ಇದನ್ನು ಓದಿ –ಮಹಿಳಾ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ನಾಯಕಿ ಮಿಥಾಲಿ ರಾಜ್
ಬಸವರಾಜ ಬೊಮ್ಮಾಯಿಯನ್ನು ಭೇಟಿಮಾಡಿದ ವಿಧಾನ ಪರಿಷತ್ ಸದಸ್ಯ ಸಿ. ಪಿ. ಯೋಗೀಶ್ವರ್ , ಚನ್ನಪಟ್ಟಣದಲ್ಲಿ ಬಹುಕೋಟಿ ವೆಚ್ಚದ ಸರ್ಕಾರಿ ಗೋಮಾಳ ಕಬಳಿಕೆಯಾಗಿದೆ. ಭೂ ಕಬಳಿಕೆ ಮಾಡಿರುವ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮವಹಿಸಬೇಕು ಹಾಗಾಗಿ ಈ ಪ್ರಕರಣವನ್ನು ಸಿಓಡಿ ತನಿಖೆಗೆ ವಹಿಸಬೇಕು ಎಂದು ಮನವಿ ಪತ್ರ ಸಲ್ಲಿಸಿದ್ದಾರೆ.
ಚನ್ನಪಟ್ಟಣದ ಭೂ ಹಗರಣವನ್ನು ಸಿಓಡಿ ತನಿಖೆಗೆ ವಹಿಸುವ ಮನವಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಸವರಾಜ ಬೊಮ್ಮಯಿ, ಪತ್ರದ ಮೇಲೆ ಸಿಓಡಿಯಿಂದ ತನಿಖೆ ಮಾಡಲಾಗುವುದು ಎಂದು ಬರೆದು ಸಹಿ ಮಾಡುವ ಮೂಲಕ ತನಿಖೆಗೆ ಶಿಫಾರಸ್ಸು ಮಾಡಿದ್ದಾರೆ.
ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಚನ್ನಪಟ್ಟಣ ತಾಲೂಕಿನ ಕೋಲೂರು ಗ್ರಾಮದ ಸರ್ವೆ ನಂಬರ್ 118 ರಲ್ಲಿ 192 ಎಕರೆ ಸರ್ಕಾರಿ ಗೋಮಾಳ ಜಮೀನು ಇದೆ. ಈ ಗೋಮಾಳದಲ್ಲಿ ಸುಮಾರು 25 ಕೋಟಿ ಮೌಲ್ಯದ 23 ಎಕರೆ ಜಾಗವನ್ನು ಅಧಿಕಾರಿಗಳು ಹಣದ ಆಸೆಗೆ ಬಿದ್ದು ಕಡತಗಳನ್ನು ಬದಲಿಸಿ, ನಕಲಿ ದಾಖಲೆಗಳನ್ನು ಸೃಷ್ಟಿಸುವ ಮೂಲಕ ಭೂಗಳ್ಳರಿಗೆ ನೆರವಾಗಿದ್ದರು. ಈ ಕುರಿತು ಹಲವರನ್ನು ಬಂಧಿಸಿದ್ದಾರೆ.
