಾರಣೆ ಇನ್ನೂ ನಡೆಯುತ್ತಿದೆ’ ಎಂದು ಮಾಹಿತಿ ನೀಡಿದರು.

ಡ್ರಗ್ಸ್ ಜಾಲದ ಬಗ್ಗೆ ಖಚಿತ ಮಾಹಿತಿ ಪಡೆದು, ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಉಪ ಪೊಲೀಸ್ ಆಯುಕ್ತರಾದ ಕೆ.ಪಿ.ರವಿಕುಮಾರ್ ಅವರ ನೇತೃತ್ವದಲ್ಲಿ ಸಿಸಿಬಿ ಸಹಾಯಕ ಪೊಲೀಸ್ ಆಯುಕ್ತರವರುಗಳಾದ ಕೆ.ಸಿ.ಗೌತಮ್, ಹನುಮಂತರಾಯ ರವರ ಉಸ್ತುವಾರಿಯಲ್ಲಿ ಬೆಂಗಳೂರಿನ ಹೆಚ್.ಎಸ್.ಆರ್ ಲೇಔಟ್, ವಿಜಯನಗರ, ಮಹಾಲಕ್ಷ್ಮಿಪುರಂ, ಹಲಸೂರು, ಕೆ.ಜಿ.ಹಳ್ಳಿ ಇಂದಿರಾನಗರ, ಎಚ್.ಎ.ಎಲ್ ಮತ್ತು ರಾಮಮೂರ್ತಿನಗರಗಳಲ್ಲಿ ದಾಳಿ ನಡೆಸಿ ಆರೊಪಿಗಳನ್ನು ಸೆರೆ ಹಿಡಿದಿದ್ದಾರೆ.

ಬಂಧಿತ ಆರೋಪಿಗಳು ಬೆಂಗಳೂರಿನ ಸಾರ್ಥಕ್ ಆರ್ಯ ಬಿನ್ ರಾಕೇಶ್ ಆರ್ಯ, ನಿತೀನ್ ಬಿನ್ ಪುರುಷೋತ್ತಮ್, ಕಾರ್ತಿಕ್‍ಗೌಡ ಬಿನ್ ಸಿದ್ದೇಗೌಡ, ಝಮಾನ್ ಹಂಜಾಮಿನಾ ಬಿನ್ ಅಕ್ಬರ್ ಮಹಮದ್ ಆಲಿ ಆಲಿತೂಜರಿ ಬಿನ್ ಮಹಮದ್ ತೂಜರಿ, ಅಮಲ್ ಬೈಜು ಬಿನ್ ಬೈಜು, ಫೀನಿಕ್ಸ್ ಡಿಸೋಜಾ ಬಿನ್ ಜೆರೋಮ್, ಶೋನ್ ಶಾಝಿ, ಪಾಲಡುಗ ವೆಂಕಟ ವರುಣ್, ನೈಜೀರಿಯ ಮೂಲದ ಸನ್ನೀ ಓ ಇನೋಶೇಂಟ್ ಎಂದು ಗುರುತಿಸಲಾಗಿದೆ.

ಸಿಸಿಬಿ ಪೋಲಿಸರು ಆರೋಪಿಗಳಿಂದ 90 ಲಕ್ಷ ಮೌಲ್ಯದ 660 ಎಲ್.ಎಸ್.ಡಿ ಪೇಪರ್ ಗಳನ್ನು 386 ಎಂ.ಡಿ.ಎಂ.ಎ, 180 ಎಕ್ಸ್ ಟೆಸಿ ಮಾತ್ರೆಗಳು, 12 ಗ್ರಾಂ ಎಂ.ಡಿ.ಎಂ.ಎ ಕ್ರಿಸ್ಟೆಲ್, 10 ಗ್ರಾಂ ಕೋಕೇನ್ ಪುಡಿಯನ್ನು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ 12 ಮೊಬೈಲ್ ಪೋನ್, 3 ಲ್ಯಾಪ್ಟಾಪ್, 2 ದ್ವಿಚಕ್ರ ವಾಹನ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!