ಬ್ಯಾಂಕುಗಳೆಂದ ಮೇಲೆ ಹಣಕಾಸನ್ನು ಕಟ್ಟುವುದು ಪಡೆಯುವುದು ಇದ್ದೇ ಇರುತ್ತದೆ ಕಷ್ಟ ಸುಖದ ಹಂಚಿಕೆಯ ಹಾಗೆ.
ಲಾಕರುಗಳನ್ನು ಹೊಂದಿರುವ ಗ್ರಾಹಕರಿಂದ ನಮ್ಮ ಸಿಬ್ಬಂದಿ ಹೊಸ ದಾಖಲೆಗಳನ್ನು ಪಡೆಯುತ್ತಿದ್ದೆವು. ಬಹುತೇಕರಿಗೆ ಕರೆ ಮಾಡಿ ತರಿಸಿಕೊಂಡೆವು. ಇನ್ನೂ ಕೆಲವರು ಲಾಕರ್ ಆಪರೇಟ್ ಮಾಡಲು ಬಂದಾಗ ಬರೆಸಿಕೊಂಡೆವು. ಕೆಲ ವರ್ಷಗಳಿಂದ ಆಪರೇಟ್ ಮಾಡಿರದ ಮತ್ತೂ ಕೆಲವರ ಪತ್ತೆಗೆ ನಾವು ಪತ್ತೇದಾರಿಕೆ ಕೆಲಸ ಮಾಡುವಷ್ಟು ತ್ರಾಸಾಯಿತು.
ಹಾಗೊಂದು ಸೂರ್ಯಾಸ್ತದ ಸಮಯ. ಆ ದಿನ ಭಾವಚಿತ್ರವೊಂದನ್ನು ನಮ್ಮ ಅಧೀನ ಸಿಬ್ಬಂದಿಯೊಬ್ಬ ‘ಅಕ್ಕಾ ಇವರು ನಿಮಗೆ ಗೊತ್ತಲ್ಲವಾ? ನಿಮ್ಮ ಬಳಿ ಬಂದು ಎಫ್.ಡಿ ಸೆಕ್ಷನ್ನಿನಲ್ಲಿ ಟೇವಣಿ ಇಡುವಾಗ ಮಾತನಾಡುತ್ತಿದ್ದರು. ಇತ್ತೀಚೆಗೆ ಯಾಕೋ ಬಂದಿಲ್ಲ. ಹೋಗ್ಬಿಟ್ಟಿದ್ದಾರೇನೋ ಯಾರನ್ನಾದರೂ ವಿಚಾರಿಸಿ’ ಎಂದ. ಆಕೆ ಚಿರಪರಿಚಿತ ಗ್ರಾಹಕಿಯೇ. ಆಕೆಯ ವೈಯಕ್ತಿಕ ವಿಚಾರ ನನಗೆ ಗೊತ್ತಿದ್ದಿದ್ದು ಸ್ವಲ್ಪವೇ. ಗಂಡ ಇಲ್ಲ, ಮಗ ಯಾವುದೋ ಜಾತಿಯ ಹುಡುಗಿಯನ್ನು ಮದುವೆಯಾದ. ಹಾಗಾಗಿ ತಾನು ದೂರ ಇರುವೆ ಎಂದ ವಿಚಾರವಷ್ಟೇ. ಆಕೆ ಒಂದು ಥರದ ವಿಚಿತ್ರ ಹೆಂಗಸು. ಬಂದ ಕೆಲವೇ ನಿಮಿಷಗಳಲ್ಲಿ ಆಕೆಯ ಕೆಲಸ ಆಗಬೇಕೆಂದು ಬಯಸುತ್ತಿದ್ದಳು. ಹಿಂದೆಲ್ಲಾ ಈಗಿನಷ್ಟು ತಾಂತ್ರಿಕತೆ ಫಾಸ್ಟ್ ಇರಲಿಲ್ಲ. ಒಂದರ್ಧ ಗಂಟೆ ಕೂರಿ ಎಂದು ಸೋಫಾ ಮೇಲೆ ಕೂರಿಸುತ್ತಿದ್ದರೂ, ಬಿಸಿನೀರಿನಲ್ಲಿನ ಅವರೇಕಾಳಿನ ತರಹ ಆಕೆ ತಕತಕ ಎನ್ನುತ್ತಿದ್ದಳು. ಸಿನಿಮಾಕ್ಕೆ ಟಿಕೆಟ್ ತಂದಿರುವೆ ಸಿನಿಮಾ ಶುರುವಾಗುತ್ತೆ ಬೇಗ ಮಾಡಿಕೊಡಿ ಎಂದು ಒತ್ತಾಯಿಸುತ್ತಿದ್ದಳು. ಹೋಗಲಿ ಸಿನಿಮಾ ಮುಗಿದ ಮೇಲೆ ಬನ್ನಿ ಎಂದರೆ ‘ಊಹೂ ನಾನು ಹೋಗುವಾಗ ಬೇರೆ ರೂಟಿನಲ್ಲಿ ಹೋಗುತ್ತೇನೆ. ಈಗಲೇ ಮಾಡಿ ಕೊಡಿ’ ಎನ್ನುತ್ತಿದ್ದಳು. ಪ್ರತಿಬಾರಿಯೂ ಸಿನಿಮಾ ಟಿಕೆಟ್ಟಿನದ್ದೇ ಮಾತು. ಆಕೆ ಕೊನೆಯಲ್ಲಿ ವೃದ್ಧಾಶ್ರಮವನ್ನು ಸೇರಿದ್ದೂ ನನಗೆ ಗೊತ್ತಿತ್ತು. ಯಾವಾಗಲಾದರೂ ದಾರಿಯಲ್ಲಿ ಸಿಗುತ್ತಿದ್ದರು. ಒಮ್ಮೆ ಕಾರ್ಯನಿಮಿತ್ತ ವೃದ್ಧಾಶ್ರಮಕ್ಕೆ ಹೋದಾಗ ವರ್ಷಗಳ ಹಿಂದೆ ನಡೆದಿದ್ದ ನನ್ನ ಯಾವುದೋ ಕಾರ್ಯಕ್ರಮದ ಚಿತ್ರವಿರುವ ಪೇಪರನ್ನು ಕಟ್ ಮಾಡಿ ತನ್ನ ಟ್ರಂಕಿನಲ್ಲಿ ಹಾಕಿಟ್ಟುಕೊಂಡಿದ್ದನ್ನು ಸಂಭ್ರಮದಿಂದ ಓಡಿಬಂದು ತೋರಿಸಿದರು. ಬ್ಯಾಂಕಿನವರು ಗ್ರಾಹಕರ ಮೇಲೆ ಅಷ್ಟು ಅಚ್ಚು ಮೂಡಿಸಬಹುದೇ ಎಂಬ ಅಚ್ಚರಿಯೂ ಆ ಕ್ಷಣದಲ್ಲಿ ಮೂಡಿದ್ದು ಸುಳ್ಳಲ್ಲ.
ಇರಲಿ ನಮ್ಮ ಅಧೀನ ಸಿಬ್ಬಂದಿ ಹೇಳಿದ್ದಕ್ಕೆ ನಾ ಕೂಡಲೇ ಆ ವೃದ್ಧಾಶ್ರಮ ನಡೆಸುತ್ತಿದ್ದವರು ನನಗೆ ಗೊತ್ತಿದ್ದವರೇ ಆದ್ದರಿಂದ ಆ ಹೆಂಗಸಿನ ಭಾವಚಿತ್ರವನ್ನು ಅವರಿಗೆ ವಾಟ್ಸಪ್ಪಿನಲ್ಲಿ ಕಳುಹಿಸಿ ಆಕೆ ಜೀವಂತ ಇದ್ದಾರೆಯೋ ಇಲ್ಲವೋ ತಿಳಿಸಿ ಎಂದು ಧ್ವನಿಸಂದೇಶವನ್ನೂ ರವಾನಿಸಿದೆ. ಆಶ್ರಮ ನಡೆಸುತ್ತಿದ್ದವರು ಆ ಸಂದೇಶವನ್ನು ನೋಡಿಯೂ ನನಗೆ ಉತ್ತರಿಸದ್ದು ಮರುದಿನ ತಿಳಿಯಿತು. ಲಾಕರ್ ನೋಡುತ್ತಿದ್ದವರು ‘ಮೇಡಂ ಅವರ ಸುದ್ದಿ ಏನಾದರೂ ಗೊತ್ತಾಯಿತೇ’ ಎಂದು ನೆನಪು ಮಾಡಿದರು. ಆಶ್ರಮ ನಡೆಸುತ್ತಿದ್ದವರು ಸ್ವಲ್ಪ ಬ್ಯುಸಿ ವ್ಯಕ್ತಿಯೇ. ಹಾಗಾಗಿ ನಾನು ಸಂದೇಶವನ್ನು ನೆಚ್ಚಿಕೊಳ್ಳುವುದರ ಬದಲು ಕರೆ ಮಾಡುವುದೇ ಒಳಿತೆಂದು ಭಾವಿಸಿ ಕರೆ ಮಾಡಿದೆ. ಆತ ‘ಮೇಡಂ ಆಕೆ ತೀರಿಕೊಂಡು ಎರಡು ವರ್ಷಗಳಾಯಿತು. ಅವರ ಟ್ರಂಕನ್ನು ಈಚೆಗೆ ಅವರ ಮಗನಿಗೆ ಕೊಟ್ಟೆವು. ಅದರಲ್ಲಿ ಏನಿತ್ತೋ ತಿಳಿಯದು’ ಎಂದರು. ‘ಆನಂದ್ ಅಂತಲ್ಲವಾ ಆಕೆಯ ಮಗ. ಅವನಿಗೇ ನಾಮಿನೇಷನ್ ಮಾಡಿಸುತ್ತಿದ್ದುದು. ಅವನಲ್ಲಿ ಮುನಿಸಿಕೊಂಡು ಆಕೆ ದೂರ ಇದ್ದರಂತಲ್ವಾ?’ ಎಂದೆ. ‘ಹೌದು… ಈಕೆ ಸತ್ತಾಗ ಆ ಹುಡುಗನಿಗೆ ಫೆÇೀನ್ ಮಾಡಿ ಬಾಡಿ ತೊಗೊಂಡು ಹೋಗಪ್ಪಾ ಎಂದು ಹೇಳಿದರೆ, ನನಗೆ ತುಂಬಾ ಕೆಲಸ ಇದೆ ಬರೋಕೆ ಆಗಲ್ಲ. ಎರಡು ಮೂರು ದಿನ ಇಟ್ಟಿರೋದಾದ್ರೆ ನೋಡೋಣ ಎಂದ’ ಎಂದು ಹೇಳಿದರು. ನಾನು ‘ಛೇ ಪಾಪ, ಏನು ಮಕ್ಕಳೋ’ ಎಂದೆ. ಆ ಪಾಪ ಎನ್ನುವ ಪದ ಆತನಲ್ಲಿ ಏನು ಭಾವನೆ ಉಕ್ಕಿಸಿತೋ ಕಾಣೆ. ‘ಮೇಡಂ ಆಕೆ ಏನೂ ಸಾಧಾರಣ ಅಲ್ಲ. ಗಂಡ ತೀರಿಕೊಂಡ ಕೂಡಲೇ ಯಾವುದೋ ಡ್ರೈವರ್ ಜೊತೆ ಹೊರಟುಹೋಗಿದ್ದಳು. ಮತ್ತೆ ಮದುವೆ ಆಗುವುದು ತಪ್ಪಲ್ಲವೇ ಅಲ್ಲ. ಆದರೆ ಪುಟ್ಟ ಮಕ್ಕಳನ್ನು ಹೇಳದೇ ಕೇಳದೆ ತಾನು ತಾಯಿ ಎಂಬುದನ್ನು ಮರೆತು ಮಕ್ಕಳನ್ನು ಹಾಗೆ ಬಿಟ್ಟುಹೋಗಿದ್ದು ಸರಿಯಲ್ಲ. ಮಕ್ಕಳ ಚಿಕ್ಕಪ್ಪನೇ ಅವರನ್ನು ತನ್ನ ಮನೆಯಲ್ಲಿ ಇರಿಸಿಕೊಂಡು ಓದಿಸಿ ದೊಡ್ಡವರನ್ನಾಗಿ ಮಾಡಿದ್ದು. ಹೀಗಿದ್ದಾಗ ಮಕ್ಕಳಿಗೆ ತಾಯಿ ಎಂದರೆ ಮಮತೆ ಬರಲು ಹೇಗೆ ಸಾಧ್ಯ? ಇದೇ ಊರಿನಲ್ಲಿ ಆಕೆಯ ತಮ್ಮ ಇದ್ದಾನೆ. ಅವನಿಗೂ ತಿಳಿಸಿದೆವು. ಆತ ನಮ್ಮಕ್ಕ ಸತ್ತು ತುಂಬಾ ವರ್ಷಗಳೇ ಆದವು ನಮ್ಮ್ ಪಾಲಿಗೆ. ನಮಗೂ ಇದಕ್ಕೂ ಸಂಬಂಧವಿಲ್ಲ ಎಂದುಬಿಟ್ಟ. ಕೊನೆಗೆ ಆಕೆಯ ಜನಾಂಗದವರಿಗೆ ತಿಳಿಸಿ ಅಂತಿಮ ಸಂಸ್ಕಾರ ಮಾಡಿಸಿದೆವು’ ಎಂದರು. ಗತ್ಯಂತರ ಇಲ್ಲದೆ ‘ಆಕೆಯ ಮಗನ ಮೊಬೈಲ್ ನಂಬರ್ ತಿಳಿಸಿದರೆ ಲಾಕರ್ ಕೀ ಏನಾದರೂ ಇದೆಯೇ ಕೇಳಿ ಆತನಿಂದಲೇ ಅರ್ಜಿ ಪಡೆದು ಕ್ಲೋಸ್ ಮಾಡುತ್ತೇವೆ’ ಎಂದು ಹೇಳಿ ಇಟ್ಟೆ.