ರಾಮನಗರ ಜಿಲ್ಲೆ, ಚನ್ನಪಟ್ಟಣ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ತಾಲ್ಲೂಕು ಕಛೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಭೂ ಮಾಫಿಯಾದವರೊಡನೆ ಶಾಮೀಲಾಗಿ ವಿವಿಧ ಕಡೆ ಬೆಲೆಬಾಳುವ ಬಹುಕೋಟಿ ಮೊತ್ತದ ಸರ್ಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಿ ಅಕ್ರಮವೆಸಗಿರುವುದು ಬೆಳಕಿಗೆ ಬಂದಿದ್ದು, ಈ ಹಿನ್ನಲೆಯಲ್ಲಿ ಕೆಲವು ಸಿಬ್ಬಂದಿಗಳನ್ನು ಬಂಧಿಸಿರುವುದು ಮಾಧ್ಯಮ ವರದಿಗಳಿಂದ ತಿಳಿದುಬಂದಿರುತ್ತದೆ. ಆದುದರಿಂದ ಚನ್ನಪಟ್ಟಣ ತಾಲ್ಲೂಕು ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೇರಿ ನಡೆಸಿರುವ ಈ ಭೂ ಅಕ್ರಮದ ಹಗಲು ದರೋಡೆಯ ತನಿಖೆಯನ್ನು ಉನ್ನತ ಮಟ್ಟದ ತನಿಖಾ ಸಂಸ್ಥೆಗೆ ವಹಿಸಿ ಬೆಲೆ ಬಾಳುವ ಬಹುಕೋಟಿ ಮೊತ್ತದ ಸರ್ಕಾರಿ ಭೂಮಿಯನ್ನು ಉಳಿಸುವುದರ ಜೊತೆಗೆ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕೆಂದು ಕೋರುತ್ತೇನೆ ಎಂದು ಪತ್ರದಲ್ಲಿ ಸಿಎಂ ಬೊಮ್ಮಯಿಗೆ ಸಿ. ಪಿ. ಯೋಗೀಶ್ವರ್ ಮನವಿ ಸಲ್ಲಿಸಿದ್ದಾರೆ
“ಪ್ರಕರಣದ ಪೋಲಿಸ್ ತನಿಖೆಯಲ್ಲಿ ಅಕ್ರಮ ನಡೆದಿದೆ ಎನ್ನುವುದು ತಿಳಿದುಬಂದಿದೆ. ಇನ್ನಷ್ಟು ತನಿಖೆ ನಡೆಸಿ ಭೂ ಅಕ್ರಮದಲ್ಲಿ ಆರೋಪಿಗಳು ಎಷ್ಟು ಡಿಸಿ ಮತ್ತು ಎಡಿಸಿ, ಎಷ್ಟು ಎಸಿಗಳು ಹಾಗೂ ಎಷ್ಟು ತಹಶೀಲ್ದಾರ್‌ಗಳ ಸಹಿಗಳನ್ನು ನಕಲಿ ಮಾಡಿದ್ದಾರೆ ಮತ್ತು ಈ ಹಗರಣದಲ್ಲಿ ಎಷ್ಟು ಹಣದ ವ್ಯವಹಾರ ನಡೆದಿದೆ, ಎಂದು ತನಿಖೆಯಲ್ಲಿ ತಿಳಿಯಲಿದೆ” ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಂತೋಷ ಬಾಬು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಚನ್ನಪಟ್ಟಣ ತಹಶೀಲ್ದಾರ್ ಕಚೇರಿ ದ್ವಿತೀಯ ದರ್ಜೆ ಸಹಾಯಕನಾದ ಬಿ.ಕೆ. ಹರೀಶ್‌ಕುಮಾರ್, ಮತ್ತೊಬ್ಬ ಸಹಾಯಕ ನಾಗರಾಜು ಹಾಗೂ ಚನ್ನಪಟ್ಟಣ ನಗರಸಭಾ ಸದಸ್ಯ ಬೋರಲಿಂಗಯ್ಯ, ಜಿಲ್ಲಾಧಿಕಾರಿಗಳ ಕಚೇರಿ ದ್ವಿತೀಯ ದರ್ಜೆ ಕ್ಲರ್ಕ್ ಚಿಕ್ಕಸಿದ್ದಯ್ಯ, ಹಾಗೂ ಗ್ರಾಮ ಪಂಚಾಯಿತಿ ಸದಸ್ಯೆಯ ಪತಿ ಲೋಕೇಶ್ ಎಂಬುವವರ ವಿರುದ್ಧ ಗೋಮಾಳ ಕಬಳಿಸಿದ ಪ್ರಕರಣ ದಾಖಲಾಗಿದೆ.
ಪ್ರಮುಖ ಆರೋಪಿಗಳಲ್ಲಿ ಹರೀಶ್ ಕುಮಾರ್, ನಾಗರಾಜ್ ಹಾಗೂ ಬೋರಲಿಂಗಯ್ಯನನ್ನು ಪೋಲಿಸರು ಬಂಧಿಸಿದ್ದಾರೆ. ಇನ್ನೂ ಚಿಕ್ಕಸಿದ್ದಯ್ಯ ಹಾಗೂ ಲೋಕೇಶ್ ಇಬ್ಬರನ್ನು ಬಂಧಿಸಬೇಕಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು