April 7, 2025

Newsnap Kannada

The World at your finger tips!

pea

ಹಸಿರು ಬಟಾಣಿಯಿಂದ ಕ್ಯಾನ್ಸರ್ ಅಪಾಯ: ಆರೋಗ್ಯ ಇಲಾಖೆಯಿಂದ ಎಚ್ಚರಿಕೆ!

Spread the love

ಬೆಂಗಳೂರು, ಫೆಬ್ರವರಿ 28: ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಕೆಯ ಬಳಿಕ, ಈಗ ಹಸಿರು ಬಟಾಣಿಯಿಂದಲೂ ಕ್ಯಾನ್ಸರ್ ಅಪಾಯವಿರುವ ಬಗ್ಗೆ ಆಹಾರ ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯದಲ್ಲಿ ಆರೋಗ್ಯ ಇಲಾಖೆ ಮತ್ತು ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಇಲಾಖೆ ಜಂಟಿಯಾಗಿ ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ಬಟಾಣಿಯ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಿದಾಗ, ಅದರ ಬಣ್ಣ ಆರೋಗ್ಯಕ್ಕೆ ಹಾನಿಕಾರಕವಾಗಿರುವುದು ಬೆಳಕಿಗೆ ಬಂದಿದೆ.

ಅಧಿಕಾರಿಗಳ ವರದಿ ಪ್ರಕಾರ, ಶೇಖರಿಸಿದ ಹಾಗೂ ಬಣ್ಣ ಹಾಕಿದ ಬಟಾಣಿ ಸೇವನೆಯಿಂದ ನಾನಾ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ವಿಶೇಷವಾಗಿ, ಮಾರಕ ಕ್ಯಾನ್ಸರ್‌ನ ಅಪಾಯ ಹೆಚ್ಚಾಗುತ್ತದೆ. ರಸ್ತೆಬದಿ ಮಾರಾಟವಾಗುವ ಬಗೆಬಗೆಯ ಬಣ್ಣದ ಬಟಾಣಿಗಳ ಮಾದರಿಗಳನ್ನು ಪರೀಕ್ಷಿಸಿದಾಗ, ನಿಷೇಧಿತ ಬಣ್ಣಗಳು ಅಳವಡಿಸಲಾದುದು ಪತ್ತೆಯಾಗಿದೆ.

ಅಲ್ಲದೆ, ಇಂತಹ ಬಟಾಣಿಗಳ ಸೇವನೆಯಿಂದ ಹೃದಯ ಸಂಬಂಧಿತ ಕಾಯಿಲೆಗಳು ಹಾಗೂ ಕಿಡ್ನಿ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ಆಹಾರ ತಜ್ಞರು ಎಚ್ಚರಿಸಿದ್ದಾರೆ. ಈಗಾಗಲೇ 8-10 ಕಡೆ ಕ್ಯಾನ್ಸರ್ ಕಾರಕ ಅಂಶವಿರುವ ಬಟಾಣಿ ಮಾರಾಟವಾಗುತ್ತಿರುವುದು ಪತ್ತೆಯಾಗಿದೆ.

ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಕೆ ಕೂಡ ಅಪಾಯ
ಇಡ್ಲಿ ತಯಾರಿಕೆಯಲ್ಲಿ ಬಳಸುವ ಪ್ಲಾಸ್ಟಿಕ್ ಪೇಪರ್‌ನಿಂದಲೂ ಕ್ಯಾನ್ಸರ್ ಅಪಾಯವಿರುವ ಬಗ್ಗೆ ಆರೋಗ್ಯ ಇಲಾಖೆ ಮತ್ತೊಂದು ಎಚ್ಚರಿಕೆ ನೀಡಿದೆ. ಇಡ್ಲಿ ಬೇಯಿಸುವಾಗ ಪ್ಲಾಸ್ಟಿಕ್ ಕರಗಿ, ವಿಷಕಾರಿ ಅಂಶಗಳು ಆಹಾರದಲ್ಲಿ ಸೇರಿಕೊಳ್ಳುತ್ತವೆ. ಇದರಿಂದ ಇಡ್ಲಿ ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗಬಹುದು.

ಈ ಕುರಿತು ಸಚಿವ ದಿನೇಶ್ ಗುಂಡೂರಾವ್ ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಲಿದ್ದು, ಯಾವೆಲ್ಲಾ ಹೋಟೆಲ್‌ಗಳ ಮೇಲೆ ದಾಳಿ ನಡೆದಿದೆ ಹಾಗೂ ಎಲ್ಲಿ ಹಾನಿಕಾರಕ ಆಹಾರ ಪತ್ತೆಯಾಗಿದೆ ಎಂಬುದರ ಬಗ್ಗೆ ಸ್ಪಷ್ಟನೆ ನೀಡಲಿದ್ದಾರೆ. ಜೊತೆಗೆ, ಪ್ಲಾಸ್ಟಿಕ್ ಬಳಕೆಯನ್ನು ತಕ್ಷಣವೇ ನಿಲ್ಲಿಸುವಂತೆ ಸೂಚನೆ ನೀಡಲಿದ್ದಾರೆ.

ಗೋಬಿ ತಯಾರಿಕೆಯಲ್ಲಿ ಕೂಡ ಹಾನಿಕಾರಕ ಬಣ್ಣ ಬಳಕೆ
ಇದೇ ಮುನ್ನ, ಆಹಾರ ಇಲಾಖೆ ಗೋಬಿ ತಯಾರಿಕೆಯಲ್ಲಿ ಬಳಸುವ ಬಣ್ಣ ಕೂಡ ಆರೋಗ್ಯಕ್ಕೆ ಹಾನಿಕಾರಕ ಎಂದು ವರದಿ ನೀಡಿತ್ತು. ಈಗ, ಹಸಿರು ಬಟಾಣಿಯಲ್ಲಿಯೂ ಆಪತ್ತಿನ ಅಂಶಗಳು ಇರುವುದರಿಂದ, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.ಇದನ್ನು ಓದಿ –BMTC ಬಸ್ ಡಿಕ್ಕಿಯಾಗಿ ಮಹಿಳೆ ದುರ್ಮರಣ

ಸಾರ್ವಜನಿಕರಿಗೆ ಸಲಹೆ
ಆರೋಗ್ಯ ಇಲಾಖೆಯ ಸಲಹೆ ಪ್ರಕಾರ, ಶೇಖರಿಸಿದ ಬಟಾಣಿ ಹಾಗೂ ಬಣ್ಣ ಹಾಕಿದ ಬಟಾಣಿ ಸೇವನೆ ತಪ್ಪಿಸಲು ಸಾರ್ವಜನಿಕರು ಜಾಗರೂಕರಾಗಬೇಕು. ಹೋಟೆಲ್ ಆಹಾರ ಸೇವಿಸುವಾಗ ಎಚ್ಚರಿಕೆ ವಹಿಸಬೇಕು. ಇಡ್ಲಿ ಹಾಗೂ ಇತರ ಆಹಾರ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತೊಡೆದುಹಾಕುವ ಕ್ರಮ ಕೈಗೊಳ್ಳಬೇಕು.

Copyright © All rights reserved Newsnap | Newsever by AF themes.
error: Content is protected !!