ಏಕೋ ಏನೋ ಮನ ಕದಡಿದಂತಾಗಿತ್ತು. ಸಹಜವಲ್ಲವೇ? ಮಕ್ಕಳಿಗಾಗಿ ಪ್ರಾಣ ಕೊಡುವ ತಾಯ್ತಂದೆಯರು ಇರುವಾಗ ಇಂಥಾ ತಾಯಿಯರ ಬಗ್ಗೆ ಏನು ಯೋಚಿಸುವುದು? ಆ ಕ್ಷಣಕ್ಕೆ ನನಗೆ ಮತ್ತೊಂದು ಘಟನೆ ಧುತ್ತೆಂದು ನೆನಪಿಗೆ ಬಂದಿತು. ಅಕೌಂಟ್ ಓಪನ್ ಮಾಡಲು ಬಂದ ಮುವ್ವತ್ತರ ಆಸುಪಾಸಿನ ಹುಡುಗಿಯೊಬ್ಬಳು ತಾಯಿಯ ಹೆಸರು ತಂದೆಯ ಹೆಸರು ಕೇಳಿದಾಗ ಹೇಳಿದಳು. ಆದರೆ ಕಣ್ಣಂಚು ತೇವವಾಗಿತ್ತು. ಸೂಕ್ಷ್ಮವಾಗಿ ಕಾಣುತ್ತಿದ್ದ ಆ ಹನಿಯನ್ನು ಕಂಡು ‘ಏನಾಯಿತು’ ಎಂದು ಕೇಳಿದೆ. ‘ಅವರು ನನ್ನನ್ನು ಸಾಕಿದವರು. ನೆಂಟರಲ್ಲಿ ಯಾರಿಗೂ ಗೊತ್ತಿಲ್ಲ. ಮೈಸೂರಿನ ದಾಸ್ ಪ್ರಕಾಶ್ ಹೋಟೆಲಿನಲ್ಲಿ ನನ್ನ ಸಾಕು ಅಪ್ಪ ಕೆಲಸ ಮಾಡುವಾಗ ನನ್ನ ಹೆತ್ತಮ್ಮನೂ ಅಲ್ಲಿಯೇ ಕೆಲಸ ಮಾಡುತ್ತಿದ್ದಳಂತೆ. ನನ್ನ ಅಪ್ಪನ ಪರಿಚಯವಾದಾಗ ಆಕೆ ಗರ್ಭಿಣಿ ಆಗಿದ್ದಳಂತೆ. ಮಗುವನ್ನು ಹೆತ್ತ ಕೆಲ ದಿನಗಳಲ್ಲಿಯೇ ನನ್ನ ಸಾಕು ಅಪ್ಪನಿಗೆ ನನ್ನನ್ನು ಕೊಟ್ಟು ಎಲ್ಲಿಯೋ ಹೊರಟುಹೋದಳಂತೆ. ಅಪ್ಪ ಅಮ್ಮ ನನ್ನನ್ನು ಚೆನ್ನಾಗಿಯೇ ಸಾಕಿದರು. ಮದುವೆಗೆ ಮುಂಚೆ ಪಾರ್ಲರ್ ಲಿ ಕೆಲಸ ಮಾಡುತ್ತಿದ್ದೆ. ದಿಲ್ ದಾರ್ ಆಗಿದ್ದೆ. ಮದುವೆ ಮಾಡಿದರು. ಆದರೆ ಮೇಸ್ತ್ರಿ ಕೆಲಸ ಎಂದು ಹೇಳಿ ಮದುವೆಯಾದ ನನ್ನ ಗಂಡ ಸಾಧಾರಣ ಕೂಲಿ ಎಂದು ಆಮೇಲೆ ಗೊತ್ತಾಯಿತು. ಅದೂ ಪರವಾಗಿಲ್ಲ. ದಿನಾ ಕುಡಿದು ಬರುತ್ತಾನೆ. ನನ್ನ ಸಂಸಾರವನ್ನು ನಾನೇ ನಡೆಸಬೇಕು. ಮಗುವನ್ನು ಒಳ್ಳೆಯ ಶಾಲೆಗೆ ಸೇರಿಸಿದ್ದೇನೆ. ತುಂಬಾ ಖರ್ಚು