ಒಂದು ಜಾತಿಯಿಂದ ಯಾರೂ ಕರ್ನಾಟಕದಲ್ಲಿ ಗೆಲ್ಲೋದಕ್ಕೆ ಆಗೋದಿಲ್ಲ. ಎಷ್ಟೇ ಪ್ರಭಾವಿ ಆಗಿದ್ದರೂ ಒಂದು ಜಾತಿಯಿಂದ ಗೆಲುವು ಅಸಾಧ್ಯ. ಜೆಡಿಎಸ್ ಪಕ್ಷವನ್ನು ಯಾರೇ ಬಂದರೂ ತುಳಿಯಲು ಆಗುವುದಿಲ್ಲ ಎಂದು ರಾಜ್ಯಸಭಾ ಸದಸ್ಯ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದರು.
ಜೆಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೌಡರು,
ಆರ್.ಆರ್. ನಗರದಲ್ಲಿ ಡಿಕೆ ಶಿವಕುಮಾರ್ ಅವರಿಂದ ಜಾತಿ ರಾಜಕಾರಣ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಒಂದು ಜಾತಿಯಿಂದ ಯಾರೂ ಕರ್ನಾಟಕದಲ್ಲಿ ಗೆಲ್ಲೋದಕ್ಕೆ ಆಗೋದಿಲ್ಲ. ಎಷ್ಟೇ ಪ್ರಭಾವಿ ಆಗಿದ್ದರೂ ಒಂದು ಜಾತಿಯಿಂದ ಗೆಲುವು ಅಸಾಧ್ಯ. ಇದನ್ನು ನಾನು ಸಾವಿರ ಬಾರಿ ಹೇಳಿದ್ದೇನೆ ಎಂದರು.
ನಮ್ಮ ಪಕ್ಷವನ್ನು ಯಾರಾದರೂ ಒಡೆಯುತ್ತಾರೆ ಎಂದರೆ ಅದು ಅವರ ಭ್ರಮೆ. ಯಾವುದೇ ಕಾರಣಕ್ಕೂ ನಮ್ಮ ಪಕ್ಷವನ್ನು ಒಡೆಯಲು ಸಾಧ್ಯವಿಲ್ಲ. ಜೆಡಿಎಸ್ ಪಕ್ಷವನ್ನು ಯಾರೇ ಬಂದರೂ ತುಳಿಯಲು ಆಗುವುದಿಲ್ಲ. ಯಾರು ಏನು ಬೇಕಾದರೂ ಹೇಳಲಿ. ನಮ್ಮ ಪಕ್ಷ ಯಾರಿಂದಲೂ ಮುಗಿಸಲು ಸಾಧ್ಯವಿಲ್ಲ. ನಾನು ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಲೇ ಬಂದಿದ್ದೇನೆ ಎಂದರು.
ದೇಶದಲ್ಲಿ ಮುಸ್ಲಿಂ ಮೀಸಲಾತಿ, ಮಹಿಳೆಯರಿಗೆ ಮೀಸಲಾತಿ ಕೊಟ್ಟಿದ್ದು, ಸಾಮಾಜಿಕ ನ್ಯಾಯದ ಅನುಷ್ಠಾನ ಮಾಡಿದ್ದು ನಮ್ಮ ಸರ್ಕಾರ. ನನ್ನ ಹೆಸರಲ್ಲಿ ಗೌಡ ಅಂತ ಸೇರಿಕೊಂಡಿದೆ. ಹಾಗಂತ ನಿಂದನೆ ಮಾಡೋದು ಸರಿಯಾ? ನಿಂದಕರಿರಬೇಕಯ್ಯ ಅಂತ ಬಸವಣ್ಣನವರು ಹೇಳಿದ್ದಾರೆ. ನಿಂದನೆ ಮಾಡಿದ್ದಕ್ಕೆ ಅವರೇ ಅನುಭವಿಸುತ್ತಾರೆ ಬಿಡಿ. ಅವರು ಚುನಾವಣೆಯಲ್ಲಿ ಗೆಲ್ಲೋಕೆ, ಅವರ ಅಭ್ಯರ್ಥಿ ಗೆಲ್ಲಿಸೋಕೆ ಯಾವ ಪ್ರಯೋಗ ಮಾಡ್ತಾರೋ ಮಾಡಲಿ. ಅದಕ್ಕೆ ಅವರು ಸ್ವತಂತ್ರರು ಎಂದು ಡಿ.ಕೆ. ಶಿವಕುಮಾರ್ ವಿರುದ್ದ ದೇವೇಗೌಡ ಆಕ್ರೋಶ ಹೊರಹಾಕಿದ್ದಾರೆ.
ನಮ್ಮದು ಪ್ಯಾಮಿಲಿ ಪಾರ್ಟಿ ಅಲ್ಲ
ನಮ್ಮದು ಫ್ಯಾಮಿಲಿ ಪಕ್ಷವಲ್ಲ. ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ದ ಹೋರಾಟ ಮಾಡಿದ್ದೇನೆ, ಮುಂದೆಯೂ ಮಾಡುತ್ತೇನೆ. ಈ ಪಕ್ಷ ಬಡವರ ಪರ, ರೈತರು, ಅತ್ಯಂತ ಕೆಳ ವರ್ಗದಲ್ಲಿ ಇರುವವರ ಪರವಾದ ಪಕ್ಷ. ಈಗಿನ ಸರ್ಕಾರ ಬಡವರ ಪರ, ರೈತ ಪರ ಇಲ್ಲ ಎಂದು ದೇವೇಗೌಡ ಕಿಡಿಕಾರಿದರು.
ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆಯು ನಡೆಯಲಿದೆ. ಬುಧವಾರ ನಮ್ಮ ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಸಲಿದ್ದಾರೆ. ಸೋಲು, ಗೆಲುವು ಆಮೇಲೆ. ಪಕ್ಷಕ್ಕೆ ನಿಷ್ಠರಾಗಿರುವವರಿಗೆ ಟಿಕೆಟ್ ನೀಡಲಾಗುವುದು. ಹೊರಗಿನವರಿಗೆ ಟಿಕೆಟ್ ಕೊಟ್ಟು ಸಾಕಾಗಿ ಹೋಗಿದೆ. ಅವರು ಹೀಗೆ ಬಂದು ಹಾಗೆ ಹೋಗಿರೋದನ್ನು ನೋಡಿದ್ದೇವೆ. ಅದೊಂದು ಹಿಂಸೆ. ನಮಗೆ ಆಯಾ ರಾಮ್, ಗಯಾ ರಾಮ್ ರೀತಿಯವರು ಬೇಕಾಗಿಲ್ಲ. ನಮ್ಮ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಮಾಡುತ್ತಾರೆ ಎಂದಷ್ಟೇ ಹೇಳಿದರು.
More Stories
ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