ಬರುತ್ತೆ. ಅದಕ್ಕೆ ಮನೆ ಕೆಲಸಗಳಿಗೆ ಹೋಗುತ್ತಿದ್ದೇನೆ. ಈಚೆಗೆ ನನ್ನ ಅಪ್ಪ ಅಮ್ಮ ನನ್ನ ಹೆತ್ತವರಲ್ಲ ಎಂದು ಗಂಡನಿಗೆ ಗುಟ್ಟುಬಿಟ್ಟುಕೊಟ್ಟೆ. ಅವತ್ತಿನಿಂದ ಕೂಲಿ ಹಣವನ್ನೂ ಕೊಡುತ್ತಿಲ್ಲ, ಮನೆಗೇ ಸರಿಯಾಗಿ ಬರುತ್ತಿಲ್ಲ. ಮಾತೆತ್ತಿದರೆ ನೀ ಬೇವರ್ಸಿ ನಾ ಏನು ಮಾಡಿದ್ರೂ ಹೇಳೋರು ಕೇಳೋರು ಯಾರಿದ್ದಾರೆ ಎಂದು ಹಂಗಿಸುತ್ತಾನೆ. ನಮ್ಮಮ್ಮ ಯಾಕೆ ಹಾಗೆ ಮಾಡಿದಳು ಎಂದು ಇಂದಿಗೂ ಗೊತ್ತಾಗುತ್ತಿಲ್ಲ. ನನ್ನ ಈ ಕಷ್ಟಗಳನ್ನೆಲ್ಲಾ ಸಾಕು ಅಪ್ಪ ಅಮ್ಮನಿಗೆ ಹೇಳಿ ಅವರಿಗೆ ನೋವು ಕೊಡಲು ಇಷ್ಟ ಇಲ್ಲ. ನಾ ಚೆನ್ನಾಗಿಯೇ ಇದ್ದೇನೆ ಎನ್ನುವಂತೆ ಇದ್ದೇನೆ. ಅವರು ನನಗೆ ಮಾಡಿರುವುದಕ್ಕೇ ನಾ ಋಣ ತೀರಿಸಲು ಸಾಧ್ಯ ಇಲ್ಲ. ಮತ್ತೂ ತೊಂದರೆ ಕೊಡೋದ್ಯಾಕೆ ಅಂತ’ ಹೇಳಿ ಹೊರಟಳು.
ಕೆಟ್ಟ ಮಕ್ಕಳು ಇರುತ್ತಾರೆಯೇ ಹೊರತು ಕೆಟ್ಟ ಅಮ್ಮಂದಿರು ಇರುವುದಿಲ್ಲ ಎನ್ನುವ ಗಾದೆ ಮಾತಿದೆ.ಖಾಸಗಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ : ಬೈಕ್ ಸವಾರ ದುರ್ಮರಣ
ಇಷ್ಟೆಲ್ಲಾ ಹೇಳಿದ ಮೇಲೆ ಲಾಕರ್ ದಾಖಲೆ ಪಡೆಯಲು ಹೋದಾಗ ನಮ್ಮ ಅರಿವಿಗೆ ಬಂದ ‘ಅಮ್ಮನನ್ನು ಭಿಕ್ಷೆಗೆ ಬಿಟ್ಟ ಸಿರಿವಂತ ಮಗಳ’ ಬಗ್ಗೆ ಮತ್ತೊಮ್ಮೆ ನಿಮಗೆ ಹೇಳುತ್ತೇನೆ.
-ಡಾ. ಶುಭಶ್ರೀಪ್ರಸಾದ್, ಮಂಡ್ಯ.
More Stories
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ
ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